ರಾಜ್ಯದ ಎಲ್ಲ ಸಾರ್ವಜನಿಕ ವಿಶ್ವವಿದ್ಯಾಲಯಗಳ ಮಂಜೂರಾತಿ ಹುದ್ದೆಗಳಲ್ಲಿ ಶೇ.60ರಷ್ಟು ಬೋಧಕ ಹುದ್ದೆಗಳು ಖಾಲಿ ಇರುವುದು ಎಲ್ಲರಿಗೂ ಗೊತ್ತು. ಆದರೆ, ಕೋಲಾರದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯಲ್ಲಿ ಶೇಕಡಾವಾರು ಲೆಕ್ಕ ಇಲ್ಲ, ಇಲ್ಲಿ ಇರುವುದು ಒಬ್ಬರೇ ಕಾಯಂ ಬೋಧಕರು!
ಸ್ಕಂದಕುಮಾರ್ ಬಿ.ಎಸ್.
ಕೋಲಾರ (ಮಾ.14): ರಾಜ್ಯದ ಎಲ್ಲ ಸಾರ್ವಜನಿಕ ವಿಶ್ವವಿದ್ಯಾಲಯಗಳ ಮಂಜೂರಾತಿ ಹುದ್ದೆಗಳಲ್ಲಿ ಶೇ.60ರಷ್ಟು ಬೋಧಕ ಹುದ್ದೆಗಳು ಖಾಲಿ ಇರುವುದು ಎಲ್ಲರಿಗೂ ಗೊತ್ತು. ಆದರೆ, ಕೋಲಾರದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯಲ್ಲಿ ಶೇಕಡಾವಾರು ಲೆಕ್ಕ ಇಲ್ಲ, ಇಲ್ಲಿ ಇರುವುದು ಒಬ್ಬರೇ ಕಾಯಂ ಬೋಧಕರು! ಕಳೆದ ಎಂಟು ವರ್ಷಗಳಿಂದ ಈ ವಿಶ್ವವಿದ್ಯಾಲಯದಲ್ಲಿ ಪಠ್ಯ ಬೋಧನೆಗೆ ಸುಮಾರು 100 ಮಂದಿ ಅರೆಕಾಲಿಕ/ಅತಿಥಿ ಉಪನ್ಯಾಸಕರೇ ಆಸರೆ. ಸರ್ಕಾರ 87 ಬೋಧಕ ಹಾಗೂ 57 ಬೋಧಕೇತರ ಹುದ್ದೆಗಳನ್ನು ಮಂಜೂರು ಮಾಡಿದ್ದರೂ ಈವರೆಗೆ ಅವುಗಳ ಭರ್ತಿಗೆ ಕ್ರಮ ವಹಿಸಿಲ್ಲ. ಇದರಿಂದ ಕಾಯಂ ಬೋಧಕರಿಲ್ಲದೆ ಪಿಎಚ್.ಡಿ ಅಧ್ಯಯನ ಹಾಗೂ ಇತರೆ ಸಂಶೋಧನಾ ಚಟುವಟಿಕೆಗಳಿಗೆ ತೀವ್ರ ಹಿನ್ನಡೆಯಾಗುತ್ತಿದೆ. ಮೂಲಸೌಕರ್ಯ ಇನ್ನೂ ಸಮರ್ಪಕವಾಗಿ ಅಭಿವೃದ್ಧಿಯಾಗಿಲ್ಲ ಎನ್ನುವುದು ಇಲ್ಲಿನ ವಿದ್ಯಾರ್ಥಿಗಳ ಹೇಳಿಕೆ. ಜೊತೆಗೆ ಕಾಯಂ ಅಧಿಕಾರಿ, ಸಿಬ್ಬಂದಿವರ್ಗ ಇಲ್ಲದೆ ಹೊಣೆಗಾರರಿಕೆ ವಿಚಾರದಲ್ಲಿ ಆಡಳಿತ ವ್ಯವಸ್ಥೆಯನ್ನು ಚಿಂತೆಗೀಡುಮಾಡಿದೆ.
