ವಿಶೇಷ ಸಂಪುಟ ಸಭೆ ಅಪೂರ್ಣ, ಜಾತಿ ಗಣತಿಗೆ ಅಪೂರ್ಣವಿರಾಮ, ಮೇ 2ಕ್ಕೆ ಮತ್ತೆ ಮೀಟಿಂಗ್‌!

Published : Apr 18, 2025, 07:05 AM ISTUpdated : Apr 18, 2025, 07:37 AM IST
ವಿಶೇಷ ಸಂಪುಟ ಸಭೆ ಅಪೂರ್ಣ, ಜಾತಿ ಗಣತಿಗೆ ಅಪೂರ್ಣವಿರಾಮ, ಮೇ 2ಕ್ಕೆ ಮತ್ತೆ ಮೀಟಿಂಗ್‌!

ಸಾರಾಂಶ

ಜಾತಿಗಣತಿ ವರದಿ ಬಗ್ಗೆ ಸಮುದಾಯಗಳಲ್ಲಿ ತೀವ್ರ ಆಕ್ಷೇಪ ಹಾಗೂ ಗೊಂದಲ ಇರುವುದರಿಂದ ಈ ವಿಚಾರದಲ್ಲಿ ತರಾತುರಿ ನಿರ್ಧಾರ ಬೇಡ ಎಂಬ ಲಿಂಗಾಯತ, ಒಕ್ಕಲಿಗ ಸಚಿವರ ಅಭಿಪ್ರಾಯಕ್ಕೆ ಮನ್ನಣೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ವರದಿ ಕುರಿತು ಆಕ್ಷೇಪಣೆ ಹಾಗೂ ಅಭಿಪ್ರಾಯಗಳನ್ನು ಲಿಖಿತವಾಗಿ ಸಲ್ಲಿಸಲು ಸಚಿವರಿಗೆ ಸೂಚನೆ ನೀಡಿ ಸಂಪುಟ ಸಭೆಯನ್ನು ಮುಂದೂಡಿದ್ದಾರೆ.

ಬೆಂಗಳೂರು (ಏ.18): ಜಾತಿಗಣತಿ ವರದಿ ಬಗ್ಗೆ ಸಮುದಾಯಗಳಲ್ಲಿ ತೀವ್ರ ಆಕ್ಷೇಪ ಹಾಗೂ ಗೊಂದಲ ಇರುವುದರಿಂದ ಈ ವಿಚಾರದಲ್ಲಿ ತರಾತುರಿ ನಿರ್ಧಾರ ಬೇಡ ಎಂಬ ಲಿಂಗಾಯತ, ಒಕ್ಕಲಿಗ ಸಚಿವರ ಅಭಿಪ್ರಾಯಕ್ಕೆ ಮನ್ನಣೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ವರದಿ ಕುರಿತು ಆಕ್ಷೇಪಣೆ ಹಾಗೂ ಅಭಿಪ್ರಾಯಗಳನ್ನು ಲಿಖಿತವಾಗಿ ಸಲ್ಲಿಸಲು ಸಚಿವರಿಗೆ ಸೂಚನೆ ನೀಡಿ ಸಂಪುಟ ಸಭೆಯನ್ನು ಮುಂದೂಡಿದ್ದಾರೆ.

