ಲಾಕ್‌ಡೌನ್ ಮುಂದುವರಿಕೆ ಬೇಡಿಕೆಗೆ ಸಿಎಂ ನಕಾರ| ವಿಸ್ತರಣೆ ಪ್ರಸ್ತಾಪ ಮುಂದಿಡಬೇಡಿ| ಈಗಿನ ಲಾಕ್‌ಡೌನ್ ಅವಧಿಯನ್ನೇ ಸಮರ್ಪಕವಾಗಿ ಬಳಸಿಕೊಳ್ಳಿ| ಸೋಂಕು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ| ಅಧಿಕಾರಿಗಳು, ಸಚಿವರಿಗೆ ಮುಖ್ಯಮಂತ್ರಿ ಬಿಎಸ್‌ವೈ ತಾಕೀತು
ಬೆಂಗಳೂರು(ಜು.18): ಲಾಕ್‌ಡೌನ್ ಮುಂದುವರೆಯುವುದಾ ಎಂಬ ಆಶಂಕೆಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪೂರ್ಣ ವಿರಾಮ ಹಾಕಿದ್ದಾರೆ. ‘ಲಾಕ್‌ಡೌನ್ ಮುಂದುವರೆಯುವುದಿಲ್ಲ’ ಎಂಬ ಸ್ಪಷ್ಟಸಂದೇಶವನ್ನು ನೀಡಿದ್ದಾರೆ.
ಶುಕ್ರವಾರ ಗೃಹ ಕಚೇರಿ ಕೃಷ್ಣಾದಲ್ಲಿ ಬೆಂಗಳೂರಿನ ಎಂಟು ಮಂದಿ ವಲಯ ಉಸ್ತುವಾರಿ ಸಚಿವರು, ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಲಾಕ್‌ಡೌನ್ ಮುಂದುವರೆಸುವ ಬೇಡಿಕೆಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.
ಸಾವಿನಲ್ಲಿ ಮತ್ತೊಂದು ದಾಖಲೆ ಬರೆದ ರಾಜಧಾನಿ: ಕೊರೋನಾ ಅಟ್ಟಹಾಸಕ್ಕೆ 75 ಸಾವು!
‘ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ಮತ್ತೆ ಲಾಕ್‌ಡೌನ್ ಮುಂದುವರೆಸುವುದರಲ್ಲಿ ಅರ್ಥವಿಲ್ಲ. ಹಾಲಿ ಚಾಲ್ತಿಯಲ್ಲಿರುವ ಲಾಕ್‌ಡೌನ್ ಅವಧಿ ಬಳಸಿಕೊಂಡು ಕೊರೋನಾ ನಿಯಂತ್ರಣ ಹಾಗೂ ಚಿಕಿತ್ಸೆ ವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕು’ ಎಂದು ವಲಯ ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಈ ಮೂಲಕ ಜುಲೈ 14 ರಂದು ರಾತ್ರಿ 8 ಗಂಟೆಯಿಂದ ಜಾರಿಯಲ್ಲಿರುವ ಏಳು ದಿನಗಳ ಲಾಕ್‌ಡೌನ್ ಬಹುತೇಕ ಜುಲೈ 22 ರಂದು ಬೆಳಗ್ಗೆ 5 ಗಂಟೆಗೆ ಅಂತ್ಯಗೊಳ್ಳಲಿದೆ ಎಂದು ಸಂದೇಶ ರವಾನಿಸಿದರು.
ಸಚಿವರು, ಬಿಬಿಎಂಪಿ ಬೇಡಿಕೆ: ಬಿಬಿಎಂಪಿ ಆಯುಕ್ತರು, ಬಿಬಿಎಂಪಿ ಮೇಯರ್ ಹಾಗೂ ಹಲವರು ಸಚಿವರು ಲಾಕ್‌ಡೌನ್ ಮುಂದುವರೆಸಬೇಕಾದ ಅನಿವಾರ್ಯತೆ ಬಗ್ಗೆ ಮೊದಲೇ ವರದಿ ನೀಡಿದ್ದರು. ಶುಕ್ರವಾರದ ಸಭೆಯಲ್ಲಿ ಕೆಲ ಸಚಿವರು ಈ ವಿಚಾರವನ್ನು ಪ್ರಸ್ತಾಪಿಸಿ ಬೆಂಗಳೂರು ನಗರದಲ್ಲಿ ಸೋಂಕು ತೀವ್ರಗೊಳ್ಳುತ್ತಿದ್ದು 7 ದಿನಗಳ ಲಾಕ್‌ಡೌನ್‌ನಿಂದ ಯಾವುದೇ ಪ್ರಯೋಜನವಿಲ್ಲ. ಸೋಂಕಿನ ವೇಗಕ್ಕೆ ತಡೆ ಹಾಕಲು ಕನಿಷ್ಠ ಇನ್ನೂ 7 ದಿನ ಲಾಕ್ ಡೌನ್ ವಿಸ್ತರಿಸಬೇಕು ಎಂದು ಸಲಹೆ ನೀಡಿದರು ಎನ್ನಲಾಗಿದೆ.
