ದಾವಣಗೆರೆ ಪೊಲೀಸರು ನ್ಯಾಮತಿ ಎಸ್‌ಬಿಐ ಬ್ಯಾಂಕ್ ದರೋಡೆ ಪ್ರಕರಣವನ್ನು ಭೇದಿಸಿ, 15.30 ಕೋಟಿ ರೂ. ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ತಮಿಳುನಾಡು ಮೂಲದ ಮೂವರು ಸೇರಿದಂತೆ ಆರು ಜನರನ್ನು ಬಂಧಿಸಲಾಗಿದೆ, ಸಾಲ ಸಿಗದ ಕಾರಣಕ್ಕೆ ದರೋಡೆ ನಡೆದಿದೆ.
ದಾವಣಗೆರೆ (ಏ.1): ಜಿಲ್ಲೆಯ ನ್ಯಾಮತಿ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ)ನಲ್ಲಿ ನಡೆದಿದ್ದ ರಾಜ್ಯದ ಅತಿ ದೊಡ್ಡ ಚಿನ್ನ ಕಳ್ಳತನ ಪ್ರಕರಣ ಭೇದಿಸಿರುವ ದಾವಣಗೆರೆ ಪೊಲೀಸರು, ಬಾವಿಯೊಂದರಲ್ಲಿ ಅಡಗಿಸಿಟ್ಟಿದ್ದ ಸುಮಾರು ₹15.30 ಕೋಟಿ ಮೌಲ್ಯದ 17.01 ಕೆಜಿ ಚಿನ್ನಾಭರಣ ಜಪ್ತಿ ಮಾಡಿದ್ದಾರೆ. ಕಳೆದ ಐದು ತಿಂಗಳ ಹಿಂದೆ ನಡೆದಿದ್ದ ಈ ಪ್ರಕರಣ ಸಂಬಂಧ ತಮಿಳುನಾಡು ಮೂಲದ ಮೂವರು ಸೇರಿ 6 ಜನರನ್ನು ಬಂಧಿಸಿದ್ದಾರೆ.
ತಮಿಳುನಾಡಿನ ಮದುರೈ ಮೂಲದ, ಹಾಲಿ ನ್ಯಾಮತಿಯಲ್ಲಿ ವಿಐಪಿ ಸ್ನ್ಯಾಕ್ಸ್ ಅಂಡ್ ಸ್ವೀಟ್ಸ್ ಬೇಕರಿ ನಡೆಸುತ್ತಿದ್ದ ವಿಜಯಕುಮಾರ (30), ಆತನ ಸಹೋದರ ಅಜಯಕುಮಾರ (28), ಸಂಬಂಧಿ ಪರಮಾನಂದ (30), ನ್ಯಾಮತಿ ಶಾಂತಿನಗರ ಶಾಲೆ ಎದುರಿನ ಬೆಳಗುತ್ತಿ ಕ್ರಾಸ್ ನಿವಾಸಿ, ಪೇಟಿಂಗ್ ಕೆಲಸಗಾರ ಅಭಿಷೇಕ್ (23), ಸುರಹೊನ್ನೆ ಶಾಂತಿ ನಗರದ ವಾಸಿ ತೆಂಗಿನಕಾಯಿ ವ್ಯಾಪಾರಿ ಚಂದ್ರು (23) ಹಾಗೂ ಚಾಲಕ ಮಂಜುನಾಥ (30) ಬಂಧಿತ ಆರೋಪಿಗಳು.
ನಗರದ ಜಿಲ್ಲಾ ಎಸ್‌ಪಿ ಕಚೇರಿಯಲ್ಲಿ ಸೋಮವಾರ ಜಪ್ತಿ ಮಾಡಿದ ಚಿನ್ನಾಭರಣಗಳನ್ನು ಪ್ರದರ್ಶಿಸಿದ್ದು, ಇದೇ ವೇಳೆ ಸುದ್ದಿಗೋಷ್ಠಿಯಲ್ಲಿ ಪೂರ್ವ ವಲಯದ ಪೊಲೀಸ್ ಮಹಾ ನಿರೀಕ್ಷಕ ಡಾ. ಬಿ.ಆರ್. ರವಿಕಾಂತೇಗೌಡ ಅವರು ಕಳ್ಳತನ ಮತ್ತು ಚಿನ್ನ ಅಡಗಿಸಿಟ್ಟ ಕುತೂಹಲಕಾರಿ ಸಂಗತಿಗಳನ್ನು ಎಳೆಎಳೆಯಾಗಿ ವಿವರಿಸಿದರು.
