ಬೆಳಗಾವಿಯಲ್ಲಿ ಏಪ್ರಿಲ್ 13 ರಂದು ಯತ್ನಾಳ್ ಪರವಾಗಿ ನಡೆಯುವ ಪ್ರತಿಭಟನೆ ವೈಯಕ್ತಿಕ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ. ಪಂಚಮಸಾಲಿ ಹೋರಾಟದಲ್ಲಿ ಎಲ್ಲರೂ ಪಕ್ಷಾತೀತವಾಗಿ ಪಾಲ್ಗೊಂಡಿದ್ದರು ಎಂದು ಅವರು ತಿಳಿಸಿದ್ದಾರೆ.
ಬೆಳಗಾವಿ (ಏ.1): ಇಡೀ ಪಂಚಮಸಾಲಿ ಸಮುದಾಯವನ್ನು ಯತ್ನಾಳ್ ಅವರಿಗೆ ಬರೆದುಕೊಟ್ಟಿಲ್ಲ. ಏ.13 ರಂದು ಬೆಳಗಾವಿಯಲ್ಲಿ ಯತ್ನಾಳ್ ಪರವಾಗಿ ಕೂಡಲಸಂಗಮ ಪಂಚಮಸಾಲಿಪೀಠದ ಶ್ರೀಗಳು ಹಮ್ಮಿಕೊಂಡಿರುವ ಪ್ರತಿಭಟನೆ ಅದು ವೈಯಕ್ತಿಕ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ನಗರದ ಗಣೇಶಪುರ ಪೈಪ್‌ಲೈನ್ ರಸ್ತೆಯಲ್ಲಿ ನಿರ್ಮಾಣಗೊಂಡಿರುವ ಬೆಳಗಾವಿ ಜಿಲ್ಲೆಯ ನಿರ್ಮಿತಿ ಕೇಂದ್ರ ಕಚೇರಿಯ ನೂತನ ಕಟ್ಟಡವನ್ನು ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೇ.80 ರಷ್ಟು ಪಂಚಮಸಾಲಿಗರು ಬಿಜೆಪಿಯಲ್ಲಿದ್ದಾರೆಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೀಡಿದ ಹೇಳಿಕೆಯಿಂದ ನನ್ನ ಮನಸ್ಸಿಗೆ ಬಹಳಷ್ಟು ನೋವಾಗಿದೆ. ಶ್ರೀಗಳು ಆ ರೀತಿ ಹೇಳಿಕೆ ನೀಡಬಾರದಿತ್ತು. ಪಂಚಮಸಾಲಿ ಹೋರಾಟದಲ್ಲಿ ನಾವೆಲ್ಲ ಪಕ್ಷಾತೀತವಾಗಿ ಪಾಲ್ಗೊಂಡಿದ್ದೇವು. ಮೀಸಲು ಕ್ಷೇತ್ರ ಸೇರಿ ಇನ್ನುಳಿದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು ಗೆಲ್ಲಲು ಲಿಂಗಾಯತ ಪಂಚಮಸಾಲಿಗರು ಕಾರಣ ಎಂದು ತಿರುಗೇಟು ನೀಡಿದರು.
