ಚುನಾವಣಾ ಫಲಿತಾಂಶಕ್ಕೆ ಎರಡು ತಿಂಗಳು: ಇನ್ನೂ ವಿಪಕ್ಷ ನಾಯಕ ಇಲ್ಲ!

Published : Jul 13, 2023, 07:04 AM IST
ಚುನಾವಣಾ ಫಲಿತಾಂಶಕ್ಕೆ ಎರಡು ತಿಂಗಳು: ಇನ್ನೂ ವಿಪಕ್ಷ ನಾಯಕ ಇಲ್ಲ!

ಸಾರಾಂಶ

ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದು ಗುರುವಾರಕ್ಕೆ ಎರಡು ತಿಂಗಳಾಗಲಿದೆ. ಆದರೆ, ಇದುವರೆಗೂ ಪ್ರಮುಖ ಪ್ರತಿಪಕ್ಷವಾಗಿರುವ ಬಿಜೆಪಿಗೆ ಶಾಸಕಾಂಗ ಪಕ್ಷದ ನಾಯಕನ ನೇಮಕವೇ ಆಗಿಲ್ಲ.

ಬೆಂಗಳೂರು )ಜು.13):  ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದು ಗುರುವಾರಕ್ಕೆ ಎರಡು ತಿಂಗಳಾಗಲಿದೆ. ಆದರೆ, ಇದುವರೆಗೂ ಪ್ರಮುಖ ಪ್ರತಿಪಕ್ಷವಾಗಿರುವ ಬಿಜೆಪಿಗೆ ಶಾಸಕಾಂಗ ಪಕ್ಷದ ನಾಯಕನ ನೇಮಕವೇ ಆಗಿಲ್ಲ.

ಇದರ ನಡುವೆಯೇ ವಿಧಾನಮಂಡಲದ ಅಧಿವೇಶನ ಆರಂಭಗೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಬಜೆಟ್‌ ಕೂಡ ಮಂಡನೆಯಾಗಿದೆ. ಅಧಿವೇಶನ ಎರಡನೇ ವಾರ ಮುಗಿಸಿ ಮೂರನೇ ವಾರಕ್ಕೆ ಕಾಲಿಡುವ ದಿನವೂ ಸಮೀಪಿಸಿದೆ. ಆದರೆ, ಬಿಜೆಪಿ ಪಾಳೆಯದಲ್ಲಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಬಗ್ಗೆ ಸುಳಿವೇ ಇಲ್ಲದಂತಾಗಿದೆ.

ಬಿಜೆಪಿಗೆ ವಿರೋಧ ಪಕ್ಷದ ನಾಯಕರು ಎಲ್ಲಿದ್ದಾರೆ ?: ಪ್ರಿಯಾಂಕ್ ಖರ್ಗೆ ಲೇವಡಿ

ಪಕ್ಷದ ವರಿಷ್ಠರು ಉದ್ದೇಶಪೂರ್ವಕವಾಗಿಯೇ ನೇಮಕ ಪ್ರಕ್ರಿಯೆಯನ್ನು ವಿಳಂಬ ಮಾಡುತ್ತಿದ್ದಾರೆಯೇ ಎಂಬ ಅನುಮಾನವೂ ರಾಜ್ಯ ನಾಯಕರನ್ನು ಕಾಡುತ್ತಿದೆ. ಆದರೆ, ಆ ಬಗ್ಗೆ ಬಹಿರಂಗವಾಗಿ ಏನನ್ನೂ ಮಾತನಾಡದ ಸ್ಥಿತಿಯಲ್ಲಿದ್ದಾರೆ. ಶೀಘ್ರ ನೇಮಕವಾಗಲಿದೆ ಎಂಬ ಹೇಳಿಕೆಯನ್ನೇ ಮತ್ತೆ ಮತ್ತೆ ಹೇಳಿ ಸಾಗ ಹಾಕುತ್ತಿದ್ದಾರೆ. ಮಾಧ್ಯಮ ಪ್ರತಿನಿಧಿಗಳಿಂದ ಈ ವಿಷಯ ಪ್ರಸ್ತಾಪವಾದ ಕೂಡಲೇ ರಾಜ್ಯ ಬಿಜೆಪಿ ನಾಯಕರು ಅದರಲ್ಲೂ ವಿಧಾನಮಂಡಲದ ಸದಸ್ಯರು ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.

ಪರೋಕ್ಷ ವಿಪಕ್ಷ ನಾಯಕರು!:

ವಿಧಾನಮಂಡಲದ ಉಭಯ ಸದನಗಳಲ್ಲೂ ಬಿಜೆಪಿ ಪ್ರಮುಖ ಪ್ರತಿಪಕ್ಷವಾಗಿದ್ದರೂ ಹೆಚ್ಚೂ ಕಡಮೆ ಎರಡು ವಾರಗಳ ಕಾಲ ನಾಯಕರಿಲ್ಲದೇ ಪಕ್ಷದ ಶಾಸಕರು ಕಲಾಪದಲ್ಲಿ ಭಾಗಿಯಾಗಿದ್ದಾರೆ. ಕಳೆದ ಬಾರಿ ಶಾಸಕಾಂಗ ಪಕ್ಷದ ನಾಯಕರಾಗಿದ್ದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಈಗ ಪರೋಕ್ಷವಾಗಿ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕನ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಅದೇ ರೀತಿ ವಿಧಾನಪರಿಷತ್ತಿನಲ್ಲಿ ಕಳೆದ ಬಾರಿ ಸಭಾನಾಯಕರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಅವರು ಪ್ರತಿಪಕ್ಷ ನಾಯಕನ ಪಾತ್ರವನ್ನು ಅನಧಿಕೃತವಾಗಿ ನಿರ್ವಹಿಸುತ್ತಿದ್ದಾರೆ.

