
ಬಾಗಲಕೋಟೆ (ಜ.28): ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಆಲಬಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳ ಫೋಟೋವೊಂದು ಈಗ ಇಡೀ ರಾಜ್ಯದ ಗಮನ ಸೆಳೆದಿದೆ. ಬಿಸಿಯೂಟದ ನಂತರ ಮಕ್ಕಳು ಚರಂಡಿಯ ಪಕ್ಕದಲ್ಲಿರುವ ಪೈಪ್ ನೀರಿಗೆ ತಮ್ಮ ಊಟದ ತಟ್ಟೆಗಳನ್ನು ತೊಳೆಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸರ್ಕಾರದ ಶಾಲಾ ಸುಧಾರಣಾ ಯೋಜನೆಗಳ ನಡುವೆಯೂ, ಪುಟ್ಟ ಮಕ್ಕಳು ಗಬ್ಬು ನಾರುವ ಚರಂಡಿ ಹತ್ತಿರವೇ ನಿಂತು ತಟ್ಟೆ ಸ್ವಚ್ಛಗೊಳಿಸುವ ಪರಿಸ್ಥಿತಿ ಬಂದಿರುವುದು ದುರದೃಷ್ಟಕರ.
ಶಾಲೆಯಲ್ಲಿ ಮಕ್ಕಳಿಗೆ ಕುಡಿಯಲು ಮತ್ತು ಕೈ ತೊಳೆಯಲು ಸೂಕ್ತ ನೀರಿನ ವ್ಯವಸ್ಥೆ ಇಲ್ಲದಿರುವುದೇ ಈ ಅವಾಂತರಕ್ಕೆ ಕಾರಣ ಎನ್ನಲಾಗಿದೆ. ಬಿಸಿಯೂಟದ ನಂತರ ಪ್ಲೇಟ್ ತೊಳೆಯಲು ಸೂಕ್ತ ಸ್ಥಳ ಅಥವಾ ನೀರಿನ ಸೌಲಭ್ಯ ಕಲ್ಪಿಸದೆ ಶಾಲಾ ಸುಧಾರಣಾ ಸಮಿತಿ (SDMC) ಹಾಗೂ ಶಿಕ್ಷಕರು ತೋರುತ್ತಿರುವ ಅತಿಯಾದ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. 'ಮಕ್ಕಳ ಆರೋಗ್ಯದ ಜೊತೆ ಚೆಲ್ಲಾಟವಾಡಲು ಹೇಗೆ ಸಾಧ್ಯ?' ಎಂದು ಪೋಷಕರು ಪ್ರಶ್ನಿಸುತ್ತಿದ್ದಾರೆ.
ಈ ಆಘಾತಕಾರಿ ದೃಶ್ಯವನ್ನು ಶಿವಲಿಂಗ ನಿಂಗನೂರ ಎಂಬುವವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಶಿಕ್ಷಣ ಇಲಾಖೆಯ ಬಣ್ಣ ಬಯಲು ಮಾಡಿದ್ದಾರೆ. ಈ ಫೋಟೋ ಅಪ್‌ಲೋಡ್ ಆದ ಕೆಲವೇ ಗಂಟೆಗಳಲ್ಲಿ ನೂರಾರು ಜನ ಶಿಕ್ಷಣ ಇಲಾಖೆಗೆ ಛೀಮಾರಿ ಹಾಕಿದ್ದಾರೆ. ಮಕ್ಕಳು ಕೊಳಚೆ ನೀರಿನ ಪಕ್ಕದಲ್ಲೇ ನಿಂತಿರುವುದು ಅವರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಬಹುದು ಎಂಬ ಆತಂಕ ಸಾರ್ವಜನಿಕರಲ್ಲಿ ಮನೆಮಾಡಿದೆ.
ಶಾಲೆಯ ಈ ಅವ್ಯವಸ್ಥೆ ಕಂಡು ಆಲಬಾಳ ಗ್ರಾಮಸ್ಥರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಶಾಲೆಯ ಆವರಣದಲ್ಲಿ ಮೂಲಭೂತ ಸೌಕರ್ಯ ಒದಗಿಸದ ಶಿಕ್ಷಕರು ಮತ್ತು ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಸರ್ಕಾರಿ ಶಾಲೆಗಳ ಸಬಲೀಕರಣದ ಬಗ್ಗೆ ದೊಡ್ಡ ಭಾಷಣ ಮಾಡುವ ಅಧಿಕಾರಿಗಳು, ಕನಿಷ್ಠ ಪ್ಲೇಟ್ ತೊಳೆಯಲು ಶುದ್ಧ ನೀರಿನ ವ್ಯವಸ್ಥೆ ಮಾಡದಿರುವುದು ಸರ್ಕಾರದ 'ನಿರ್ಲಕ್ಷ್ಯ'ಕ್ಕೆ ಸಾಕ್ಷಿಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