ಉಂಡೆ ಕೊಬ್ಬರಿಗೆ 1,250 ರು. ಪ್ರೋತ್ಸಾಹ ಧನ: ಸಚಿವ ಶಿವಾನಂದ ಪಾಟೀಲ್

By Kannadaprabha NewsFirst Published Jul 13, 2023, 6:26 AM IST
Highlights

ಕೇಂದ್ರ ಸರ್ಕಾರ ನಿಗದಿಪಡಿಸಿರುವ ಬೆಂಬಲ ಬೆಲೆಯಡಿ ಖರೀದಿಸುವ ಪ್ರತಿಕ್ವಿಂಟಲ್‌ ಉಂಡೆ ಕೊಬ್ಬರಿಗೆ 1,250 ರು. ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದು ಕೃಷಿ ಮಾರುಕಟ್ಟೆಸಚಿವ ಶಿವಾನಂದ ಪಾಟೀಲ್‌ ಹೇಳಿದ್ದಾರೆ.

ವಿಧಾನಸಭೆ (ಜು.13) : ಕೇಂದ್ರ ಸರ್ಕಾರ ನಿಗದಿಪಡಿಸಿರುವ ಬೆಂಬಲ ಬೆಲೆಯಡಿ ಖರೀದಿಸುವ ಪ್ರತಿಕ್ವಿಂಟಲ್‌ ಉಂಡೆ ಕೊಬ್ಬರಿಗೆ 1,250 ರು. ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದು ಕೃಷಿ ಮಾರುಕಟ್ಟೆಸಚಿವ ಶಿವಾನಂದ ಪಾಟೀಲ್‌ ಹೇಳಿದ್ದಾರೆ.

ಬುಧವಾರ ಸದನದಲ್ಲಿ ಕೊಬ್ಬರಿ ಬೆಲೆ ಕುಸಿತ ಕುರಿತ ಚರ್ಚೆಗೆ ಉತ್ತರ ನೀಡಿದ ಅವರು, ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಯಾವುದೇ ಸರ್ಕಾರವು 1250 ರು. ಪ್ರೋತ್ಸಾಹ ಧನ ಕೊಟ್ಟಿಲ್ಲ. 1 ಸಾವಿರ ರು. ವರೆಗೆ ನೀಡಲಾಗಿದ್ದು, ಇದೇ ಮೊದಲ ಬಾರಿಗೆ 1250 ರು. ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಈ ಮೊದಲು ಬೆಂಬಲ ಬೆಲೆ ಯೋಜನೆಯಡಿ ಕೊಬ್ಬರಿ ಮಾರಾಟ ಮಾಡಿದವರಿಗೆ ಇದು ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕೇಂದ್ರ ಸರ್ಕಾರವು ಪ್ರತಿ ಕ್ವಿಂಟಲ್‌ ಉಂಡೆ ಕೊಬ್ಬರಿಗೆ 11,750 ರು. ಬೆಂಬಲ ಬೆಲೆ ನಿಗದಿಗೊಳಿಸಿದೆ. ಇದರ ಜತೆಗೆ ರಾಜ್ಯ ಸರ್ಕಾರ 1,250 ರು. ಪ್ರೋತ್ಸಾಹ ಧನ ನೀಡಲಿದೆ. ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಲ್‌ಗೆ 16,500 ರು.ವರೆಗೆ ಹೆಚ್ಚಿಸಬೇಕು ಮತ್ತು ಉತ್ಪಾದನೆಯಲ್ಲಿ ಶೇ.25ರಷ್ಟುಮಾತ್ರ ಖರೀದಿ ಮಾಡಲಾಗುತ್ತಿದ್ದು, ಅದನ್ನು ಶೇ.50ಕ್ಕೆ ಹೆಚ್ಚಿಸಿ ಖರೀದಿಗೆ ಅವಕಾಶ ನೀಡುವಂತೆಯೂ ಮನವಿ ಮಾಡಲಾಗಿದೆ. ಅಲ್ಲದೇ, ಖರೀದಿ ಅವಧಿ ವಿಸ್ತರಣೆ ಮಾಡುವಂತೆಯೂ ಕೋರಲಾಗಿದೆ. ಅವಧಿ ವಿಸ್ತರಣೆಗೆ ಅನುಮತಿ ನೀಡಿದ ಬಳಿಕ ನೋಂದಾಯಿಸುವವರಿಗೂ ಪ್ರೋತ್ಸಾಹ ಧನ ಲಭ್ಯವಾಗಲಿದೆ ಎಂದು ಹೇಳಿದರು.

'ಆಂಧ್ರಕ್ಕೆ ಕೋಲಾರ ಸೇರಿಸಬೇಕಾಗುತ್ತೆ' ಎಂದ ಜೆಡಿಎಸ್ ಶಾಸಕ ಮಂಜುನಾಥ!

ಈವರೆಗೆ 45,038 ಮೆಟ್ರಿಕ್‌ ಟನ್‌ ಉಂಡೆ ಕೊಬ್ಬರಿ ಖರೀದಿಸಲಾಗಿದೆ. 2022-23ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತುಮಕೂರು, ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ, ಮಂಡ್ಯ, ಮೈಸೂರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 6.43 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ 26.06 ಲಕ್ಷ ಮೆಟ್ರಿಕ್‌ ಟನ್‌ ತೆಂಗು ಮತ್ತು ಕೊಬ್ಬರಿ ಉತ್ಪಾದನೆಯಾಗಿದೆ. ಎಂಎಸ್‌ಪಿಯಡಿ ಕೊಬ್ಬರಿ ಖರೀದಿಗೆ 37,632 ರೈತರು ನೋಂದಣಿ ಮಾಡಿಕೊಂಡಿದ್ದು, ಮಂಗಳವಾರದವರೆಗೆ 31,641 ರೈತರು ಪ್ರಯೋಜನ ಪಡೆದಿದ್ದಾರೆ. ಜು.26ರವರೆಗೆ ಖರೀದಿ ಪ್ರಕ್ರಿಯೆ ನಡೆಯಲಿದೆ. ಪ್ರಸ್ತುತ ವಿವಿಧ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್‌ಗೆ 7,700 ರು.ನಿಂದ 8,020 ರು. ವರೆಗೆ ಮಾರಾಟವಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕಾಂಗ್ರೆಸ್‌ ಸದಸ್ಯ ಶಿವಲಿಂಗೇಗೌಡ, ಷಡಕ್ಷರಿ, ಜೆಡಿಎಸ್‌ ಸದಸ್ಯ ಸಿ.ಎನ್‌.ಬಾಲಕೃಷ್ಣ ಅವರು ಮಾತನಾಡಿ, ಸರ್ಕಾರ ನಿಗದಿ ಮಾಡಿರುವ ಪ್ರೋತ್ಸಾಹ ಧನವನ್ನು ಸ್ವಾಗತಿಸಿದರು. ಕೊಬ್ಬರಿ ಖರೀದಿ ಮಾಡುವ ಅವಧಿ ಮತ್ತು ಪ್ರಮಾಣ ಹೆಚ್ಚಳ ಮಾಡುವ ಸಂಬಂಧ ಕೇಂದ್ರಕ್ಕೆ ಒತ್ತಾಯಿಸಬೇಕು ಮತ್ತು ಎಂಎಸ್‌ಪಿ ದರವನ್ನು ಪರಿಷ್ಕರಣೆ ಮಾಡುವಂತೆ ಆಗ್ರಹಿಸಬೇಕು ಎಂದು ಹೇಳಿದರು.

ಲೆಟೆಸ್ಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

click me!