ನಾಳೆ ಮಂಡ್ಯ ಬಂದ್‌: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಪ್ರಯಾಣಿಕರೇ ಎಚ್ಚರ!

By Sathish Kumar KHFirst Published Sep 22, 2023, 2:55 PM IST
Highlights

ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸದಂತೆ ಆಗ್ರಹಿಸಿ ನಾಳೆ ಶನಿವಾರ (ಸೆ.23) ಮಂಡ್ಯ ಬಂದ್‌ ಘೋಷಣೆ ಮಾಡಲಾಗಿದ್ದು, ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇ ಪ್ರಯಾಣಿಕರಿಗೆ ಸಮಸ್ಯೆ ಎದುರಾಗಲಿದೆ.

ಮಂಡ್ಯ (ಸೆ.22): ತಮಿಳುನಾಡಿಗೆ ನೀರು ಬಿಡುವಂತೆ ಸುಪ್ರೀಂ ಕೋರ್ಟ್‌ ನೀಡಿರುವ ಆದೇಶವನ್ನು ಖಂಡಿಸಿ ರಾಜ್ಯದಲ್ಲಿ ಕಾವೇರಿ ಹೋರಾಟದ ಕಿಚ್ಚು ಭುಗಿಲೆದ್ದಿದ್ದು, ಮಂಡ್ಯ ನಗರದಲ್ಲಿ ರೈತರು ಹಾಗೂ ಕನ್ನಡಪರ ಸಂಘಟನೆಗಳಿಂದ ತೀವ್ರ ಮಟ್ಟದ ಹೋರಾಟ ಆರಂಭವಾಗಿದೆ. ಇನ್ನು ನಾಳೆ ಮಂಡ್ಯ ನಗರವನ್ನು ಸಂಪೂರ್ಣವಾಗಿ ಬಂದ್‌ ಮಾಡಲು ಕನ್ನಡಪರ ಸಂಘಟನೆಗಳು ಹಾಗೂ ರೈತರು ಕರೆ ನೀಡಿದ್ದು,  ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಸಂಚಾರ ಮಾಡುವವರಿಗೆ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ.

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆಗೆ ಆಕ್ರೋಶ, ಸುಪ್ರೀಂ ಕೋರ್ಟ್‌ ಆದೇಶ ಖಂಡಿಸಿ ಸೆಪ್ಟೆಂಬರ್‌ 23 ಶನಿವಾರ ಮಂಡ್ಯ ಜಿಲ್ಲೆ ಬಂದ್‌ ಕರೆ ನೀಡಲಾಗಿದೆ. ಈ ಬಂದ್‌ ಸಂಬಂಧ ರೈತ ಸಂಘಗಳ ಸಭೆಯಲ್ಲಿ ರೂಪುರೇಷೆ ನಿರ್ಧರಿಸಲಾಗಿದ್ದು, ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಬಂದ್‌ ಮಾಡಲು ನಿರ್ಧರಿಸಲಾಗಿದೆ. ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ವೇದಿಕೆ ಬಂದ್ ಗೆ ಕರೆ ನೀಡಲಾಗಿದೆ. ಇನ್ನು ಬೆಳಿಗ್ಗೆ 9 ಗಂಟೆಯಿಂದ ಮಂಡ್ಯ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ಸಾಗಲಿದೆ. ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆಯಿಂದ ಸಂಜಯ್ ವೃತ್ತ, ಮಹಾವೀರ ವೃತ್ತ, ವಿವಿ ರೋಡ್, ಡಬಲ್ ರೋಡ್ ಸೇರಿ ಹಲವು ರಸ್ತೆಗಳಲ್ಲಿ ಮೆರವಣಿಗೆ ನಡೆಯಲಿದ್ದು, ಮಂಡ್ಯ ನಗರದಾದ್ಯಂತ ಬೃಹತ್ ಬೈಕ್ ರ್ಯಾಲಿ ಮಾಡಲು ರೈತರು ಯೋಜನೆ ರೂಪಿಸಿದ್ದಾರೆ.

