ರಾಜ್ಯದಿಂದ ಎಕ್ಸಿಸ್ ಬ್ಯಾಂಕ್ ಔಟ್?

By Web DeskFirst Published Nov 5, 2018, 7:14 AM IST
Highlights

ಎಕ್ಸಿಸ್ ಬ್ಯಾಂಕ್ ಗೆ ರಾಜ್ಯದಿಂದಲೇ ಗೇಟ್ ಪಾಸ್ ಕೊಡುವ ಬಗ್ಗೆ ಇದೀಗ ಗಂಭೀರ ಚಿಂತನೆ ನಡೆದಿದೆ. ರೈತ ಸಂಘಟನೆಗಳು  ಪ್ರತಿಭಟನೆ ನಡೆಸಲು ಚಿಂತನೆ ನಡೆಸಿವೆ. 

ಬೆಳಗಾವಿ : ರೈತರನ್ನು ಬಂಧಿಸಲು ನ್ಯಾಯಾಲಯದ ಮೂಲಕ ಬಂಧನ ವಾರಂಟ್ ಪಡೆದಿರುವ ಎಕ್ಸಿಸ್ ಬ್ಯಾಂಕ್ ವಿರುದ್ಧ ಉಗ್ರ ಹೋರಾಟ ನಡೆಸಲು ರೈತ ಪರ ಸಂಘಟನೆಗಳು ಮುಂದಾಗಿದ್ದು, ರೈತರ ವಿರುದ್ಧದ ನೋಟಿಸ್ ಹಿಂಪಡೆಯದಿ ದ್ದರೆ ರಾಜ್ಯಾದ್ಯಂತ ‘ಎಕ್ಸಿಸ್ ಬ್ಯಾಂಕ್ ಹಟಾವೋ’ ಚಳವಳಿ ನಡೆಸುವುದಾಗಿ ಎಚ್ಚರಿಕೆ ನೀಡಿವೆ. ಇದರ ಭಾಗವಾಗಿ ಸೋಮವಾರ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಎಕ್ಸಿಸ್ ಬ್ಯಾಂಕ್ ಶಾಖೆಗಳ ಮುಂದೆ ಪ್ರತಿಭಟನೆ ನಡೆಸಲು ತೀರ್ಮಾನಿಸಿವೆ. 

ರಾಜ್ಯದಲ್ಲಿ ಬ್ಯಾಂಕ್ ವ್ಯವಹಾರ ನಡೆಸಬೇಕಾದರೆ ರಾಜ್ಯದ ರೈತರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ರಾಜ್ಯದ ಮುಖ್ಯಮಂತ್ರಿಗಳ ಮನವಿಗೂ ಸ್ಪಂದಿಸದೆ ರೈತರನ್ನು ಬಂಧಿಸಲು ಮುಂದಾಗಿರುವ ಬ್ಯಾಂಕ್‌ನ ಉದ್ಧಟತನ ಸಹಿ ಸಲು ಸಾಧ್ಯವಿಲ್ಲ. ಹೀಗಾಗಿ ಸೋಮ ವಾರ ಎಲ್ಲಾ ಜಿಲ್ಲೆಗಳಲ್ಲೂ ಎಕ್ಸಿಸ್ ಬ್ಯಾಂಕ್ ಶಾಖೆಗಳ ಮುಂದೆ ಪ್ರತಿಭಟನೆ ನಡೆಸಿ ರೈತರ ವಿರುದ್ಧದ ಕ್ರಮವನ್ನು ಹಿಂಪಡೆಯುವಂತೆ ಒತ್ತಾಯ ಮಾಡಲಾಗುವುದು. ಒತ್ತಾಯಕ್ಕೆ ಮಣಿಯದಿದ್ದರೆ ರಾಜ್ಯಾದ್ಯಂತ ಎಕ್ಸಿಸ್ ಬ್ಯಾಂಕ್ ಹಟಾವೋ ಚಳವಳಿ ನಡೆಸಲಾ ಗುವುದು ಎಂದು ಸಂಘಟನೆಗಳು ಎಚ್ಚರಿಸಿವೆ. 

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಕೃಷಿ, ಬೆಳೆ ಸಾಲ ಮಾಡಿದ್ದ ಬೆಳಗಾವಿ ರೈತರ ಮೇಲಿನ ಎಕ್ಸಿಸ್ ಬ್ಯಾಂಕ್ ಕುತಂತ್ರ ಮತ್ತೊಂದು ಮಜಲಿಗೆ ಹೋಗಿ ಚೆಕ್ ಬೌನ್ಸ್ ಪ್ರಕರಣಗಳಲ್ಲಿ 180 ಕ್ಕೂ ಹೆಚ್ಚು ರೈತರ ವಿರುದ್ಧ ಬಂಧನ ವಾರಂಟ್ ಜಾರಿಯಾಗುವಂತೆ ಮಾಡಿದೆ. 

ಇಂತಹ ಪ್ರಕರಣವನ್ನು ರೈತ ಸಂಘಗಳು ಸಹಿಸುವುದಿಲ್ಲ. ನೀವು ಕರ್ನಾಟಕದ ಜನರ ಜತೆ ಸೌಜನ್ಯದಿಂದ ನಡೆದುಕೊಂಡರೆ ಮಾತ್ರ ಕರ್ನಾಟಕ ದಲ್ಲಿ ವ್ಯವಹರಿಸಲು ಅವಕಾಶ ನೀಡುತ್ತೇವೆ. ಇಲ್ಲದಿದ್ದರೆ ಕರ್ನಾಟಕ ಬಿಟ್ಟು ತೊಲಗುವಂತೆ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ವಿವಿಧ ರಾಷ್ಟ್ರೀಯ ಬ್ಯಾಂಕ್ ಹಾಗೂ ಸಣ್ಣ ಬ್ಯಾಂಕ್‌ಗಳ ಕಚೇರಿಗಳು ವಿವಿಧ ನಗರಗಳಲ್ಲಿವೆ. ಐಸಿಐಸಿಐ ಬ್ಯಾಂಕ್ ಪ್ರಧಾನ ಕಚೇರಿ ಮುಂಬೈನಲ್ಲಿದೆ. 

