ವಿಜಯಪುರ: ಎಂಬಿಪಾ ಶಿಷ್ಯರಿಂದ ಜಿಲ್ಲೆಯಲ್ಲಿ ಭೂ ಹಗರಣ, ಯತ್ನಾಳ್ ಗಂಭೀರ ಆರೋಪ

Kannadaprabha News, Ravi Janekal |   | Kannada Prabha
Published : Oct 27, 2025, 07:48 AM IST
Basanagouda Patil Yatnal on MB Patil

ಸಾರಾಂಶ

Basanagouda Patil Yatnal on MB Patil: ಸಚಿವ ಎಂ.ಬಿ.ಪಾಟೀಲರ ಶಿಷ್ಯರಿಂದ ಭೂ ಹಗರಣ ನಡೆಯುತ್ತಿದೆ ಎಂದು ಆರೋಪಿಸಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಎಂ.ಬಿ. ಪಾಟೀಲ ಹಾಗೂ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ವಿಜಯಪುರ (ಅ.27): ಸಚಿವ ಎಂ.ಬಿ.ಪಾಟೀಲ ಹಿಂದೆ ಧರ್ಮ ಒಡೆಯುವ ಒರ್ವ ಇದ್ದಾನೆ, ಇನ್ನೊಬ್ಬ ಅಕ್ರಮವಾಗಿ ರೈತರ ಜಾಗ ಲಪಟಾಯಿಸುವವನಿದ್ದಾರೆ. ಇವರಿಬ್ಬರೂ ಎಂ.ಬಿ.ಪಾಟೀಲರಿಗೆ ದೊಡ್ಡ ಸಮಸ್ಯೆಯಾಗಿದ್ದಾರೆ. ಜಿಲ್ಲೆಯಲ್ಲಿ ಆಗುತ್ತಿರುವ ಭೂ ಹಗರಣಗಳೆಲ್ಲವೂ ಎಂ.ಬಿ.ಪಾಟೀಲ ಶಿಷ್ಯರಿಂದಲೇ. ಹಿತೈಷಿಯಾಗಿ ಹೇಳುತ್ತಿದ್ದೇನೆ ನೀವು ಜಾಗೃತರಾಗಿ. ಇಲ್ಲವಾದರೆ ನಿಮ್ಮದು ನೀವು ಮಾಡಿ ನಮ್ಮದು ನಾವು ಮಾಡುತ್ತೇವೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಎಚ್ಚರಿಕೆ ನೀಡಿದರು.

ಕನ್ನೇರಿ ಶ್ರೀಗಳಿಗೆ ವಿಜಯಪುರ ಜಿಲ್ಲೆ ಪ್ರವೇಶ ನಿರ್ಬಂಧ‌ ವಿಚಾರದ ಕುರಿತು ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಶಾಂತಿಗೆ ಧಕ್ಕೆ ಆಗುತ್ತದೆ ಎಂದು ಕನ್ನೇರಿ ಶ್ರೀಗಳಿಗೆ ನಿರ್ಬಂಧ ಹೇರಿದ್ದಾರೆ. ಆ ನಿಜಗುಣಾನಂದ ಹೇಗೆಲ್ಲ ಮಾತನಾಡಿದ್ದಾನೆ. ಹಿಂದೂ ಧರ್ಮದ ಬಗ್ಗೆ ಏನು ಮಾತನಾಡಿದ್ದಾನೆ, ಗೋವುಗಳ ಬಗ್ಗೆ ಏನು ಮಾತನಾಡಿದ್ದಾನೆ. ವೀರಭದ್ರದನ ಬಗ್ಗೆ, ಇಳಕಲ್ ಸ್ವಾಮಿ ಬಗ್ಗೆ ಏನು ಮಾತನಾಡಿದ್ದಾನೆ. ಮೊದಲು ಇವರಿಂದ ಅಶಾಂತಿ ಉಂಟಾಗುತ್ತೆ, ಇವರನ್ನ ಒಳಗಡೆ ಹಾಕಬೇಕು. ಇವರೆಲ್ಲ ಯಡ್ಡಿಯೂರಪ್ಪನ ಗುರುಗಳು ಇವರು, ಇದರಲ್ಲೂ ಯಡ್ಡಿಯೂರಪ್ಪನ ನಾಟಕ ಇದೆ. ಇಲ್ಲಿ ಪಂಚ ಪೀಠಗಳಿಗೆ ಹೋಗಿ ಕಾಲು ಬೀಳುವುದು. ಅಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ಆಗಲಿ ಅಂತಾ ಸಹಿ ಮಾಡೋದು. ಯಡಿಯೂರಪ್ಪ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಸಹಿ ಮಾಡಿಲ್ವಾ ಅಂತಾ ಎಂ.ಬಿ.ಪಾಟೀಲರನ್ನ ಕೇಳಿ ನೋಡಿ. ನೀವು ಯಡಿಯೂರಪ್ಪ, ವಿಜಯೇಂದ್ರ ತಗೆದುಕೊಂಡು ಹೋರಾಟ ಮಾಡಿ. ನಾವು ಹಿಂದೂಗಳಾದ್ರೂ ಬಿಜೆಪಿಯಲ್ಲಿ ಉಳಿಯುತ್ತೇವೆ ಎಂದು ವಾಗ್ದಾಳಿ ನಡೆಸಿದರು.

