ಭ್ರಷ್ಟ ಅಧಿಕಾರಿ: ಕರ್ನಾಟಕದ ಮೊದಲ ಫಾರ್ಮುಲಾ 1 ಟ್ರ್ಯಾಕ್‌ ನಿರ್ಮಿಸ ಹೊರಟಿದ್ದ ಬಂಧಿತ ತಹಶೀಲ್ದಾರ್‌..!

Published : Jul 01, 2023, 06:18 AM IST
ಭ್ರಷ್ಟ ಅಧಿಕಾರಿ: ಕರ್ನಾಟಕದ ಮೊದಲ ಫಾರ್ಮುಲಾ 1 ಟ್ರ್ಯಾಕ್‌ ನಿರ್ಮಿಸ ಹೊರಟಿದ್ದ ಬಂಧಿತ ತಹಶೀಲ್ದಾರ್‌..!

ಸಾರಾಂಶ

ಬೆಂಗಳೂರು ಬಳಿ 150 ಎಕ್ರೆಯಲ್ಲಿ ರೇಸ್‌ ಟ್ರ್ಯಾಕ್‌ ನಿರ್ಮಾಣ ಕನಸು, ಲೋಕಾಯುಕ್ತ ತನಿಖೆಯಲ್ಲಿ ಬಾಯ್ಬಿಟ್ಟ.500 ಕೋಟಿ ಒಡೆಯ ಅಜಿತ್‌ ರೈ, 11 ಐಷಾರಾಮಿ ಕಾರು ಹೊಂದಿರುವ ಕೆ.ಆರ್‌.ಪುರ ತಹಶೀಲ್ದಾರ್‌ಗೆ ಕಾರುಗಳ ಕ್ರೇಜ್‌, ದೇಶ ವಿದೇಶಗಳಲ್ಲಿ ನಡೆಯುತ್ತಿದ್ದ ಫಾರ್ಮುಲಾ ರೇಸ್‌ಗಳಿಗೆ ಹೋಗಿ ಬರುತ್ತಿದ್ದ ರೈ, ಬೆಂಗಳೂರು ಬಳಿ ಫಾರ್ಮುಲಾ 1 ರೇಸ್‌ ನಡೆಸಿ ಹಣ ಸಂಪಾದಿಸುವ ಕನಸು ಕಂಡಿದ್ದ ಅಜಿತ್‌ ರೈ

ಗಿರೀಶ್‌ ಮಾದೇನಹಳ್ಳಿ

ಬೆಂಗಳೂರು(ಜು.01):  ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ತನ್ನ 150 ಎಕರೆ ಜಮೀನಿನಲ್ಲಿ ದೇಶದ ಎರಡನೇ ಹಾಗೂ ರಾಜ್ಯದ ಮೊದಲ ಫಾರ್ಮುಲಾ-1 ರೇಸ್‌ ಟ್ರ್ಯಾಕ್‌ ನಿರ್ಮಾಣಕ್ಕೆ ಕೆ.ಆರ್‌.ಪುರ ತಹಶೀಲ್ದಾರ್‌ ಅಜಿತ್‌ ಕುಮಾರ್‌ ರೈ ಪೂರ್ವಸಿದ್ಧತೆ ನಡೆಸಿದ್ದರು ಎಂಬ ಸಂಗತಿ ಲೋಕಾಯುಕ್ತ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

ರೇಸ್‌ ಟ್ರ್ಯಾಕ್‌ ನಿರ್ಮಾಣಕ್ಕೆ ಕೋಟ್ಯಂತರ ರು. ಬಂಡವಾಳ ಸುರಿಯಲು ತಯಾರಿದ್ದ ರೈ, ಇದಕ್ಕಾಗಿ ದೇಶದ ಮೊದಲ ಫಾರ್ಮುಲಾ ರೇಸ್‌ ಟ್ರ್ಯಾಕ್‌ ಇರುವ ಉತ್ತರ ಪ್ರದೇಶದ ನೋಯ್ಡಾ ನಗರದ ‘ಬುದ್ಧ ಇಂಟರ್‌ನ್ಯಾಷನಲ್‌ ಸರ್ಕಿಟ್‌’ಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದರು ಎಂದು ಲೋಕಾಯುಕ್ತ ಸಂಸ್ಥೆಯ ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

11 ಕಡೆ.. 30 ಗಂಟೆ ದಾಳಿ.. ಸಿಕ್ಕಿದ್ದು ಕೋಟಿ ಕೋಟಿ: ಸಂಬಳ ಸಾವಿರ, ಆದ್ರೆ ಈತ ಕೋಟಿ ಕುಳ..!

