ರೈತರಿಗೆ ಸಿಎಂ ಕುಮಾರಸ್ವಾಮಿ ಭರವಸೆ

By Web DeskFirst Published Nov 5, 2018, 7:26 AM IST
Highlights

ಮುಖ್ಯಮಂತ್ರಿ  ಎಚ್.ಡಿ ಕುಮಾರಸ್ವಾಮಿ  ಇದೀಗ ರೈತರಿಗೆ ಭರಸವೆಯನ್ನು ನೀಡಿದ್ದಾರೆ. ಅಲ್ಲದೇ ರೈತರ ತಂಟೆಗೆ ಹೋಗದಂತೆ ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ. 

ಬೆಂಗಳೂರು/ಬೈಲಹೊಂಗಲ: ಎಕ್ಸಿಸ್ ಬ್ಯಾಂಕ್ ಸಾಲ ಮರುಪಾವತಿ ವಿಳಂಬ ಮಾಡಿದ ಬೆಳಗಾವಿ ರೈತರಿಗೆ ಕೋಲ್ಕತ್ತಾ ನ್ಯಾಯಾಲಯ ಬಂಧನ ವಾರೆಂಟ್ ಜಾರಿ ಮಾಡಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಯಾವುದೇ ಕಾರಣಕ್ಕೂ ರೈತರ ತಂಟೆಗೆ ಹೋಗದಂತೆ ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ. 

ಇದೇ ವೇಳೆ ಇಂತಹ ಕಷ್ಟದಲ್ಲಿರುವ ರೈತರ ಹಿತ ಕಾಯುವಂತೆ ಬೆಳಗಾವಿ ಜಿಲ್ಲಾಧಿಕಾರಿಗೂ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಮುಖ್ಯಮಂತ್ರಿ ಸೂಚನೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ ಅವರು ಕೂಡ ರೈತರ ಜತೆಗೆ ಮಾತುಕತೆ ನಡೆಸಿದ್ದು, ಆತಂಕಪಡುವ ಅಗತ್ಯವಿಲ್ಲ ಎಂದು ಅಭಯ ನೀಡಿದ್ದಾರೆ.  

ಜತೆಗೆ, ನ.7 ರಂದು ಎಕ್ಸಿಸ್ ಬ್ಯಾಂಕ್, ಲೀಡ್ ಬ್ಯಾಂಕ್ ಅಧಿಕಾರಿಗಳು ಹಾಗೂ ಎಸ್ಪಿ ಜತೆಗೆ ಸಭೆ ಕರೆಯಲಾಗಿದ್ದು, ಈ ವೇಳೆ ಪರಿಸ್ಥಿತಿಯ ಅವಲೋಕನ ನಡೆಸಲಾಗುವುದು ಎಂದು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ. ಏತನ್ಮಧ್ಯೆ, ಸಿಎಂ ಹಾಗೂ ಡಿಸಿ ಭರವಸೆ ಹಿನ್ನೆಲೆಯಲ್ಲಿ ವಾರೆಂಟ್ ಜಾರಿಯಾದ ಬಳಿಕ ಹೆದರಿ ತಲೆಮರೆಸಿಕೊಂಡಿದ್ದ ರೈತರು ಒಬ್ಬೊಬ್ಬರಾಗಿ ಭಾನುವಾರ ವಾಪಸ್ ಮನೆ ಸೇರಿದ್ದಾರೆ. 

ರೈತರ ಹಿತಕಾಯಲು ಬದ್ಧ: ಕರ್ನಾಟಕದ ರೈತರ ವಿರುದ್ಧ ಎಕ್ಸಿಸ್ ಬ್ಯಾಂಕ್ ಕುತಂತ್ರದ ಬಗ್ಗೆ ‘ಕನ್ನಡಪ್ರಭ’ ಭಾನುವಾರ ವಿಸ್ತೃತ ವರದಿ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಅಗತ್ಯ ಕ್ರಮಕ್ಕೆ ಮುಂದಾಗಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ರೈತರ ಸಾಲ ಮನ್ನಾ ಬಗ್ಗೆ ಸರ್ಕಾರ ಘೋಷಿಸಿ, ಬ್ಯಾಂಕ್‌ಗಳ ಜತೆ ಚರ್ಚೆ ನಡೆಸಿದ್ದರೂ ಎಕ್ಸಿಸ್ ಬ್ಯಾಂಕ್ ಈ ರೀತಿ ಮಾಡಿರುವುದು ಸರಿಯಲ್ಲ. ಯಾವುದೇ ಕಾರಣಕ್ಕೂ ರೈತರನ್ನು ಬಂಧಿಸಬಾರದು. ರೈತರ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದ್ದು, ರೈತರ ಪರ ಜಿಲ್ಲಾಡಳಿತ ಹಾಗೂ ಪೊಲೀಸ್ ಅಧಿಕಾರಿಗಳು ಯಾವುದೇ ನಿಲುವು ತೆಗೆದುಕೊಂಡರೂ ಸರ್ಕಾರ ಬೆಂಬಲಿಸುತ್ತದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಎಸ್.ಪಿ. ಬೊಮ್ಮನಹಳ್ಳಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್‌ಕುಮಾರ್ ರೆಡ್ಡಿಗೆ ಸೂಚನೆ ನೀಡಿದ್ದಾರೆ. 

