
ಸುಂಟಿಕೊಪ್ಪ (ಕೊಡಗು) (ಅ.27): ಬೀದಿನಾಯಿಗಳ ದಾಳಿಯಿಂದ ಪ್ರಾಣ ಉಳಿಸಿಕೊಳ್ಳಲು ಜಿಂಕೆಯೊಂದು ಮನೆಗೆ ನುಗ್ಗಿ ಆತಂಕ ಸೃಷ್ಟಿಸಿದ ಘಟನೆ ಕೊಡಗು ಜಿಲ್ಲೆಯ ಸುಂಟಿಕೊಪ್ಪ ಸಮೀಪದ 7ನೇ ಹೊಸಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೊಂಡೂರು ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ. ಇದರೊಂದಿಗೆ ಬೀದಿ ನಾಯಿಗಳಿಗೆ ಒಂದೇ ತಿಂಗಳಿನಲ್ಲಿ 18 ಜಿಂಕೆಗಳು ಬಲಿ ಆಗಿವೆ. ತೊಂಡೂರಿನಲ್ಲಿ ಸತತವಾಗಿ ಬೀದಿ ನಾಯಿಗಳಿಂದ ಜಿಂಕೆಗಳು ಬೇಟೆಗೆ ಒಳಗಾಗುತ್ತಿವೆ.
ಭಾನುವಾರ ಬೆಳಗ್ಗೆ ಅಟ್ಟಿಸಿಕೊಂಡು ಬಂದ ನಾಯಿಗಳಿಂದ ತಪ್ಪಿಸಿಕೊಳ್ಳಲು ಜಿಂಕೆಯೊಂದು ಮುಖ್ಯ ರಸ್ತೆಯಲ್ಲಿರುವ ರಾಧಕೃಷ್ಣಪ್ಪ ಎಂಬವರ ಮನೆಗೆ ನುಗ್ಗಿದೆ. ಮನೆಯ ಹಾಲ್‌ನಲ್ಲಿ ಪ್ರಾಣ ರಕ್ಷಣೆಗಾಗಿ ಓಡಾಡಿದ ಜಿಂಕೆ, ಹೊರ ಬಂದು ರಸ್ತೆ ದಾಟುವಾಗ ಮತ್ತೆ ನಾಯಿಗಳ ದಾಳಿಗೆ ಒಳಗಾಗಿ ಪ್ರಾಣ ಬಿಟ್ಟಿದೆ. ವಿಷಯ ತಿಳಿದ ಅರಣ್ಯ ಇಲಾಖೆಯವರು ಸ್ಥಳಕ್ಕೆ ಧಾವಿಸಿ ಜಿಂಕೆಯ ಮೃತದೇಹವನ್ನು ತೆಗೆದುಕೊಂಡು ಹೋಗಿದ್ದಾರೆ. ಇದು ಹೆಣ್ಣು ಜಿಂಕೆಯಾಗಿದ್ದು, ಅಂದಾಜು 12 ಪ್ರಾಯದ್ದಾಗಿದೆ.
ಸ್ಥಳೀಯರ ಆಕ್ರೋಶ: ಜಿಪಂ ಮಾಜಿ ಸದಸ್ಯ ಆರ್.ಕೆ.ಚಂದ್ರು ಮಾತನಾಡಿ, ಈ ತಿಂಗಳಲ್ಲಿ ಸರಿಸುಮಾರು 18 ಜಿಂಕೆಗಳು ಬೀದಿನಾಯಿ ದಾಳಿಗೆ ತುತ್ತಾಗಿ ಸಾವನ್ನಪ್ಪಿವೆ. ಬೀದಿ ನಾಯಿಗಳ ಹಾವಳಿಯನ್ನು ಗ್ರಾಮ ಪಂಚಾಯಿತಿ ನಿಯಂತ್ರಿಸಬೇಕಾಗಿದೆ. ಶನಿವಾರವೂ ಕೂಡ ಹಾಡಹಗಲೇ ಗರ್ಭಿಣಿ ಜಿಂಕೆಯೊಂದನ್ನು ನಾಯಿಗಳು ಬೇಟೆಯಾಡಿತ್ತು. ಅರಣ್ಯಕ್ಕೆ ಪ್ರವೇಶಿಸುವವರ ಮೇಲೆ ಮೊಕದ್ದಮೆ ದಾಖಲಿಸುವ ಅರಣ್ಯ ಇಲಾಖೆ, ಇಷ್ಟು ದೊಡ್ಡ ಪ್ರಮಾಣದಲ್ಲಿ ಪ್ರಾಣಿ ಹಿಂಸೆಯಾಗುತ್ತಿದ್ದರೂ ಕೂಡ ಮೌನವಾಗಿರುವುದು ಯಾಕೆ? ಬೀದಿನಾಯಿಗಳ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮತ್ತು ಪುನರ್‌ವಸತಿ ಕೇಂದ್ರವನ್ನು ತೆರೆಯುವಂತಾಗಬೇಕೆಂದು ಸಲಹೆ ನೀಡಿದ್ದಾರೆ.==
ನಾಯಿಗಳ ಹಾವಳಿ ತಡೆಗೆ ಮನವಿ
ಜಿಂಕೆಗಳ ಸಾವನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದು, ಬೀದಿನಾಯಿಗಳ ಹಾವಳಿ ನಿಯಂತ್ರಣಕ್ಕೆ 7ನೇ ಹೊಸಕೋಟೆ ಗ್ರಾಮ ಪಂಚಾಯಿತಿಗೆ ಲಿಖಿತ ಮನವಿ ಮಾಡಲಾಗುವುದು.
-ಕೆ.ಎ.ದೇವಯ್ಯ ಉಪವಲಯ ಸಂರಕ್ಷಣಾಧಿಕಾರಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