ಇನ್ನು, ಸ್ವಂತ ಆದಾಯದಲ್ಲೇ ಸುಸೂತ್ರವಾಗಿ ಕಾರ್ಯನಿರ್ವಹಿಸುತ್ತಿರುವ ಬೆಂಗಳೂರು ನಗರ ವಿಶ್ವವಿದ್ಯಾಲಯಕ್ಕೆ ಕಾಯಂ ಬೋಧಕರ ಕೊರತೆ ಹಾಗೂ ಸಂಶೋಧನಾ ಚಟುವಟಿಕೆಗಳ ಹಿನ್ನೆಡೆಯಿಂದಾಗಿ ನ್ಯಾಕ್ ಮಾನ್ಯತೆಗೆ ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗೆ ಇನ್ನಷ್ಟು ಕಾಲಾವಕಾಶ ಬೇಕಾಗುತ್ತದೆ. ಆರು ವರ್ಷ ಕಳೆದ ವಿವಿಗಳು ಅರ್ಜಿ ಸಲ್ಲಿಸಲು ಅರ್ಹವಾದರೂ ಮಾನ್ಯತೆ ದೊರೆಯಲು ಶೇ.75ರಷ್ಟು ಕಾಯಂ ಬೋಧಕ, ಬೋಧಕೇತರ ಸಿಬ್ಬಂದಿ, ಉತ್ತಮ ಸಂಶೋಧನಾ ಚಟುವಟಿಕೆಗಳು, ಅಗತ್ಯ ಮೂಲಸೌಕರ್ಯಗಳನ್ನು ಒಳಗೊಂಡಿರುವುದು ಪ್ರಮುಖ ಮಾನದಂಡಗಳಾಗಿವೆ. ವಿವಿಯಲ್ಲಿ ಸಾಕಷ್ಟು ಮೂಲಸೌಲಭ್ಯದ ಕೊರತೆಯೂ ಇದೆ. ಹಾಗಾಗಿ ಅರ್ಜಿ ಸಲ್ಲಿಸಲೂ ಸದ್ಯ ಸಾಧ್ಯವಾಗುವುದಿಲ್ಲ. ನ್ಯಾಕ್ ಮಾನ್ಯತೆ ದೊರೆಯದೆ ವಿಶ್ವವಿದ್ಯಾಲಯ ಧನಸಹಾಯ ಆಯೋಗದ 12 ಬಿ ಸ್ಥಾನಮಾನವೂ ಸಿಗುವುದಿಲ್ಲ. ಇದರಿಂದ ಸಂಶೋಧನಾ ಚಟುವಟಿಕೆಗೆ ಯುಜಿಸಿ ಅನುದಾನ ಸದ್ಯಕ್ಕಂತು ಕನಸಿನ ಮಾತು.
ಬೆಳವಣಿಗೆ ಹಾದಿಯಲ್ಲಿ ಸಾಗುತ್ತಿರುವ ಬೆಂಗಳೂರು ನಗರ ವಿವಿಗೆ ಕಾಯಂ ಬೋಧಕರು, ಸಿಬ್ಬಂದಿಯೇ ಇಲ್ಲ!
ಪ್ರತಿಷ್ಠಿತ ಬೆಂಗಳೂರು ವಿವಿಯನ್ನು ಮೂರು ಭಾಗ ಮಾಡಿ 2017ರಲ್ಲಿ ಸೆಂಟ್ರಲ್ ಕಾಲೇಜು ಕ್ಯಾಂಪಸ್‌ನಲ್ಲಿ ಬೆಂಗಳೂರು ನಗರ ವಿವಿ ಮತ್ತು ಕೋಲಾರದ ತಮಕದಲ್ಲಿರುವ ಸ್ನಾತಕೋತ್ತರ ಪದವಿ ಕೇಂದ್ರದಲ್ಲಿ ಬೆಂಗಳೂರು ಉತ್ತರ ವಿವಿಗಳನ್ನು ರಚಿಸಲಾಯಿತು. ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಎಲ್ಲಾ ಕಾಲೇಜುಗಳು ಮತ್ತು ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಒಂದಷ್ಟು ಕಾಲೇಜುಗಳು ಸೇರಿ ಒಟ್ಟು 275 ಕಾಲೇಜುಗಳನ್ನು ಬೆಂಗಳೂರು ಉತ್ತರ ವಿವಿಗೆ ಒಳಪಡಿಸಲಾಯಿತು. ಸದ್ಯ ತಮಕ ಕ್ಯಾಂಪಸ್‌ನಲ್ಲಿ ಕನ್ನಡ, ಇಂಗ್ಲಿಷ್, ಕನ್ನಡ, ಅರ್ಥಶಾಸ್ತ್ರ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಸಸ್ಯಶಾಸ್ತ್ರ, ಭೌತಶಾಸ್ತ್ರ ಸೇರಿ 13 ಸ್ನಾತಕೋತ್ತರ ಪದವಿ ವಿಭಾಗಗಳಲ್ಲಿ ಸುಮಾರು 1000 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರೆ, ಸಂಯೋಜಿತ ಕಾಲೇಜುಗಳಲ್ಲಿ ವಿವಿಧ ಪದವಿ, ಸ್ನಾತಕೋತ್ತರ ಪದವಿಯಲ್ಲಿ 1.25 ಲಕ್ಷ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.