ಎಂ.ಬಿ.ಪಾಟೀಲ ವಿರುದ್ಧ ವಾಗ್ದಾಳಿ

ಸಚಿವ ಎಂ.ಬಿ.ಪಾಟೀಲ ವಿರುದ್ಧ ಅವಾಚ್ಯ ಶಬ್ದ ಬಳಸಿ ವಾಗ್ದಾಳಿ ನಡೆಸಿದ ಶಾಸಕ ಯತ್ನಾಳ, ನೀವು ಇದನ್ನೆ ಮಾಡುತ್ತಾ ಹೋದ್ರೆ ಹಿಂದೂಗಳು ನಿಮಗೆ ಬುದ್ಧಿ ಕಲಿಸಬೇಕಾಗುತ್ತೆ. ಕೇವಲ ಲಿಂಗಾಯತರಷ್ಟೆ ನಮಗೆ ಓಟ ಹಾಕಲಿ, ಲಿಂಗಾಯತರು ಎಷ್ಟಿದ್ದಾರೆ? ಎಲ್ಲರ ಮನೆಯಲ್ಲೂ ಪಂಚ ಪೀಠದವರಿದ್ದಾರೆ. ಎಂ.ಬಿ.ಪಾಟೀಲರೇ ಇದು ಅತಿ ಆಯ್ತು, ಲಿಂಗಾಯತ ಪ್ರತ್ಯೇಕ ಧರ್ಮ ಅನ್ನೋದನ್ನ ಬಿಡಬೇಕು. ಎಲ್ಲಿಯೂ ಲಿಂಗಾಯತ ಪ್ರತ್ಯೇಕ ಧರ್ಮ ಇಲ್ಲ. ನಮ್ಮಲ್ಲಿ ರಾಮ, ಕೃಷ್ಣ, ಬಸವಣ್ಣ ಎಲ್ಲರೂ ಇದ್ದಾರೆ. ಎಲ್ಲರನ್ನು ನಂಬುವವರೆ ಸನಾತನ ಧರ್ಮದವರು. ಎಂ.ಬಿ.ಪಾಟೀಲ ತಮ್ಮ ಮನೆಯಲ್ಲಿರುವ ದೇವರ ಪೋಟೋ ತಗೆದು ಹಾಕಿದ್ದಾರಾ?. ನೀವು ತಿರುಪತಿ ತಿಮ್ಮಪ್ಪಗೆ ಹೋಗ್ತಿರಿ, ನಿಮ್ಮ ಮನೆಯ ದೇವರು ಅಂತಾ ತೊರವಿ ಲಕ್ಷ್ಮಿ ಗುಡಿಗೆ ಹೋಗ್ತಿರಿ. ಬಸವಣ್ಣನವರು ನಾಸ್ತಿಕರಲ್ಲ, ಸನಾತನ ಧರ್ಮದ ವಿರೋಧಿಗಳಲ್ಲ. ಲಿಂಗಾಯತ ಸಮಾಜ ಸ್ಥಾಪಿಸಿದ ಬಗ್ಗೆ ಯಾವುದೇ ಕುರುಹುಗಳಿಲ್ಲ. ಬಸವಣ್ಣನವರ ಹೆಸರು ಏನಾದ್ರೂ ಬಶೀರ ಅಹ್ಮದ್ ಅಂತಾ ಇದೇನಾ?. ಸಿದ್ದರಾಮಯ್ಯ ಎದೆಯಲ್ಲಿ ಬಸವಣ್ಣ ಇಲ್ಲ, ಅಲ್ಲಾ ಇದ್ದಾನೆ, ಜಮೀರ್‌ ಅಹ್ಮದಖಾನ ಇದ್ದಾನೆ. ನಾನು ಲಿಂಗಾಯತ ಇದ್ದೇನೆ ನನ್ನ ಎದೆಯಲ್ಲಿ ರಾಮ, ಕೃಷ್ಣನೂ ಇದ್ದಾನೆ. ಎಂ.ಬಿ.