ಸಾಲುಮರದ ತಿಮ್ಮಕ್ಕಗೆ ಸಚಿವ ಸಂಪುಟ ದರ್ಜೆ ಸ್ಥಾನಮಾನ, ಜನ್ಮದಿನದಂದೇ ಸಿಕ್ತು ವಿಶೇಷ ಉಡುಗೊರೆ

By Suvarna NewsFirst Published Jun 30, 2022, 11:05 PM IST
Highlights

ಇಂದು(ಜೂನ್.30) 111ರ ಜನ್ಮದಿನದ ಸಂಭ್ರಮದಲ್ಲಿರುವ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ವಿಶೇಷ ಉಡುಗೊರೆ ಘೋಷಿಸಿದ್ದಾರೆ.
 

ಬೆಂಗಳೂರು, (ಜೂನ್.30):  ಶತಾಯುಷಿ ಸಾಲುಮರದ ತಿಮ್ಮಕ್ಕ ಅವರಿಗೆ ಬಿಡಿಎ ವತಿಯಿಂದ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ 50*80 ಅಳತೆಯ ನಿವೇಶನವನ್ನು ಹಸ್ತಾಂತರಿಸಲಾಗಿದೆ. ಇದೀಗ ಇದರ ಬೆನ್ನಲ್ಲೇ ತಿಮ್ಮಕ್ಕ ಜನ್ಮದಿನವಾದ ಇಂದು(ಜೂನ್.30) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಹತ್ವದ ಉಡುಗೊರೆ ನೀಡಿದ್ದಾರೆ.

ಹೌದು...ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರಿಗೆ ಪರಿಸರ ರಾಯಭಾರಿ ಗೌರವ ನೀಡಿ, ಜೊತೆಗೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ನೀಡಲಾಗುವುದು ಎಂದು‌ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ಘೋಷಿಸಿದರು.

ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಗುರುವಾರ ನಡೆದ ಸಾಲುಮರದ ತಿಮ್ಮಕ್ಕನವರ 111ರ ಜನ್ಮದಿನದ ಸಂಭ್ರಮ ಹಾಗೂ ಸಾಲುಮರದ ತಿಮ್ಮಕ್ಕ ಗ್ರೀನರಿ ಅವಾರ್ಡ್ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಬೊಮ್ಮಾಯಿ,  ಸಾಲುಮರದ ತಿಮ್ಮಕ್ಕನವರು ಪರಿಸರ ಸಂರಕ್ಷಣೆಗೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ರಾಜ್ಯ ಸರ್ಕಾರದ ವತಿಯಿಂದ “ಪರಿಸರದ ರಾಯಭಾರಿ’ ಎಂಬ ವಿಶೇಷ ಪದವಿ ಹಾಗೂ ಮತ್ತಷ್ಟು ಪರಿಸರ ಸಂರಕ್ಷಣೆ ಕಾರ್ಯ ಕೈಗೊಳ್ಳಲು ನೆರವಾಗುವುದಕ್ಕಾಗಿ ರಾಜ್ಯ ಸಚಿವ ಸ್ಥಾನಮಾನ ನೀಡಲಾಗುತ್ತಿದೆ ಎಂದು ಹೇಳಿದರು.

ಸಾಲುಮರದ ತಿಮ್ಮಕ್ಕಗೆ ಬಿಡಿಎ ನಿವೇಶನ, ಕ್ರಯ ಪತ್ರ ಹಸ್ತಾಂತರಿಸಿದ ಸಿಎಂ ಬೊಮ್ಮಾಯಿ!