ಮೊದಲಿನಿಂದಲೂ ಕಾರುಗಳ ಬಗ್ಗೆ ಕ್ರೇಜ್‌ ಹೊಂದಿದ್ದ ಅಜಿತ್‌ ರೈ, ದೇಶ-ವಿದೇಶಗಳಲ್ಲಿ ನಡೆಯುತ್ತಿದ್ದ ಫಾರ್ಮುಲಾ ರೇಸ್‌ಗಳನ್ನು ನೋಡುವ ಖಯಾಲಿ ಇಟ್ಟುಕೊಂಡಿದ್ದರು. ಹೀಗಾಗಿಯೇ ಸ್ವತಃ ಫಾರ್ಮುಲಾ ರೇಸ್‌ ಆಯೋಜಿಸುವ ಆಸೆ ಹೊಂದಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ತಾವು ಅಕ್ರಮವಾಗಿ ಸಂಪಾದಿಸಿದ್ದ ಸುಮಾರು 150 ಎಕರೆ ವಿಶಾಲ ಪ್ರದೇಶದಲ್ಲಿ ಫಾರ್ಮುಲಾ-1 ರೇಸ್‌ ಟ್ರ್ಯಾಕ್‌ ನಿರ್ಮಾಣಕ್ಕೆ ರೈ ನಿರ್ಧರಿಸಿದ್ದರು ಎಂದು ತಿಳಿದುಬಂದಿದೆ.

ಅಕ್ರಮ ಆಸ್ತಿ ಸಂಪಾದನೆ ಪ್ರಕರಣ ಸಂಬಂಧ ಕೆ.ಆರ್‌.ಪುರ ತಹಶೀಲ್ದಾರ್‌ ಅಜಿತ್‌ ಕುಮಾರ್‌ ಮನೆ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಜಪ್ತಿಯಾದ ದಾಖಲೆಗಳನ್ನು ಪರಿಶೀಲಿಸಿದಾಗ 500 ಕೋಟಿ ರು.ಗೂ ಮಿಗಿಲಾದ ಅಕ್ರಮ ಸಂಪಾದನೆ ಬೆಳಕಿಗೆ ಬಂದಿತ್ತು. ಈ ದಾಖಲೆಗಳನ್ನು ಮತ್ತಷ್ಟುಶೋಧಿಸಿದಾಗ ರೈ ಅವರ ಫಾರ್ಮುಲಾ ರೇಸ್‌ ಟ್ರ್ಯಾಕ್‌ ನಿರ್ಮಾಣ ಸಂಗತಿ ಬಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ದಾರಿ ನಕ್ಷೆಯನ್ನೇ ಬದಲಿಸಿದ್ದ ರೈ:

ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲೇ ದೊಡ್ಡಬಳ್ಳಾಪುರ ತಾಲೂಕಿನ ಗ್ರಾಮವೊಂದರಲ್ಲಿ ರೈಗೆ ಸೇರಿದ ಭೂಮಿ ಇದೆ. ವಿಮಾನ ನಿಲ್ದಾಣಕ್ಕೆ ಸನಿಹದಲ್ಲಿ ಹಾಗೂ ಬೆಂಗಳೂರು ನಗರದ ಹೊರವಲಯದಲ್ಲಿ ಭೂಮಿ ಇರುವ ಕಾರಣ ರೇಸ್‌ ನಡೆಸಲು ಪ್ರಶಸ್ತ ಸ್ಥಳವಾಗಿದೆ ಎಂಬುದು ರೈ ಯೋಜನೆಯಾಗಿತ್ತು.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸನಿಹದಲ್ಲಿರುವುದರಿಂದ ವಿದೇಶೀಯರನ್ನು ಸೆಳೆಯಲು ಕೂಡ ಅನುಕೂಲವಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಕೂಡ ಪಾಲ್ಗೊಳ್ಳಬಹುದು. ಇದರಿಂದ ನಿರೀಕ್ಷೆಗೂ ಮೀರಿದ ಆದಾಯ ಬರುತ್ತದೆ. ಹೀಗಾಗಿ ತನ್ನ ಭೂಮಿಗೆ ತೊಡಕಾಗಿದ್ದ ಸರ್ಕಾರಿ ಭೂಮಿ ಹಾಗೂ ದಾರಿಯ ನಕ್ಷೆಯನ್ನೇ ಬದಲಾಯಿಸಿ ಕಂದಾಯ ದಾಖಲೆಗಳನ್ನು ಅಕ್ರಮವಾಗಿ ಅಜಿತ್‌ ರೈ ಸೃಷ್ಟಿಸಿದ್ದರು ಎಂದು ಮೂಲಗಳು ವಿವರಿಸಿವೆ.

