ಬೆಂಗಳೂರಲ್ಲಿ ಕೊರೋನಾ ಮಧ್ಯೆಯೂ ಜನ್ಮಾಷ್ಟಮಿ ಸಂಭ್ರಮ

Kannadaprabha News   | Asianet News
Published : Aug 12, 2020, 08:11 AM ISTUpdated : Aug 12, 2020, 08:16 AM IST
ಬೆಂಗಳೂರಲ್ಲಿ ಕೊರೋನಾ ಮಧ್ಯೆಯೂ ಜನ್ಮಾಷ್ಟಮಿ ಸಂಭ್ರಮ

ಸಾರಾಂಶ

ಮನೆ-ಮನಗಳಲ್ಲಿ ಗೋಪಾಲನ ಆರಾಧನೆ| ದೇಗುಲಗಳಲ್ಲಿ ಸಂಪ್ರದಾಯಬದ್ಧವಾಗಿ ಶ್ರೀಕೃಷ್ಣನ ಜನ್ಮಾಷ್ಟಮಿ ಆಚರಣೆ| ದೇವಾಲಯಗಳಲ್ಲಿ ಸಾಮಾಜಿಕ ಅಂತರದೊಂದಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು|ದೇವಾಲಯದಲ್ಲಿ ಹ್ಯಾಂಡ್‌ ಸ್ಯಾನಿಟೈಸರ್‌ ಹಾಕಿ ಥರ್ಮಲ್‌ ಸ್ಕ್ರೀನಿಂಗ್‌ ಮಾಡಿ ಒಳಬಿಡುವ ವ್ಯವಸ್ಥೆ| 

ಬೆಂಗಳೂರು(ಆ.12):  ಮಕ್ಕಳಿಗೆ ರಾಧೆ-ಕೃಷ್ಣನ ವೇಷಭೂಷಣ, ಮನೆ ಮನಗಳಲ್ಲಿ ಗೋಪಾಲನ ಆರಾಧನೆ, ಜಪ, ದೇವಾಲಯಗಳಲ್ಲಿ ಧಾರ್ಮಿಕ ಕೈಂಕರ್ಯಗಳನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸುವ ಮೂಲಕ ಕೊರೋನಾ ಭೀತಿ ಮಧ್ಯೆಯೂ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು.

ನಗರದ ಬಹುತೇಕ ದೇವಾಲಯಗಳಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜೆ, ಅಲಂಕಾರ, ಅಭಿಷೇಕಗಳು ಜರುಗಿದವು. ಈ ಬಾರಿ ಸೋಂಕು ಹರಡುವ ಭೀತಿಯಿಂದ ಬಹುತೇಕ ದೇವಾಲಯಗಳಲ್ಲಿ ಭಕ್ತರಿಗೆ ಪ್ರವೇಶ ಇರಲಿಲ್ಲ. ಇಸ್ಕಾನ್‌ ಸೇರಿದಂತೆ ಕೆಲ ದೇವಾಲಯಗಳು ಆನ್‌ಲೈನ್‌ ಮೂಲಕ ಆಚರಣೆಯನ್ನು ನೇರ ಪ್ರಸಾರ ವ್ಯವಸ್ಥೆ ಮಾಡಿದ್ದರಿಂದ ಭಕ್ತರು ಮನೆಯಲ್ಲೇ ಕುಳಿತು ಶ್ರೀಕೃಷ್ಣನನ್ನು ಕಣ್ತುಂಬಿಕೊಂಡರು.

