
ಬೆಂಗಳೂರು (ಜ.23): ನಾಳೆಯಿಂದ ಸಾಲು ಸಾಲು ರಜೆಗಳ ಹಿನ್ನಲೆ ಸಂಚಾರ ದಟ್ಟಣೆಗೆ ಹೆಚ್ಚಳವಾಗಿದೆ. ನಾಲ್ಕು ದಿನಗಳ ಸುದೀರ್ಘ ರಜೆಯ ಹಿನ್ನೆಲೆಯಲ್ಲಿ ಲಕ್ಷಾಂತರ ಜನರು ತಮ್ಮ ಊರುಗಳತ್ತ ಮುಖ ಮಾಡಿದ್ದು, ನಗರದ ಹೃದಯಭಾಗವಾದ ಮೆಜೆಸ್ಟಿಕ್ ಜನವೋ ಜನ. ಊರುಗಳತ್ತ ಹೊರಟಿರುವ ಪ್ರಯಾಣಿಕರು.
ನಾಳೆ ನಾಲ್ಕನೇ ಶನಿವಾರ, ಭಾನುವಾರ ಹಾಗೂ ಸೋಮವಾರ ಗಣರಾಜ್ಯೋತ್ಸವದ ಪ್ರಯುಕ್ತ ಸತತ ಮೂರು ದಿನ ಸರ್ಕಾರಿ ರಜೆ ಇದೆ. ಇದರ ಜೊತೆಗೆ ಮಂಗಳವಾರ ಬ್ಯಾಂಕ್ ಮುಷ್ಕರ ಇರುವುದರಿಂದ ಒಟ್ಟು ನಾಲ್ಕು ದಿನಗಳ ರಜೆ ಸಿಕ್ಕಂತಾಗಿದೆ. ಈ ಸುದೀರ್ಘ ರಜೆಯನ್ನು ಕಳೆಯಲು ಐಟಿ ಉದ್ಯೋಗಿಗಳು ಹಾಗೂ ಕಾರ್ಮಿಕರು ಕುಟುಂಬ ಸಮೇತರಾಗಿ ಊರುಗಳಿಗೆ ಹೊರಟಿದ್ದು, ಬಸ್ ನಿಲ್ದಾಣಗಳತ್ತ ಜನರ ಮಹಾಪೂರವೇ ಹರಿದು ಬರುತ್ತಿದೆ.
ಸಂಜೆಯಿಂದಲೇ ಆರಂಭವಾದ ಟ್ರಾಫಿಕ್ ಜಾಮ್ ಮೆಜೆಸ್ಟಿಕ್ ಸುತ್ತಮುತ್ತಲಿನ ರಸ್ತೆಗಳನ್ನು ಹೈರಾಣಾಗಿಸಿದೆ. ಕೆಜಿ ರೋಡ್, ರೇಸ್ ಕೋರ್ಸ್ ರೋಡ್ ಮತ್ತು ಶಿವಾನಂದ ಸರ್ಕಲ್ ವ್ಯಾಪ್ತಿಯಲ್ಲಿ ವಾಹನಗಳು ಇಂಚು ಇಂಚಾಗಿ ಚಲಿಸುತ್ತಿವೆ. ಸಾವಿರಾರು ಖಾಸಗಿ ಮತ್ತು ಸರ್ಕಾರಿ ವಾಹನಗಳು ರಸ್ತೆಗಿಳಿದಿರುವುದರಿಂದ ಕಿಲೋಮೀಟರ್‌ಗಟ್ಟಲೆ ವಾಹನಗಳ ಸಾಲುಗಟ್ಟಿ ತೆವಳುತ್ತಿವೆ. ವಾಹನ ಸವಾರರು ಕಂಗಾಲಾಗಿದ್ದಾರೆ.
ರಸ್ತೆಗಿಳಿದ ಖಾಕಿ ಮತ್ತು ಸಾರಿಗೆ ಸಿಬ್ಬಂದಿ
ಪರಿಸ್ಥಿತಿಯನ್ನು ಹತೋಟಿಗೆ ತರಲು ಉಪ್ಪಾರಪೇಟೆ, ಚಿಕ್ಕಪೇಟೆ ಮತ್ತು ಹೈಗ್ರೌಂಡ್ ಸಂಚಾರಿ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಜನದಟ್ಟಣೆಗೆ ಅನುಗುಣವಾಗಿ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಸಿಬ್ಬಂದಿ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡುತ್ತಿದ್ದು, ನಿಲ್ದಾಣದೊಳಗೆ ವಾಹನಗಳ ಸುಗಮ ಚಲನೆಗೆ ಪೊಲೀಸರೊಂದಿಗೆ ಕೈಜೋಡಿಸಿದ್ದಾರೆ. ಆದರೂ ವಾಹನಗಳ ಸಂಖ್ಯೆ ಮಿತಿ ಮೀರಿರುವುದರಿಂದ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಬರುತ್ತಿಲ್ಲ.
ಸುಗಮ ಸಂಚಾರಕ್ಕೆ ಸಾರಿಗೆ ಸಿದ್ಧತೆ
ರಜೆಯ ಹಿನ್ನೆಲೆಯಲ್ಲಿ ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಕೆಎಸ್‌ಆರ್‌ಟಿಸಿ ವಿಶೇಷ ಬಸ್‌ಗಳನ್ನು ಕಾರ್ಯಾಚರಣೆ ಮಾಡುತ್ತಿದೆ. ಬಸ್ ನಿಲ್ದಾಣಗಳಲ್ಲಿ ಜನಜಂಗುಳಿ ನಿಯಂತ್ರಿಸಲು ಸಿಬ್ಬಂದಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಇತ್ತ ನಗರದಿಂದ ಹೊರಹೋಗುವ ಪ್ರಮುಖ ಎಕ್ಸಿಟ್ ಪಾಯಿಂಟ್‌ಗಳಲ್ಲೂ ಭಾರಿ ಟ್ರಾಫಿಕ್ ಕಾಣಿಸಿಕೊಂಡಿದ್ದು, ಬೆಂಗಳೂರಿಗರು ಊರು ತಲುಪಲು ಈ ಬಾರಿ ಅಗ್ನಿಪರೀಕ್ಷೆ ಎದುರಿಸುವಂತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