ವಿವಿಗಳಲ್ಲಿ ಏಕರೂಪದ ಪಠ್ಯ ಬೇಡ: ಉನ್ನತ ಶಿಕ್ಷಣ ಸಚಿವರಿಗೆ ಬರಗೂರು ಪತ್ರ

By Kannadaprabha NewsFirst Published Jun 4, 2020, 10:39 AM IST
Highlights

ವಿವಿಗಳಲ್ಲಿ ಏಕರೂಪದ ಪಠ್ಯ ಬೇಡ: ಬರಗೂರು | ಇದರಿಂದ ಶೈಕ್ಷಣಿಕ ಸ್ವಾತಂತ್ರ್ಯ, ಸ್ವಾಯತ್ತೆ, ವೈವಿಧ್ಯತೆಗೆ ಮಾರಕ |  ವಿಕೇಂದ್ರೀಕರಣಕ್ಕೂ ಇದರಿಂದ ಧಕ್ಕೆ | ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣಗೆ ಪತ್ರ

ಬೆಂಗಳೂರು (ಜೂ. 04): ಶೈಕ್ಷಣಿಕ ಸ್ವಾತಂತ್ರ್ಯ, ಸ್ವಾಯತ್ತೆ, ವೈವಿಧ್ಯತೆ, ವಿಕೇಂದ್ರೀಕರಣಕ್ಕೆ ಮಾರಕವಾಗುವ ಏಕರೂಪ ಪಠ್ಯಕ್ರಮವನ್ನು ವಿಶ್ವವಿದ್ಯಾಲಯಗಳಲ್ಲಿ ಜಾರಿಗೊಳಿಸುವ ಪ್ರಸ್ತಾವನೆಯನ್ನು ಕೈ ಬಿಡಬೇಕೆಂದು ಸಾಹಿತಿ, ಚಿಂತಕ ಪ್ರೊ. ಬರಗೂರು ರಾಮಚಂದ್ರಪ್ಪ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಈ ಕುರಿತು ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ಅವರಿಗೆ ಪತ್ರ ಬರೆದಿರುವ ಅವರು, ವಿಶ್ವವಿದ್ಯಾಲಯಗಳಿಗೆ ಏಕರೂಪ ಪಠ್ಯಕ್ರಮವನ್ನು ಜಾರಿಗೊಳಿಸುವುದರಿಂದ ವಿಶ್ವವಿದ್ಯಾಲಯಗಳ ಸ್ಥಾಪನೆಯ ಮೂಲ ಆಶಯವನ್ನು ಮೂಲೆಗೆ ತಳ್ಳಿದಂತಾಗುತ್ತದೆ. ಉನ್ನತ ಶಿಕ್ಷಣದ ವಿಕೇಂದ್ರೀಕರಣಕ್ಕೆ ಧಕ್ಕೆಯಾಗುತ್ತದೆ. ಕೇಂದ್ರೀಕರಣದ ಮೂಲಕ ಶೈಕ್ಷಣಿಕ ಸ್ವಾತಂತ್ರ್ಯ ಅಪಾಯಕ್ಕೆ ಸಿಲುಕಲಿದೆ ಎಂದು ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

ಕೊರೋನಾ ನಿಯಂತ್ರಣಕ್ಕೆ ಬರುವವರೆಗೆ ಮನೆಯಲ್ಲೇ ಪಠ್ಯ ಬೋಧನೆಗೆ ತಜ್ಞರ ಸಲಹೆ

ಏಕರೂಪ ಪಠ್ಯಕ್ರಮದಿಂದ ವಿವಿಗಳಲ್ಲಿ ಶೈಕ್ಷಣಿಕ ವೈವಿಧ್ಯತೆಗೆ ಅವಕಾಶವಿಲ್ಲದಂತಾಗುತ್ತದೆ. ವಿವಿಧ ವಿಶ್ವವಿದ್ಯಾಲಯಗಳು ತಮ್ಮದೇ ಆದ ವಿಶೇಷ ವಿಷಯಾಧಾರಿತ ಕೋರ್ಸುಗಳನ್ನು ನಡೆಸಲು ಅಡ್ಡಿಯಾಗುತ್ತದೆ.

ಇದರಂದ ತಮ್ಮ ಆಯ್ಕೆಯ ವಿಶೇಷ ವಿಷಯಾಭ್ಯಾಸಕ್ಕೆ ವಿವಿಗಳನ್ನು ಆರಿಸಿಕೊಳ್ಳುವ ಅವಕಾಶದಿಂದ ವಿದ್ಯಾರ್ಥಿಗಳು ವಂಚಿತರಾಗುತ್ತಾರೆ. ಮುಖ್ಯವಾಗಿ ಅಧ್ಯಯನ ಮಂಡಳಿಗಳು ಅಪ್ರಸ್ತುತವಾಗುತ್ತವೆ. ವಿವಿಗಳು ಏಕರೂಪ ಶಿಕ್ಷಣಕ್ಕೆ ರೂಪಾಂತರ ಹೊಂದಿ ಕಡೆಗೆ ಶಿಕ್ಷಣ ಇಲಾಖೆಯಾಗುತ್ತವೆ ಹೊರತು ವಿಶ್ವವಿದ್ಯಾಲಯಗಳಾಗುವುದಿಲ್ಲ ಎಂದಿದ್ದಾರೆ.