ಎಕ್ಸಿಸ್ ಬ್ಯಾಂಕ್ ಕೊಲ್ಕತ್ತಾ ಮೂಲಕ ವ್ಯವಹರಿಸುತ್ತಿದೆ. ಈ ರೀತಿ ಬ್ಯಾಂಕ್‌ಗಳು ಬೇರೆ ಬೇರೆ ನಗರಗಳಿಂದ ರೈತರ ಮೇಲೆ ಪ್ರಕರಣ ದಾಖಲಿಸಿ ಜೈಲಿಗೆ ಅಟ್ಟಲು ಪ್ರಯತ್ನಿಸಿದರೆ ಸಹಿಸಲು ಸಾಧ್ಯವಿಲ್ಲ. ಮುಖ್ಯಮಂತ್ರಿಗಳು ಸಾಲ ಮನ್ನಾ ಘೋಷಿಸಿ ಬ್ಯಾಂಕ್ ಗಳಿಂದ ಸಮಯಾವಕಾಶ ಕೇಳಿದ್ದಾರೆ. ಮುಖ್ಯಮಂತ್ರಿಗಳ ಮಾತಿಗೂ ಮೂರು ಕಾಸಿನ ಬೆಲೆ ನೀಡದ ಬ್ಯಾಂಕ್‌ಗಳು ನಮ್ಮ ರಾಜ್ಯಕ್ಕೆ ಅನಿವಾರ್ಯವೇ ಇಲ್ಲ ಎಂದು ಹೇಳಿದರು. 

ರಾಷ್ಟ್ರೀಯ ಮಟ್ಟದಲ್ಲಿ ಹೋರಾಟ: ಎಕ್ಸಿಸ್ ಬ್ಯಾಂಕ್ ಉದ್ಧಟತನದ ವಿರುದ್ಧ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು. ಜತೆಗೆ ನ.೩೦ರಂದು ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ರೈತರ ಸಮಾವೇಶದಲ್ಲೂ ಎಕ್ಸಿಸ್ ಬ್ಯಾಂಕ್ ವಿರುದ್ಧ ನಿರ್ಣಯ ಮಂಡಿಸಲಾ ಗುವುದು. ಈ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಹೋರಾಟ ನಡೆಸಲಾಗುವುದು. ಜತೆಗೆ ರಾಜ್ಯ ಸರ್ಕಾರವೂ ಸಹ ಸಂಪೂರ್ಣ ಸಾಲ ಮನ್ನಾ ಮಾಡಿ ಅಧಿಕೃತ ಆದೇಶ ಹೊರ ಡಿಸುವಂತೆ ಹೋರಾಟ ಮಾಡಲಾಗುವುದು ಎಂದರು.

ಬ್ಯಾಂಕ್ ಮುಚ್ಚಿಸುವ ಚಳವಳಿ: ಕರ್ನಾಟಕ ರಾಜ್ಯ ಕಬ್ಬು ಬೆಳಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಬ್ಯಾಂಕ್‌ಗಳು ರಾಜ್ಯದ ರೈತರ ಬಂಧನಕ್ಕೆ ಮುಂದಾದರೆ ರಾಜ್ಯಾದ್ಯಂತ ಬ್ಯಾಂಕ್  ಮುಚ್ಚಿಸುವ ಮೂಲಕ ಬ್ಯಾಂಕ್‌ಗಳಿಗೆ ಎಚ್ಚರಿಕೆ ನೀಡಲಾಗುವುದು. ಒಂದು ವಾರದಲ್ಲಿ ರಾಜ್ಯ ಸಮಿತಿ ಸಭೆ ನಡೆಸಿ ರಾಜ್ಯ ಸರ್ಕಾರ ಹಾಗೂ ಬ್ಯಾಂಕ್ ವಿರುದ್ಧದ ಹೋರಾಟದ ಬಗ್ಗೆ ರೂಪರೇಷೆ ಸಿದ್ಧಪಡಿಸಿಕೊಳ್ಳಲಾಗುವುದು ಎಂದು ಹೇಳಿದರು. 

ವಿಧಾನಸೌಧ ಮುತ್ತಿಗೆ ಎಚ್ಚರಿಕೆ: ರಾಜ್ಯ ಸರ್ಕಾರವು ಬಾಯಿಮಾತಿಗೆ ಸಾಲ ಮನ್ನಾ ಘೋಷಣೆ ಮಾಡಿರುವುದರಿಂದ ರೈತರಿಗೆ ಈ ಸಮಸ್ಯೆ ಉಂಟಾಗಿದೆ. ಹೀಗಾಗಿ ಕೂಡಲೇ ಸರ್ಕಾರವು ಅಧಿಕೃತ ಸಾಲ ಮನ್ನಾ ಆದೇಶ ಹೊರಡಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ವಿಧಾನಸೌಧ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಸಂಘಗಳು ಎಚ್ಚರಿಕೆ ನೀಡಿವೆ. ರೈತ ಮುಖಂಡ ಕುರುಬೂರು ಶಾಂತಕುಮಾರ್ ಮಾತನಾಡಿ, ಸರ್ಕಾರವು ಬಾಯಿಮಾತಿನಲ್ಲಿ ಸಾಲ ಮನ್ನಾ ಮಾಡಿದ್ದೇವೆ ಎಂದು ಹೇಳುತ್ತಿದೆ ಎಂದರು.

click me!