ಪ್ರಕರಣದ ಹಿನ್ನೆಲೆ:
ಕಳೆದ ವರ್ಷ ಅ.28ರಂದು ನ್ಯಾಮತಿ ಎಸ್‌ಬಿಐ ಶಾಖೆಯಲ್ಲಿ ಗ್ರಾಹಕರು ಅಡವಿಟ್ಟಿದ್ದ 17.7 ಕೆಜಿ ಚಿನ್ನಾಭರಣ ದರೋಡೆಯಾಗಿತ್ತು. ಐಜಿಪಿ, ಎಸ್‌ಪಿ, ಎಎಸ್‌ಪಿ, ಡಿವೈಎಸ್‌ಪಿ ಸೇರಿ ಅಧಿಕಾರಿಗಳು, ಎಫ್‌ಎಸ್‌ಎಲ್ ವಾಹನ, ಸೋಕೋ ಅಧಿಕಾರಿ, ಶ್ವಾನದಳ, ಬೆರಳಚ್ಚು ತಜ್ಞರು ಬ್ಯಾಂಕ್‌ಗೆ ಭೇಟಿ ನೀಡಿ, ಇಂಚಿಂಚು ಜಾಗವನ್ನೂ ಪರಿಶೀಲಿಸಿದ್ದರು. ಆದರೆ, ದರೋಡೆಕೋರರ ಬಗ್ಗೆ ಕಿಂಚಿತ್ತೂ ಸುಳಿವು ಮಾತ್ರ ಸಿಕ್ಕಿರಲಿಲ್ಲ.
ಬ್ಯಾಂಕ್ ಒಳಗೇನಾಗಿತ್ತು?:
ಬ್ಯಾಂಕ್ ಬಲಭಾಗದ ಕಬ್ಬಿಣದ ಕಿಟಕಿ ಗ್ರಿಲ್ ತುಂಡರಿಸಿ ಒಳನುಸುಳಿದ್ದ ದರೋಡೆಕೋರರು, ಸಿಸಿ ಟಿವಿ, ಅಲರಾಂ, ಎಲ್ಲ ವೈರ್‌ಗಳ ಸಂಪರ್ಕ ತೆಗೆದು ಹಾಕಿ ಸ್ಟ್ರಾಂಗ್ ರೂಂ ಪ್ರವೇಶಿಸಿದ್ದರು. ಸ್ಟ್ರಾಂಗ್ ರೂಂಗೆ ಇದ್ದ ಗ್ರಿಲ್ ಡೋರ್ ಬೀಗ ಮುರಿದು, ನಾಲ್ಕು ಕರೆನ್ಸಿ ಚೆಸ್ಟ್‌ಗಳಲ್ಲಿ ಒಂದನ್ನು ಗ್ಯಾಸ್ ಕಟರ್‌ನಿಂದ ಕೊರೆದು, ಲಾಕರ್ ಬಾಗಿಲನ್ನು ತೆರೆದು ಸುಮಾರು 17.7 ಕೆಜಿ ಚಿನ್ನಾಭರಣ ಕದ್ದಿದ್ದರು. ಸಾಕ್ಷ್ಯ ನಾಶ ಮಾಡಲು ಸ್ಟ್ರಾಂಗ್ ರೂಂ, ಬ್ಯಾಂಕ್ ಮ್ಯಾನೇಜರ್ ರೂಂ, ತುಂಡರಿಸಿದ ಕಿಟಕಿವರೆಗೆ ಕಾರದ ಪುಡಿ ಚೆಲ್ಲಿದ್ದರು.ತನಿಖೆಗೆ 5 ತಂಡಗಳ ರಚನೆ:
ಪ್ರಕರಣದಲ್ಲಿ ಚನ್ನಗಿರಿ ಎಎಸ್‌ಪಿ ಸ್ಯಾಮ್ ವರ್ಗೀಸ್ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಿ, ಗ್ರಾಮಾಂತರ ಡಿವೈಎಸ್ಪಿ ಬಿ.ಎಸ್. ಬಸವರಾಜ ಒಳಗೊಂಡ 5 ತಂಡ ರಚಿಸಲಾಗಿತ್ತು. 