* ಶಕ್ತಿಶಾಲಿ ಬ್ಲೂಟೂತ್ ಬಳಸಿ ಹೈಟೆಕ್ ಅಕ್ರಮ ಬಳಸುವ ಬಗ್ಗೆ ಮಂಜುನಾಥ್ ತರಬೇತಿ ನೀಡುತ್ತಿದ್ದ
* ಪಿಡಬ್ಲ್ಯುಡಿ ಗೋಲ್ಮಾಲಲ್ಲಿ ಜಾಮೀನು ಪಡೆದು ಜೈಲಿಂದ ಹೊರಬಂದು ಪಿಎಸ್‌ಐ ಹಗರಣದಲ್ಲಿ ಭಾಗಿ ಶಂಕೆ
* ಅತ್ಯಧಿಕ ಸಾಮರ್ಥ್ಯದ ಬ್ಲೂಟೂತ್
ಗಿರೀಶ್ ಮಾದೇನಹಳ್ಳಿ/ಶೇಷಮೂರ್ತಿ ಅವಧಾನಿ
ಬೆಂಗಳೂರು/ಕಲಬುರಗಿ(ಏ.28): ರಾಜ್ಯ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್(PSI Recruitment Scam) ಹಾಗೂ ಲೋಕೋಪಯೋಗಿ ಇಲಾಖೆಯ (PWD) ಕಿರಿಯ ಎಂಜಿನಿಯರ್ ನೇಮಕಾತಿಗಳ ಪರೀಕ್ಷೆಯ ಭಾನಗಡಿಯಲ್ಲಿ ‘ಬ್ಲೂ ಟೂತ್’ ಬಳಕೆಗೆ ಕಲಬುರಗಿ ಜಿಲ್ಲೆಯ ನೀರಾವರಿ ಇಲಾಖೆಯ ಸಹಾಯಕ ಎಂಜಿನಿಯರ್‌ವೊಬ್ಬರು(Assistant Engineer) ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಕಲಬುರಗಿ(Kalaburagi) ಜಿಲ್ಲೆಯ ಅಳಂದ ತಾಲೂಕಿನ ನೀರಾವರಿ ಇಲಾಖೆಯ ಎಇ ಮಂಜುನಾಥ್ ಮೇಳಕುಂದಿ ಮೇಲೆ ಆರೋಪ ಕೇಳಿಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಬಂಧಿತನಾಗಿರುವ ಕಲಬುರಗಿಯ ಅಫ್ಜಲಪುರ ತಾಲೂಕಿನ ಕಾಂಗ್ರೆಸ್(Congress) ಮುಖಂಡ ರುದ್ರಗೌಡ ಪಾಟೀಲ್‌ನ ತಂಡದಲ್ಲಿದ್ದ ಈತ ವಿದ್ಯುನ್ಮಾನ ಉಪಕರಣಗಳನ್ನು ನಿಖರವಾಗಿ, ಕರಾರುವಾಕ್ಕಾಗಿ ಬಳಕೆ ಮಾಡುವಲ್ಲಿ ಬಹಳ ನಿಸ್ಸೀಮ ಎಂಬುದು ತನಿಖೆಯಿಂದ ಗೊತ್ತಾಗಿದೆ.
PSI Recruitment Scam: ಪಿಎಸ್‌ಐ ಪರೀಕ್ಷೆ ಅಕ್ರಮ: ಎಡಿಜಿಪಿ ಅಮೃತ್ ಎತ್ತಂಗಡಿ
ಹೈದರಾಬಾದ್(Hyderabad), ಪುಣೆ(Pune), ಸೊಲ್ಲಾಪುರಗಳಿಗೆ(Solapur) ಹೋಗಿ ರುದ್ರಗೌಡ ಇಂತಹ ಶಕ್ತಿಶಾಲಿ ಉಪಕರಣಗಳನ್ನು ತಂಡಕ್ಕೆ ಪೂರೈಸುತ್ತಿದ್ದ. ಇವುಗಳನ್ನೆಲ್ಲ ಹೇಗೆ ಬಳಸುವುದು ಎಂಬುದರ ಬಗ್ಗೆ ಮಂಜುನಾಥ ತರಬೇತಿ ನೀಡುತ್ತಿದ್ದ. ಪಿಎಸ್‌ಐ ನೇಮಕಾತಿ ಪರೀಕ್ಷಾ ಅಕ್ರಮ ಬೆಳಕಿಗೆ ಬಂದ ನಂತರ ತಲೆಮರೆಸಿಕೊಂಡಿರುವ ಮಂಜುನಾಥ್ ಮೇಳಕುಂದಿ, ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ವಜಾಗೊಳಿಸಿದೆ. ಇಂತಹ ಕೆಲಸಗಳಿಗೆ ಮಂಜುನಾಥನಿಗೆ ಅವರ ಸಹೋದರನ ಸಾಥ್ ಕೂಡಾ ಇತ್ತು ಎಂಬುದು ತನಿಖೆಯಲ್ಲಿ ಗೊತ್ತಾಗಿದ್ದು ಆತನೂ ಈಗ ಪರಾರಿಯಾಗಿದ್ದಾನೆ.