ಫಾರ್ಮುಲಾ-1 ರೇಸ್‌ ನಿರ್ಮಾಣಕ್ಕಾಗಿ ರೂಪಿಸಿದ್ದ ಯೋಜನೆಗೆ ಸಂಬಂಧಿಸಿದ ದಾಖಲೆಗಳು ರೈ ಮನೆ ಮೇಲೆ ನಡೆಸಿದ ದಾಳಿ ವೇಳೆ ಲಭಿಸಿವೆ. ತಹಶೀಲ್ದಾರ್‌ ಒಡೆತನದ ಭೂಮಿಯ ಅಕ್ಕಪಕ್ಕ ಜಮೀನುಗಳ ದಾಖಲೆಗಳನ್ನು ಪರಿಶೀಲಿಸಿದಾಗ ಕೆಲ ದಾಖಲೆಗಳನ್ನು ಅವರು ತಿದ್ದಿರುವುದು ಗೊತ್ತಾಯಿತು. ಈ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಕೆ.ಆರ್.ಪುರ ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ: ಲಕ್ಷ..ಲಕ್ಷ ನಗದು ಸಹಿತ ಚಿನ್ನಾಭರಣ ಪತ್ತೆ

7 ದಿನ ಲೋಕಾ ಕಸ್ಟಡಿಗೆ

ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಬಂಧಿತರಾಗಿರುವ ಕೆ.ಆರ್‌.ಪುರ ತಹಶೀಲ್ದಾರ್‌ ಅಜಿತ್‌ ಕುಮಾರ್‌ ರೈ ಅವರನ್ನು 7 ದಿನ ಲೋಕಾಯುಕ್ತ ಪೊಲೀಸರ ವಶಕ್ಕೆ ನ್ಯಾಯಾಲಯ ಶುಕ್ರವಾರ ಒಪ್ಪಿಸಿದೆ. ಈ ಪ್ರಕರಣದಲ್ಲಿ ಬಂಧಿತ ತಹಶೀಲ್ದಾರ್‌ ಅವರನ್ನು ಬೆಳಗ್ಗೆ ಲೋಕಾಯುಕ್ತ ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಿದ್ದರು.

ಸ್ನೇಹಿತರ ಹೆಸರಿನಲ್ಲಿ ಕಾರುಗಳು

ಅಜಿತ್‌ ರೈ ತಮ್ಮ ನಂಬಿಕಸ್ಥ ಬಂಟರಾದ ನವೀನ್‌ ಕುಮಾರ್‌ ಹಾಗೂ ಕೃಷ್ಣಪ್ಪ ಹೆಸರಿನಲ್ಲಿ ಕಾರುಗಳನ್ನು ಖರೀದಿಸಿದ್ದರು ಎಂದು ಲೋಕಾಯುಕ್ತ ಮೂಲಗಳು ಹೇಳಿವೆ. ಅಜಿತ್‌ ರೈ ಮನೆಯಲ್ಲಿ 11 ಕಾರುಗಳು ಹಾಗೂ 4 ಬೈಕ್‌ಗಳು ಜಪ್ತಿಯಾಗಿವೆ. ಇವುಗಳನ್ನು ತಮ್ಮ ಸ್ನೇಹಿತರ ಹೆಸರಿನಲ್ಲಿ ಅವರು ನೋಂದಣಿ ಮಾಡಿಸಿದ್ದಕ್ಕೆ ಪೂರಕವಾದ ದಾಖಲೆಗಳೂ ಲಭಿಸಿವೆ ಎಂದು ಮೂಲಗಳು ಹೇಳಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್