ಸಲಹೆಯನ್ನು ಆರಂಭದಲ್ಲೇ ತಿರಸ್ಕರಿಸಿದ ಯಡಿಯೂರಪ್ಪ, ‘ಲಾಕ್‌ಡೌನ್ ವಿಷಯ ಬಿಟ್ಟು ಬೇರೆ ಸಮಸ್ಯೆಗಳನ್ನು ಬಗೆಹರಿಸುವತ್ತ ಗಮನ ನೀಡಿ. ಮೊದಲು ಈಗ ಜಾರಿಯಾಗಿರುವ ಲಾಕ್‌ಡೌನ್ ಕಟ್ಟುನಿಟ್ಟಾಗಿ ಪಾಲಿಸುವಂತೆ ಮಾಡಿ. ಈಗಾಗಲೇ ರಾಜ್ಯದಲ್ಲಿ ಆರ್ಥಿಕ ಸ್ಥಿತಿ ಕುಸಿದಿದೆ. ಲಾಕ್‌ಡೌನ್ ಮುಂದುವರೆಸಿದರೆ ಜನರಿಗೆ ಮತ್ತಷ್ಟುಆರ್ಥಿಕ ಸಮಸ್ಯೆಗಳು ಉಂಟಾಗುತ್ತವೆ. ಹೀಗಾಗಿ ಸದ್ಯಕ್ಕೆ ಇಂತಹ ಪ್ರಸ್ತಾಪಗಳನ್ನು ತರಬೇಡಿ’ ಎಂದು ಸೂಚಿಸಿದರು ಎಂದು ತಿಳಿದುಬಂದಿದೆ.
ಕೊರೊನಾ ನಿರ್ವಹಣೆಗೆ ಸಿಎಂ 6 ಖಡಕ್ ಸೂತ್ರಗಳು: ಸೂಚನೆ ಪಾಲಿಸಬೇಕು ಅಷ್ಟೇ.!
ಲಾಕ್‌ಡೌನ್ ಜಾರಿ ಇಲ್ಲ
ಬೆಂಗಳೂರು ಹಾಗೂ ಗ್ರಾಮಾಂತರ ಜಿಲ್ಲೆಯಲ್ಲಿ ಲಾಕ್‌ಡೌನ್ ಮುಂದುವರೆಯುವುದಿಲ್ಲ. ಕೊರೋನಾ ನಿಯಂತ್ರಣಕ್ಕೆ ಲಾಕ್‌ಡೌನ್ ಪರಿಹಾರವಲ್ಲ. ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಸೂಕ್ತ ಸಿದ್ಧತೆಗೆ ಹಾಗೂ ನಿಟ್ಟುಸಿರು ತೆಗೆದುಕೊಳ್ಳಲು ಲಾಕ್‌ಡೌನ್ ಮಾಡಲಾಗಿದೆ. ಆದರೆ ವಿಸ್ತರಣೆ ಕೊರೋನಾ ಸಮಸ್ಯೆಗೆ ಪರಿಹಾರವಲ್ಲ. ಹೀಗಾಗಿ ವಿಸ್ತರಣೆ ಬೇಡ ಎಂದು ಯಡಿಯೂರಪ್ಪ ತಿಳಿಸಿದ್ದಾರೆ. ಅವ ನಿರ್ಧಾರಕ್ಕೆ ನಮ್ಮ ಸಹಮತ ಇದೆ.
- ಆರ್. ಅಶೋಕ, ಸಚಿವ