Balija Community 2A Reservation: 2ಎ ಮೀಸಲಾತಿಗೆ ಈಗ ಬಲಿಜರ ಪಟ್ಟು..!

By Kannadaprabha News  |  First Published Jan 10, 2023, 1:24 PM IST

ರಾಜಕೀಯ, ಉದ್ಯೋಗದಲ್ಲಿ 2ಎ ಮೀಸಲು ಮರಳಿಸಲು 10 ದಿನ ಗಡುವು, ಇಲ್ಲದಿದ್ದರೆ 19ರಿಂದ ಹೋರಾಟ: ಬಲಿಜ ಸಂಘ, ಬೆಂಗಳೂರಲ್ಲಿ ಪ್ರತಿಭಟನೆ. 


ಬೆಂಗಳೂರು(ಜ.10): ಬಲಿಜ ಸಮುದಾಯಕ್ಕೆ ಈ ಹಿಂದೆ ಇದ್ದ 2ಎ ಮೀಸಲಾತಿಯನ್ನು 10 ದಿನದೊಳಗೆ ವಾಪಸ್‌ ನೀಡದಿದ್ದರೆ ಜ.19ರಿಂದ ಬೃಹತ್‌ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಬಲಿಜ ಸಂಘದ ರಾಜ್ಯಾಧ್ಯಕ್ಷ ಡಾ.ಟಿ.ವೇಣುಗೋಪಾಲ್‌ ಎಚ್ಚರಿಕೆ ನೀಡಿದ್ದಾರೆ.

2ಎ ಮೀಸಲಾತಿಗೆ ಆಗ್ರಹಿಸಿ ಸ್ವಾತಂತ್ರ್ಯ ಉದ್ಯಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, 28 ವರ್ಷದಿಂದ ನಾವು ಹೋರಾಟ ನಡೆಸುತ್ತಿದ್ದರೂ ನಮ್ಮ ಜನಾಂಗದ ಕೂಗು ಸರ್ಕಾರಕ್ಕೆ ಕೇಳಿಸುತ್ತಿಲ್ಲ. ರಾಜ್ಯದಲ್ಲಿ 40 ಲಕ್ಷಕ್ಕೂ ಹೆಚ್ಚು ಬಲಿಜ ಸಮುದಾಯದವರಿದ್ದು, ಕೃಷಿ, ಕೂಲಿ, ಹೈನುಗಾರಿಕೆ, ಬಳೆ, ಹೂವು ಹಾಗೂ ಮಂಗಳ ದ್ರವ್ಯ ಮಾರಾಟ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಹೀಗಾಗಿ ಈ ಹಿಂದೆ 2ಎ ಪ್ರವರ್ಗದಡಿ ಮೀಸಲಾತಿ ನೀಡಲಾಗುತ್ತಿತ್ತು. ಆದರೆ ಯಾವುದೇ ಆಯೋಗದ ಶಿಫಾರಸಿಲ್ಲದೆ 17-9-1994ರಲ್ಲಿ 2ಎ ಪ್ರವರ್ಗದಿಂದ 3ಎ ಪ್ರವರ್ಗದ ಮೀಸಲಾತಿಗೆ ಬದಲಾಯಿಸಿ, ಸಮುದಾಯಕ್ಕೆ ಘೋರ ಅನ್ಯಾಯ ಮಾಡಲಾಗಿದೆ ಎಂದು ಟೀಕಿಸಿದರು.

Tap to resize

Latest Videos

Panchamasali Reservation: 2D ಮೀಸಲಾತಿ ನಿರಾಕರಣೆ, ಜ.13ರಂದು ಸಿಎಂ ನಿವಾಸದೆದುರು ಜಯಮೃತ್ಯುಂಜಯ ಶ್ರೀ ಹೋರಾಟ

ಬಳಿಕ ಹೋರಾಟ ನಡೆಸಿದ್ದರಿಂದ ಮುಖ್ಯಮಂತ್ರಿಯಾಗಿದ್ದಾಗ ಬಿ.ಎಸ್‌.ಯಡಿಯೂರಪ್ಪ ಅವರು ಶಿಕ್ಷಣಕ್ಕೆ ಮಾತ್ರ ಅನ್ವಯವಾಗುವಂತೆ 2ಎ ಪ್ರವರ್ಗಕ್ಕೆ ಸೇರಿಸಿದ್ದಾರೆ. ಆದರೆ ಈಗಲೂ ನಮಗೆ ರಾಜಕೀಯ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಿಲ್ಲ. ಜನಾಂಗಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸುವುದಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಅನ್ಯಾಯ ಸರಿಪಡಿಸಿಲ್ಲ ಎಂದು ಆರೋಪಿಸಿದರು.
2ಎ ಪ್ರವರ್ಗಕ್ಕೆ ಸೇರ್ಪಡೆ ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮತ್ತೊಮ್ಮೆ ಮನವಿ ಸಲ್ಲಿಸಲಾಗುವುದು. ಮೀಸಲಾತಿ ನೀಡದಿದ್ದರೆ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಪ್ರತಿ ಕ್ಷೇತ್ರದಿಂದಲೂ ಸಮುದಾಯದವರು ಸ್ವತಂತ್ರವಾಗಿ ಸ್ಪರ್ಧಿಸಿ ಶಕ್ತಿ ಪ್ರದರ್ಶಿಸುತ್ತೇವೆ ಎಂದು ಹೇಳಿದರು.

ಕೈವಾರ ತಾತಯ್ಯ ಮತ್ತು ಕೃಷ್ಣದೇವರಾಯನ ವೇಷ ಧರಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವರು ಗಮನ ಸೆಳೆದರು. ಬುಟ್ಟಿಗಳಲ್ಲಿ ತಂದಿದ್ದ ಬಳೆ, ಹೂವು, ಎಲೆ, ಅರಿಶಿನ, ಕುಂಕುಮವನ್ನೂ ಈ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು. ಸಾವಿರಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

2ಎ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಕರ್ನಾಟಕ ರಾಜ್ಯ ಬಲಿಜ ಸಂಘದಿಂದ ಪ್ರತಿಭಟನೆ ನಡೆಸಲಾಯಿತು. ಸಂಘದ ರಾಜ್ಯಾಧ್ಯಕ್ಷ ಡಾ.ಟಿ.ವೇಣುಗೋಪಾಲ್‌ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

click me!