6ರಿಂದ 8 ಕಿಮೀವರೆಗೆ ಕೂಲಂಕಷವಾಗಿ ಪರಿಶೀಲಿಸಲಾಗಿತ್ತು. ಸಾಕ್ಷಿಗಳ ಸುಳಿವು ಮಾತ್ರ ಸಿಕ್ಕಿರಲಿಲ್ಲ. ಕೊನೆಗೆ ರಾಜಸ್ಥಾನ ಅಥವಾ ಉತ್ತರ ಪ್ರದೇಶ ವೃತ್ತಿಪರ ಬ್ಯಾಂಕ್ ದರೋಡೆಕೋರರ ಕೃತ್ಯ ಇರಬಹುದೆಂದು ಪೊಲೀಸರು ಶಂಕಿಸಿದ್ದರು. ಹೀಗಾಗಿ ಹರಿಯಾಣ, ಹಿಮಾಚಲ ಪ್ರದೇಶ, ಕಾಕಿನಾಡ, ವಾರಂಗಲ್, ಕೋಲಾರ, ತಮಿಳುನಾಡು, ಕೇರಳಕ್ಕೂ ಹೋಗಿ ಆರೋಪಿಗಳಿಗೆ ಶೋಧ ಕೈಗೊಂಡಿದ್ದರು.ಪ್ರಕರಣ ಭೇದಿಸಿದ್ದು ಹೇಗೆ?
ಮೊದಲ ಆರೋಪಿ ವಿಜಯಕುಮಾರ್ ಗ್ಯಾಸ್ ಕಟರ್ ಬಳಸಲು ಶಿವಮೊಗ್ಗದಲ್ಲಿ ಸಿಲಿಂಡರ್ ಖರೀದಿಸಿದ್ದ. ಈ ವೇಳೆ ಆಧಾರ್ ಕಾರ್ಡ್ ಕೊಟ್ಟಿದ್ದ. ಆದರೆ ಸಿಲಿಂಡರ್ ಅನ್ನು ವಾಪಸ್ ಕೊಟ್ಟಿರಲಿಲ್ಲ. ಬ್ಯಾಂಕ್ ದರೋಡೆ ಬಳಿಕ ಸಿಲಿಂಡರ್ ಅನ್ನು ನಜ್ಜುಗುಜ್ಜು ಮಾಡಿ ನೀರು ತುಂಬಿದ್ದ ಕೆರೆಗೆ ಎಸೆದಿದ್ದರು. ಬೇಸಿಗೆಯಿಂದಾಗಿ ಕೆರೆ ಒಣಗಿದ್ದರಿಂದ ಸಿಲಿಂಡರ್ ಪತ್ತೆಯಾಗಿತ್ತು.
ಬ್ಯಾಂಕ್ ದರೋಡೆಗಿಂತ ಹಿಂದಿನ ದಿನಗಳಲ್ಲಿ ಸಿಲಿಂಡರ್ ಖರೀದಿ ಮಾಡಿದವರು ಯಾರು ವಾಪಸ್ ಸಿಲಿಂಡರ್ ತಂದುಕೊಟ್ಟಿಲ್ಲ ಎಂದು ಮೂಲ ಹುಡುಕಿದಾಗ ವಿಜಯಕುಮಾರ್ ಸಿಲಿಂಡರ್ ವಾಪಸ್ ಕೊಡದಿರುವುದು ಪತ್ತೆಯಾಗಿದೆ. ಅಲ್ಲದೆ ಬ್ಯಾಂಕ್ ದರೋಡೆ ವೇಳೆ ಬಳಸಿದ್ದ ಕಾರದ ಪುಡಿ ಪ್ಯಾಕೇಟ್ ಮೇಲಿದ್ದ ಹೆಸರು ಸಹ ಸ್ಥಳೀಯರೇ ಕೃತ್ಯ ನಡೆಸಿದ್ದಾರೆಂಬ ಮಾಹಿತಿ ಒದಗಿಸಿದೆ. ವಿಜಯಕುಮಾರ್ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಬ್ಯಾಂಕ್ ದರೋಡೆ ಏಕೆ- ಹೇಗೆ?
