
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು(ಸೆ.12): ಕೊರೋನಾ ಸೋಂಕು ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ಬಿಬಿಎಂಪಿಯ ಆದಾಯ ಮೂಲ ಸುಧಾರಣೆ, ಆಸ್ತಿ ತೆರಿಗೆ ಪರಿಷ್ಕರಣೆ, ಆಡಳಿತ ಸುಧಾರಣೆ, ಸಕಾಲದಲ್ಲಿ ಜನ ಸಾಮಾನ್ಯರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ಬಿಬಿಎಂಪಿ ನೂತನ ಆಡಳಿತಾಧಿಕಾರಿ ಗೌರವ್ ಗುಪ್ತಾ ಹೇಳಿದ್ದಾರೆ.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಅವರು ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದು ಹೀಗೆ-
*ಕೊರೋನಾದಿಂದ ಆದಾಯ ಕೊರತೆಯಿದೆ. ಈ ಸಂಕಟದಿಂದ ಬಿಬಿಎಂಪಿಯನ್ನು ಹೇಗೆ ಪಾರು ಮಾಡುವಿರಿ.
ಬಿಬಿಎಂಪಿ ನಿರ್ವಹಿಸಬೇಕಾದ ಜವಾಬ್ದಾರಿಗಳು ಹೆಚ್ಚಾಗಿವೆ. ಆದರೆ, ಸಂಪನ್ಮೂಲ ಕಡಿಮೆ ಇದೆ. ಈ ಹಿಂದೆ ಬಿಬಿಎಂಪಿಗೆ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿದ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಅವರ ಅನುಭವ ಮತ್ತು ಸಲಹೆ ಪಡೆದು ಬಿಬಿಎಂಪಿಯ ಆದಾಯ ಸುಧಾರಣೆ ಬಗ್ಗೆ ಏನೆಲ್ಲಾ ಕ್ರಮ ಕೈಗೊಳ್ಳಬಹುದು ಎಂಬುದನ್ನು ತೀರ್ಮಾನಿಸುವೆ.
*ನಗರದಲ್ಲಿ ಕೊರೋನಾ ಮಿತಿ ಮೀರುತ್ತಿದೆ. ಇದನ್ನು ನಿಭಾಯಿಸಲು ಸಿಬ್ಬಂದಿ ಕೊರತೆಯಿದೆ. ಹೇಗೆ ನಿಭಾಯಿಸುವಿರಿ?
ನಗರದಲ್ಲಿ ಕೊರೋನಾ ಸೋಂಕು ನಿಯಂತ್ರಣ ಕಾರ್ಯಕ್ಕೆ ನಿಯೋಜನೆಗೊಂಡ ವಿವಿಧ ಇಲಾಖೆಯ ಅಧಿಕಾರಿ ಸಿಬ್ಬಂದಿ ತಮ್ಮ ಇಲಾಖೆಗೆ ವಾಪಸ್ ತೆರಳುತ್ತಿದ್ದಾರೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡಿ ಸೂಕ್ತ ಮಾನವ ಸಂಪನ್ಮೂಲ ವ್ಯವಸ್ಥೆ ಮಾಡಲಾಗುವುದು.
ಬಿಬಿಎಂಪಿಗೆ ಗೌರವ್ ಗುಪ್ತಾ ಆಡಳಿತಾಧಿಕಾರಿ, ಚುನಾವಣೆ ನಿರೀಕ್ಷೆಯಲ್ಲಿದ್ದರಿಗೆ ಶಾಕ್!
*ಬಿಬಿಎಂಪಿ ಆಡಳಿತ ಹದಗೆಟ್ಟು ಹೋಗಿದೆ ಎಂಬ ಆರೋಪವಿದೆಯಲ್ಲ?
ಬಿಬಿಎಂಪಿ ಚುನಾವಣೆ ನಡೆದು ಹೊಸ ಜನಪ್ರತಿನಿಧಿಗಳು ಆಯ್ಕೆ ಆಗುವ ಸೀಮಿತ ಅವಧಿಗೆ ಸರ್ಕಾರ ಆಡಳಿತ ಅಧಿಕಾರಿಯನ್ನು ನೇಮಿಸಿದೆ. ಈ ಅವಧಿಯಲ್ಲಿ ಈಗ ಇರುವ ವ್ಯವಸ್ಥೆಯನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಹೆಚ್ಚಿನ ಒತ್ತು ನೀಡಲಾಗುವುದು.
