ದೇಶದಲ್ಲೇ ಮೊದಲು ಕೆಂಪೇಗೌಡ ಏರ್‌ಪೋರ್ಟ್‌ 10 ಸಾವಿರ ಚದರಡಿ ವಿಸ್ತೀರ್ಣದ ಗೋದಾಮು

By Kannadaprabha NewsFirst Published Sep 12, 2020, 7:12 AM IST
Highlights

ದೇಶದಲ್ಲೇ ಮೊದಲ ಗೋದಾಮು ನಿರ್ಮಿಸಿದ ಹೆಗ್ಗಳಿಕೆಗೆ ಪಾತ್ರವಾದ ಕೆಂಪೇಗೌಡ ಏರ್‌ಪೋರ್ಟ್‌| ಐದು ತಿಂಗಳಲ್ಲಿ 99 ಸಾವಿರ ಮೆಟ್ರಿಕ್‌ ಟನ್‌ ಸರಕು ಸಾಗಣೆ| ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಹಾಗೂ ದೇಶದಲ್ಲಿ ಮೂರನೇ ಅತ್ಯಂತ ಹೆಚ್ಚಿನ ಚಟುವಟಿಕೆಯ ಸರಕು ಸಾಗಣೆ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ|
 

ಬೆಂಗಳೂರು(ಸೆ.12): ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) 10 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಗೋದಾಮು ನಿರ್ಮಿಸುವ ಮೂಲಕ ಸಾರ್ವಜನಿಕ ಗೋದಾಮು ನಿರ್ಮಿಸಿದ ದೇಶದ ಮೊಟ್ಟ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಸರಕುಗಳ ಕ್ಷಿಪ್ರ ಗತಿಯ ಸಾಗಣೆ, ದಾಸ್ತಾನು, ಪುನರ್‌ ರಫ್ತು, ವಿದೇಶಕ್ಕೆ ಸಾಗಿಸುವ ಸರಕುಗಳನ್ನು ಕಡಿಮೆ ವೆಚ್ಚದಲ್ಲಿ ದೀರ್ಘಕಾಲ ದಾಸ್ತಾನು ಮಾಡಲು, ಲೇಬಲಿಂಗ್‌, ಪ್ಯಾಕಿಂಗ್‌ ಮತ್ತು ಪುನರ್‌ ಪ್ಯಾಕಿಂಗ್‌ ಸೇವೆಗಳಂತಹ ಮೌಲ್ಯವರ್ಧಿತ ಸೇವೆಗಳಿಗೆ ಅವಕಾಶ ಮಾಡಿಕೊಡುವುದು ಸೇರಿದಂತೆ ಹಲವು ಕಾರ್ಯಗಳಿಗೆ ಈ ಗೋದಾಮು ನೆರವಾಗಲಿದೆ. ಕಾರ್ಗೋ ಸವೀರ್‍ಸ್‌ ಸೆಂಟರ್‌(ಸಿಎಸ್ಸಿ) ಈ ಗೋದಾಮು ನಿರ್ವಹಣೆ ಮಾಡಲಿದೆ. ಬೆಂಗಳೂರು ನಗರ ಕಸ್ಟಮ್ಸ್‌ ಆಯುಕ್ತರ ಆಡಳಿತ ವ್ಯಾಪ್ತಿಯಲ್ಲಿ ಈ ಗೋದಾಮು ಕಾರ್ಯನಿರ್ವಹಿಸಲಿದೆ. ಮಾಹಿತಿ ತಂತ್ರಜ್ಞಾನದ ಹಬ್‌ ಆಗಿರುವ ಬೆಂಗಳೂರು ಮತ್ತು ಸುತ್ತಲಿನ ಪ್ರದೇಶಗಳಿಗೆ ಸರಕು ಪೂರೈಕೆ ಸರಣಿಯ ವೆಚ್ಚವನ್ನು ಕಡಿಮೆ ಮಾಡುವುದಲ್ಲದೆ, ಈ ಸೌಲಭ್ಯವು ಹೆಚ್ಚಿನ ವ್ಯಾಪಾರ ವಹಿವಾಟಿಗೆ ಅವಕಾಶ ಮಾಡಿಕೊಡಲಿದೆ.

ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಜನವೋ ಜನ..!

ಕೆಐಎ ವಿಮಾನ ನಿಲ್ದಾಣವನ್ನು ಭವಿಷ್ಯದಲ್ಲಿ ಉತ್ತಮ ಕಾರ್ಯಕ್ಷಮತೆಯ ಕಾರ್ಯಾಚರಣೆ ಜೊತೆಗೆ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಮೂಲಸೌಕರ್ಯದೊಂದಿಗೆ ಸಜ್ಜಾಗಿರುವ ಸರಕು ರವಾನೆ ಕೇಂದ್ರವಾಗಿ ರೂಪಿಸುವ ಗುರಿ ಹೊಂದಿದ್ದೇವೆ. ಈ ನಿಟ್ಟಿನಲ್ಲಿ ಈ ಗೋದಾಮು ಮೊದಲ ಹೆಜ್ಜೆಯಾಗಿದೆ ಎಂದು ಬಿಐಎಎಲ್‌ ತಿಳಿಸಿದೆ.

ಐದು ತಿಂಗಳಲ್ಲಿ 99 ಸಾವಿರ ಮೆಟ್ರಿಕ್‌ ಟನ್‌ ಸರಕು ಸಾಗಣೆ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಕಳೆದ ಏಪ್ರಿಲ್‌ನಿಂದ ಆಗಸ್ಟ್‌ ವರೆಗೆ ದೇಶದ ಹಾಗೂ ವಿದೇಶದ ವಿವಿಧೆಡೆಗೆ 99,154 ಮೆಟ್ರಿಕ್‌ ಟನ್‌ಗಳ ಸರಕು ರವಾನಿಸಲಾಗಿದೆ. ಈ ಮೂಲಕ ಸರಕು ವಾಯು ಸಂಚಾರ ಚಲನೆಯಲ್ಲಿ ಶೇ.92ರಷ್ಟು ಬೆಳವಣಿಗೆ ದಾಖಲಿಸಿದೆ. ದಕ್ಷಿಣ ಭಾರತದಲ್ಲೇ ಅತಿ ದೊಡ್ಡ ವಾಯು ಸರಕು ಟರ್ಮಿನಲ್‌ ಹೊಂದಿರುವ ಕೆಐಎ ವಿಮಾನ ನಿಲ್ದಾಣ ನಿಲ್ದಾಣ 5,70,000 ಮೆಟ್ರಿಕ್‌ ಟನ್‌ಗಳಷ್ಟು ಸರಕು ನಿಭಾಯಿಸುವ ಸಾಮರ್ಥ್ಯ ಹೊಂದಿದೆ. ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಹಾಗೂ ದೇಶದಲ್ಲಿ ಮೂರನೇ ಅತ್ಯಂತ ಹೆಚ್ಚಿನ ಚಟುವಟಿಕೆಯ ಸರಕು ಸಾಗಣೆ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
 

click me!