ಬ್ಯಾಂಕ್‌ನಲ್ಲಿ ಸಾಲಕ್ಕೆ ಹಾಕಿದ್ದ ಅರ್ಜಿ ತಿರಸ್ಕರಿಸಿದ್ದು ದರೋಡೆಗೆ ಪ್ರಮುಖ ಕಾರಣ. ಆದರೆ ದರೋಡೆಕೋರರು ನಡೆಸಿದ ಕಸರತ್ತು ಮಾತ್ರ ಬೆಚ್ಚಿಬೀಳಿಸುವಂತಿದೆ.ಪ್ರಕರಣದ 1ನೇ ಆರೋಪಿ ವಿಜಯಕುಮಾರ ಸುರಹೊನ್ನೆ ಶಾಂತಿ ನಗರದ ವಾಸಿಯಾಗಿದ್ದು, ತಮಿಳುನಾಡು ಮೂಲದವನಾಗಿದ್ದು, ನ್ಯಾಮತಿಯಲ್ಲಿ ವಿಐಪಿ ಸ್ನ್ಯಾಕ್ಸ್ ಹೆಸರಿನ ಸ್ವೀಟ್ಸ್ ಮತ್ತು ಬೇಕರಿ ನಡೆಸುತ್ತಿದ್ದನು. ವಿಜಯಕುಮಾರ ತನ್ನ ತಂದೆ ಜೊತೆಗೂಡಿ 25-30 ವರ್ಷದಿಂದ ಅಂಗಡಿ ನಡೆಸಿಕೊಂಡು ಬಂದಿದ್ದನು. ವ್ಯಾಪಾರ ಅಭಿವೃದ್ಧಿಪಡಿಸಲು ₹14 ಲಕ್ಷ ಸಾಲಕ್ಕಾಗಿ ಮಾರ್ಚ್ 2023ರಲ್ಲಿ ನ್ಯಾಮತಿ ಎಸ್‌ಬಿಐಗೆ ಅರ್ಜಿ ಸಲ್ಲಿಸಿದ್ದರು. ಕ್ರೆಡಿಟ್ ಸ್ಕೋರ್ ಸರಿ ಇಲ್ಲ ಎಂಬ ಕಾರಣಕ್ಕೆ ಆತನ ಅರ್ಜಿ ತಿರಸ್ಕೃತವಾಗಿತ್ತು. ಅನಂತರ ತಮ್ಮ ಸಂಬಂಧಿಗಳ ಹೆಸರಿನಲ್ಲಿ ಸಾಲಕ್ಕೆ ಅದೇ ಬ್ಯಾಂಕ್‌ಗೆ ಅರ್ಜಿ ಸಲ್ಲಿಸಿದರೂ ಅರ್ಜಿ ತಿರಸ್ಕೃತವಾಗಿದ್ದವು. ಇದೇ ಬ್ಯಾಂಕ್ ದರೋಡೆಗೆ ಮೂಲ.
ಹೀಗಾಗಿ ಬ್ಯಾಂಕ್ ದರೋಡೆಗೆ ಸ್ಕೆಚ್ ರೂಪಿಸಲಾಯಿತು. ಮೊದಲಿಗೆ ಆರು ಜನರ ತಂಡ ಕಟ್ಟಿಕೊಂಡಿದ್ದಾರೆ. ಬ್ಯಾಂಕ್ ದರೋಡೆ, ಕಳ್ಳತನಕ್ಕೆ ಸಂಬಂಧಿಸಿದ ಅನೇಕ ಸರಣಿ ವೀಡಿಯೋಗಳನ್ನು ಯುಟ್ಯೂಬ್, ವಿವಿಧ ಒಟಿಟಿ ಪ್ಲಾಟ್‌ಫಾರಂ, ನೆಟ್ ಫ್ಲಿಕ್ಸ್‌ನಲ್ಲಿ ಮನಿ ಹೈಸ್ಟ್ (Money Heist) ಒಳಗೊಂಡಂತೆ ಅನೇಕ ಸರಣಿ ವೀಡಿಯೋಗಳನ್ನು ಸತತ 6 ತಿಂಗಳು ವೀಕ್ಷಣೆ ಮಾಡಿದ್ದಾರೆ ಬ್ಯಾಂಕ್ ದರೋಡೆಗೆ ಪಕ್ಕಾ ಯೋಜನೆ ರೂಪಿಸಿದ್ದಾರೆ.
