
ಮಂಗಳೂರು: ತಮಿಳುನಾಡಿನ ನಾಗರಕೋಯಿಲ್ ಜಂಕ್ಷನ್ ಮತ್ತು ಕರ್ನಾಟಕದ ಮಂಗಳೂರು ಜಂಕ್ಷನ್ ನಡುವಿನ ಪ್ರಯಾಣಿಕರ ಅನುಕೂಲಕ್ಕಾಗಿ ಹೊಸದಾಗಿ ಅಮೃತ್ ಭಾರತ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಸೇವೆ ಮಂಗಳವಾರದಿಂದ ಆರಂಭಗೊಂಡಿದೆ.
ಈ ರೈಲು ಸೇವೆ ದಕ್ಷಿಣ ಭಾರತದ ಪ್ರಮುಖ ನಗರಗಳು ಹಾಗೂ ಕರಾವಳಿ ಪ್ರದೇಶಗಳನ್ನು ಸಂಪರ್ಕಿಸುವ ಮಹತ್ವದ ಸಾರಿಗೆ ವ್ಯವಸ್ಥೆಯಾಗಿದ್ದು, ಪ್ರಯಾಣಿಕರಿಗೆ ಸುಗಮ ಹಾಗೂ ವೇಗದ ಪ್ರಯಾಣಕ್ಕೆ ನೆರವಾಗಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಈ ರೈಲು ಜನವರಿ 27ರಿಂದ ಪ್ರತೀ ಮಂಗಳವಾರ ಬೆಳಗ್ಗೆ 11.40ಕ್ಕೆ ನಾಗರಕೋಯಿಲ್ ಜಂಕ್ಷನ್‌ನಿಂದ ಹೊರಡಲಿದ್ದು, ಮರುದಿನ ಬೆಳಗ್ಗೆ 5 ಗಂಟೆಗೆ ಮಂಗಳೂರು ಜಂಕ್ಷನ್ ತಲುಪಲಿದೆ.
ಈ ರೈಲು ಜನವರಿ 28ರಿಂದ ಪ್ರತೀ ಬುಧವಾರ ಬೆಳಗ್ಗೆ 8 ಗಂಟೆಗೆ ಮಂಗಳೂರು ಜಂಕ್ಷನ್‌ನಿಂದ ಹೊರಟು, ಅದೇ ದಿನ ರಾತ್ರಿ 8.05ಕ್ಕೆ ನಾಗರಕೋಯಿಲ್ ಜಂಕ್ಷನ್ ತಲುಪಲಿದೆ.
ಈ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು ಶೋರ್ನೂರ್ ಜಂಕ್ಷನ್, ತಿರೂರ್, ತಲಕ್ಕೇರಿ, ಕೋಝಿಕ್ಕೋಡ್, ಕಣ್ಣೂರು ಮತ್ತು ಕಾಸರಗೋಡು ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಇದಲ್ಲದೆ, ಪ್ರಯಾಣಿಕರ ಬೇಡಿಕೆ ಮತ್ತು ಅನುಕೂಲತೆಯನ್ನು ಗಮನದಲ್ಲಿಟ್ಟು ರೈಲಿಗೆ ಹೆಚ್ಚುವರಿಯಾಗಿ ಕೆಳಗಿನ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಕಲ್ಪಿಸಲಾಗಿದೆ ಅದರಂತೆ ತಿರುವನಂತಪುರಂ ಸೆಂಟ್ರಲ್ , ವರ್ಕಲ, ಕೊಲ್ಲಂ ಜಂಕ್ಷನ್, ಕರುನಾಗಪಲ್ಲಿ, ಕಾಯಂಕುಲಂ ಜಂಕ್ಷನ್, ಮಾವೇಲಿಕ್ಕರ, ಚೆಂಗನ್ನೂರು, ತಿರುವಲ್ಲಾ, ಚಂಗನಾಕ್ಕೇರಿ, ಕೊಟ್ಟಾಯಂ, ಎರ್ನಾಕುಲಂ ಟೌನ್, ಆಲುವಾ ಮತ್ತು ತ್ರಿಶೂರ್ ನಿಲ್ದಾಣಗಳಲ್ಲಿ ನಿಲುಗಡೆ ಇದೆ.