ತಿಮ್ಮಕ್ಕನವರ ಸೇವೆ ನಿರತಂರವಾಗಿ ಸಾಗಲಿ ಎಂಬ ಉದ್ದೇಶದಿಂದ ರಾಜ್ಯದೆಲ್ಲೆಡೆ ಎಲ್ಲೇ ಅವರು ಸಂಚರಿಸಿದರೂ ಸಹ ಅವರಿಗೆ ಸರ್ಕಾರದ ವತಿಯಿಂದಲೇ ವಾಹನ ವ್ಯವಸ್ಥೆ ಮಾಡಲಾಗುತ್ತದೆ. ಬೇರೆ ರಾಜ್ಯಗಳಿಗೆ ತೆರಳಿದರೂ ಕೂಡ ಸರ್ಕಾರದ ವತಿಯಿಂದಲೇ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗುತ್ತದೆ. ತಿಮ್ಮಕ್ಕನವರ ಕೆಲಸ ಲಕ್ಷಾಂತರ ಜನರ ಬದುಕಿಗೆ ಈಗಾಗಲೇ ಪ್ರೇರಣೆಯಾಗಿದೆ. ಮತ್ತಷ್ಟು ಯುವರಿಗೆ ಪ್ರೇರಣೆಯಾಗಲಿ ಎಂಬ ಉದ್ದೇಶದಿಂದ ವಾರ್ತಾ ಇಲಾಖೆ ವತಿಯಿಂದ ವೆಬ್‌ಸೈಟ್‌ ರಚಿಸಿ ವೆಬ್‌ ಸೀರೀಸ್‌ ಮಾಡಿ ತಿಮ್ಮಕ್ಕನವರ ಕೆಲಸವನ್ನು ಪ್ರಚಾರ ಮಾಡಲಾಗುತ್ತದೆ ಎಂದು ತಿಳಿಸಿದರು.

ತಿಮ್ಮಕ್ಕ ನೆಲೆಸಿರುವ ಬಳ್ಳೂರು ಬಳಿ 10 ಎಕರೆ ಜಮೀನು ನೀಡಲಾಗುತ್ತಿದೆ. ಮುಂದಿನ 3-4 ದಿನಗಳಲ್ಲಿ ಸರ್ಕರಾದ ವತಿಯಿಂದ ಮಂಜೂರು ಮಾಡಲಾಗುತ್ತದೆ. ಬೆಂಗಳೂರಿನಲ್ಲಿ ಬಿಡಿಎ ನಿವೇಶನ ನೀಡಲಾಗಿದ್ದು, ಸುಮಾರು 6 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಿಕೊಡಲಾಗುತ್ತಿದೆ. ಇದರ ಜೊತೆಗೆ ಸೂರ್ಯನಗರದಲ್ಲಿ ವಸತಿ ಇಲಾಖೆ ವತಿಯಿಂದ ಮನೆ ಮಂಜೂರು ಮಾಡಲಾಗಿದೆ ಎಂದು ಹೇಳಿದರು.

ಯಾವುದೇ ಪದವಿ, ನೆರವು, ಅವಕಾಶಗಳು ಇಲ್ಲದೆ, ಧ್ಯೇಯವನ್ನಿಟ್ಟುಕೊಂಡು ಕಾಯಕನಿಷ್ಠೆಯಿಂದ ಸರ್ವರಿಗೂ ಒಳ್ಳೆಯದಾಗುವ ಕೆಲಸವನ್ನು ಮಾಡಿದರೆ, ಜಗತ್ತಿನಲ್ಲಿ ಬದಲಾವಣೆ ಮಾಡುವ ಪ್ರಭಾವಿಶಕ್ತಿಯಾಗಬಹುದು ಎಂಬುದಕ್ಕೆ ಸಾಲುಮರದ ತಿಮ್ಮಕ್ಕ ಸಾಕ್ಷಿಯಾಗಿದ್ದಾರೆ. ಇವರು ರಾಜ್ಯದವರಾಗಿರುವುದು ನಮ್ಮ ಸೌಭಾಗ್ಯ. ಹಸಿರು, ಪರಿಸರ ಮತ್ತು ಪರಿಸರದ ಶುದ್ಧೀಕರಣದ ವಿಚಾರದಲ್ಲಿ ತಿಮ್ಮಕ್ಕನನ್ನು ವೈಭವೀಕರಿಸಿ ಪ್ರಚಾರ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.

click me!