6 ತಿಂಗಳ ಮುಂಚೆಯಿಂದಲೇ ಕೃತ್ಯಕ್ಕೆ ಅಗತ್ಯವಾದ ಸಲಕರಣೆಗಳನ್ನು ಶಿವಮೊಗ್ಗ, ನ್ಯಾಮತಿ ಪಟ್ಟಣದಿಂದ ಸಂಗ್ರಹಿಸಿ ತಂದಿಟ್ಟುಕೊಂಡಿದ್ದರು. ದರೋಡೆ ನಡೆಸುವ 4 ತಿಂಗಳ ಹಿಂದೆಯೇ ವಿಜಯಕುಮಾರ, ಅಜಯಕುಮಾರ, ಬಾಮೈದ ಪರಮಾನಂದ, ಸ್ನೇಹಿತರಾದ ಅಭಿಷೇಕ, ಚಂದ್ರು, ಮಂಜುನಾಥನ ಜೊತೆಗೆ ಬ್ಯಾಂಕ್ ದರೋಡೆ ಯೋಜನೆ ಪ್ರಸ್ತಾಪಿಸಿ, ಐಷಾರಾಮಿ ಜೀವನ, ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಸಿಗಲು ಹಣ ಅವಶ್ಯಕವೆಂದು ಪುಸಲಾಯಿಸಿದ್ದನು.
ಆರೂ ಜನ ಮಂಕಿ ಕ್ಯಾಪ್, ಗ್ಲೌಸ್, ಬ್ಲಾಕ್ ಶರ್ಟ್, ಪ್ಯಾಂಟ್‌ಗಳನ್ನು ಮಾರುಕಟ್ಟೆಯಿಂದ ಖರೀದಿಸಿ ತಂದಿದ್ದರು. 15 ದಿನ ಹಿಂದೆಯೇ ವಿಜಯಕುಮಾರನು ಅಭಿಷೇಕ ಜೊತೆ ಬ್ಯಾಂಕ್ ಸುತ್ತ ಹೋಗಿ, ಹೇಗೆ ಕಳವು ಮಾಡಬೇಕೆಂಬ ತಾಲೀಮು ನಡೆಸಿದ್ದನು. ರಾತ್ರಿ ವೇಳೆಯೂ ಬಂದು ಎಲ್ಲ ರೀತಿ ವೀಕ್ಷಣೆ ಮಾಡಿ, ಯಾವ್ಯಾಗ್ಯಾವಾಗ ಪೊಲೀಸರ ಸಂಚಾರ ಇರುತ್ತದೆ ಎಂದು ಚಲನವಲನ ಗಮನಿಸಿದ್ದರು. ನಂತರ ಅಕ್ಟೋಬರ್‌ನಲ್ಲಿ ಬ್ಯಾಂಕ್ ದರೋಡೆ ಮಾಡಿದ್ದರು.
ಕಾರಿನಲ್ಲಿ ಚಿನ್ನ ಬಚ್ಚಿಟ್ಟರು:
ಬ್ಯಾಂಕ್‌ನಲ್ಲಿ ದರೋಡೆ ಮಾಡಿದ ಚಿನ್ನವನ್ನು ವಿಜಯಕುಮಾರ ತನ್ನ ಮನೆಯಲ್ಲಿದ್ದ ಸಿಲ್ವರ್ ಬಣ್ಣದ ಡಸ್ಟರ್ ಕಾರಿನ ಡಿಕ್ಕಿಯಲ್ಲಿ ಬಚ್ಚಿಟ್ಟಿದ್ದನು. ಯಾವ ರೀತಿ ವಿಲೇವಾರಿ ಮಾಡಬೇಕೆಂದು ಪ್ಲಾನ್ ಮಾಡಿದ್ದನು. ಕೃತ್ಯಕ್ಕೆ ಬಳಸಿದ್ದ ಮಂಕಿ ಕ್ಯಾಪ್, ಹ್ಯಾಂಡ್ ಗ್ಲೌಸ್‌ಗಳನ್ನು ನಾಶಪಡಿಸಿದ್ದನು. ಇನ್ನುಳಿದ ಹೈಡ್ರಾಲಿಕ್ ಕಟರ್, ಗ್ಯಾಸ್ ಸಿಲಿಂಡರ್ ಇತರೆ ವಸ್ತುಗಳನ್ನು ಸವಳಂಗ ಕೆರೆ ಎಸೆದಿದ್ದಾಗಿ ಬಂಧಿತರು ಬಾಯಿಬಿಟ್ಟಿದ್ದಾರೆ. ಎಸ್‌ಬಿಐನಿಂದ ತಂದಿದ್ದ ಹಾರ್ಡ್ ಡಿಸ್ಕ್, ಡಿವಿಆರ್ ಅನ್ನು ಮೊದಲು ಕಲ್ಲಿನಿಂದ ಜಜ್ಜಿ, ಹಾಳು ಮಾಡಿ, ಕೆರೆಗೆ ಎಸೆದಿದ್ದರು.