ಏಕರೂಪ ಪಠ್ಯಕ್ರಮವನ್ನು ಖಾಸಗಿ-ಡೀಮ್‌್ಡ ವಿಶ್ವವಿದ್ಯಾಲಯಗಳು ಸ್ವಾಯತ್ತ ಕಾಲೇಜುಗಳಿಗೂ ಈ ಪಠ್ಯಕ್ರಮವನ್ನು ಜಾರಿಗೊಳಿಸಲಾಗದು. ಹೀಗಾಗಿ ಏಕರೂಪ ಪಠ್ಯಕ್ರಮ ಎನ್ನುವುದು ಸರ್ಕಾರದ ಕಾಲೇಜು ಮತ್ತು ಸ್ನಾತಕೋತ್ತರ ಪದವಿಗಳಿಗೆ ಮಾತ್ರ ಅನ್ವಯಿಸಿ, ಪಠ್ಯಕ್ರಮದ ಅಸಮಾನತೆ ಮುಂದುವರೆಯುತ್ತದೆ ಎಂದು ಎಚ್ಚರಿಸಿದ್ದಾರೆ.

ಚರಿತ್ರೆ, ಸಮಾಜ ವಿಜ್ಞಾನ, ರಾಜಕೀಯ ವಿಜ್ಞಾನ, ಅರ್ಥಶಾಸ್ತ್ರ ಸೇರಿದಂತೆ ಸಾಹಿತ್ಯಾದಿ ಎಲ್ಲ ಮಾನವಿಕ ಪಠ್ಯಗಳು ಪ್ರಾದೇಶಿಕ ವಿಷಯ ಪ್ರಾತಿನಿಧ್ಯದ ಅವಕಾಶದಿಂದ ವಂಚಿತವಾಗುವ ಅಪಾಯವಿದೆ. ಪ್ರಾದೇಶಿಕ ಮಹತ್ವವಿರುವ ವಿಜ್ಞಾನ ವಿಷಯಗಳನ್ನು ಅಳವಡಿಸಲು ಸಾಧ್ಯವಾಗುವುದಿಲ್ಲ. ಸಾಹಿತ್ಯ ಪಠ್ಯಕ್ರಮ ರೂಪಿಸಲು ತುಮಕೂರು ವಿವಿ ನೀಡಿರುವ ಸೂಚನಾ ಪತ್ರದಲ್ಲಿ ಕೌಶಲ್ಯಾಭಿವೃದ್ಧಿ, ವೃತ್ತಿಪರತೆ, ಉದ್ಯೋಗಾಧಾರಿತ ವಿಷಯಗಳನ್ನು ಸೇರಿಸಬೇಕೆಂದು ಹೇಳಲಾಗಿದೆ.

ಶಾಲೆಗಳ ಪ್ರಾರಂಭ ಬಗ್ಗೆ ಮಹತ್ವ ವಿಚಾರಗಳನ್ನ ತಿಳಿಸಿದ ಸಚಿವ ಸುರೇಶ್ ಕುಮಾರ್

ಕೌಶಲಾಭಿವೃದ್ಧಿಯೇ ಮುಂತಾದವನ್ನು ಪ್ರತ್ಯೇಕ ಐಚ್ಛಿಕ ವಿಷಯಗಳಾಗಿ ಅಥವಾ ಪೂರಕ ಪಠ್ಯವಾಗಿ ಸೇರಿಸಬಹುದೇ ಹೊರತು ಸಾಹಿತ್ಯಾದಿ ಮಾನವಿಕ, ವಿಜ್ಞಾನ, ಗಣಿತ ಯಾವುದೇ ಪಠ್ಯಕ್ರಮದ ಒಳವ್ಯಾಪ್ತಿಗೆ ತರಲು ಆಗುವುದಿಲ್ಲ ಎಂದು ಹೇಳಿದ್ದಾರೆ.

ಉನ್ನತ ಶಿಕ್ಷಣದಲ್ಲಿರುವ ಸಾಮಾನ್ಯ ಪದವಿ ಮತ್ತು ವೃತ್ತಿಪರ ಪದವಿಗಳ ನಡುವಿನ ಅಸಮಾನತೆ ತಪ್ಪಿಸುವ ಕ್ರಮಗಳನ್ನು ಶಿಕ್ಷಣ ತಜ್ಞರು, ಅಧ್ಯಾಪಕರು, ವಿದ್ಯಾರ್ಥಿಗಳ ಪ್ರತಿನಿಧಿಗಳು ಸೇರಿದಂತೆ ಅನೇಕ ವಲಯಗಳ ಜತೆ ಚರ್ಚಿಸಬೇಕು. ಆದ್ದರಿಂದ ತಕ್ಷಣವೇ ಏಕರೂಪ ಪಠ್ಯಕ್ರಮ ಜಾರಿಯ ವಿಷಯವನ್ನು ಸರ್ಕಾರ ಕೈಬಿಡಬೇಕು ಎಂದು ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.

 

click me!