5 ತಿಂಗಳ ಹಿಂದೆ ನಡೆದಿದ್ದ ಪಿಡಬ್ಲ್ಯುಡಿ ಕಿರಿಯ ಎಂಜಿನಿಯರ್‌ಗಳ ನೇಮಕಾತಿ ಪ್ರಕರಣದಲ್ಲಿ ಆನ್‌ಲೈನ್ ಮೂಲಕ .9 ಸಾವಿರ ಮೌಲ್ಯದ ಬ್ಲೂಟೂತ್(Bluetooth) ಖರೀದಿಸಿ ಅಭ್ಯರ್ಥಿಗೆ ಆತ ಕೊಟ್ಟಿದ್ದ. ಈ ಪ್ರಕರಣದಲ್ಲಿ ಬಂಧಿತನಾಗಿ ಪರಪ್ಪನ ಅಗ್ರಹಾರದ ಕಾರಾಗೃಹ ಸೇರಿದ್ದ ಮಂಜುನಾಥ್, ಆನಂತರ ಜಾಮೀನು ಪಡೆದು ಹೊರ ಬಂದು ಮತ್ತೆ ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ರುದ್ರೇಗೌಡ ಪಾಟೀಲ್‌ಗೆ ಆತ ಸಾಥ್ ಕೊಟ್ಟಿದ್ದ ಎಂದು ಉನ್ನತ ಪೊಲೀಸ್ ಮೂಲಗಳು ‘ಕನ್ನಡಪ್ರಭ’ಕ್ಕೆ ಹೇಳಿವೆ.
ರೈಲ್ವೆ ಇಲಾಖೆಯ ನೇಮಕಾತಿ: ನಕಲಿ ನೋಟಿಫಿಕೇಶನ್..!
ಪೊಲೀಸರ ಮಗ:
ಕಲಬುರಗಿ ಜಿಲ್ಲೆಯ ನಿವೃತ್ತ ಸಹಾಯಕ ಸಬ್ ಇನ್ಸ್‌ಪೆಕ್ಟರ್‌ನ ಏಕೈಕ ಪುತ್ರ ಮಂಜುನಾಥ್ ಮೇಳಕುಂದಿ, ಐದಾರು ವರ್ಷಗಳ ಹಿಂದಷ್ಟೇ ನೀರಾವರಿ ಇಲಾಖೆಯ ಸಹಾಯಕ ಎಂಜಿನಿಯರ್ ಹುದ್ದೆಗೆ ಆಯ್ಕೆಯಾಗಿದ್ದು ಪ್ರಸುತ್ತ ಆಳಂದ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾನೆ. ಹಣದಾಸೆಗೆ ಬಿದ್ದ ಮಂಜುನಾಥ್, ಸರ್ಕಾರಿ ಉದ್ಯೋಗಾಂಕ್ಷಿಗಳಿಗೆ ಕನಸು ನನಸುಗೊಳಿಸುವುದಾಗಿ ನಂಬಿಸಿ ಹಣ ಸಂಪಾದಿಸುವ ದಂಧೆಗಿಳಿದಿದ್ದ. ಅಂತೆಯೇ ನೇಮಕಾತಿ ಪರೀಕ್ಷಾ ಕೇಂದ್ರಗಳಲ್ಲಿ ಪ್ರಶ್ನೆ ಪತ್ರಿಕೆಯ ರಹಸ್ಯವಾಗಿ ಪೋಟೋ ಕಾಫಿ ತೆಗೆದು ಬಳಿಕ ಅದಕ್ಕೆ ಉತ್ತರ ಸಿದ್ಧಪಡಿಸಿ ಅಭ್ಯರ್ಥಿಗಳಿಗೆ ಮೇಳಕುಂದಿ ಪೂರೈಸುತ್ತಿದ್ದ. ಹುದ್ದೆ ಆಧರಿಸಿ ಆತ ಬೆಲೆ ನಿಗದಿಪಡಿಸುತ್ತಿದ್ದ. ಪಿಡಬ್ಲ್ಯುಡಿ ಕಿರಿಯ ಎಂಜಿನಿಯರ್‌ಗಳ ನೇಮಕಾತಿ ಅಕ್ರಮದಲ್ಲಿ ಬಂಧಿತ ಅಭ್ಯರ್ಥಿ ವೀರಣ್ಣಗೌಡ ಜತೆ 50 ಲಕ್ಷಕ್ಕೆ ಡೀಲ್ ಆಗಿತ್ತು. ಆಗ ಕೆಲಸ ಸಿಕ್ಕಿದ ಬಳಿಕ ಹಣ ಕೊಡುವುದಾಗಿ ಹೇಳಿದ ಅಭ್ಯರ್ಥಿಯಿಂದ ಮುಂಗಡವಾಗಿ ಎರಡು ಖಾಲಿ ಚೆಕ್‌ಗಳು ಹಾಗೂ ಅಸಲಿ ಅಂಕಪಟ್ಟಿಗಳನ್ನು ಆತ ಪಡೆದಿದ್ದ ಎನ್ನಲಾಗಿದೆ.
ಅತ್ಯಧಿಕ ಸಾಮರ್ಥ್ಯದ ಬ್ಲೂಟೂತ್‌ಗಳಿವು
ಸಾಮಾನ್ಯ ಬ್ಲೂಟೂತ್‌ಗಳ ರೇಂಜ್ ತುಂಬ ಕಮ್ಮಿ. ಆದರೆ ಪಿಎಸ್‌ಐ ಹಾಗೂ ಪಿಡಬ್ಲ್ಯುಡಿ ನೇಮಕಾತಿ ಅಕ್ರಮದಲ್ಲಿ ಬಳಕೆಯಾಗಿದೆ ಎನ್ನಲಾಗಿರುವ ಬ್ಲೂಟೂತ್‌ಗಳು 200ರಿಂದ 400 ಮೀ. ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದ್ದವು. ಇವುಗಳ ಮೂಲಕ ಕರೆ ಸ್ವೀಕರಿಸಿ ಮಾತನಾಡಬಹುದೇ ಹೊರತು ಪ್ರತಿಯಾಗಿ ಅಭ್ಯರ್ಥಿ ಮಾತನಾಡಲು ಸಾಧ್ಯವಿರಲಿಲ್ಲ. ಪರೀಕ್ಷಾ ಕೇಂದ್ರ ಹೊರಗೆ ನಿಂತು ಉತ್ತರಗಳನ್ನು ವಾಕಿಟಾಕಿ ಮೂಲಕ ಅಭ್ಯರ್ಥಿಗಳಿಗೆ ಮಂಜುನಾಥ್ ಮೇಳಕುಂದಿ ಸಹಚರರು ರವಾನಿಸುತ್ತಿದ್ದರು. ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ ಮೊಬೈಲ್ ಬಳಕೆಗೆ ಜಾಮರ್ ಅಳವಡಿಸಿದ್ದರಿಂದ ಬ್ಲೂಟೂತ್‌ಗೆ ವಾಕಿಟಾಕಿ ಸಂಪರ್ಕ ಕಲ್ಪಿಸಿ ಆರೋಪಿಗಳು ಬಳಸಿದ್ದರು. ಅಕ್ರಮದ ಒಂದು ಸಣ್ಣ ಸುಳಿವೂ ಹೊರಗಡೆ ಹೋಗದಂತೆ ನೋಡಿಕೊಳ್ಳುತ್ತಿದ್ದರು. ಇದೊಂದು ಸಂಘಟಿತ ಅಪರಾಧ ಕೃತ್ಯ ಎಂದು ಸಿಐಡಿ(CID) ಅಭಿಪ್ರಾಯಪಟ್ಟಿದೆ.