ಸತ್ತಿದ್ದು ಪತ್ನಿ, ಡೆತ್ ಸರ್ಟಿಫಿಕೇಟ್ ಪತಿಯ ಹೆಸರಲ್ಲಿ! ರಟ್ಟಿಹಳ್ಳಿ ತಹಸೀಲ್ದಾರ್ ಸಿಬ್ಬಂದಿ ಎಡವಟ್ಟಿಗೆ ಏನು ಹೇಳ್ತೀರಿ?

Published : Jan 28, 2026, 10:46 PM IST
Haveri Man seeking wife s death certificate gets one in his own name

ಸಾರಾಂಶ

ಹಾವೇರಿಯ ರಟ್ಟಿಹಳ್ಳಿ ತಹಶೀಲ್ದಾರ್ ಕಚೇರಿಯಲ್ಲಿ, ಮೃತ ಪತ್ನಿಯ ಮರಣ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಿದ ಪತಿಗೆ, ಅವರ ಹೆಸರಿನಲ್ಲೇ ಮರಣ ಪ್ರಮಾಣಪತ್ರ ನೀಡಿದ ಘಟನೆ ನಡೆದಿದೆ. ಐದು ವರ್ಷಗಳ ಹಿಂದಿನ ಎಡವಟ್ಟಿನಿಂದ ಜೀವಂತ ಇರುವ ತೋಪನಗೌಡ ಎಂಬುವವರ ರೇಷನ್ ಕಾರ್ಡ್ ರದ್ದಾಗಿ ತೊಂದರೆ ಅನುಭವಿಸುತ್ತಿದ್ದಾರೆ.

ಹಾವೇರಿ (ಜ.28): ಸರ್ಕಾರಿ ಕಚೇರಿಗಳಲ್ಲಿ ಕೆಲಸಗಳು ಎಷ್ಟು 'ವೇಗವಾಗಿ' ನಡೆಯುತ್ತವೆ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಹಶೀಲ್ದಾರ್ ಕಚೇರಿಯ ಡಾಟಾ ಎಂಟ್ರಿ ಸಿಬ್ಬಂದಿಯೊಬ್ಬರು ಮಾಡಿರುವ ಎಡವಟ್ಟು ಮಾತ್ರ ಕೇಳಿದರೆ. ನಗಬೇಕೋ ಅಳಬೇಕೋ ಎನ್ನುವಂಥ ಪರಿಸ್ಥಿತಿ. ತನ್ನ ಪತ್ನಿ ಸಾವನ್ನಪ್ಪಿದ ನಂತರ ಆಕೆಯ ಮರಣ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ ಪತಿಗೆ, ಸತ್ತವರು ಪತ್ನಿಯಲ್ಲ, ನೀವೇ ಎಂದು ಸಿಬ್ಬಂದಿ ಪತಿಗೆ ಮರಣ ಸರ್ಟಿಫಿಕೇಟ್ ನೀಡಿದ್ದಾರೆ! ಜೀವಂತ ಇರುವ ವ್ಯಕ್ತಿಯ ಹೆಸರಲ್ಲೇ ಮರಣ ಪ್ರಮಾಣ ಪತ್ರ ಸೃಷ್ಟಿಯಾದ ಈ ಘಟನೆ ಈಗ ಜಿಲ್ಲಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ.

ಐದು ವರ್ಷದ ನಂತರ ಬಯಲಾದ ಸತ್ಯ

ರಟ್ಟಿಹಳ್ಳಿ ತಾಲೂಕಿನ ಶಿರಗಂಬಿ ಗ್ರಾಮದ ತೋಪನಗೌಡ ಗುಬ್ಬಿ ಎಂಬುವವರ ಪತ್ನಿ ಮಲ್ಲಮ್ಮ ಅವರು ಕಳೆದ 12-08-2021 ರಂದು ಮೃತಪಟ್ಟಿದ್ದರು. ಪತ್ನಿಯ ಮರಣದ ನಂತರ ಸರ್ಕಾರಿ ದಾಖಲೆಗಳಿಗಾಗಿ ತೋಪನಗೌಡರು ಪತ್ನಿಯ ಡೆತ್ ಸರ್ಟಿಫಿಕೇಟ್ ಕೇಳಿ ಅರ್ಜಿ ಸಲ್ಲಿಸಿದ್ದರು. ಆದರೆ ನಿದ್ದೆ ಮಂಪರಿನಲ್ಲಿ ಕುಳಿತಿದ್ದ ಸಿಬ್ಬಂದಿ, ಸತ್ತ ಮಲ್ಲಮ್ಮನ ಹೆಸರಿಗೆ ಬದಲು ಜೀವಂತ ಇರುವ ಪತಿ ಅಂದರೆ ಅರ್ಜಿ ಸಲ್ಲಿಸಿದ ತೋಪನಗೌಡರ ಹೆಸರಲ್ಲೇ ಮರಣ ಪ್ರಮಾಣ ಪತ್ರವನ್ನು ಪ್ರಿಂಟ್ ಮಾಡಿ ಕೈಗಿಟ್ಟಿದ್ದರು. ಈ ಯಡವಟ್ಟು ನಡೆದು ಐದು ವರ್ಷಗಳೇ ಕಳೆದಿದ್ದರೂ, ಈಗ ಪ್ರಕರಣ ಬೆಳಕಿಗೆ ಬಂದು ಅಧಿಕಾರಿಗಳನ್ನು ಮುಜುಗರಕ್ಕೀಡು ಮಾಡಿದೆ.