ಇದರಿಂದಾಗಿ ವಿವಾದಿತ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷಾ (ಜಾತಿ ಆಧಾರಿತ ಜನ ಗಣತಿ) ವರದಿ ಕುರಿತು ಸಚಿವರ ಅಭಿಪ್ರಾಯ ಪಡೆಯಲು ಗುರುವಾರ ಕರೆಯಲಾಗಿದ್ದ ವಿಶೇಷ ಸಭೆ ಅಪೂರ್ಣಗೊಂಡಂತಾಗಿದೆ. ಬಹುತೇಕ ಮೇ 2ರಂದು ಮತ್ತೊಂದು ವಿಶೇಷ ಸಚಿವ ಸಂಪುಟ ಸಭೆ ನಡೆಯಲಿದ್ದು, ಈ ವೇಳೆ ಸಚಿವರ ಆಕ್ಷೇಪ ಹಾಗೂ ಅಭಿಪ್ರಾಯಗಳಿಗೆ ಅಧಿಕಾರಿಗಳಿಂದ ಉತ್ತರ ಕೊಡಿಸಿ ವಿಸ್ತೃತ ಚರ್ಚೆಗೆ ಅವಕಾಶ ಮಾಡಿಕೊಡುವ ನಿರೀಕ್ಷೆ ಇದೆ.
ಗುರುವಾರ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಲಿಂಗಾಯತ ಹಾಗೂ ಒಕ್ಕಲಿಗ ಸಚಿವರು ಪ್ರವರ್ಗವಾರು ಜಾತಿ ವಿಂಗಡಣೆ, ಆರ್ಥಿಕ ಸ್ಥಿತಿ ಬಗ್ಗೆ ನಿರ್ಣಯ ಮಾಡಿರುವ ಮಾನದಂಡಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಇದೇ ವೇಳೆ ಮುಸ್ಲಿಂ ಸಮುದಾಯದ ಉಪ ಪಂಗಡಗಳನ್ನು ಪರಿಗಣಿಸದೆ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯದ ಉಪ ಜಾತಿಗಳನ್ನು ಪ್ರವರ್ಗವಾರು ಪ್ರತ್ಯೇಕಿಸಿರುವ ಬಗ್ಗೆ ಸಭೆಯ ಗಮನ ಸೆಳೆದರು.

ಇದನ್ನೂ ಓದಿ: ಜಾತಿಗಣತಿ ವರದಿ ಜಾರಿಗೆ ಸಿಎಂ ಕರೆದಿದ್ದ ಸಂಪುಟ ಸಭೆ ಠುಸ್ ಪಟಾಕಿ!

ಇಂತಹ ಲೋಪವಿರುವ ವರದಿಯನ್ನು ಯಥಾವತ್‌ ಒಪ್ಪಿದರೆ ಪ್ರಮುಖ ಸಮುದಾಯಗಳು ಪಕ್ಷದ ಬಗ್ಗೆಯೂ ಬೇಸರಗೊಳ್ಳಬಹುದು ಎಂಬ ಎಚ್ಚರಿಕೆಯನ್ನು ನೀಡಿದರು ಎನ್ನಲಾಗಿದೆ. ಈ ಬಗ್ಗೆ ಚರ್ಚೆ ತೀವ್ರಗೊಳ್ಳುವ ಲಕ್ಷಣ ಕಂಡ ಬೆನ್ನಲ್ಲೇ ಮುಖ್ಯಮಂತ್ರಿಯವರು ಜಾತಿ ಗಣತಿ ವಿಚಾರದಲ್ಲಿ ತರಾತುರಿ ನಿರ್ಧಾರ ಕೈಗೊಳ್ಳುವುದಿಲ್ಲ. ಈ ಬಗೆಗಿನ ನಿಮ್ಮ ಅಭಿಪ್ರಾಯಗಳನ್ನು ಲಿಖಿತ ರೂಪದಲ್ಲಿ ನೀಡಿ, ಅದನ್ನು ಅಂತಿಮವಾಗಿ ನಾನು ಮತ್ತು ಉಪ ಮುಖ್ಯಮಂತ್ರಿಯವರು ಕ್ರೋಢೀಕರಿಸುತ್ತೇವೆ ಎಂದು ತಿಳಿಸುವ ಮೂಲಕ ವಿಷಯಕ್ಕೆ ತೆರೆ ಎಳೆದರು ಎಂದು ತಿಳಿದುಬಂದಿದೆ.

ಉದ್ವೇಗದ ಮಾತು ಬೇಡ:

ಸಭೆಯ ಆರಂಭದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ವರದಿ ಸೂಕ್ಷ್ಮ ಹಾಗೂ ಭಾವನಾತ್ಮಕ ವಿಷಯವಾದರೂ ಯಾರೂ ಉದ್ವೇಗದಲ್ಲಿ ಮಾತನಾಡುವ ಅಗತ್ಯವಿಲ್ಲ. ಎಲ್ಲರಿಗೂ ಎಲ್ಲಾ ವಿಷಯದ ಬಗ್ಗೆ ಚರ್ಚಿಸಲು ಅವಕಾಶ ನೀಡಲಾಗುವುದು. ಹೀಗಾಗಿ ಒಬ್ಬೊಬ್ಬರೇ ವಿಷಯ ಪ್ರಸ್ತಾಪಿಸಿ ಎಂದು ಸೂಚಿಸಿದರು.

ಸಭೆಯಲ್ಲಿ ಈ ಬಗ್ಗೆ ಮಾತನಾಡಿದ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಅವರು, ಲಿಂಗಾಯತ ಸಮುದಾಯದ ಪ್ರವರ್ಗವಾರು ವಿಂಗಡಣೆ ಹಾಗೂ ಜನಸಂಖ್ಯೆ ಬಗ್ಗೆ ತೀವ್ರ ಆಕ್ಷೇಪವಿದೆ. ಚಿನ್ನಪ್ಪರೆಡ್ಡಿ ಆಯೋಗದಲ್ಲಿ ಹಿಂದುಳಿದ ಲಿಂಗಾಯತ ಶೇ.17.43 ರಷ್ಟಿತ್ತು. ಈ ವರದಿಯಲ್ಲಿ ಶೇ.11.09 ರಷ್ಟು ಮಾತ್ರ ತೋರಿಸಿದ್ದು, ಶೇ.6.32 ರಷ್ಟು ಕಡಿಮೆ ಆಗಲು ಸಾಧ್ಯವೇ ಎಂದು ಪ್ರಶ್ನಿಸಿದರು ಎನ್ನಲಾಗಿದೆ.

ಇನ್ನು ಲಿಂಗಾಯತರು ಕಸುಬು, ಆರ್ಥಿಕ ಹಾಗೂ ಸಾಮಾಜಿಕ ಹೀಗೆ ಹಿಂದುಳಿದಿರುವಿಕೆ ಮಾನದಂಡಗಳ ಪ್ರಕಾರ ವಿವಿಧ ಒಬಿಸಿ ಪ್ರವರ್ಗಗಳಲ್ಲಿ ಇದ್ದರು. ಪ್ರವರ್ಗ 1, 2-ಎ ಹೀಗೆ ವಿವಿಧ ಪ್ರವರ್ಗದಲ್ಲಿದ್ದವರನ್ನು 3-ಬಿಯಲ್ಲಿ ಸೇರಿಸಲಾಗಿದೆ. ಲಿಂಗಾಯತ ಎಂದಾಕ್ಷಣ ಅವರ ಕಸುಬು ಹಾಗೂ ಆರ್ಥಿಕ ಮಾನದಂಡ ಪರಿಗಣಿಸದೆ ಹೇಗೆ 3-ಬಿಗೆ ಸೇರಿಸಲು ಸಾಧ್ಯ? ಎಂದು ಪ್ರಶ್ನಿಸಿದರು ಎನ್ನಲಾಗಿದೆ.

ಜತೆಗೆ ಮುಸ್ಲಿಮರ ಜನಸಂಖ್ಯೆಯನ್ನು ಒಟ್ಟಾಗಿ ತೋರಿಸಿ ಲಿಂಗಾಯತ ಜನಸಂಖ್ಯೆಯನ್ನು ಪ್ರತ್ಯೇಕವಾಗಿ ವಿಂಗಡಿಸಿ ಕಡಿಮೆ ಮಾಡಿ ತೋರಿಸಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಸಚಿವರಾದ ಈಶ್ವರ್‌ ಖಂಡ್ರೆ, ಲಕ್ಷ್ಮೀ ಹೆಬ್ಬಾಳ್ಕರ್‌ ಸೇರಿ ಉಳಿದ ಕೆಲ ಲಿಂಗಾಯತ ಸಚಿವರು ದನಿಗೂಡಿಸಿದರು.

ಇದೇ ವೇಳೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು, ಒಕ್ಕಲಿಗ ಸಮುದಾಯದ ವಿಚಾರದಲ್ಲೂ ಪ್ರವರ್ಗವಾರು ವಿಂಗಡಣೆಯಲ್ಲಿ ತೀರಾ ವ್ಯತ್ಯಾಸವಾಗಿದೆ. ಪ್ರವರ್ಗಗಳ ನಿಗದಿಗೆ ಅನುಸರಿಸಿರುವ ಮಾನದಂಡಗಳ ಬಗ್ಗೆಯೇ ಆಕ್ಷೇಪ ವ್ಯಕ್ತವಾಗಿದೆ. ಹೀಗಾಗಿ ಪ್ರವರ್ಗಗಳ ಬಗ್ಗೆ ಮತ್ತಷ್ಟು ಸ್ಪಷ್ಟನೆ ಬೇಕು ಎಂದು ಒತ್ತಾಯಿಸಿದರು.

