
ಬೆಂಗಳೂರು: ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣ ಕುರಿತು ನಡೆಯುತ್ತಿದ್ದ ಚರ್ಚೆ ವೇಳೆ ಬಿಜೆಪಿ ಶಾಸಕ ಸುರೇಶ್‌ಕುಮಾರ್ ಅವರು ಸಚಿವ ಬೈರತಿ ಸುರೇಶ್ ಅವರನ್ನು ಏಳು ತಿಂಗಳಿಗೆ ಜನಿಸಿದವರು ಎಂದು ಹೇಳಿದ್ದರಿಂದ ಕೆಲಕಾಲ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ತೀವ್ರ ವಾಕ್ಸಮರ, ಗದ್ದಲ ಏರ್ಪಟ್ಟಿತ್ತು.
ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಮಾತನಾಡುವಾಗ, ರಾಜ್ಯಪಾಲರು ಸರ್ಕಾರ ನೀಡಿದ ಭಾಷಣ ಮಾಡದೆ ಸಂವಿಧಾನದ ಕಲಂ 176 (1) ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದರು.
ಅದಕ್ಕೆ ಉತ್ತರಿಸಲು ಮುಂದಾದ ಸುರೇಶ್‌ಕುಮಾರ್ ಸಂವಿಧಾನದ ಕಲಂ 176 (1) ರಲ್ಲಿನ ಅಂಶವನ್ನು ಓದಲು ಮುಂದಾದರು. ಆಗ ಮಧ್ಯಪ್ರವೇಶಿಸಿದ ಬಿ.ಎಸ್.ಸುರೇಶ್ ಅವರು, ಸರ್ಕಾರದ ಪರ ಮಾತನಾಡಲಾರಂಭಿಸಿದರು. ಇದಕ್ಕೆ ಸುರೇಶ್ ಕುಮಾರ್ ಅವರು ಸಚಿವ ಸುರೇಶ್‌ಗೆ ಸಮಾಧಾನ ಎಂಬುದೇ ಇಲ್ಲ. 7 ತಿಂಗಳಿಗೆ ಜನಿಸಿದರೆ ತಾಳ್ಮೆ ಇರುವುದಿಲ್ಲ. 9 ತಿಂಗಳಿಗೆ ಜನಿಸಿದ್ದರೆ ಎಲ್ಲವೂ ಸರಿ ಹೋಗುತ್ತಿತ್ತು ಎಂದರು.
ಅದಕ್ಕೆ ಕಾಂಗ್ರೆಸ್ ಶಾಸಕರಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು. ಬೈರತಿ ಸುರೇಶ್ ಸೇರಿ ಆಡಳಿತ ಪಕ್ಷದ ಶಾಸಕರು, ವ್ಯಕ್ತಿಗತ ಟೀಕೆಗಳನ್ನು ಮಾಡುವುದನ್ನು ಬಿಡಿ. ಹಿರಿಯರಿದ್ದೀರಿ, ಹಿರಿಯರಂತೆ ಮಾತನಾಡಿ ಎಂದು ಕೆಂಡಾಮಂಡಲರಾದರು.
ಸಚಿವ ಬೈರತಿ ಸುರೇಶ್ ಅವರು, ಈ ರೀತಿ ಹೇಳಲು ಮಾನಮರ್ಯಾದೆ ಇದೆಯೇ? ಮಾತಿನ ಮೇಲೆ ಹಿಡಿತವಿರಲಿ. ಹುಚ್ಚುಚ್ಚಾಗಿ ಮಾತನಾಡಬೇಡಿ. ಈ ಮಾತಿಗೆ ಕ್ಷಮೆ ಕೇಳಲೇಬೇಕು ಎಂದು ಆಗ್ರಹಿಸಿದರು.
ಅದಕ್ಕೆ ಸುರೇಶ್ ಕುಮಾರ್, ತಮ್ಮ ಮಾತು ಹಿಂಪಡೆಯುವುದಾಗಿ ತಿಳಿಸಿದರು. ಆದರೂ, ಆಡಳಿತ ಪಕ್ಷದ ಶಾಸಕರು ಕ್ಷಮೆಗೆ ಪಟ್ಟು ಹಿಡಿದರು. ಅಂತಿಮವಾಗಿ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸುರೇಶ್ ಕುಮಾರ್ ಅವರು ಏನು ಬೇಕಾದರೂ ಮಾತನಾಡಲಿ. ಆದರೆ, ವ್ಯಕ್ತಿಗತ ಟೀಕೆ ಬೇಡ. ಅಲ್ಲದೆ, ಅವರು ತಮ್ಮ ಹೇಳಿಕೆ ಹಿಂಪಡೆದಿರುವುದಾಗಿ ತಿಳಿಸಿದ್ದಾರೆ. ಹೀಗಾಗಿ ಈ ವಿಚಾರ ಇಲ್ಲಿಗೆ ಬಿಟ್ಟು ಚರ್ಚೆ ಮುಂದುವರಿಸೋಣ ಎಂದು ಹೇಳಿ ಎಲ್ಲರನ್ನು ಸಮಾಧಾನಪಡಿಸಿದರು.
ಸ್ಪೀಕರ್ ಯು.ಟಿ.ಖಾದರ್ ಅವರು ಸುರೇಶ್ ಕುಮಾರ್ ಅವರ ಮಾತನ್ನು ಕಡತದಿಂದ ತೆಗೆಸಿ, ಪರಿಸ್ಥಿತಿ ತಿಳಿಯಾಗಿಸಿದರು.
ಇದನ್ನೂ ಓದಿ: Karnataka Legislative Council chaos: ಪರಿಷತ್‌ನಲ್ಲಿ ರಾಜ್ಯಪಾಲರ ಗದ್ದಲ: ಇಬ್ಬರು ಸದಸ್ಯರ ಭವಿಷ್ಯವೇನು?
ಇದನ್ನೂ ಓದಿ: ಚಾಮರಾಜನಗರ: ಲೋಕಾಯುಕ್ತ ದಾಳಿ, ವಾಹನ ಸವಾರನಿಂದ ಮೂರು ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಪೊಲೀಸಪ್ಪ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