ಕಾವೇರಿ ಹೋರಾಟಕ್ಕೆ ಕುಳಿತ ಮಂಡ್ಯದ ಗಂಡು ಅಂಬರೀಶ್‌ ಪುತ್ರ ಅಭಿಷೇಕ್‌: ಅಪ್ಪನಂತೆ ಬಿಗಿಪಟ್ಟು

ಮಂಡ್ಯ ಜಿಲ್ಲೆಯಾದ್ಯಂತ ಅಂಗಡಿ ಮುಂಗಟ್ಟು ಮುಚ್ಚಿ ಬಂದ್‌ಗೆ ಬೆಂಬಲ ನೀಡುವಂತೆ ಅನ್ನದಾತರು ಮನವಿ ಮಾಡಿದ್ದಾರೆ. ಇನ್ನು ಬಂದ್‌ಗೆ ಹೋಟೇಲ್ ಮಾಲೀಕರ ಹಾಗೂ ವರ್ತಕರ ಸಂಘದ ಬೆಂಬಲ ಸಿಕ್ಕಿದೆ. ಈಗಾಗಲೇ ಬಂದ್ ಸಂಬಂಧ ಸಭೆ ನಡೆಸಿರುವ ರೈತರು, ಸಂಜೆ ಮತ್ತೊಂದು ಹಂತದ ಸಭೆ ನಡೆಸಿ ರೂಪುರೇಷೆ ಸಿದ್ಧಪಡಿಸಲಿದ್ದಾರೆ. ಖಾಸಗಿ ಬಸ್ ಮಾಲೀಕರ ಸಂಘ, ಆಟೋ ಚಾಲಕ, ಮಾಲೀಕರ ಸಂಘ ಸೇರಿ ಹಲವು ಸಂಘಟನೆಗಳಿಗೆ ಬಂದ್ ಗೆ ಸಹಕರಿಸುವಂತೆ ಮನವಿ ಮಾಡಲಾಗಿದೆ.  ರೈತ ಸಂಘಟನೆ, ಕನ್ನಡಪರ ಸಂಘಟನೆಗಳಿಂದ ಬಂದ್‌ಗೆ ಬೆಂಬಲ ಸಿಕ್ಕಿದೆ. ಬಹುತೇಕ ಎಲ್ಲ ಸಂಘ ಸಂಸ್ಥೆಗಳು ರೈತರ ಹೋರಾಟಕ್ಕೆ ಸಾಥ್ ಸಾಧ್ಯತೆಯಿದೆ. 

ಲೇಟೆಸ್ಟ್ ಸುದ್ದಿ ಅಪ್ಡೇಟ್ಸ್‌ಗಾಗಿ ಏಷ್ಯಾನೆಟ್‌ ಸುವರ್ಣನ್ಯೂಸ್‌ ವಾಟ್ಸಪ್‌ ಚಾನೆಲ್‌ ಫಾಲೋ ಮಾಡಿ

ಎಕ್ಸ್‌ಪ್ರೆಸ್‌ ವಾಹನ ಸಂಚಾರಕ್ಕೆ ಸಮಸ್ಯೆ:  ಮಂಡ್ಯ ಜಿಲ್ಲೆ ಬಂದ್‌ ಹಿನ್ನೆಲೆಯಲ್ಲಿ ಮೈಸೂರು - ಬೆಂಗಳೂರು ದಶಪಥ ಹೆದ್ದಾರಿಯನ್ನೂ ಬಂದ್‌ ಮಾಡುವ ಸಾಧ್ಯತೆಯಿದೆ. ಈಗಾಗಲೇ ಕಳೆದೊಂದು ವಾರದಲ್ಲಿ ಮೂರ್ನಾಲ್ಕು ಬಾರಿ ಮಂಡ್ಯದಲ್ಲಿರುವ ಎಕ್ಸ್‌ಪ್ರೆಸ್‌ವೇ ಬಂದ್‌ ಮಾಡಿದ್ದು, ಗಂಟೆಗಟ್ಟಲೆ ವಾಹನಗಳು ನಿಂತಲ್ಲೇ ನಿಂತು ಟ್ರಾಫಿಕ್‌ ಜಾಮ್‌ ಎದುರಿಸಿದ್ದವು. ಇನ್ನು ನಾಳೆ ಮಂಡ್ಯ ಜಿಲ್ಲೆಯ ಬಂದ್‌ನ ಹಿನ್ನೆಲೆಯಲ್ಲಿ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಂತರ ಬೆಂಗಳೂರು -ಮೈಸೂರು ಎಕ್ಸ್‌ಪ್ರೆಸ್‌ ವೇ ತಡೆಯುವ ಬಗ್ಗೆ ಚಿಂತನೆ ಮಾಡಲಾಗಿದೆ. ಇದರಿಂದ ಹೆದ್ದಾರಿಯಲ್ಲಿ ಸಂಚಾರ ಮಾಡುವ ವಾಹನ ಸವಾರರಿಗೂ ಸಮಸ್ಯೆಎದುರಾಗುವ ಸಾಧ್ಯತೆಯಿದೆ.