ಈ ಬಾರಿ ₹250 ಕೋಟಿ ಬಜೆಟ್ -ಅಮರಾವತಿಯಲ್ಲಿ ಸುಸಜ್ಜಿತ ಕ್ಯಾಂಪಸ್: ವಿಭಜನೆಯಾದ ಬಳಿಕ ಹಂತ ಹಂತವಾಗಿ ಮೂಲ ಬೆಂಗಳೂರು ವಿವಿಯಿಂದ ಬೆಂಗಳೂರು ಉತ್ತರ ವಿವಿಗೆ ಸುಮಾರು 27 ಕೋಟಿ ರು. ನೆರವು ಸಿಕ್ಕಿದೆ. ಕಾಲೇಜುಗಳಿಂದ ಬರುವ ಸಂಯೋಜನಾ ಶುಲ್ಕ, ವಿದ್ಯಾರ್ಥಿಗಳ ದಾಖಲಾತಿ ಅನುಮೋದನೆ, ಪರೀಕ್ಷಾ ಶುಲ್ಕ ಸೇರಿ ವಾರ್ಷಿಕ ಸುಮಾರು 50 ಕೋಟಿ ಆದಾಯ ಹೊಂದಿರುವ ಈ ವಿವಿ ಕಳೆದ ಎಂಟು ವರ್ಷಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಗಘಟ್ಟ ತಾಲೂಕಿನ ಅಮರಾವತಿಯಲ್ಲಿ ಸರ್ಕಾರ ನಿಗದಿಪಡಿಸಿರುವ 172 ಎಕರೆ ಜಾಗದಲ್ಲಿ ತನ್ನ ಹೊಸ ಸುಸಜ್ಜಿತ ಕ್ಯಾಂಪಸ್ ನಿರ್ಮಾಣಕ್ಕೆ ₹200 ಕೋಟಿ ಕೂಡಿಡಲಾಗಿದೆ. ಈ ಹಣದಲ್ಲಿ ಈಗಾಗಲೇ ಅಲ್ಲಿ ₹90 ಕೋಟಿ ವೆಚ್ಚದಲ್ಲಿ ಅಕಾಡೆಮಿಕ್ ಬ್ಲಾಕ್ ನಿರ್ಮಿಸಲಾಗುತ್ತಿದೆ. 2ನೇ ಹಂತದಲ್ಲಿ ₹150 ಕೋಟಿ ವೆಚ್ಚದಲ್ಲಿ ಉಳಿದ ಕಟ್ಟಡಗಳ ನಿರ್ಮಾಣಕ್ಕೆ ತಯಾರಿ ನಡೆದಿದೆ. ಎಲ್ಲವನ್ನೂ ಒಳಗೊಂಡು ಈ ಬಾರಿ ಸುಮಾರು ₹250 ಕೋಟಿಗಳಷ್ಟು ಮೊತ್ತದ ಬಜೆಟ್ ಮಂಡನೆಗೆ ವಿವಿಯ ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ವಿವಿಗೆ ಸರ್ಕಾರದಿಂದ ಯಾವುದೇ ಅನುದಾನ ಬಂದಿಲ್ಲ. ಸ್ವಂತ ಆದಾಯದಿಂದಲೇ ಸುಸೂತ್ರವಾಗಿ ಕಾರ್ಯನಿರ್ವಹಣೆ, ಕಟ್ಟಡ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಈ ಬೋಧನಾ ಸಿಬ್ಬಂದಿ ಹಾಗೂ ಇತರೆ ನೌಕರರಿಗೆ ಕಾಲ ಕಾಲಕ್ಕೆ ವೇತನ ಪಾವತಿಯಾಗುತ್ತಿದೆ. ಬೆಂಗಳೂರು ನಗರ ವಿವಿಯಂತೆ ಅಗತ್ಯ ಕಟ್ಟಡಗಳನ್ನು ಒಳಗೊಂಡ ಕ್ಯಾಂಪಸ್ ಇಲ್ಲದ ಕಾರಣ, ಎಲ್ಲವನ್ನೂ ಹೊಸದಾಗಿ ವ್ಯವಸ್ಥೆ ಮಾಡಿಕೊಳ್ಳಬೇಕಿರುವ ಬೆಂಗಳೂರು ಉತ್ತರ ವಿವಿಗೆ ಸರ್ಕಾರದ ಆರ್ಥಿಕ ನೆರವೂ ಅಗತ್ಯ ಎನ್ನುತ್ತಾರೆ ತಜ್ಞರು.
