ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಸೋಲಿನ ಬಳಿಕ ನಿಖಿಲ್ ಕುಮಾರಸ್ವಾಮಿ ಅವರು ಮುಸ್ಲಿಂ ಸಮುದಾಯ ತಮ್ಮನ್ನು ಕೈ ಹಿಡಿಯಲಿಲ್ಲ ಎಂದು ಪರೋಕ್ಷವಾಗಿ ದೂರಿದ್ದಾರೆ. ಯುವ ಸಮುದಾಯಕ್ಕೆ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿದ ಅವರು, ಶೀಘ್ರದಲ್ಲೇ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳ ಪರಾಮರ್ಶೆ ಸಭೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರು (ನ.23): ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆಯಲ್ಲಿ ಸೋಲಿನ ಬಳಿಕ ಮೊದಲ ಬಾರಿಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ನಿಖಿಲ್ ಕುಮಾರಸ್ವಾಮಿ ಅವರು, ಆ ಒಂದು ಸಮುದಾಯ ನನ್ನ ಕೈ ಹಿಡಿಯಲಿಲ್ಲ.. ಅದಕ್ಕೇ ಸೋಲಾಗಿದೆ ಎಂದು ಪರೋಕ್ಷವಾಗಿ ಮುಸ್ಲಿಂ ಸಮುದಾಯವನ್ನು ದೂರಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡರ ದೀರ್ಘಕಾಲದ ರಾಜಕಾರಣದಲ್ಲಿ ಸಾಕಷ್ಟು ಚುನಾವಣೆ ಎದುರಿಸಿದ್ದಾರೆ. ರಾಜಕೀಯ ಪರಿಸ್ಥಿತಿಗಳನ್ನು ಸಮಸ್ಥಿತಿಯಲ್ಲಿ ನೋಡುತ್ತಾರೆ. ಮುಂದೆ ಯಾವ ರೀತಿ ಪಕ್ಷ ಕಟ್ಟಬೇಕು ಅಂತಾ ಚರ್ಚೆ ಮಾಡಿದ್ದಾರೆ. ಚುನಾವಣೆಗಳಲ್ಲಿ ಬೈ ಎಲೆಕ್ಷನ್‌ಗಳಲ್ಲಿ, ಹಣ ಹಾಗೂ ತೋಳಬಲ ಹೆಚ್ಚಾಗಿರುವುದರಿಂದ ಫಲಿತಾಂಶ ನಾನು ಅಂದುಕೊಳ್ಳುವ ಹಾಗೆ ಬಂದಿಲ್ಲ. ಆ ಒಂದು ಸಮುದಾಯ ನಮ್ಮನ್ನು ಕೈ ಹಿಡಿಯಲಿಲ್ಲ ಎಂದು ಅಳಲು ತೋಡಿಕೊಂಡರು. ಈ ಮೂಲಕ ತಮ್ಮ ಸೋಲಿಗೆ ಪರೋಕ್ಷವಾಗಿ ಮುಸ್ಲಿಂ ಸಮುದಾಯದ ಮತಗಳು ಬರದಿರುವುದೇ ಕಾರಣವೆಂದು ದೂರಿದ್ದಾರೆ.