ಸುಪ್ರೀಂಕೋರ್ಟ್ ಕೇವಲ ಕಾವೇರಿ ಪ್ರಾಧಿಕಾರದ ಆದೇಶ ಕೇಳ್ಬಾರದು?: ಬೊಮ್ಮಾಯಿ

ಹೆದ್ದಾರಿ ತಡೆಯದಂತೆ ರೈತರಿಗೆ ಪೊಲೀಸರ ಮನವಿ: ರಾಷ್ಟ್ರೀಯ ಹೆದ್ದಾರಿ‌ ತಡೆದರೆ ವಾಹನ ಸವಾರರಿಗೆ ಅನಾನೂಕೂಲ ಸಾಧ್ಯತೆಯಿದೆ. ಹೀಗಾಗಿ, ಎಕ್ಸ್‌ಪ್ರೆಸ್‌ ವೇ ಬಂದ್ ಮಾಡದಂತೆ ಮಂಡ್ಯ ಪೊಲೀಸರು ರೈತರಿಗೆ ಮನವಿ ಮಾಡಿದ್ದಾರೆ. ಆದರೆ, ಪ್ರತಿಭಟನೆಯ ವೇಳೆ ಈಗಾಗಲೇ ಹಲವೆಡೆ ಹೆದ್ದಾರಿಯನ್ನು ತಡೆಯಲಾಗಿದೆ. ಮಂಡ್ಯ ನಗರದಲ್ಲಿ ನಡೆಸಲಾಗುವ ಪ್ರತಿಭಟನಾ ಮೆರವಣಿಗೆ ಪೂರ್ಣಗೊಂಡ ನಂತರ ಕೆಲಹೊತ್ತು ಎಕ್ಸ್‌ಪ್ರೆಸ್‌ ವೇ ಬಂದ್‌ ಮಾಡುವ ಸಾಧ್ಯತೆಯಿದೆ. ಇನ್ನು ಮಂಡ್ಯ ಜಿಲ್ಲೆಯಲ್ಲಿ ನಿಡಘಟ್ಟದಿಂದ ಶ್ರೀರಂಗಪಟ್ಟಣದವರೆಗೆ ಎಕ್ಸ್‌ಪ್ರೆಸ್‌ ವೇ ಹಾದು ಹೋಗಿದ್ದು, ಕೆಲವೆಡೆ ರೈತರು ಅಡ್ಡಗಟ್ಟುವ ಸಾಧ್ಯತಯಿದೆ ಎಂದು ರೈತರು ಪೊಲೀಸರಿಗೆ ತಿಳಿಸಿದ್ದಾರೆ. ಇನ್ನು ಈ ಬಗ್ಗೆ ಸಂಜೆ ನಡೆಯುವ ರೈತ ಒಕ್ಕೂಟದ ಸಭೆಯಲ್ಲಿ ನಿರ್ಧಾರ ಮಾಡಲಾಗುತ್ತದೆ. 

click me!