ನಮ್ಮ ವಿಶ್ವವಿದ್ಯಾಲಯಲ್ಲಿ ಶೈಕ್ಷಣಿಕ ಚುಟುವಟಿಕೆ, ವಿದ್ಯಾರ್ಥಿಗಳ ದಾಖಲಾತಿ ಉತ್ತಮಗೊಳ್ಳುತ್ತಿದೆ. ಸ್ವಂತ ಆದಾಯದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಅಮರಾವತಿಯಲ್ಲಿ ಸುಸಜ್ಜಿತ ಕ್ಯಾಂಪಸ್ ನಿರ್ಮಿಸುತ್ತಿದ್ದೇವೆ. ಆದರೆ, ನಮ್ಮಲ್ಲಿ ಒಬ್ಬರಷ್ಟೇ ಖಾಯಂ ಪ್ರಾಧ್ಯಾಪಕರಿದ್ದು ಉಳಿದವರೆಲ್ಲರೂ ಅತಿಥಿ, ಅರೆಕಾಲಿಕ ಸಿಬ್ಬಂದಿ. ಇದರಿಂದ ಸಂಶೋಧನಾ ಚಟುವಟಿಕೆಗಳು ಕುಂಠಿತವಾಗಿರುವುದು ನಿಜ. ಸರ್ಕಾರ ಆದಷ್ಟು ಬೇಗ ಮಂಜೂರಾಗಿರುವ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಂಡರೆ ನಾವು ಮುಂದಿನ ದಿನಗಳಲ್ಲಿ ನ್ಯಾಕ್ ಮಾನ್ಯತೆಗೆ ಅರ್ಜಿ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳಲು ನೆರವಾಗುತ್ತದೆ.
-ಪ್ರೊ.ನಿರಂಜನ್ ವಾನಳ್ಳಿ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕುಲಪತಿ.
ರಾಜ್ಯದ ಶ್ರೀಮಂತ ಬೆಂವಿವಿಗೆ ಈಗ ಪಿಂಚಣಿಗಾಗಿ ಕೈಚಾಚುವ ಸ್ಥಿತಿ!
ನ್ಯಾಕ್ ಮಾನ್ಯತೆ ಮಾನ್ಯತೆಗಳು ಸಿಗದಿದ್ದರೆ ಸಂಶೋಧನಾ ಚಟುವಟಿಕೆಗಳಿಗೆ ಯುಜಿಸಿ ಅನುದಾನ ಸಿಗುವುದಿಲ್ಲ. ಸರ್ಕಾರಕ್ಕೆ ಒಂದೇ ಬಾರಿ ಎಲ್ಲ ಹುದ್ದೆಗಳನ್ನೂ ಭರ್ತಿ ಮಾಡುವುದು ಹೊರೆಯಾಗಬಹುದು. ಮೊದಲ ಹಂತದಲ್ಲಿ ಕನಿಷ್ಠ ಶೇ.25ರಷ್ಟು ಹುದ್ದೆಗಳನ್ನಾದರೂ ಭರ್ತಿ ಮಾಡಲು ಕ್ರಮ ವಹಿಸಬೇಕು. ಈ ಜವಾಬ್ದಾರಿಯನ್ನು ಅಧಿಕಾರಶಾಹಿಗೆ ವಹಿಸಬಾರದು. ಒಂದು ಸಮಿತಿ ರಚಿಸಿ, ತುರ್ತಾಗಿ ಶೇ.100ರಷ್ಟು ದಾಖಲಾತಿ ಇರುವ, ಬೇಡಿಕೆ ಹೆಚ್ಚಿರುವ ಕೋರ್ಸುಗಳ ಪ್ರಾಧ್ಯಾಪಕರನ್ನಾದರೂ ಕಾಲಮಿತಿಯಲ್ಲಿ ಭರ್ತಿ ಮಾಡಲು ಕ್ರಮ ವಹಿಸಬೇಕು.
--ಪ್ರೊ. ಟಿ.ಡಿ. ಕೆಂಪರಾಜು, ವಿಶ್ರಾಂತ ಕುಲಪತಿ