ಗಂಟೆಗೆ 100 ಕೆಜಿ ಅಡಿಕೆ ಸುಲಿವ ಕಡಿಮೆ ದರದ ಯಂತ್ರ ಇಲ್ಲಿದೆ : ಬೇಕಿದ್ದವರು ಸಂಪರ್ಕಿಸಿ

By Kannadaprabha NewsFirst Published Nov 12, 2020, 7:34 AM IST
Highlights

ಕೊಯ್ಲಿನೋತ್ತರ ತಂತ್ರಜ್ಞಾನ ಯೋಜನೆಯಡಿಯಲ್ಲಿ ಇಂಜಿನಿಯರ್‌ಗಳು  ನಾಲ್ಕು ಜನ ಏಕ ಕಾಲದಲ್ಲಿ ಅಡಿಕೆ ಸುಲಿಯಬಹುದಾದ ಯಂತ್ರವನ್ನು ಅಭಿವೃದ್ಧಿ ಪಡಿಸಿದ್ದಾರೆ. 

ವರದಿ :  ಸಂಪತ್‌ ತರೀಕೆರೆ

 ಬೆಂಗಳೂರು (ನ.12):  ಅಡಿಕೆ ಕೃಷಿಯಲ್ಲಿ ಬಾಧಿಸುತ್ತಿರುವ ಕೂಲಿಯಾಳುಗಳ ಕೊರತೆ ನೀಗಿಸುವ ನಿಟ್ಟಿನಲ್ಲಿ ಬೆಂಗಳೂರು ಕೃಷಿ ವಿವಿಯ ಕೊಯ್ಲಿನೋತ್ತರ ಸಂಶೋಧನಾ ಎಂಜಿನಿಯರ್‌ಗಳು ಅಡಿಕೆ ಬೆಳೆಯುವ ಸಣ್ಣ ಬೆಳೆಗಾರರಿಗಾಗಿ ಕಡಿಮೆ ದರದಲ್ಲಿ ಅಡಿಕೆ ಸಿಪ್ಪೆ ಸುಲಿಯುವ ಯಂತ್ರವನ್ನು ಅಭಿವೃದ್ಧಿಪಡಿಸಿದ್ದಾರೆ.

ಅಡಿಕೆ ರಾಜ್ಯದ ಬಹುಮುಖ್ಯ ವಾಣಿಜ್ಯ ಬೆಳೆಗಳಲ್ಲೊಂದು. ಶಿವಮೊಗ್ಗ, ಉತ್ತರ ಕನ್ನಡ, ಚಿತ್ರದುರ್ಗ, ಚಿಕ್ಕಮಗಳೂರು, ಉಡುಪಿ, ಕೊಡುಗು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬೆಳೆಯುತ್ತಾರೆ. 55 ಸಾವಿರ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಬೆಳೆಯುವ ಅಡಿಕೆ ಉತ್ಪತ್ತಿ ಸುಮಾರು 80 ಸಾವಿರ ಟನ್‌ಗಳಿಗಿಂತ ಜಾಸ್ತಿ. ಆದರೆ ಇತ್ತೀಚಿನ ದಿನಗಳಲ್ಲಿ ಅರ್ಧ ಎಕರೆಯಿಂದ ಒಂದೆರಡು ಎಕರೆಯಲ್ಲಿ ಅಡಿಕೆ ಬೆಳೆಯುವವರ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಅಡಿಕೆ ಸುಲಿಯುವ ಕಾರ್ಮಿಕರ ಕೊರತೆಯೂ ಜಾಸ್ತಿಯಾಗುತ್ತದೆ. ಹತ್ತಾರು ಎಕರೆ ಅಡಿಕೆ ಬೆಳೆದವರಲ್ಲಿ ಸುದೀರ್ಘಾವಧಿ ಕೆಲಸ ಮತ್ತು ಅಧಿಕ ಹಣ ಸಿಗುವುದರಿಂದ ಅಡಿಕೆ ಸುಲಿಯುವವರು ಅಲ್ಲಿಗೆ ಹೋಗಲು ಆದ್ಯತೆ ನೀಡುತ್ತಾರೆ. ಇದರಿಂದ ಸಣ್ಣ ಬೆಳೆಗಾರರಿಗೆ ಕಾರ್ಮಿಕರ ಕೊರತೆ ಎದುರಾಗುತ್ತದೆ.

ಪಾನ್‌ ಮಸಾಲಾ ಬ್ಯಾನ್‌ : ಅಡಕೆ ಬೆಳೆಗಾರರಿಗೆ ಕಾದಿದ್ಯಾ ಆಘಾತ ..