ಈ ಹೊಸ ರೈಲು ಸೇವೆಯಿಂದ ತಮಿಳುನಾಡು, ಕೇರಳ ಮತ್ತು ಕರ್ನಾಟಕ ರಾಜ್ಯಗಳ ನಡುವಿನ ಪ್ರಯಾಣ ಇನ್ನಷ್ಟು ಸುಲಭವಾಗಲಿದ್ದು, ವ್ಯಾಪಾರ, ಪ್ರವಾಸೋದ್ಯಮ ಮತ್ತು ಜನಸಂಪರ್ಕಕ್ಕೆ ಉತ್ತೇಜನ ದೊರೆಯಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಸವದತ್ತಿ: ಲೋಕಾಪುರದಿಂದ ರಾಮದುರ್ಗ, ಸವದತ್ತಿ, ಧಾರವಾಡ ರೇಣುಕಾ ಯಲ್ಲಮ್ಮಾ ರೈಲ್ವೆ ಮಾರ್ಗ ನಿರ್ಮಾಣದ ಕುರಿತು ಪಟ್ಟಣದ ಗಾಂಧಿಚೌಕ್‌ದಲ್ಲಿ ಹಮ್ಮಿಕೊಂಡಿರುವ ಸತ್ಯಾಗ್ರಹ ಮಂಗಳವಾರ 6ನೇ ದಿನಕ್ಕೆ ಕಾಲಿಟ್ಟಿದ್ದು, ವಿವಿಧ ತಾಲೂಕಿನಿಂದ ಹೋರಾಟಗಾರರು ಆಗಮಿಸಿ ಕುತುಬುದ್ದೀನ್ ಖಾಜಿಯವರ ಸತ್ಯಾಗ್ರಹಕ್ಕೆ ಬೆಂಬಲ ನೀಡುತ್ತಿದ್ದಾರೆ.
ಉತ್ತರ ಕರ್ನಾಟಕ ವಿಕಾಸ ವೇದಿಕೆ ಅಧ್ಯಕ್ಷ ಅಶೋಕ ಪೂಜಾರಿಯವರು ರೇಣುಕಾ ಯಲ್ಲಮ್ಮಾ ರೈಲು ಮಾರ್ಗ ಹೋರಾಟದ ಕುತುಬುದ್ದೀನ್ ಕಾಜಿಯವರಿಗೆ ಬೆಂಬಲ ಸೂಚಿಸಿ ಮಾತನಾಡಿ, ರೈಲ್ವೆ ಮಾರ್ಗ ಕುರಿತು ನಡೆಯುತ್ತಿರುವ ಹೋರಾಟಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡೂ ಮುತವರ್ಜಿವಹಿಸಿ ಈ ಭಾಗದ ಜನರ ಬೇಡಿಕೆಗೆ ಸ್ಪಂದನೆ ನೀಡಬೇಕು. ಈ ಭಾಗದಲ್ಲಿ ರೈಲ್ವೆ ಮಾರ್ಗವಾಗುವದರಿಂದ ಧಾರ್ಮಿಕ ಕ್ಷೇತ್ರಗಳ ಜೊತೆಗೆ ಈ ಭಾಗದ ರೈತರ ಅಭಿವೃದ್ಧಿಗೂ ಪೂರಕವಾಗಲಿದೆ ಎಂದರು.