ಪಾಟೀಲರೇ ಈ ನಾಟಕ ಕಂಪನಿ ಬಂದ್ ಮಾಡಿ, ಹೋದ ಬಾರಿ ಲಿಂಗಾಯತ ಧರ್ಮ ಅಂತಾ ಓಡಾಡಿದ್ದೀರಿ. ನಂತರ ಪಂಚಪೀಠಗಳಿಗೆ ಹೋಗಿ ಕಾಲು ಬಿದ್ದು ಬಂದ್ರೀ, ಫಲಪುಷ್ಪಗಳನ್ನ‌ ಕೊಟ್ರಿ, ನಮಸ್ಕಾರ ಮಾಡಿ ಬಂದ್ರಿ. ಎಂ.ಬಿ.ಪಾಟೀಲ, ಸಿದ್ದರಾಮಯ್ಯ ನೀವು ಕೂಡಿ ಲಿಂಗಾಯತರು, ವೀರಶೈವರನ್ನ ಒಡೆಯುತ್ತಿದ್ಧೀರಿ. ಸುಮ್ಮನೆ ಹಿಂದೆ ಸರಿಯಿರಿ ಎಂದು ಎಚ್ಚರಿಕೆ ನೀಡಿದರು.

ಭೀಮ್ ಆರ್ಮಿಗೆ ಪ್ರಿಯಾಂಕ ಖರ್ಗೆ ಬೆಂಬಲ ವಿಚಾರದ ಬಗ್ಗೆ ಮಾತನಾಡಿ, ಪ್ರಿಯಾಂಕ ಖರ್ಗೆ ಬಳಿ ರೊಕ್ಕ ಜಾಸ್ತಿಇವೆ. ಅವರ ತಂದೆಯಿಂದ ಸಿಕ್ಕಾಪಟ್ಟೆ ದುಡ್ಡು ಬಂದಿದೆ. ಅವರೇನಾದರೂ ಕಲಬುರಗಿ ಜಿಲ್ಲೆಯಲ್ಲಿ ಎಷ್ಟು ದಲಿತ ಸಮುದಾಯವಿದೆಯೋ ಎಲ್ಲರಿಗೂ ಹತ್ತು ಲಕ್ಷ ಮನೆ ಕಟ್ಟಿಸಿ ಕೊಟ್ಟಿದ್ದರೂ ಅವರ ಅರ್ಧ ಆಸ್ತಿ ಕರಗುವುದಿಲ್ಲ. ಅಷ್ಟು ಆಸ್ತಿ ಇದೆ. ಆದರೆ ಯಾವ ದಲಿತರಿಗೂ ಮನೆ ಕಟ್ಟಿಕೊಟ್ಟಿಲ್ಲ, ಯಾವ ದಲಿತರಿಗೂ ನೌಕರಿಗೆ ತೆಗೆದುಕೊಂಡಿಲ್ಲ. ಅವರದೇ ಒಂದು ಶಿಕ್ಷಣ ಸಂಸ್ಥೆ ಇದೆ ದಲಿತರು ಎಷ್ಟು ಜನರಿದ್ದಾರೆ ಪ್ರಿನ್ಸಿಪಲ್ ಇದ್ದಾರೆ?. ಅಲ್ಲಿಯೂ ಬ್ರಾಹ್ಮಣರೆ ಇದ್ದಾರೆ ಅವರ ಶಿಕ್ಷಣ ಸಂಸ್ಥೆಯ ಲಿಸ್ಟು ಕೊಡಲಿ, ಬ್ರಾಹ್ಮಣರು ಜಾಣರು ಅಂತ ನೀವು ಲೆಕ್ಚರ್ ಮತ್ತು ಪ್ರಿನ್ಸಿಪಾಲ್ ಎಲ್ಲಾ ಮಾಡಿದ್ದೀರಿ ದಲಿತರನ್ನ ಏಕೆ ಮಾಡಿಲ್ಲ?. ಇದನ್ನು ಕೇಳಬೇಕಲ್ಲ ಎಂದರು.