ಲಿಖಿತವಾಗಿ ಅಭಿಪ್ರಾಯ ಸಲ್ಲಿಸಲು ಸೂಚನೆ:

ಈ ವಾದಕ್ಕೆ ಒಬ್ಬೊಬ್ಬರಾಗಿ ದನಿಗೂಡಿಸಲು ಆರಂಭಿಸಿದ ಹಿನ್ನೆಲೆಯಲ್ಲಿ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಯಾವ ಮಾನದಂಡಗಳ ಆಧಾರದ ಮೇಲೆ ಸಮೀಕ್ಷೆ ನಡೆಸಿ ಪ್ರವರ್ಗವಾರು ವಿಂಗಡಣೆ ಮಾಡಿದೆ ಎಂಬುದು ನಿಮ್ಮ ಪ್ರಶ್ನೆ. ಈ ಬಗ್ಗೆ ಸಚಿವ ಸಂಪುಟ ಸಭೆಗೆ ಹಿಂದುಳಿದ ವರ್ಗಗಳ ಇಲಾಖೆ ಮಂಡಿಸಿರುವ ಟಿಪ್ಪಣಿಯಲ್ಲಿ ಪೂರ್ಣ ವಿವರಣೆ ಇಲ್ಲ. ಹೀಗಾಗಿ ಈ ಬಗ್ಗೆ ಮುಂದಿನ ಸಂಪುಟ ಸಭೆಯಲ್ಲಿ ಸಂಪೂರ್ಣ ವಿವರ ಸಲ್ಲಿಸಲು ಸೂಚಿಸುತ್ತೇನೆ.

ಅಧಿಕಾರಿಗಳು ವಿವರಗಳನ್ನು ನೀಡಲು ಪೂರಕವಾಗಿ ಸಚಿವರು ತಮ್ಮ ಅಭಿಪ್ರಾಯ ಹಾಗೂ ಆಕ್ಷೇಪಣೆಗಳನ್ನು ಲಿಖಿತ ರೂಪದಲ್ಲಿ ಸಲ್ಲಿಸಿ. ಮುಂದಿನ ಸಂಪುಟ ಸಭೆಗೆ ಮೊದಲು ಅಭಿಪ್ರಾಯ ಹಾಗೂ ಆಕ್ಷೇಪಣೆಗಳನ್ನು ನೀಡಿದರೆ ಅದಕ್ಕೆ ತಕ್ಕಂತೆ ಮಾಹಿತಿ ಸಂಗ್ರಹಿಸಿ ಮುಂದಿನ ಸಂಪುಟ ಸಭೆಯಲ್ಲಿ ಚರ್ಚಿಸಬಹುದು ಎಂದು ಹೇಳಿ ಚರ್ಚೆಗೆ ತೆರೆ ಎಳೆದರು ಎಂದು ಮೂಲಗಳು ತಿಳಿಸಿವೆ.

ಮಾನದಂಡಗಳ ಬಗ್ಗೆ ವಿವರಣೆ ಕೇಳಿದ್ದಾರೆ: ಎಚ್.ಕೆ.ಪಾಟೀಲ್‌

ವರದಿ ಬಗ್ಗೆ ಸೌಹಾರ್ದಯುತವಾಗಿ ಸುದೀರ್ಘ ಚರ್ಚೆ ನಡೆದಿದೆ. ಆದರೆ ಹಿಂದುಳಿದಿರುವಿಕೆ ಹಾಗೂ ಆರ್ಥಿಕತೆ ನಿರ್ಧರಿಸಲು ಯಾವೆಲ್ಲ ಮಾನದಂಡ ಅನುಸರಿಸಲಾಗಿದೆ ಎಂಬ ಬಗ್ಗೆ ಸಚಿವರು ಮಾಹಿತಿ ಕೇಳಿದ್ದರು. ಈ ಬಗ್ಗೆ ಸಚಿವ ಶಿವರಾಜ್‌ ತಂಗಡಗಿ ಹಾಗೂ ಅಧಿಕಾರಿಗಳು ವಿವರಣೆ ನೀಡಿದರು ಎಂದು ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ. ಪಾಟೀಲ್‌ ತಿಳಿಸಿದರು.
ಮಾನದಂಡಗಳ ಬಗ್ಗೆ ಕೆಲ ಸಚಿವರು ಕೆಲ ಆಕ್ಷೇಪ ವ್ಯಕ್ತಪಡಿಸಿದ್ದು, ಆರ್ಥಿಕತೆ ನಿಗದಿ ಮಾಡುವ ವೇಳೆ ಆದಾಯದ ಮೂಲಗಳನ್ನು ಹೇಗೆ ಪರಿಗಣಿಸಿದ್ದೀರಿ ಎಂದು ಕೇಳಿದ್ದಾರೆ. ಹೀಗಾಗಿ ಮುಂದಿನ ಸಭೆಯಲ್ಲಿ ಹೆಚ್ಚುವರಿ ವಿವರಗಳನ್ನು ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಚಿವ ಸಂಪುಟ ಉಪಸಮಿತಿ ರಚನೆ ಸೇರಿ ಯಾವುದೇ ವಿಚಾರ ಚರ್ಚೆಯಾಗಿಲ್ಲ ಎಂದು ಹೇಳಿದರು.