ಕೆಲವೆಡೆ ದೇವಾಲಯಗಳಲ್ಲಿ ಸಾಮಾಜಿಕ ಅಂತರ, ಮಾಸ್ಕ್‌ ಧರಿಸಿ ಕಡಿಮೆ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಕೇವಲ ದೇವರ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು. ಉಳಿದಂತೆ ಯಾವುದೇ ಸೇವೆಗಳಿಗೆ ಅವಕಾಶವಿರಲಿಲ್ಲ. ಪ್ರತಿವರ್ಷ ಭಕ್ತರಿಂದ ತುಂಬಿರುತ್ತಿದ್ದ ಬಹುತೇಕ ದೇವಾಲಯಗಳಲ್ಲಿ ಭಕ್ತರ ಸಂಖ್ಯೆ ವಿರಳವಾಗಿತ್ತು. ಆದರೆ, ಸಂಪ್ರದಾಯಕ್ಕೆ ಯಾವುದೇ ಕೊರತೆ ಇಲ್ಲದಂತೆ ಅದ್ಧೂರಿಯಾಗಿಯೇ ಶ್ರೀಕೃಷ್ಣ ಜನ್ಮಾಷ್ಟಮಿ ನಡೆದದ್ದು ವಿಶೇಷವಾಗಿತ್ತು.
ವೆಸ್ವ್‌ ಆಫ್‌ ಕಾರ್ಡ್‌ ರಸ್ತೆಯ ಇಸ್ಕಾನ್‌, ಬಸವನಗುಡಿಯ ಪುತ್ತಿಗೆ ಮಠದ ಗೋವರ್ಧನಗಿರಿ ಕ್ಷೇತ್ರ, ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನಗಳಲ್ಲಿ ವಿಶೇಷ ಆಚರಣೆ ನಡೆಯಿತು. ಪೂಜೆ, ಅರ್ಚನೆ, ಅಲಂಕಾರ, ಕುಡಿಕೆ ಹೊಡೆಯುವುದು, ಕೃಷ್ಣ ವೇಷ ಸ್ಪರ್ಧೆ ಇತ್ಯಾದಿಗಳಲ್ಲಿ ಭಕ್ತರು ಆನ್‌ಲೈನ್‌ ಮೂಲಕವೇ ಭಾಗವಹಿಸಿದ್ದರು.

ಶ್ರೀಕೃಷ್ಣನಾದ ತಾರೆಗಳ ಮಕ್ಕಳು.. ಐರಾ ಸಂಭ್ರಮ

ನೇರಪ್ರಸಾರ ವೀಕ್ಷಣೆ:

ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಎಚ್‌ಆರ್‌ಬಿಆರ್‌ ಲೇಔಟ್‌ನಲ್ಲಿರುವ ಇಸ್ಕಾನ್‌ ದೇವಾಲಯದಲ್ಲಿ ಭಕ್ತರ ಅನುಪಸ್ಥಿತಿಯಲ್ಲಿ ಶ್ರೀಕೃಷ್ಣನಿಗೆ ಪೂಜೆ ಜರುಗಿತು. ಸದಾ ಭಕ್ತರಿಂದ ತುಂಬಿ ತುಳುಕುತ್ತಿದ್ದ ಇಸ್ಕಾನ್‌ನಲ್ಲಿ ಈ ಬಾರಿ ಬೆರಳೆಣಿಕೆಯಷ್ಟುಭಕ್ತರು, ದೇವಾಲಯದ ಸಿಬ್ಬಂದಿ ಇದ್ದರು. ಮುಂಜಾನೆ 6.30ರಿಂದಲೇ ಶ್ರೀಕೃಷ್ಣನಿಗೆ ಸಂಪ್ರದಾಯಬದ್ಧವಾಗಿ ಪೂಜಾ ಕೈಂಕರ್ಯಗಳು ನೆರವೇರಿದವು. ನಂತರ ಹೂವಿನಿಂದ ಅಲಂಕೃತವಾದ ರಾಧಾಕೃಷ್ಣರ ಮೂರ್ತಿಯನ್ನು ತೆಪ್ಪದಲ್ಲಿ ಕೂರಿಸಿ ಕಲ್ಯಾಣಿ ಸುತ್ತಲೂ ನೌಕಾವಿಹಾರ ಉತ್ಸವ ನಡೆಸಲಾಯಿತು. ಅಭಿಷೇಕ, ಪ್ರವಚನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ರಾತ್ರಿ 8ಕ್ಕೆ ಮಹಾಭಿಷೇಕ ಸೇರಿದಂತೆ 10 ಗಂಟೆಯವರೆಗೆ ನಿರಂತರವಾಗಿ ವಿವಿಧ ಕಾರ್ಯಕ್ರಮಗಳು ನಡೆದವು. ಭಕ್ತರು ಮನೆಯಲ್ಲಿಯೇ ಕುಳಿತು ನೇರ ಪ್ರಸಾರದ ಪೂಜೆ, ಇತರೆ ಧಾರ್ಮಿಕ ಕಾರ್ಯಗಳು, ಭಜನೆ, ಕೀರ್ತನೆಗಳಲ್ಲಿ ಭಾಗವಹಿಸಿದ್ದರು. ನಾಳೆಯೂ ಶ್ರೀಕೃಷ್ಣ ಜನ್ಮಾಷ್ಟಮಿ ಜರುಗಲಿದೆ.