ಕೂಡಲಸಂಗಮ ಶ್ರೀಗಳ ಪ್ರತಿಭಟನೆಗೆ ಬೆಂಬಲಿಸುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಕಾಂಗ್ರೆಸ್ ಪಕ್ಷ, ಅವರು ಬಿಜೆಪಿಯವರು. ಸಮಾಜ ಮತ್ತು ಪಕ್ಷ ಬೇರೆ ಬೇರೆ. ಹಾಗಾಗಿ, ಅವರ ಪ್ರತಿಭಟನೆಗೆ ನಾವು ಬೆಂಬಲಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಪಕ್ಷದ ಆಂತರಿಕ ವಿಚಾರದಲ್ಲಿ ಸ್ವಾಮೀಜಿಗಳು ತಲೆ ಹಾಕುವುದು ಎಷ್ಟು ಸರಿ ಎಂಬ ಪ್ರಶ್ನೆಗೆ, ಸರ್ಕಾರಕ್ಕೆ ಸ್ವಾಮೀಜಿ ಮತ್ತು ಮಠಮಾನ್ಯರು ಮಾರ್ಗದರ್ಶನ ಕೊಡಬೇಕು. ಎಲ್ಲಾದರೂ, ಏನಾದರೂ ತಪ್ಪಿದ್ದರೇ ಸಲಹೆ ನೀಡಬೇಕು. ಅದು ಇತಿಮಿತಿಯಲ್ಲಿ ಇರಬೇಕು. ಅದು ಅತೀ ಆಗಬಾರದು ಎಂದರು. ಹಾಲಿನ ದರ ಏರಿಕೆ ಮಾಡಿರುವುದರಿಂದ ರೈತರಿಗೆ ಅನುಕೂಲವಾಗಲಿದೆ. ಏರಿಕೆಯಾಗಿರುವ ನಾಲ್ಕು ರುಪಾಯಿ ನೇರವಾಗಿ ರೈತರಿಗೆ ಸೇರಲಿದೆ. ಹಾಲಿನ ದರ ಏರಿಕೆಯಿಂದ ರೈತರಿಗೆ ಅನುಕೂಲ ಆಗಲಿದ್ದು, ಕೆಎಂಎಫ್ ಈ ಹಣ ಇಟ್ಟುಕೊಳ್ಳುವುದಿಲ್ಲ ಎಂದರು.
ಇದನ್ನೂ ಓದಿ: ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಪಕ್ಷ ಕಟ್ಟಿದರೆ ಯಶಸ್ಸು ಸಿಗಲ್ಲ: ದಿನೇಶ್ ಗುಂಡೂರಾವ್
ಇಂಧನ ಇಲಾಖೆಯ ಸ್ಮಾರ್ಟ್ ಮೀಟರ್ ಟೆಂಡರ್‌ನಲ್ಲಿ ಹಗರಣ ನಡೆದಿದೆ ಎನ್ನು ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯ ಬಿಜೆಪಿ ನಾಯಕರಿಗೆ ಬೇರೆ ಕೆಲಸವಿಲ್ಲ. ಸರ್ಕಾರದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವುದೇ ಕೆಲಸವಾಗಿದೆ. ಟೆಂಡರ್‌ನಲ್ಲಿ ಯಾವುದೇ ಹಗರಣ ನಡೆದಿಲ್ಲ. ಉತ್ತರ ಪ್ರದೇಶ, ಮಧ್ಯ ಪ್ರದೇಶದಲ್ಲಿ ಟೆಂಡರ್ ಪಡೆದಿರುವ ಕಂಪನಿಗೆ ಇಲ್ಲೂ ಟೆಂಡರ್ ಸಿಕ್ಕಿದೆ. ಈ ಬಗ್ಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ವಿಧಾನಸಭೆಯಲ್ಲೇ ಉತ್ತರ ನೀಡಿದ್ದಾರೆ ಎಂದು ತಿಳಿಸಿದರು. ಯತ್ನಾಳ್ ಹೊಸ ಪಕ್ಷಕ್ಕೆ ಶುಭವಾಗಲಿ
ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಬಸನಗೌಡ ಪಾಟೀಲ್ ಅವರು ಹೇಳಿದಂತೆ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ಯಾವುದೇ ಒಳ ಒಪ್ಪಂದವಿಲ್ಲ. ಅವರು (ಯತ್ನಾಳ) ನಾಲಿಗೆಗೂ ಮೆದುಳಿಗೂ ಸಂಬಂಧವಿಲ್ಲದಂತೆ ಮಾತನಾಡುತ್ತಾರೆ. ಅವರು ಕಟ್ಟಲು ಹೊರಟಿರುವ ಹೊಸ ಪಕ್ಷಕ್ಕೆ ಶುಭವಾಗಲಿ.
-ಲಕ್ಷ್ಮೀ ಹೆಬ್ಬಾಳಕರ್, ಸಚಿವೆ