ಅನ್ನಭಾಗ್ಯದ ಅಕ್ಕಿ ಜೊತೆ ಇಂದಿನಿಂದ ಹಣ ಭಾಗ್ಯ..!

Published : Jul 01, 2023, 05:36 AM IST
ಅನ್ನಭಾಗ್ಯದ ಅಕ್ಕಿ ಜೊತೆ ಇಂದಿನಿಂದ ಹಣ ಭಾಗ್ಯ..!

ಸಾರಾಂಶ

ತಲಾ 5 ಕೇಜಿ ಅಕ್ಕಿ + 5 ಕೇಜಿ ಅಕ್ಕಿಗೆ ಹಣ 170, ಮುಂದೆ 2 ಕೇಜಿ ರಾಗಿ/ಜೋಳ ನೀಡಲು ಚರ್ಚೆ, ಗೃಹಜ್ಯೋತಿ ಉಚಿತ ವಿದ್ಯುತ್‌ ಯೋಜನೆ ಇಂದಿನಿಂದ ಆರಂಭ

ಬೆಂಗಳೂರು(ಜು.01):  ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಕೆ.ಜಿ. ಅಕ್ಕಿಗೆ ಬದಲಾಗಿ ಪಡಿತರದಾರರ ಖಾತೆಗೆ ಜು.1ರ ಶನಿವಾರದಿಂದಲೇ ಹಣ ವರ್ಗಾವಣೆ ಶುರು ಆಗಲಿದೆ.  ಒಟ್ಟು 1.28 ಕೋಟಿ ಬಿಪಿಎಲ್‌ ಹಾಗೂ ಅಂತ್ಯೋದಯ ಕುಟುಂಬಗಳ 4.42 ಕೋಟಿ ಫಲಾನುಭವಿಗಳಿಗೆ ತಿಂಗಳಿಗೆ ತಲಾ 170 ರು.ಗಳಂತೆ ಅವರ ಖಾತೆಗೆ ಹಣ ವರ್ಗಾವಣೆಯಾಗಲಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್‌. ಮುನಿಯಪ್ಪ ತಿಳಿಸಿದ್ದಾರೆ.

ಈ ಬಗ್ಗೆ ಶುಕ್ರವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಶೇ.95ಕ್ಕೂ ಹೆಚ್ಚಿನ ಪಡಿತರ ಚೀಟಿ ಹಾಗೂ ಆಧಾರ್‌ ಕಾರ್ಡ್‌ ಲಿಂಕ್‌ ಆಗಿದೆ. ಆಧಾರ್‌ ಕಾರ್ಡ್‌ ಮಾಹಿತಿ ಆಧರಿಸಿ ಬ್ಯಾಂಕ್‌ ಖಾತೆಗಳ ವಿವರ ಪಡೆದು ನೇರವಾಗಿ ಖಾತೆಗೆ ಹಣ ವರ್ಗಾವಣೆ ಮಾಡುತ್ತೇವೆ. ಪಡಿತರ ಚೀಟಿಯಲ್ಲಿ ಕುಟುಂಬ ನಿರ್ವಾಹಕರ ಹೆಸರಿನಲ್ಲಿ ಯಾರ ಹೆಸರು ಇರುತ್ತದೆಯೋ ಅವರ ಖಾತೆಗೆ ಒಟ್ಟು ಸದಸ್ಯರ ಪಾಲಿನ ಹಣ ವರ್ಗಾವಣೆಯಾಗಲಿದೆ ಎಂದು ಮಾಹಿತಿ ನೀಡಿದರು.