ಭಾನುವಾರ ಬೆಳಗ್ಗೆ ದೂರವಾಣಿ ಮೂಲಕ ಬೆಳಗಾವಿ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಮಾತನಾಡಿದ ಅವರು, ಸರ್ಕಾರ ಈಗಾಗಲೇ ರೈತರ ಸಾಲ ಮನ್ನಾ ಮಾಡುವ ಪ್ರಕ್ರಿಯೆ ಆರಂಭಿಸಿರುವುದರಿಂದ ರೈತರನ್ನು ಬಂಧಿಸ ಬಾರದು. ಬಂಧನ ವಾರೆಂಟ್‌ಗೆ ಸಂಬಂಧಿ ಸಿದಂತೆ ಸಂಪೂರ್ಣವಾದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಸೂಚಿಸಿದರು. 

 ಈ ಸಂಬಂಧ ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಸಿಎಂ ಕುಮಾರಸ್ವಾಮಿ ಅವರು, ಸಾಲ ಮನ್ನಾ ವ್ಯಾಪ್ತಿಗೆ ಒಳಪಡುವ ರೈತರು ಆತಂಕ  ಪಡುವ ಅಗತ್ಯವಿಲ್ಲ ಎಂದಿದ್ದಾರೆ. ಸರ್ಕಾರದ ನಿರ್ದೇಶನ ಮೀರಿ ಎಕ್ಸಿಸ್ ಬ್ಯಾಂಕ್ ರೈತರಿಗೆ ಅರೆಸ್ಟ್ ವಾರೆಂಟ್  ಕಳುಹಿಸಿದ್ದರಿಂದ ಹೆದರಿ ತಲೆಮರೆಸಿಕೊಂಡಿದ್ದ ಏಣಗಿ ಗ್ರಾಮದ ರೈತರು ಮುಖ್ಯಮಂತ್ರಿ ಭರವಸೆ ಹಿನ್ನೆಲೆಯಲ್ಲಿ ಭಾನುವಾರ ತಮ್ಮ ಮನೆ ಸೇರಿದ್ದಾರೆ. ಸವದತ್ತಿ ಠಾಣೆ ಪೊಲೀಸರು ಶನಿವಾರ ಬೆಳಗ್ಗೆ ಸವದತ್ತಿ ತಾಲೂಕಿನ ಏಣಗಿ ಗ್ರಾಮದ ಭೀಮಪ್ಪ ಪೂಜೇರ, ಬಸವರಾಜ ಹುಬ್ಬಳ್ಳಿ, ಚನ್ನಮಲ್ಲಪ್ಪ ಕರಡಿಗುದ್ದಿ, ಯಲ್ಲಪ್ಪ ಪೂಜೇರ ಹಾಗೂ 2014 ರಲ್ಲಿ ಬ್ಯಾಂಕ್ ನೋಟಿಸ್ ನೀಡಿದ ವೇಳೆ ಕುಸಿದು ಬಿದ್ದು ನಂತರ ಮರಣ ಹೊಂದಿದ್ದ ಬಾಳಪ್ಪ ಕುರಬಗಟ್ಟಿ ಹೆಸರಿನಲ್ಲಿ ಅರೆಸ್ಟ್ ವಾರೆಂಟ್ ತೆಗೆದುಕೊಂಡು ಬಂದಿದ್ದರು. 

ಸುದ್ದಿ ತಿಳಿದ ರೈತರು ರೈತ ಸಂಘಟನೆ ಮುಖಂಡರಾದ ಎಫ್. ಎಸ್.ಸಿದ್ದನಗೌಡರ, ಮಹಾಂತೇಶ ಕಮತ, ಈರಣ್ಣ ಹುಬ್ಬಳ್ಳಿ ಬಳಿ ತಮ್ಮ ಅಳಲು ತೋಡಿಕೊಂಡು ನಂತರ ತಲೆ ಮರೆಸಿಕೊಂಡಿದ್ದರು. ಈಗ ಮುಖ್ಯಮಂತ್ರಿಗಳ ಭರವಸೆ ಬಳಿಕ ಮರಳಿ ಮನೆ ಸೇರಿದ್ದಾರೆ.

click me!