ಹೋರಾಟಗಾರರಿಗೆ ಜನಪ್ರತಿನಿಧಿಗಳು ಬೆಂಬಲ ನೀಡಬೇಕಿದ್ದು, ರೈಲ್ವೆ ಹೋರಾಟದಲ್ಲಿ ರಾಜಕಾರಣವನ್ನು ಬಿಟ್ಟು ಜನರ ಬೇಡಿಕೆಗಳನ್ನು ಈಡೇರಿಸುವತ್ತ ಪ್ರತಿಯೊಬ್ಬರು ಮುಂದೆ ಬರಬೇಕೆಂದರು. ಜನರ ಅವಶ್ಯಕತೆಗಳಿಗೆ ಪೂರಕವಾಗಿ ನಡೆಸುತ್ತಿರುವ ಖಾಜಿಯವರ ಸತ್ಯಾಗ್ರಹದ ಹೋರಾಟದಲ್ಲಿ ನಾವೆಲ್ಲರೂ ಭಾಗಿಯಾಗಿ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಕುತುಬುದ್ದೀನ್ ಖಾಜಿ ಮಾತನಾಡಿ, ಜ.೨೨ರಿಂದ ಆರಂಭಿಸಿದ ಸತ್ಯಾಗ್ರಹವು ಇಂದು ಆರನೇ ದಿನಕ್ಕೆ ಕಾಲಿಟ್ಟಿದ್ದು, ರೈಲು ಮಾರ್ಗದ ಬೇಡಿಕೆಗೆ ಸಾಕಷ್ಟು ಜನರ ಸ್ಪಂಧನೆ ದೊರಕುತ್ತಿದೆ ಎಂದರು. ಸ್ಥಳೀಯ ಮತ್ತು ಗ್ರಾಮೀಣ ಭಾಗದ ಸಂಘಟನೆಗಳು ಸೇರಿದಂತೆ ಬೇರೆ ಬೇರೆ ತಾಲೂಕಿನ ಜನರು ಹಾಗೂ ಪೂಜ್ಯರು ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ. ಈ ಭಾಗದ ಸಂಸದರು ಶ್ರೀ ರೇಣುಕಾ ಯಲ್ಲಮ್ಮಾ ರೈಲ್ವೆ ಮಾರ್ಗದ ಕುರಿತು ನಡೆಯುತ್ತಿರುವ ಹೋರಾಟಕ್ಕೆ ಸ್ಪಂಧನೆ ನೀಡುವುದರ ಜೊತೆಗೆ ಕೇಂದ್ರದ ಬಜೆಟ್‌ನಲ್ಲಿ ನಮ್ಮ ಬೇಡಿಕೆಗೆ ಸಮ್ಮತಿ ದೊರಕುವಂತೆ ಒತ್ತಾಯಿಸಬೇಕು ಎಂದರು.
ಉದಯಕುಮಾರ ಕರ್ಜಗಿಮಠ ಮಾತನಾಡಿ, ವರ್ಷವಿಡಿ ಕೋಟ್ಯಾಂತರ ಭಕ್ತರು ಆಗಮಿಸುವ ಸುಕ್ಷೇತ್ರ ಯಲ್ಲಮ್ಮಾ ದೇವಸ್ಥಾನಕ್ಕೆ ರೈಲು ಮಾರ್ಗದ ಅತ್ಯವಶ್ಯಕತೆಯಿದ್ದು, ಕೇಂದ್ರ ಸರಕಾರದ ಬಜೆಟ್‌ನಲ್ಲಿ ಈ ಮಾರ್ಗ ನಿರ್ಮಾಣಕ್ಕೆ ಅನುಮೋದನೆ ನೀಡಬೇಕೆಂದು ಒತ್ತಾಯಿಸಿದರು. ಆರ್.ಡಿ.ಶಾಮರಾಯನವರ, ರಿಯಾಜಹ್ಮದ್ ಪಟಾದ, ಆಲಮ್ ನದಾಫ, ಸಿದ್ದನಗೌಡ ಪಾಟೀಲ, ಶಿವಣ್ಣ ಶಿಗ್ಲಿ, ಶ್ರೀಕಾಂತ ಹಟ್ಟಿಹೊಳಿ, ಬಸವರಾಜ ಬಿಜ್ಜೂರ ಇತರರು ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