ಅಂಕಿ-ಅಂಶ ಸತ್ಯವಲ್ಲ:
ಸಭೆಯಲ್ಲಿ ತಮ್ಮ ತಮ್ಮ ಜಾತಿಗಳ ಸಂಖ್ಯಾಬಲದ ಬಗ್ಗೆ ಸಚಿವರು ಆಕ್ಷೇಪ ವ್ಯಕ್ತಪಡಿಸಿಲ್ಲ. ಈಗ ವಿವಿಧ ಮಾಧ್ಯಮಗಳಲ್ಲಿ ಜಾತಿಗಳ ಸಂಖ್ಯಾಬಲದ ಬಗ್ಗೆ ತಪ್ಪು ಗ್ರಹಿಕೆ ಹೊರ ಬೀಳುತ್ತಿದೆ. ಆ ವಿವರ ಸಂಪೂರ್ಣ ಇಲ್ಲ. ವರದಿಯಲ್ಲಿ ನೀಡಿರುವ ಅಂಕಿ-ಅಂಶ (ಜಾತಿ) ಬಗ್ಗೆ ಚರ್ಚೆಯಾಗಿ ಅಂತಿಮ ನಿರ್ಣಯ ಆದಾಗ ಎಲ್ಲವೂ ಗೊತ್ತಾಗುತ್ತದೆ ಎಂದು ಎಚ್‌.ಕೆ. ಪಾಟೀಲ್‌ ಹೇಳಿದರು.

ಇದನ್ನೂ ಓದಿ: ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿರುವ ‘ಜಾತಿ ಗಣತಿ’ ವರದಿ ಜಾರಿ ಮಾಡದಿದ್ದರೆ ದಂಗೆ: ಎಚ್ಚರಿಕೆ

ವರದಿ ಬಗ್ಗೆ ಮೇ 2ಕ್ಕೆ ಸಂಪುಟ ಸಭೆ: ಎಚ್.ಕೆ. ಪಾಟೀಲ್‌
ವರದಿ ಬಗ್ಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲು ತೀರ್ಮಾನಿಸಲಾಗಿದೆ. ಏ.24ರಂದು ಮಲೆಮಹದೇಶ್ವರ ಬೆಟ್ಟದಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಅಲ್ಲಿನ ವಿಷಯಗಳೇ ಹೆಚ್ಚಿರುತ್ತವೆ. ಹೀಗಾಗಿ ಅಲ್ಲಿನ ಸಮೀಕ್ಷಾ ವರದಿ ಬಗ್ಗೆ ಚರ್ಚಿಸುವುದಿಲ್ಲ. ಮೇ 1 ರಜಾ ದಿನವಾದ್ದರಿಂದ ಮೇ 2 ರಂದು ಶುಕ್ರವಾರ ಸಚಿವ ಸಂಪುಟ ಸಭೆ ನಡೆಸಿ ವರದಿ ಬಗ್ಗೆ ಚರ್ಚಿಸಲಾಗುವುದು ಎಂದು ಸಚಿವ ಎಚ್.ಕೆ. ಪಾಟೀಲ್‌ ಮಾಹಿತಿ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ತ್ರಿರೋಗ ತಜ್ಞೆ, ಪುತ್ರನ ದುರಂತ ಅಂತ್ಯ, ರಾತ್ರಿ ಜಗಳವಾಡಿದ ಇಬ್ಬರು ಬೆಳಗ್ಗೆ ಶವವಾಗಿ ಪತ್ತೆ
ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!