• ಬಿಜೆಪಿ ಶಾಸಕ ಅಭಯ್ ಪಾಟೀಲ್ ವಿರುದ್ಧ ಭ್ರಷ್ಟಾಚಾರ ಆರೋಪ
• 2012ರಲ್ಲಿ ಅಭಯ್ ಪಾಟೀಲ್ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದ ಸುಜೀತ್ ಮುಳಗುಂದ
• 2017ರಲ್ಲಿ ಲೋಕಾಯುಕ್ತದಿಂದ ಎಸಿಬಿಗೆ ವರ್ಗಾವಣೆಗೊಂಡಿದ್ದ ಪ್ರಕರಣ
ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ
ಬೆಳಗಾವಿ(ಜೂ.30): ಬೆಳಗಾವಿ ದಕ್ಷಿಣ ಬಿಜೆಪಿ ಶಾಸಕ ಅಭಯ್ ಪಾಟೀಲ್‌ಗೆ ಸಂಕಷ್ಟ ಎದುರಾಗಿದೆ. ಅಭಯ್ ಪಾಟೀಲ್ ವಿರುದ್ಧದ ಭ್ರಷ್ಟಾಚಾರ ಆರೋಪ ತನಿಖೆಯನ್ನು ಬೆಳಗಾವಿ ಎಸಿಬಿ ಅಧಿಕಾರಿಗಳು ಪೂರ್ಣಗೊಳಿಸಿದ್ದಾರೆ. ಶಾಸಕ ಅಭಯ್ ಪಾಟೀಲ್‌ರನ್ನು ನ್ಯಾಯಾಲಯದಲ್ಲಿ ಅಭಿಯೋಜನೆಗೆ ಒಳಪಡಿಸಲು ಹಾಗೂ ಅಭಿಯೋಜನಾ ಮಂಜೂರಾತಿ ಆದೇಶ ಪೂರೈಸುವ ಕುರಿತು ಅಂತಿಮ ವರದಿ ತಯಾರಿಸಿ ಜೂನ್ 6ರಂದು ವಿಧಾನಸಭೆ ಸಭಾಧ್ಯಕ್ಷರಿಗೆ ಸೂಕ್ತ ಮಾರ್ಗದೊಂದಿಗೆ ಸಲ್ಲಿಸಿದ್ದಾಗಿ ಎಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಬೆಳಗಾವಿಯ 4ನೇ ಅಧಿಕ ಜಿಲ್ಲಾ ಸತ್ರ ಹಾಗೂ ವಿಶೇಷ ನ್ಯಾಯಾಲಯದ ವಿಶೇಷ ಸಾರ್ವಜನಿಕ ಅಭಿಯೋಜಕರಿಗೆ ಜೂನ್ 20ರಂದು ಬೆಳಗಾವಿ ಎಸಿಬಿ ಡಿವೈಎಸ್‌ಪಿ ಜೆ.ಎಂ.ಕರುಣಾಕರಶೆಟ್ಟಿ ಪತ್ರ ಬರೆದು ಮಾಹಿತಿ ನೀಡಿದ್ದಾರೆ. 2012ರಲ್ಲಿ ಬಿಜೆಪಿ ಶಾಸಕ ಅಭಯ್ ಪಾಟೀಲ್ ವಿರುದ್ಧ ಬೆಳಗಾವಿಯ ಸಾಮಾಜಿಕ ಕಾರ್ಯಕರ್ತ ಸುಜೀತ್ ಮುಳಗುಂದ ದೂರು ಸಲ್ಲಿಸಿದ್ದರು. 2017ರಲ್ಲಿ ಲೋಕಾಯುಕ್ತದಿಂದ ಎಸಿಬಿಗೆ ಪ್ರಕರಣ ವರ್ಗಾವಣೆಗೊಂಡಿತ್ತು. ಅಭಯ್ ಪಾಟೀಲ್ ವಿರುದ್ಧ ಕಲಂ 13(1)(ಇ) ಸಹಕಲಂ 13(2) ಲಂಚ ಪ್ರತಿಬಂಧಕ ಕಾಯ್ದೆ 1988ರಡಿ ಪ್ರಕರಣ ದಾಖಲಾಗಿತ್ತು.