ಪಥ ಸಂಚಲನಕ್ಕೆ ಪರವಾನಗಿ ವಿಚಾರದ ಬಗ್ಗೆ ಮಾತನಾಡಿ, ಅವರು ಇನ್ನು ಎರಡು ವರ್ಷ ಹಾರಾಡುತ್ತಾರೆ. ಮುಂದೆ ನಾವು ಬರ್ತೀವಿ ವಿಜಯೇಂದ್ರ ಏನು ಮುಖ್ಯಮಂತ್ರಿ ಆಗಿ ಬರುವುದಿಲ್ಲ. ನಾನೇ ಬರುತ್ತೇನೆ ಆಗ ನೀವು ನನ್ನ ಬಳಿಯೇ ಬರಬೇಕು. ಯಾವುದೇ ಚಾನಲ್‌ನವರು ವಿಜಯೇಂದ್ರನೇ ಮುಖ್ಯಮಂತ್ರಿ ಅಂತ ಬರೆದರೆ ನಾನು ಕೂಡ ಮಾರ್ಕ್ ಮಾಡಿ ಇಟ್ಟಿರುತ್ತೇನೆ.

ಮುಂದಿನ ಸಿಎಂ ಜಾರಕಿಹೊಳಿ ಎಂದು ಯತೀಂದ್ರ ಹೇಳಿಕೆಗೆ ಉತ್ತರಿಸಿ,

ಯತೀಂದ್ರ ಹೇಳಿದ್ದಾರೆ ಅಂದರೆ ಸಿದ್ದರಾಮಯ್ಯ ಹೇಳಿದಂತೆ. ಸಿದ್ದರಾಮಯ್ಯ ಪರವಾಗಿ ಬೆಂಗಳೂರಿನಲ್ಲಿ ಕುಳಿತು ಕಲೆಕ್ಷನ್ ಯಾರು ಮಾಡುತ್ತಿದ್ದಾರೆ?. ಯತೀಂದ್ರ ಮತ್ತು ಭೈರತಿ ಸುರೇಶ್ ಇಬ್ಬರು ಕಲೆಕ್ಷನ್ ಮಾಸ್ಟರ್‌ಗಳು. ಯತೀಂದ್ರ ಏನು ಹೇಳುತ್ತಾರೋ ಅದನ್ನು ಸಿದ್ದರಾಮಯ್ಯ ಹೇಳಿದಂತೆ. ಸಿದ್ದರಾಮಯ್ಯ ಹೇಳಲಿ ಜಾರಕಿಹೊಳಿ ಅಯೋಗ್ಯನಿದ್ದಾನೆ, ನನ್ನ ಮಗ ಅಯೋಗ್ಯನಿದ್ದಾನೆ ಎಂದು ಹೇಳಲಿ. ಯತೀಂದ್ರ ಹೇಳಿದ್ದು ಸತೀಶ ಜಾರಕಿಹೊಳಿ ಮುಖ್ಯಮಂತ್ರಿಯಾಗುವ ಅರ್ಹತೆ ಹೊಂದಿದ್ದಾರೆ ಅಂತ ಹೇಳಿದ್ದಾರೋ ಅಥವಾ ಅಹಿಂದ ನಾಯಕ ಆಗುವ ಅರ್ಹತೆ ಹೊಂದಿದ್ದಾರೆ ಎಂದು ಹೇಳಿದ್ದಾರೋ? ಎಂದು ಸ್ಪಷ್ಟಪಡಿಸಲಿ.