ರಾಧೆ-ಕೃಷ್ಣರಾದ ಪುಟಾಣಿಗಳು!

ಕೊರೋನಾ ಆತಂಕದ ನಡುವೆಯೂ ಮನೆಗಳಲ್ಲೂ ಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಕೆಲವರು ತಮ್ಮ ಮಕ್ಕಳಿಗೆ ಮುದ್ದು ಕೃಷ್ಣ-ರಾಧೆಯರ ವೇಷಭೂಷಣ ತೊಡಿಸಿ ಶ್ರೀಕೃಷ್ಣನ ಬಾಲ್ಯಲೀಲೆಯನ್ನು ಪುಟಾಣಿಗಳಲ್ಲಿ ಕಂಡು ಖುಷಿಪಟ್ಟರು. ಪುಟಾಣಿಗಳ ತುಂಟಾಟಗಳು ಹಬ್ಬಕ್ಕೆ ವಿಶೇಷ ಮೆರಗು ನೀಡಿದ್ದವು. ಮಕ್ಕಳ ಚಿತ್ರಗಳು ವಾಟ್ಸಾಪ್‌, ಫೇಸ್‌ಬುಕ್‌ಗಳಲ್ಲಿ ರಾರಾಜಿಸಿದವು.

ವಿವಿಧ ದೇಗುಲಗಳಲ್ಲಿ ಶ್ರದ್ಧಾಭಕ್ತಿ

ಸಂಜಯನಗರದ ರಾಧಾಕೃಷ್ಣ ದೇವಸ್ಥಾನ, ದೊಡ್ಡ ಬೊಮ್ಮಸಂದ್ರದ ಕೃಷ್ಣ ದೇವಾಲಯ, ಡಿಫೆಸ್ಸ್‌ ಕಾಲೊನಿ ಇಂದಿರಾನಗರದ ಕೃಷ್ಣ ದೇವಾಲಯ, ಮಲ್ಲೇಶ್ವರದ ವೇಣುಗೋಪಾಲ ಸ್ವಾಮಿ, ಕಾಡುಗೊಂಡನಹಳ್ಳಿಯ ಲಕ್ಷ್ಮೇ ನರಸಿಂಹ ಮತ್ತು ವೇಣುಗೋಪಾಲ ಸ್ವಾಮಿ ದೇವಸ್ಥಾನ, ಕುಮಾರಸ್ವಾಮಿ ಲೇಔಟ್‌ನಲ್ಲಿರುವ ಇಸ್ಕಾನ್‌ ದೇವಾಲಯ ಹೀಗೆ ನಾನಾ ಕೃಷ್ಣ ದೇವಾಲಯಗಳಲ್ಲಿ ಅಭಿಷೇಕ, ವಿಶೇಷ ಪೂಜೆ, ಸ್ವಾಮಿಗೆ ಅಲಂಕಾರಗಳು ನಡೆದವು. ಈ ದೇವಾಲಯಗಳಲ್ಲಿ ಭಕ್ತರನ್ನು ಸಾಮಾಜಿಕ ಅಂತರದೊಂದಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ದೇವಾಲಯದಲ್ಲಿ ಹ್ಯಾಂಡ್‌ ಸ್ಯಾನಿಟೈಸರ್‌ ಹಾಕಿ ಥರ್ಮಲ್‌ ಸ್ಕ್ರೀನಿಂಗ್‌ ಮಾಡಿ ಒಳಬಿಡುವ ವ್ಯವಸ್ಥೆ ಮಾಡಲಾಗಿತ್ತು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ
ರಾಜ್ಯದಲ್ಲಿ 2.84 ಲಕ್ಷ ಸರ್ಕಾರಿ ಹುದ್ದೆ ಖಾಲಿ: 24,300 ಹುದ್ದೆ ಭರ್ತಿಗೆ ಅಂಕಿತ! ಇಲಾಖಾವಾರು ಮಾಹಿತಿ ಇಲ್ಲಿದೆ!