ದೌರ್ಜನ್ಯ ಕೇಸಲ್ಲಿ ಶಿಕ್ಷೆ ಪ್ರಮಾಣ ಹೆಚ್ಚಳ

By Kannadaprabha NewsFirst Published Nov 12, 2020, 7:06 AM IST
Highlights

ದೌರ್ಜನ್ಯ ಕೇಸಲ್ಲಿ ಶಿಕ್ಷೆ ಪ್ರಮಾಣ ಹೆಚ್ಚಳ ಮಾಡಲು ಮೂಕ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೂಚನೆ ನೀಡಿದ್ದಾರೆ

ಬೆಂಗಳೂರು (ನ.12): ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಹೆಚ್ಚಾಗುವಂತೆ ಮಾಡಲು ವ್ಯಾಜ್ಯ ಮತ್ತು ಅಭಿಯೋಗ ಇಲಾಖೆ ಹಾಗೂ ಪೊಲೀಸ್‌ ಇಲಾಖೆ ಅಧಿಕಾರಿಗಳು ಮುತುವರ್ಜಿಯಿಂದ ಕಾರ್ಯ ನಿರ್ವಹಿಸಬೇಕು. ಇಂತಹ ಎಲ್ಲ ಪ್ರಕರಣಗಳಲ್ಲೂ ಕಡ್ಡಾಯವಾಗಿ ಎಫ್‌ಐಆರ್‌ ದಾಖಲಿಸಿ 60 ದಿನಗಳೊಳಗೆ ತನಿಖೆ ಪೂರ್ಣಗೊಳಿಸಿ ಚಾರ್ಜ್ ಶೀಟ್‌ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಬುಧವಾರ ಅನುಸೂಚಿತ ಜಾತಿ ಮತ್ತು ಬುಟಕಟ್ಟುಗಳ ದೌರ್ಜನ್ಯ ಪ್ರತಿಬಂಧ ಅಧಿನಿಯಮ ಕುರಿತು ರಾಜ್ಯ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಭೆಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ದೌರ್ಜನ್ಯ ಪ್ರತಿಬಂಧ ಅಧಿನಿಯಮ ಉಲ್ಲಂಘಿಸಿದ ಪ್ರಕರಣಗಳಲ್ಲಿ ಕೇವಲ ಶೇ.5ರಿಂದ 6ರಷ್ಟುಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗುತ್ತಿವೆ. ರಾಜ್ಯ ದೌರ್ಜನ್ಯ ಪ್ರಕರಣಗಳಿಂದ ಮುಕ್ತವಾಗಬೇಕು. ಈ ನಿಟ್ಟಿಯನಲ್ಲಿ ವ್ಯಾಜ್ಯ ಮತ್ತು ಅಭಿಯೋಗ ಇಲಾಖೆ ಹಾಗೂ ಪೊಲೀಸ್‌ ಇಲಾಖೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಇಂತಹ ಪ್ರತಿ ಪ್ರಕರಣದಲ್ಲೂ ಎಫ್‌ಐಆರ್‌ ದಾಖಲಿಸಿ 60 ದಿನಗಳಲ್ಲಿ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿಸಲ್ಲಿಸಬೇಕು’ ಎಂದು ನಿರ್ದೇಶನ ನೀಡಿದರು.

ರಜೆಗೆ ಬಂದಿದ್ದ ಯೋಧನನ್ನ ಕೊಂದಿದ್ದ ಪಾಪಿ ತಂದೆಗೆ ಜೀವಾವಧಿ ಶಿಕ್ಷೆ .

‘ತನಿಖೆಯಲ್ಲಿ ಯಾವುದೇ ಲೋಪವಾಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು. ಸಾಕ್ಷಿದಾರರು ಮತ್ತು ಸಂತ್ರಸ್ತರಿಗೆ ಸೂಕ್ತ ರಕ್ಷಣೆ ನೀಡಬೇಕು. ಪ್ರಸ್ತುತ ದೌರ್ಜನ್ಯ ಪ್ರಕರಣಗಳಲ್ಲಿ ಪಂಚನಾಮೆ ಮತ್ತು ಸಾಕ್ಷಿಗಳ ಹೇಳಿಕೆ ದಾಖಲಿಸುವಾಗ ಮಾತ್ರ ವಿಡಿಯೋ ರೆಕಾರ್ಡಿಂಗ್‌ ನಡೆಸಲಾಗುತ್ತಿದೆ. ಇನ್ನು ಮುಂದೆ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡದವರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ದೂರು ಸಲ್ಲಿಸುವ ಸಂದರ್ಭವನ್ನೂ ವಿಡಿಯೋ ರೆಕಾರ್ಡಿಂಗ್‌ ಮಾಡಬೇಕು. ದೂರು ಸಲ್ಲಿಸಲು ಬಂದ ಸಂತ್ರಸ್ತರ ಹಾದಿ ತಪ್ಪಿಸುವ ಇದರಿಂದ ಸಾಧ್ಯವಾಗಲಿದೆ’ ಎಂದರು.

‘ದೌರ್ಜನ್ಯಕ್ಕೆ ಒಳಪಟ್ಟಸಂತ್ರಸ್ತರಿಗೆ ನಿಯಮಾನುಸಾರ ಪರಿಹಾರ ಧನವನ್ನು ನೀಡಲಾಗುತ್ತಿದೆ. ಪ್ರಸ್ತುತ ಸಾಲಿನಲ್ಲಿ 30 ಕೋಟಿ ರು. ಅನುದಾನವನ್ನು ಒದಗಿಸಿದ್ದು, ಈ ಪೈಕಿ 15 ಕೋಟಿ ರು. ಅನುದಾನವನ್ನು ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಮಾಡಲಾಗಿದೆ. ದೌರ್ಜನ್ಯಕ್ಕೆ ಒಳಗಾದವರಿಗೆ ನಿಗದಿತ ಸಮಯದೊಳಗೆ ಪರಿಹಾರ ನೀಡಲು ಜಿಲ್ಲಾಧಿಕಾರಿಗಳು ಕ್ರಮವಹಿಸಬೇಕು. ಅಲ್ಲದೆ, ಕೇಂದ್ರ ಸರ್ಕಾರದ ಡಾ. ಅಂಬೇಡ್ಕರ್‌ ಫೌಂಡೇಷನ್‌ನಿಂದ ನೀಡಲಾಗುವ ಪರಿಹಾರ ಒದಗಿಸಲು ಸಹ ಅಧಿಕಾರಿಗಳು ಕ್ರಮ ವಹಿಸಬೇಕು’ ಎಂದು ನಿರ್ದೇಶನ ನೀಡಿದರು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ. ಎಂ.ವಿಜಯಭಾಸ್ಕರ್‌ ಮತ್ತಿತರರು ಉಪಸ್ಥಿತರಿದ್ದರು.

click me!