'ಸತ್ತಿದ್ದೀರಿ..' ಎಂದು ರೇಷನ್ ಕಾರ್ಡ್ ರದ್ದು!

ಕೇವಲ ಸರ್ಟಿಫಿಕೇಟ್ ನೀಡಿ ಸುಮ್ಮನಾಗಿದ್ದರೆ ಪರಿಸ್ಥಿತಿ ಇಷ್ಟೊಂದು ಗಂಭೀರವಾಗುತ್ತಿರಲಿಲ್ಲವೇನೋ. ಈ ಮರಣ ಪ್ರಮಾಣ ಪತ್ರದ ದಾಖಲೆಯ ಆಧಾರದ ಮೇಲೆ ಆನ್‌ಲೈನ್‌ನಲ್ಲಿ ತೋಪನಗೌಡರ ಹೆಸರನ್ನು 'ಮೃತ' ಎಂದು ನಮೂದಿಸಲಾಗಿದೆ. ಪರಿಣಾಮವಾಗಿ, ಬದುಕಿರುವ ವ್ಯಕ್ತಿಯ ರೇಷನ್ ಕಾರ್ಡ್ ರದ್ದಾಗಿದೆ! ಅಷ್ಟೇ ಅಲ್ಲದೆ, ಸರ್ಕಾರದ ಯಾವುದೇ ಸೌಲಭ್ಯಗಳು ಸಿಗದೆ ತೋಪನಗೌಡರು ಕಳೆದ ಕೆಲವು ವರ್ಷಗಳಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಬದುಕಿದ್ದೂ ಸತ್ತವನಂತೆ ಅಲೆಯುತ್ತಿರುವ ಇವರ ಸ್ಥಿತಿ ನೋಡಿ ಗ್ರಾಮಸ್ಥರು ಮರುಕ ವ್ಯಕ್ತಪಡಿಸುತ್ತಿದ್ದಾರೆ.

ಸರ್ಕಾರದ ವಿರುದ್ಧ ಬಿಸಿ ಪಾಟೀಲ್ ಆಕ್ರೋಶ

ಈ ಅವಾಂತರದ ಬಗ್ಗೆ ಮಾಹಿತಿ ತಿಳಿದ ಹಿರಿಯ ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ಬಿ.ಸಿ. ಪಾಟೀಲ್ ಅವರು ರಾಜ್ಯ ಸರ್ಕಾರದ ಆಡಳಿತ ಯಂತ್ರದ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ. 'ಬದುಕಿರುವ ವ್ಯಕ್ತಿಗೆ ಮರಣ ಪ್ರಮಾಣ ಪತ್ರ ನೀಡುವಂತಹ ಬೇಜವಾಬ್ದಾರಿ ಸಿಬ್ಬಂದಿ ಇರುವುದು ನಾಚಿಕೆಗೇಡು. ಇದರಿಂದ ಒಬ್ಬ ಸಾಮಾನ್ಯ ರೈತನಿಗೆ ಆಗುತ್ತಿರುವ ಅನ್ಯಾಯಕ್ಕೆ ಯಾರು ಹೊಣೆ?' ಎಂದು ಪ್ರಶ್ನಿಸಿದ್ದಾರೆ. ಕೂಡಲೇ ಈ ತಪ್ಪನ್ನು ಸರಿಪಡಿಸಿ, ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪಕ್ಕಾ ಪ್ಲಾನ್ ಮಾಡಿ ಬೆಂಗಳೂರಿನ ಮನೆಯಿಂದ 18 ಕೋಟಿ ರೂ ಚಿನ್ನಾಭರಣ ಕಳವು, ಕೆಲಸದವರ ಕೈಚಳಕ
ಮಂಗಳೂರು ಜಂಕ್ಷನ್‌ನಿಂದ ತಮಿಳುನಾಡಿಗೆ ಅಮೃತ ಭಾರತ್ ಎಕ್ಸ್‌ಪ್ರೆಸ್ ರೈಲು ಆರಂಭ, ಸಮಯ, ನಿಲುಗಡೆ ಮಾಹಿತಿ ಇಲ್ಲಿದೆ