ಕೇಂದ್ರದಿಂದ ಅಕ್ಕಿ ಕೊಡದಿದ್ದರೂ 5 ಕೆಜಿ ಅಕ್ಕಿ, ರೂ.170 ಕೊಡುತ್ತೇವೆ: ಶಾಸಕ ಲಕ್ಷ್ಮಣ ಸವದಿ

ರಾಜ್ಯದಲ್ಲಿ 1.28 ಕೋಟಿ ಬಿಪಿಎಲ್‌ ಹಾಗೂ ಅಂತ್ಯೋದಯ ಪಡಿತರ ಕುಟುಂಬಗಳಿವೆ. ಇವುಗಳ ಪೈಕಿ 1.22 ಕೋಟಿ ಕಾರ್ಡ್‌ದಾರರು ಬ್ಯಾಂಕ್‌ ಖಾತೆ ಲಿಂಕ್‌ ಮಾಡಿಕೊಂಡಿದ್ದಾರೆ. ಉಳಿದ 6 ಲಕ್ಷ ಕಾರ್ಡ್‌ಗಳಿಗೆ ಬ್ಯಾಂಕ್‌ ಖಾತೆ ಲಿಂಕ್‌ ಆಗಿಲ್ಲ. ಅವುಗಳನ್ನೂ ಸದ್ಯದಲ್ಲೇ ಅಪ್ಡೇಟ್‌ ಮಾಡಿಕೊಳ್ಳಲು ತಿಳಿಸಿದ್ದು, ಅಪ್ಡೇಟ್‌ ಆಗಿರುವ ಖಾತೆಗಳಿಗೆ ಶನಿವಾರದಿಂದಲೇ ಹಣ ವರ್ಗಾವಣೆಯಾಗಲಿದೆ. ಇ-ಆಡಳಿತ ಇಲಾಖೆ ಬಳಿ ಎಲ್ಲಾ ಮಾಹಿತಿ ಇರುವುದರಿಂದ ತಾಂತ್ರಿಕ ಸಮಸ್ಯೆ ಎದುರಾಗುವುದಿಲ್ಲ. ಇದಕ್ಕೆ 750-800 ಕೋಟಿ ರು. ಹಣ ಅಗತ್ಯವಿದ್ದು, ಈಗಾಗಲೇ ಮೀಸಲಿಡಲಾಗಿದೆ ಎಂದು ಹೇಳಿದರು.

ಹಣ ವಿತರಣೆ ತಾತ್ಕಾಲಿಕ ಪರ್ಯಾಯ:

ಅಕ್ಕಿ ದಾಸ್ತಾನು ಸಂಗ್ರಹವಾಗುವವರೆಗೂ ಮಾತ್ರ ಹಣ ನೀಡುತ್ತೇವೆ. ಕೆ.ಜಿ.ಗೆ 34 ರು.ಗಳಂತೆ ಹಣ ನೀಡಲಾಗುತ್ತಿದ್ದು, ಎಷ್ಟುತಿಂಗಳು ಅಕ್ಕಿ ಬದಲಿಗೆ ಹಣ ನೀಡಲಾಗುವುದು ಎಂಬುದನ್ನು ಹೇಳುವುದಿಲ್ಲ. ಇದನ್ನು ಅಕ್ಕಿ ಪೂರೈಕೆಯಾಗದ ಕಾರಣ ನೀಡುತ್ತಿದ್ದು, ಇದು ತಾತ್ಕಾಲಿಕ ಪರ್ಯಾಯ ವ್ಯವಸ್ಥೆ ಮಾತ್ರ. ಮುಕ್ತ ಮಾರುಕಟ್ಟೆಯಲ್ಲಿ ಟೆಂಡರ್‌ ಮೂಲಕ ಅಕ್ಕಿ ಖರೀದಿಗೆ ಪ್ರಕ್ರಿಯೆ ನಡೆಸುತ್ತೇವೆ. ಅಕ್ಕಿ ದಾಸ್ತಾನು ಆದ ಬಳಿಕ ಅಕ್ಕಿಯನ್ನೇ ವಿತರಿಸುತ್ತೇವೆ ಎಂದರು.