ನಂತರ ನವೆಂಬರ್ ಮೊದಲ ವಾರ ವಿಜಯಕುಮಾರ್ ತನ್ನ ಸ್ವಂತ ಊರಾದ ತಮಿಳುನಾಡಿನ ಮದುರೈನ ಮನೆಗೆ ಒಬ್ಬನೇ ಕಾರಿನಲ್ಲಿ ಹೋಗಿದ್ದನು. ಮನೆಯು ಊರಿನ ಹೊರಗೆ ನಿರ್ಜನ ಪ್ರದೇಶದಲ್ಲಿದ್ದು, ಸುತ್ತಲೂ ದಟ್ಟ ಅರಣ್ಯವಿದೆ. ಅಲ್ಲಿದ್ದ 25-30 ಅಡಿ ಆಳದ ಬಾವಿಗೆ ಒಂದು ಸಣ್ಣ ಲಾಕರ್‌ಗೆ ಚಿನ್ನ ತುಂಬಿ, ಅದಕ್ಕೆ ಹಗ್ಗ ಕಟ್ಟಿ ಬಾವಿಯಲ್ಲಿ ಯಾರಿಗೂ ಕಾಣದಂತೆ ಇಳಿಬಿಟ್ಟು, ಬಚ್ಚಿಟ್ಟಿದ್ದನು.
ಕದ್ದ ಚಿನ್ನದಲ್ಲಿ ಸ್ವಲ್ಪ ಭಾಗವನ್ನು ತೆಗೆದುಕೊಂಡು, ಬ್ಯಾಂಕ್‌ಗಳಲ್ಲಿ, ಚಿನ್ನದ ಅಂಗಡಿಗಳಲ್ಲಿ ಅವನ ಹಾಗೂ ಸಂಬಂಧಿಗಳ ಹೆಸರಿನಲ್ಲಿ ಅಡವಿಟ್ಟು ಹಣ ಪಡೆದಿದ್ದನು. ಅದರಲ್ಲಿ ಅಭಿ, ಚಂದ್ರು, ಮಂಜುನಾಥನಿಗೆ ತಲಾ ₹1 ಲಕ್ಷದಂತೆ ಕೊಟ್ಟು, ಊರಿನಲ್ಲಿ ಒಂದು ದೊಡ್ಡ ಮನೆ ಕಟ್ಟಿಸಿ, ನಿವೇಶನ ಖರೀದಿಸಿದ್ದನು. ತಮ್ಮ ಸಂಬಂಧಿಗಳಿಗೆ ಸ್ವಲ್ಪ ಚಿನ್ನ ಕೊಟ್ಟಿದ್ದನು. ಉಳಿದ ಚಿನ್ನ 2-3 ವರ್ಷದವರೆಗೂ ತೆಗೆಯಬಾರದೆಂದು, ಪೊಲೀಸರು ಪ್ರಕರಣದ ತನಿಖೆ ಅಥವಾ ವಿಚಾರಣೆ ನಿಲ್ಲಿಸಿದಾಗ ಅದನ್ನು ತೆಗೆಯುವುದಾಗಿ ಹೇಳಿದ್ದನು.ಬಾವಿಯಲ್ಲಿ ಚಿನ್ನ ಬಚ್ಚಿಟ್ಟಿದ್ದ ವಿಚಾರ ವಿಜಯಕುಮಾರನಿಗೆ ಬಿಟ್ಟರೆ ಬೇರೆ ಯಾರಿಗೂ ಗೊತ್ತಿರಲಿಲ್ಲ. ಆದರೆ, ದಾವಣಗೆರೆ ಪೊಲೀಸರು ವಿಜಯಕುಮಾರನನ್ನು ಬಂಧಿಸಿ, ಆತಿಥ್ಯ ನೀಡುತ್ತಿದ್ದಂತೆ ಚಿನ್ನ ಬಚ್ಚಿಟ್ಟ ವಿಚಾರ, ತನ್ನೊಂದಿಗೆ ಯಾರೆಲ್ಲಾ ಇದ್ದರು ಎಂಬುದು ಸೇರಿದಂತೆ ಎಲ್ಲವನ್ನೂ ಬಿಚ್ಚಿಟ್ಟಿದ್ದಾನೆ.
