
ಬೆಂಗಳೂರು (ಏ.18) : ಬಿಬಿಎಂಪಿಯಲ್ಲಿ ಗುತ್ತಿಗೆ ಮತ್ತು ನೇರ ವೇತನದಲ್ಲಿ ಕೆಲಸ ಮಾಡುತ್ತಿರುವ 12,692 ಪೌರ ಕಾರ್ಮಿಕರನ್ನು ಕಾಯಂ ಮಾಡಿಕೊಳ್ಳಲಾಗುತ್ತಿದೆ. ಮೇ 1ರಂದು ನೇಮಕ ಆದೇಶ ಪತ್ರಗಳನ್ನು ನೀಡಿ ಬಿಬಿಎಂಪಿಯಿಂದ ನೇರವಾಗಿ ವೇತನ ಪಾವತಿಸಲಾಗುತ್ತದೆ ಎಂದು ಬಿಬಿಎಂಪಿ ಆಡಳಿತಗಾರ ಎಸ್.ಆರ್.ಉಮಾಶಂಕರ್ ಹೇಳಿದ್ದಾರೆ.
ಗುರುವಾರ ಬಿಬಿಎಂಪಿಯ ಡಾ। ರಾಜಕುಮಾರ್ ಗಾಜಿನ ಮನೆಯಲ್ಲಿ ಡಾ। ಬಿ.ಆರ್.ಅಂಬೇಡ್ಕರ್ ಜನ್ಮ ದಿನಾಚರಣೆ ಹಾಗೂ ಪೌರಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಮಳೆ, ಚಳಿ, ಬಿಸಿಲು, ಧೂಳು ಲೆಕ್ಕಿಸದೆ ಕೆಲಸ ಮಾಡಿ ನಗರವನ್ನು ಸ್ವಚ್ಛವಾಗಿರಿಸಿ ನಾಗರಿಕರನ್ನು ಆರೋಗ್ಯವಾಗಿಡುವ ಪೌರ ಕಾರ್ಮಿಕರ ಸೇವೆ ಅಮೂಲ್ಯವಾದದ್ದು ಎಂದರು.
ಪೌರಕಾರ್ಮಿಕರ ನೇಮಕಾತಿ ವೇಳೆ ಸಾಕಷ್ಟು ದೂರುಗಳು ಬಂದಿದ್ದವು. ಆದರೆ, ಮೋಸ, ದುರುಪಯೋಗಗಳಿಗೆ ಆಸ್ಪದ ನೀಡದೆ, ನೇಮಕ ಪ್ರಕ್ರಿಯೆಯನ್ನು ಬಹುತೇಕ ಪೂರ್ಣಗೊಳಿಸಲಾಗಿದೆ. ಖಾಯಂ ಪೌರಕಾರ್ಮಿಕರು ಮುಂದಿನ ದಿನಗಳಲ್ಲಿ ನೆಮ್ಮದಿಯ ಜೀವನ ಸಾಗಿಸಲು ಅನುಕೂಲವಾಗಲಿದೆ. ಪೌರಕಾರ್ಮಿಕರಿಗಾಗಿ ಒಂಟಿ ಮನೆ ಯೋಜನೆ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿವಿಧ ಸೌಲಭ್ಯ, ಧನಸಹಾಯ ಹಾಗೂ ಬೋನಸ್ ನೀಡಲಾಗುತ್ತಿದೆ ಎಂದು ಉಮಾಶಂಕರ್ ತಿಳಿಸಿದರು.
ಇದನ್ನೂ ಓದಿ: ಬಿಬಿಎಂಪಿ 12,692 ಪೌರಕಾರ್ಮಿಕರ ಖಾಯಂ; ಜೊತೆಗೆ ₹22,000 ಬೋನಸ್
ಡಾ। ಬಿ.ಆರ್.ಅಂಬೇಡ್ಕರ್ ಅವರು ಇಡೀ ದೇಶಕ್ಕೆ ಅತ್ಯುತ್ತಮ ಸಂವಿಧಾನವನ್ನು ನೀಡಿದ್ದಾರೆ. ಅದು ಇಡೀ ಪ್ರಪಂಚದಲ್ಲಿಯೇ ಉತ್ತಮವಾದ, ವಿವರಣಾತ್ಮಕವಾದ ಸಂವಿಧಾನವಾಗಿದೆ. ಇದು ಕೇವಲ ಭಾರತಕ್ಕೆ ಮಾತ್ರವಲ್ಲ, ಮುಂದಿನ ದಿನಗಳಲ್ಲಿ ವಿಶ್ವದ ಅನೇಕ ದೇಶಗಳಿಗೆ ಮುನ್ನುಡಿಯಾಗಲಿದೆ ಎಂದು ಉಮಾಶಂಕರ್ ಹೇಳಿದರು.
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ। ಡಾ। ಬಿ.ಆರ್.ಅಂಬೇಡ್ಕರ್ ಕುರಿತಾದ ಪುಸ್ತಕಗಳನ್ನು ನಾವೆಲ್ಲರೂ ಓದಿ ಅರಿತುಕೊಳ್ಳಬೇಕಿದೆ. ಅವರ ವ್ಯಕ್ತಿತ್ವವನ್ನು ನಾವು ಎಲ್ಲರಿಗೂ ಪರಿಚಯಿಸಬೇಕು. ಅವರ ಎಲ್ಲಾ ವಿಚಾರಧಾರೆಗಳನ್ನು ಇತರರಿಗೂ ತಿಳಿಯುವಂತೆ ಮಾಡಬೇಕು ಎಂದರು.
ಇದನ್ನೂ ಓದಿ: ಬಿಬಿಎಂಪಿ ಹವಾಮಾನ ಕ್ರಿಯಾಕೋಶ ಫೆಲೋಶಿಪ್‌ಗೆ ಅರ್ಜಿ ಆಹ್ವಾನ!
ಉತ್ತಮ ಸೇವೆ ಸಲ್ಲಿಸಿದ 17 ಪೌರ ಕಾರ್ಮಿಕರಿಗೆ ಹಾಗೂ ಎಸ್.ಎಸ್.ಎಲ್.ಸಿ, ಪಿಯುಸಿ ಹಾಗೂ ಪದವಿಯಲ್ಲಿ ಉತ್ತಮ ಅಂಕ ಗಳಿಸಿದ ಪೌರ ಕಾರ್ಮಿಕರ ಮಕ್ಕಳಿಗೆ ಸನ್ಮಾನಿಸಲಾಯಿತು.
ಪೌರ ಕಾರ್ಮಿಕರಿಗೆ ಬೋನಸ್
ಡಾ। ಬಿ.ಆರ್.ಅಂಬೇಡ್ಕರ್ ಜಯಂತಿ ಪ್ರಯುಕ್ತ ಕಾಯಂ ಪೌರಕಾರ್ಮಿಕರಿಗೆ ₹22,000 ಹಾಗೂ ನೇರ ವೇತನ ಪೌರಕಾರ್ಮಿಕರಿಗೆ ₹8,000 ಬೋನಸ್ ನೀಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