ಇದನ್ನು ನೀಗಿಸುವ ನಿಟ್ಟಿನಲ್ಲಿ ಕೊಯ್ಲಿನೋತ್ತರ ತಂತ್ರಜ್ಞಾನ ಯೋಜನೆಯಡಿಯಲ್ಲಿ ಇಂಜಿನಿಯರ್‌ಗಳು ಕೇವಲ 5,500 ಸಾವಿರ ರು. ಬೆಲೆಯ, ನಾಲ್ಕು ಜನ ಏಕ ಕಾಲದಲ್ಲಿ ಅಡಿಕೆ ಸುಲಿಯಬಹುದಾದ ಯಂತ್ರವನ್ನು ಅಭಿವೃದ್ಧಿ ಪಡಿಸಿದ್ದಾರೆ. ಈ ಯಂತ್ರದ ಸಹಾಯದಿಂದ 4 ಜನರು ಏಕಕಾಲದಲ್ಲಿ ಗಂಟೆಗೆ 80ರಿಂದ 100 ಕೆಜಿ ಅಡಿಕೆ ಸಿಪ್ಪೆ ಸುಲಿಯಬಹುದು. ದಿನದ ಎಂಟು ಗಂಟೆ ಅವಧಿಯಲ್ಲಿ ನಾಲ್ಕು ಜನರು ಸುಮಾರು 650ರಿಂದ 700 ಕೆಜಿ ಕಾಯಿಯಷ್ಟುಸಿಪ್ಪೆ ಸುಲಿಯಬಹುದು ಎಂದು ಕೃಷಿ ಇಂಜಿನಿಯರಿಂಗ್‌ ಮುಖ್ಯಸ್ಥ ಡಾ.ಪಳನಿಮುತ್ತು ಅವರು   ಮಾಹಿತಿ ನೀಡಿದರು.

ಯಂತ್ರದ ವಿನ್ಯಾಸ:

ಕಬ್ಬಿಣದ ಪಟ್ಟಿಮತ್ತು ಹಾಳೆಗಳಿಂದ ಆಕೃತಿಗೊಂಡಿರುವ ಈ ಯಂತ್ರದಲ್ಲಿ ಕಾಯಿ ತುಂಬುವ ಪಾತ್ರೆ, ಸ್ಟ್ಯಾಂಡು ಮತ್ತು ಬ್ಲೇಡುಗಳನ್ನು ಅಳವಡಿಸಲಾಗಿದೆ. ಇದರಲ್ಲಿ ಒಂದು ಬ್ಲೇಡು ಸ್ಥಿರವಾಗಿದ್ದರೆ, ಮತ್ತೊಂದು ಸಿಪ್ಪೆ ಸುಲಿಯಲು ಅನುಕೂಲವಾಗುವಂತೆ ಹಿಂದಕ್ಕೂ ಮುಂದಕ್ಕೂ ಚಲಿಸುತ್ತದೆ. ಈ ಚಲನೆಯನ್ನು ಒತ್ತು ಪಟ್ಟಿಯಿಂದ ದುಂಡು ರಾಡಿನ ಮೂಲಕ ಬ್ಲೇಡಿಗೆ ಚಾಲನೆ ಸಿಗುತ್ತದೆ.

ಅಡಿಕೆಯ ಹಸಿರು ಕಾಯಿಗಳನ್ನು ಪಾತ್ರೆಗೆ ತುಂಬಿದ ನಂತರ ಎರಡು ಕೈಗಳಿಂದ ಎರಡು ಕಾಯಿಗಳನ್ನು ತೆಗೆದುಕೊಂಡು ತೊಟ್ಟಿನ ಭಾಗ ಮೇಲಕ್ಕೆ ಬರುವಂತೆ ಹಿಡಿದು, ತೊಟ್ಟಿನ ಕೆಳಭಾಗವನ್ನು ಬ್ಲೇಡುಗಳ ಮೊನಚಾದ ಮೂಲೆಗಳಿಗೆ ಚುಚ್ಚಿ ಕಾಲು ಮಣೆಯನ್ನು ಹಿಂದಕ್ಕೆ ಒತ್ತಿದಾಗ ಚಲಿಸುವ ಬ್ಲೇಡು ಕಾಯಿಯ ಅರ್ಧದಷ್ಟುಸಿಪ್ಪೆಯನ್ನು ಬೀಜದಿಂದ ಬೇರ್ಪಡಿಸುತ್ತದೆ. ಇದೇ ಮಾದರಿಯಲ್ಲಿ ಉಳಿದ ಸಿಪ್ಪಿಯನ್ನು ಸುಲಭವಾಗಿ ಬೇರ್ಪಡಿಸಬಹುದಾಗಿದೆ. ಈ ರೀತಿ ಎರಡು ಕೈ ಮತ್ತು ಒಂದು ಕಾಲು ಬಳಸಿ ಸತತವಾಗಿ ಕೆಲಸ ಮಾಡಬಹುದಾಗಿದೆ.

ಯಂತ್ರ ಬೇಕಿದ್ದವರು ಸಂಪರ್ಕಿಸಿ:

ಅಡಿಕೆ ಬೆಳೆಯುವ ಸಣ್ಣ ಬೆಳೆಗಾರರ ಸಂಖ್ಯೆ ಹೆಚ್ಚು ಇರುವುದರಿಂದ ಬೇಡಿಕೆಯೂ ಹೆಚ್ಚುತ್ತಿದೆ. ಈಗಾಗಲೇ ನೂರಕ್ಕೂ ಹೆಚ್ಚು ಯಂತ್ರಗಳು ಮಾರಾಟವಾಗಿದ್ದು, ಹಲವರಿಂದ ಬೇಡಿಕೆ ಇದೆ. ಇದು ಬೆಂಗಳೂರು ಕೃಷಿ ವಿವಿ ಕೊಯ್ಲಿನೋತ್ತರ ಸಂಶೋಧನಾ ಇಂಜಿನಿಯರಿಂಗ್‌ ವಿಭಾಗದಲ್ಲಿ ಮಾತ್ರ ಲಭ್ಯವಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ: 08023330153, 23545640 ಸಂಪರ್ಕಿಸಬಹುದು.

click me!