ಆದರೆ, ಕಳೆದ ಎರಡು ವಾರಗಳಿಂದ ಬಿಜೆಪಿ ಶಾಸಕರು ಮಾತ್ರ ವಿಧಾನಮಂಡಲದಲ್ಲಿ ಅದರಲ್ಲೂ ವಿಶೇಷವಾಗಿ ವಿಧಾನಸಭೆಯಲ್ಲಿ ತೀವ್ರ ಮುಜುಗರವನ್ನಂತೂ ಅನುಭವಿಸುತ್ತಿದ್ದಾರೆ. ಪ್ರತಿಪಕ್ಷದ ನಾಯಕನ ಆಯ್ಕೆ ವಿಳಂಬವಾಗುತ್ತಿರುವ ಬಗ್ಗೆ ಆಡಳಿತಾರೂಢ ಕಾಂಗ್ರೆಸ್‌ನ ನಾಯಕರು ಆಗಾಗ ಬಿಜೆಪಿ ಶಾಸಕರಿಗೆ ಟೀಕೆ ಟಿಪ್ಪಣಿ ಮಾಡುತ್ತಲೇ ಇರುತ್ತಾರೆ. ಅದಕ್ಕೆ ಬಿಜೆಪಿ ಶಾಸಕರು ಪ್ರಯಾಸದಿಂದ ತಿರುಗೇಟು ನೀಡುವ ಪ್ರಯತ್ನ ಮಾಡಿದರೂ ಇರಿಸು ಮುರಿಸು ಉಂಟಾಗುವುದು ಮುಂದುವರೆಯುತ್ತಲೇ ಇದೆ.

ಆಕಾಂಕ್ಷಿ ಶಾಸಕರಿಗೆ ಸುಗ್ಗಿ:

ಒಂದಂತೂ ಸ್ಪಷ್ಟ. ಉಭಯ ಸದನಗಳಲ್ಲೂ ಪ್ರತಿಪಕ್ಷದ ನಾಯಕರ ಆಯ್ಕೆ ಮಾಡದೇ ಇರುವುದರಿಂದ ಬಿಜೆಪಿಯಲ್ಲಿನ ಆಕಾಂಕ್ಷಿ ಶಾಸಕರು ಪೈಪೋಟಿಯಿಂದ ಕಲಾಪದಲ್ಲಿ ಭಾಗಿಯಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಮೂಲಕ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿರುವುದು ಕಂಡು ಬರುತ್ತಿದೆ.

 

ವಿಪಕ್ಷ ನಾಯಕನಿಲ್ಲದೇ ಬಜೆಟ್‌ ಮಂಡನೆ, ಬಿಜೆಪಿಯವರಿಗೆ ನಾಚಿಕೆಗೇಡಿನ ಸಂಗತಿ: ಎಚ್‌.ವಿಶ್ವನಾಥ್‌

ಚುನಾವಣೆಯ ಫಲಿತಾಂಶ ಹೊರಬಿದ್ದ ಬಳಿಕ ಆರಂಭದಲ್ಲಿ ಸರ್ಕಾರ ರಚನೆಯಾದ ಬಳಿಕ ಬಿಜೆಪಿ ತನ್ನ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಮಾಡಲಿದೆ ಎನ್ನಲಾಗಿತ್ತು. ಬಳಿಕ ಸರ್ಕಾರ ರಚನೆಯಾಯಿತು. ನೂತನ ಶಾಸಕರ ಪ್ರಮಾಣವಚನ ಹಾಗೂ ಸ್ಪೀಕರ್‌ ಆಯ್ಕೆಯಾಗಿ ಅಧಿವೇಶನ ಕರೆಯುವಾಗ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಎಂಬ ಮಾತು ತೇಲಿಬಂತು. ಅದೂ ಹುಸಿಯಾಯಿತು. ನಂತರ ಜಂಟಿ ಅಧಿವೇಶನ ಆರಂಭವಾಗುವ ಹೊತ್ತಿಗೆ ನೇಮಕ ಆಗಿಯೇ ಆಗುತ್ತದೆ ಎಂಬ ಮಾತು ಬಿಜೆಪಿ ನಾಯಕರಿಂದ ಬಲವಾಗಿ ಕೇಳಿಬಂತು. ಈಗ ಅಧಿವೇಶನ ಆರಂಭವಾಗಿ ಎರಡು ವಾರ ಮುಗಿಯುತ್ತ ಬಂದಿದೆ. ಶಾಸಕಾಂಗ ಪಕ್ಷದ ನೇಮಕದ ಬಗ್ಗೆ ಚರ್ಚೆಯೇ ಸ್ಥಗಿತಗೊಂಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್