ಬಸನಗೌಡ ಪಾಟೀಲ ಯತ್ನಾಳ, ಶಾಸಕ

ವಿಜಯಪುರಕ್ಕೆ ಶ್ರೀಗಳನ್ನ ಕರೆತರುತ್ತೇವೆ

ಕನ್ನೇರಿ ಶ್ರೀಗಳು ಯಾವುದೇ ಪರಿಸ್ಥಿತಿಯಲ್ಲಿ ಕ್ಷಮೆ ಕೇಳುವುದಿಲ್ಲ. ನ್ಯಾಯಾಲಯದಲ್ಲಿ ಗೆದ್ದು ಭವ್ಯ ಮೆರವಣಿಗೆ ಮುಖಾಂತರ ವಿಜಯಪುರಕ್ಕೆ ಶ್ರೀಗಳನ್ನ ಕರೆ ತರುತ್ತೇವೆ. ಎಂ‌.ಬಿ.ಪಾಟೀಲರೇ ನೀವು ಸುಮ್ಮನೆ ಮುಖ ಮುಚ್ಚಿಕೊಂಡು ಇರಬೇಕು ಅಷ್ಟೆ ಎಂದು ವಾಗ್ದಾಳಿ ನಡೆಸಿದರು.

ಆರ್‌ಎಸ್‌ಎಸ್ ಫಥಸಂಚಲನಕ್ಕೆ ಭೀಮ್ ಆರ್ಮಿ ಅಡ್ಡಿ ವಿಚಾರದ ಬಗ್ಗೆ ಮಾತನಾಡಿ, ಭೀಮ್ ಆರ್ಮಿ ಅಂಬೇಡ್ಕರ ಅವರನ್ನು ಕೇವಲ ಹೆಸರಿಗೆ ಭೀಮ್ ಅಂತ ಹಾಕಿ ಆರ್ಮಿ ಅಂತ ಮಾಡಿದ್ದೀರಿ. ಮೋದಿ ಆರ್ಟಿಕಲ್ 370 ತೆಗೆದ ಮೇಲೆ ಐದು ಜನ ಎಸ್ಸಿ ಎಂಎಲ್ಎ ಗಳಿದ್ದಾರೆ. ಈಗ ಅಂಬೇಡ್ಕರ ಅವರ ಕನಸು ನನಸಾಗಿದೆ. ಭೀಮ್ ಆರ್ಮಿಗೆ ದಲಿತರ ಮೇಲೆ ನಿಜವಾದ ಕಾಳಜಿ ಇದ್ದರೆ ಮೊದಲು ಸಾಬರನ್ನು ಪದಾಧಿಕಾರಿ ಸ್ಥಾನದಿಂದ ಕಿತ್ತು ಒಗೆಯಿರಿ ಎಂದು ಯತ್ನಾಳ ಸವಾಲು ಹಾಕಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ತ್ರಿರೋಗ ತಜ್ಞೆ, ಪುತ್ರನ ದುರಂತ ಅಂತ್ಯ, ರಾತ್ರಿ ಜಗಳವಾಡಿದ ಇಬ್ಬರು ಬೆಳಗ್ಗೆ ಶವವಾಗಿ ಪತ್ತೆ
ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!