ನ್ಯಾಮತಿ ಬ್ಯಾಂಕ್ ದರೋಡೆ ಪ್ರಕಣದಲ್ಲಿ ಆರೋಪಿ ವಿಜಯಕುಮಾರ ಮತ್ತು ತಂಡ ಚಾಪೆ ಕೆಳಗೆ ನುಸುಳಿದರೆ, ದಾವಣಗೆರೆ ಜಿಲ್ಲಾ ಪೊಲೀಸರು ರಂಗೋಲಿ ಕೆಳಗೇ ನುಸುಳಿ ಇಡೀ ಪ್ರಕರಣ ಸಂಪೂರ್ಣ ಬೇಧಿಸಿದ್ದಾರೆ. --
ಸಿಎಂ ಪದಕ-ಬಹುಮಾನ ಘೋಷಣೆ
ದಾವಣಗೆರೆ ಜಿಲ್ಲಾ ಪೊಲೀಸ್ ಅಧಿಕಾರಿ, ಸಿಬ್ಬಂದಿ ಕಾರ್ಯ ಮೆಚ್ಚಿ 10 ಅಧಿಕಾರಿ, ಸಿಬ್ಬಂದಿಗೆ ಮುಖ್ಯಮಂತ್ರಿ ಚಿನ್ನದ ಪದಕ, ರಾಜ್ಯ ಪೊಲೀಸ್ ಮಹಾ ನಿರೀಕ್ಷಕರು, ಪೂರ್ವ ವಲಯ ಐಜಿಪಿ, ಎಸ್ಪಿ ನಗದು ಬಹುಮಾನ ಘೋಷಿಸಿದ್ದಾರೆ ಎಂದು ಐಜಿಪಿ ಡಾ.ರವಿಕಾಂತೇಗೌಡ ತಿಳಿಸಿದರು.
- 15 ಕೋಟಿ ಮೌಲ್ಯದ 17 ಕೇಜಿ ಚಿನ್ನಾಭರಣ ವಶಕ್ಕೆ- ಸಾಲ ಕೊಡದ್ದಕ್ಕೆ ಬ್ಯಾಂಕನ್ನೇ ಕೊಳ್ಳೆ ಹೊಡೆದ ಗ್ಯಾಂಗ್- ತಮಿಳುನಾಡಿನ ಬಾವಿಗೆ ಎಸೆದು ಚಿನ್ನ ರಕ್ಷಿಸಿದ್ದ ಕಳ್ಳರು- ಕೆರೆಗೆ ಎಸೆದ ಸಿಲಿಂಡರ್‌ನಿಂದಾಗಿ ಸಿಕ್ಕಿತು ಸುಳಿವು
ಏನಿದು ಕೇಸ್?
ದಾವಣಗೆರೆ ಜಿಲ್ಲೆ ನ್ಯಾಮತಿಯ ಎಸ್‌ಬಿಐ ಶಾಖೆಯಲ್ಲಿ ಗ್ರಾಹಕರು ಗಿರವಿ ಇಟ್ಟಿದ್ದ 17.7 ಕೇಜಿ ಚಿನ್ನಾಭರಣ 2024ರ ಅ.28ರಂದು ಲೂಟಿಯಾಗಿತ್ತು. ಜನವರಿಯಲ್ಲಿ ದಕ್ಷಿಣ ಕನ್ನಡದ ಸಹಕಾರಿ ಬ್ಯಾಂಕ್‌ವೊಂದರಲ್ಲಿ ಲೂಟಿಯಾಗಿದ್ದ ಚಿನ್ನಕ್ಕಿಂತ ಇದರ ಮೌಲ್ಯ ಹೆಚ್ಚು.
