
ಹುಣಸೂರು (ಆ.6) : ಜಮೀನು ವ್ಯಾಜ್ಯದ ಹಿನ್ನೆಲೆ ವ್ಯಕ್ತಿಗೆ ಗ್ರಾಮದಲ್ಲಿ ಬಹಿರಂಗವಾಗಿ ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದ ಪರಿಣಾಮ ಆತ ಔಷಧ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ತಾಲೂಕಿನ ಬಿಳಿಕೆರೆ ಹೋಬಳಿ ಕುಡಿನೀರು ಮುದ್ದನಹಳ್ಳಿ ಗ್ರಾಮದ ನಿವಾಸಿ ಗುರುರಾವ್ ಭಾಂಗೆ (60) ಆತ್ಮಹತ್ಯೆಗೆ ಶರಣಾದವರು.
ಗುರುರಾವ್‌ಗೆ ತಾಲೂಕಿನ ಬಿಳಿಕೆರೆ ಹೋಬಳಿ ತರೀಕಲ್ ಕಾವಲ್ ಗ್ರಾಮದಲ್ಲಿ ತಂದೆಯವರ ಹೆಸರಿನಲ್ಲಿ 2.05 ಎಕರೆ ಭೂಮಿಯಿದ್ದು, ಕಳೆದ 40 ವರ್ಷಗಳಿಂದ ಕೃಷಿ ಕಾರ್ಯ ನಡೆಸಿದ್ದರು. ಇವರ ಜಮೀನಿನ ಪಕ್ಕದಲ್ಲಿ ಮಹೇಶ್ ಎಂಬವರ ಜಮೀನಿದ್ದು, ಮಹೇಶ್ ಮತ್ತು ಅವರ ಪತ್ನಿ ಸಾಕಮ್ಮ ದಂಪತಿ ಗುರುರಾವ್ ಅವರ ಜಮೀನಿನ ಪೈಕಿ 16 ಗುಂಟೆ ತಮಗೆ ಸೇರಬೇಕೆಂದು ಕಳೆದ ಎರಡು ವರ್ಷಗಳಿಂದ ತಗಾದೆ ತೆಗೆದು ತಮ್ಮ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದರೆಂದು ಗುರುರಾವ್ ಭಾಂಗೆ ಅವರ ಪತ್ನಿ ಮಂಜುಳ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಧಾರವಾಡ: ಸಾಲಬಾಧೆಗೆ ಒಂದೂವರೆ ತಿಂಗಳಲ್ಲಿ ಆರು ಜನ ರೈತರ ಆತ್ಮಹತ್ಯೆ
ಜಮೀನಿನ ವ್ಯಾಜ್ಯ ನ್ಯಾಯಾಲಯದ ಮೆಟ್ಟಿಲೇರಿದ್ದರೂ ಮಹೇಶ್ ದಂಪತಿ ತಮ್ಮ ಪತಿಗೆ ಆಗಾಗ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು. ಹಲ್ಲೆ ಮತ್ತು ಕೊಲೆ ಬೆದರಿಕೆ ಒಡ್ಡುತ್ತಿದ್ದರು. ಅಲ್ಲದೇ ಸುಳ್ಳು ಆರೋಪ ಹೊರಿಸಿ ಪದೇ ಪದೇ ಠಾಣೆಯಲ್ಲಿ ದೂರು ದಾಖಲಿಸುತ್ತಿದ್ದರು. ಅಂತೆಯೇ ಆ. 4ರಂದು ಗ್ರಾಮಾಂತರ ಠಾಣೆ ಅಧಿಕಾರಿಗಳು ಈರ್ವರನ್ನೂ ಕರೆಯಿಸಿ ಜಮೀನು ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಯಾರೊಬ್ಬರೂ ತಕರಾರು ಮಾಡದಂತೆ ಬುದ್ಧಿಮಾತು ಹೇಳಿ ಕಳುಹಿಸಿದ್ದರು.
ಹಾವೇರಿ: ಸಾಲಭಾದೆಯಿಂದ ಮನನೊಂದು ರೈತ ಆತ್ಮಹತ್ಯೆ!
ಅಂದು ಸಂಜೆ ಕುಡಿ ನೀರು ಮುದ್ದನಹಳ್ಳಿಯ ಮುಖ್ಯವೃತ್ತದಲ್ಲಿ ತಮ್ಮ ಪತಿ ಗುರುರಾವ್ ಅವರನ್ನು ಮಹೇಶ್, ಅವರ ಪತ್ನಿ ಸಾಕಮ್ಮ ಮತ್ತು ಪುತ್ರ ರಂಜನ್ ಊರಜನರ ಸಮ್ಮುಖದಲ್ಲಿ ಚಪ್ಪಲಿಯಿಂದ ಹಲ್ಲೆ ನಡೆಸಿದಲ್ಲದ್ದಲ್ಲದೇ, ಅಲ್ಲೇ ಇದ್ದ ಮರಕ್ಕೆ ಕಟ್ಟಿಹಾಕಿ ಮನಬಂದಂತೆ ಥಳಿಸಿದ್ದಾರೆ. ಇದರಿಂದ ಮನನೊಂದ ತಮ್ಮ ಪತಿ ಶನಿವಾರ ಬೆಳಗಿನ ಜಾವ ಜಮೀನಿನಲ್ಲಿ ಔಷಧ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಜನರ ನಡುವೆ ತಮ್ಮ ಮೇಲೆ ಮಹೇಶ್ ಮತ್ತವರ ಕುಟುಂಬ ಹಲ್ಲೆ ನಡೆಸಿದ್ದ ತಮಗೆ ಅಪಮಾನವಾಗಿರುವುದೇ ನಾನು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೆಂದು ತಮ್ಮ ಮೊಬೈಲ್‌ನಲ್ಲಿ ಕಾಲ್ ರೆಕಾರ್ಡ್ ಮಾಡಿಟ್ಟಿದ್ದಾರೆಂದು ಮಂಜುಳಾ ದೂರಿನಲ್ಲಿ ತಿಳಿಸಿದ್ದಾರೆ.
ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ದೇಹವನ್ನು ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