ಪ್ರತ್ಯೇಕ ಕಾರ್ಯಕ್ರಮ ಇಲ್ಲ:

ಅನ್ನಭಾಗ್ಯ ಯೋಜನೆಯಡಿ ಪಡಿತರದಾರರ ಖಾತೆಗೆ ಹಣ ನೀಡಲು ಸಿದ್ಧತೆ ಮಾಡಿಕೊಂಡಿದ್ದೇವೆ. ಇದಕ್ಕೆ ಪ್ರತ್ಯೇಕ ಕಾರ್ಯಕ್ರಮ ಮಾಡಿ ಚಾಲನೆ ನೀಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್‌, ಬಿಜೆಪಿ ನಾಯಕರ ನಡುವೆ ಅಕ್ಕಿ Vs ಹಣ ಕಿತ್ತಾಟ!

8 ಕೇಜಿ ಅಕ್ಕಿ, 2 ಕೆಜಿ ರಾಗಿ/ ಜೋಳ ನೀಡಲು ಚರ್ಚೆ

ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಯಡಿ ಧಾನ್ಯ ಖರೀದಿ ಮಾಡಿ ರಾಗಿ ಅಥವಾ ಜೋಳವನ್ನೂ ಸೇರಿಸಿಕೊಡಲು ಮುಖ್ಯಮಂತ್ರಿಗಳು ಸಲಹೆ ನೀಡಿದ್ದಾರೆ. ಮುಖ್ಯಮಂತ್ರಿಗಳು 10 ಕೆ.ಜಿ. ಆಹಾರ ಧಾನ್ಯಗಳನ್ನು ನೀಡುವುದಾಗಿ ಭರವಸೆ ನೀಡಿದ್ದರು. ಇದೀಗ ಪೂರ್ಣ ಪ್ರಮಾಣದಲ್ಲಿ ಅಕ್ಕಿ ನೀಡಲು ಕೇಂದ್ರ ನಿರಾಕರಣೆ ಮಾಡಿದೆ. ಹೀಗಾಗಿ ಮುಂದಿನ ದಿನಗಳಲ್ಲಿ 8 ಕೆ.ಜಿ. ಅಕ್ಕಿ ಹಾಗೂ 2 ಕೆ.ಜಿ. ರಾಗಿ/ಜೋಳ ನೀಡಲು ಚರ್ಚಿಸಲಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಜೋಳ, ದಕ್ಷಿಣ ಕರ್ನಾಟಕ ಭಾಗದಲ್ಲಿ ರಾಗಿ ನೀಡುವ ಬಗ್ಗೆ ಚರ್ಚಿಸಲಾಗಿದೆ ಎಂದು ಕೆ.ಎಚ್‌. ಮುನಿಯಪ್ಪ ತಿಳಿಸಿದರು.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಗೃಹಜ್ಯೋತಿ’ ಯೋಜನೆ ಅಡಿ ಫಲಾನುಭವಿಗಳು ಈ ಶನಿವಾರದಿಂದ ಬಳಕೆ ಮಾಡುವ ವಿದ್ಯುತ್‌ ಉಚಿತ ವಿದ್ಯುತ್‌ ಆಗಲಿದೆ. ಗೃಹ ಬಳಕೆದಾರರು ಜು.1ರಿಂದ ಬಳಕೆ ಮಾಡುವ ಮಾಸಿಕ 200 ಯುನಿಟ್‌ಗಿಂತ ಕಡಿಮೆ ವಿದ್ಯುತ್‌ಗೆ ಆಗಸ್ಟ್‌ನಲ್ಲಿ ‘ಶೂನ್ಯ ಬಿಲ್‌’ ಬರಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕರ್ನಾಟಕ ಗದ್ದುಗೆ ಫೈಟ್‌ ಬಗ್ಗೆ ಹೈಕಮಾಂಡ್‌ ನಾಯಕರ ಚರ್ಚೆ
ಚುಂಚ ಶ್ರೀ ಬಳಿ ಕೈ ಮುಗಿದು ಎಚ್‌ಡಿಕೆ ಕ್ಷಮೆ