ಮಾಡಿದ್ದು ಯಾರು?
ನ್ಯಾಮತಿಯಲ್ಲಿ ಬೇಕರಿ ನಡೆಸುತ್ತಿದ್ದ ವ್ಯಕ್ತಿಯೊಬ್ಬ ಎಸ್‌ಬಿಐನಿಂದ ₹14 ಲಕ್ಷ ಸಾಲ ಕೋರಿ ಅರ್ಜಿ ಸಲ್ಲಿಸಿದ್ದ. ಅದು ತಿರಸ್ಕಾರವಾಗಿತ್ತು. ಬಳಿಕ ತನ್ನ ಬಂಧುಗಳ ಹೆಸರಿನಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸಿದರೂ ತಿರಸ್ಕರಿಸಲಾಗಿತ್ತು. ಈ ಸಿಟ್ಟಿನಿಂದ ತನ್ನ ತಂಡದ ಜತೆಗೂಡಿ ದರೋಡೆ ಮಾಡಿತ್ತು.
ಭೇದಿಸಿದ್ದು ಹೇಗೆ?
ಒಂದು ಸುಳಿವನ್ನೂ ಬಿಟ್ಟುಕೊಡದ ರೀತಿ ಈ ದರೋಡೆ ಎಸಗಲಾಗಿತ್ತು. ಆರೋಪಿಗಳಿಗಾಗಿ ದಾವಣಗೆರೆ ಪೊಲೀಸರು ದೇಶದ ಉದ್ದಗಲಕ್ಕೂ ಅಲೆದಾಡಿದ್ದರು. ಆದರೆ ಆರೋಪಿಗಳು ಗ್ಯಾಸ್ ಕಟರ್ ಜತೆ ತಂದು, ಬಳಸಿದ ಬಳಿಕ ಕೆರೆಗೆ ಬಿಸಾಡಿದ್ದ ಸಿಲಿಂಡರ್‌ನಿಂದ ಸುಳಿವು ಸಿಕ್ಕಿತು. ಸಿಲಿಂಡರ್ ಅನ್ನು ಶಿವಮೊಗ್ಗದಲ್ಲಿ ಪಡೆದಿದ್ದ ಆರೋಪಿಗಳು ಆ ವೇಳೆ ಆಧಾರ್ ಕಾರ್ಡ್ ನೀಡಿದ್ದರು. ಯಾವ ಅಂಗಡಿಗೆ ಸಿಲಿಂಡರ್ ಬಾಕಿ ಬರಬೇಕಿದೆ ಎಂಬ ತನಿಖೆಗೆ ಇಳಿದಾಗ ಆರೋಪಿಗಳ ಸುಳಿವು ಸಿಕ್ಕಿದೆ.
ಮನಿ ಹೈಸ್ಟ್ ಪ್ರೇರಣೆ?
ಬ್ಯಾಂಕ್ ದರೋಡೆಗೆ ಸಂಬಂಧಿಸಿದ ಪ್ರಸಿದ್ಧ ವೆಬ್‌ಸೀರೀಸ್ ಮನಿ ಹೈಸ್ಟ್ ಹಾಗೂ ಯುಟ್ಯೂಬ್ ವಿಡಿಯೋಗಳನ್ನು ನೋಡಿ ಪಕ್ಕಾ ತಯಾರಿ ನಡೆಸಿ ಆರೋಪಿಗಳು ಕಳ್ಳತನ ಮಾಡಿದ್ದರು. ಇದು ಅವರ ಮೊದಲ ಕೃತ್ಯವಾಗಿತ್ತು.
ಚಿನ್ನ ಬಾವಿಗೆ ಎಸೆದರು
ತಮಿಳುನಾಡಿನ ಮದುರೈನಲ್ಲಿರುವ ತಮ್ಮ ತೋಟದ ಬಾವಿಯೊಳಗೆ ಚಿನ್ನವನ್ನು ಆರೋಪಿಗಳು ಬಚ್ಚಿಟ್ಟಿದ್ದರು. ಅದನ್ನು ಈಗ ಹೊರತೆಗೆಯಲಾಗಿದೆ.