*ಅಧಿಕಾರಿಗಳು ಜನರ ಸಮಸ್ಯೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ಮಾತು ಜನಪ್ರತಿನಿಧಿಗಳಿಂದ ಕೇಳಿಬರುತ್ತಿತ್ತು?
ಪಾಲಿಕೆ ಸದಸ್ಯರ ಅಧಿಕಾರ ಅವಧಿ ಮುಕ್ತಾಯಗೊಂಡಿರುವುದರಿಂದ ಅಧಿಕಾರಿಗಳ ಮೇಲೆ ಜವಾಬ್ದಾರಿ ಹೆಚ್ಚಾಗಿದೆ. ಅಧಿಕಾರಿಗಳು ಯಾವ ರೀತಿ ಜನರಿಗೆ ಸ್ಪಂದಿಸುತ್ತಾರೆ ಎಂಬುದು ಈ ಹಂತದಲ್ಲಿ ಗೊತ್ತಾಗಲಿದೆ. ಜನ ಸಾಮಾನ್ಯರಿಗೆ ಯಾವುದೇ ತೊಂದರೆ ಆಗಬಾರದು. ಅವರ ಕೆಲಸ ಕಾರ್ಯಗಳು ಸುಗಮವಾಗಿ ನಡೆಯಬೇಕು.
ಮತ್ತೆ ಬಜೆಟ್ ಪರಿಷ್ಕರಣೆ?
ಬಿಬಿಎಂಪಿ ಆದಾಯ ಮತ್ತು ವೆಚ್ಚಕ್ಕೆ ಭಾರೀ ಅಂತರ ಇದೆ. ಈ ಬಗ್ಗೆ ಬಿಬಿಎಂಪಿ ಆಯುಕ್ತರೂ ಸಹ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಇದೀಗ ಬಿಬಿಎಂಪಿ ಆಡಳಿತ ಅಧಿಕಾರಿಯಾಗಿರುವ ಗೌರವ್ ಗುಪ್ತಾ ಅವರು 2020-21ನೇ ಸಾಲಿನ ಬಜೆಟ್ ಪರಿಶೀಲಿಸಿ ವಾಸ್ತವಿಕಕ್ಕೆ ಹತ್ತಿರವಾದ ಬಜೆಟ್ ಜಾರಿಗೆ ತರುವುದಾಗಿ ಹೇಳಿದ್ದಾರೆ. ಕೆಲವು ಯೋಜನೆಗಳನ್ನು ಕೈ ಬಿಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಆಡಳಿತಾಧಿಕಾರಿಯಾಗಿ ಗೌರವ್ ಅಧಿಕಾರ ಸ್ವೀಕಾರ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 27ನೇ ಆಡಳಿತಾಧಿಕಾರಿಯಾಗಿ ಐಎಎಸ್ ಅಧಿಕಾರಿ ಗೌರವ್ ಗುಪ್ತಾ ಶುಕ್ರವಾರ ಅಧಿಕಾರ ವಹಿಸಿಕೊಂಡರು. ಬೆಳಗ್ಗೆ ಪಾಲಿಕೆ ಕಚೇರಿಯಲ್ಲಿ ಅಧಿಕೃತವಾಗಿ ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಅವರನ್ನು ಪಾಲಿಕೆ ಆಯುಕ್ತ ಡಾ. ಮಂಜುನಾಥ್ ಪ್ರಸಾದ್ ಸೇರಿದಂತೆ ಹಿರಿಯ ಅಧಿಕಾರಿಗಳು ಹೂಗುಚ್ಛ ನೀಡಿ ಅಭಿನಂದಿಸಿದರು.
ಅಧಿಕಾರ ಸ್ವೀಕರಿಸಿದ ನಂತರ ಅವರು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್, ವಿಶೇಷ ಆಯುಕ್ತರಾದ ರಂದೀಪ್, ಬಸವರಾಜು, ಅನ್ಬುಕುಮಾರ್, ಮಂಜನಾಥ ಸೇರಿದಂತೆ ಇತರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪಾಲಿಕೆ ವಿವಿಧ ಯೋಜನೆ ಹಾಗೂ ಆಡಳಿತ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