ಮುಂದುವರೆದು, ನಾನು ಯುವಕರಿಗೆ ಒಂದು ಮಾತು ಕೊಟ್ಟಿದ್ದೇನೆ. ಅಧಿಕಾರ ಇದೆಯೋ ಇಲ್ವೋ ಪ್ರಶ್ನೆಯಲ್ಲ. ಯುವ ಸಮುದಾಯಕ್ಕೆ ಉದ್ಯೋಗ ಸೃಷ್ಟಿಸುವ ಕೆಲಸ ಮಾಡತ್ತೇನೆ. ಸಾಮಾನ್ಯವಾಗಿ ರಾಜ್ಯಾಧ್ಯಕ್ಷರು ಸೋಲಿನ ವಿಮರ್ಶೆ ಮಾಡುತ್ತಾರೆ. ಪಕ್ಷದ ಕಾರ್ಯಕರ್ತರು, ಮಂಡ್ಯ ಜಿಲ್ಲೆಯ ಕಾರ್ಯಕರ್ತರು ಕೆಲಸ ಮಾಡಿದ್ದಾರೆ. ಪಕ್ಷಕ್ಕಾಗಿ ದುಡಿಯುತ್ತೇನೆ, ಸಂಘಟನೆ ಮಾಡುತ್ತೇನೆ. ಶೀಘ್ರದಲ್ಲೆ ಜೆಡಿಎಸ್ ಹಾಗೂ ಬಿಜೆಪಿ ಎರಡು ಪಕ್ಷಗಳ ಪರಾಮರ್ಶೆ ಸಭೆ ನಡೆಯಲಿದೆ. ಒಂದು ವಾರದಲ್ಲಿ ಪಕ್ಷದ ಕಾರ್ಯಕರ್ತರ ಕೃತಜ್ಞತೆ ಸಭೆ ನಡೆಯಲಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಮೂರನೇ ತಲೆಮಾರಿಗೆ ರಾಮನಗರದಿಂದ ಜೆಡಿಎಸ್ ವಾಶ್‌ಔಟ್; ನಿಖಿಲ್ ಕುಮಾರಸ್ವಾಮಿಗೆ ಹ್ಯಾಟ್ರಿಕ್ ಸೋಲು!
ರಾಜ್ಯದಲ್ಲಿ ಅತ್ಯಂತ ಕುತೂಹಲ ಕೆರಳಿದ್ದ ಹಾಗೂ ಮೂರು ದಶಕಗಳ ಕಾಲ ಬದ್ಧ ವೈರಿಗಳಾಗಿ ರಾಜಕೀಯ ಸೆಣಸಾಟ ನಡೆಸುತ್ತಿದ್ದ ಕುಟುಂಬಗಳ ನಡುವಿನ ರಾಜಕೀಯ ಬದ್ಧ ವೈರಿಗಳ ಕಾಳಗಕ್ಕೆ ಸಾಕ್ಷಿಯಾಗಿದ್ದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲು ಅನುಭವಿಸಿದ್ದಾರೆ. ಈ ಮೂಲಕ ಸತತವಾಗಿ ಮೂರನೇ ಸೋಲು ಅನುಭವಿಸಿದ್ದಾರೆ. ಇದರಿಂದ ಸುಮಾರು ಮೂರೂವರೆ ದಶಕಗಳ ಕಾಲ ಅಜ್ಜ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಅಪ್ಪ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ರಾಮನಗರ ಜಿಲ್ಲೆಯಲ್ಲಿ ಕಟ್ಟಿ ಬೆಳೆಸಿದ ಜೆಡಿಎಸ್ ಪಕ್ಷವು ಜಿಲ್ಲೆಯಲ್ಲಿ ಎಲ್ಲಿಯೂ ಅಧಿಕಾರದಲ್ಲಿ ಇಲ್ಲದಂತಾಗಿದೆ. ಸಣ್ಣ, ಪುಟ್ಟ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಯ ಕೆಲವೊಂದು ಸೀಟುಗಳನ್ನು ಬಿಟ್ಟರೆ ವಿಧಾನಸಭೆ, ಲೋಕಸಭೆಯಲ್ಲಿ ರಾಮನಗರ ಜಿಲ್ಲೆಯಿಂದ ದೇವೇಗೌಡರ ಕುಟುಂಬದ ಯಾವೊಬ್ಬ ಸದಸ್ಯರೂ ಇಲ್ಲದಂತಾಗಿದ್ದಾರೆ.
ಇದನ್ನೂ ಓದಿ: ಸುಳ್ಳಾಯ್ತು ಎಕ್ಸಿಟ್ ಪೋಲ್ ಭವಿಷ್ಯ; ಮೂರಕ್ಕೆ ಮೂರು ಕ್ಷೇತ್ರ ಗೆದ್ದ ಕಾಂಗ್ರೆಸ್ ಗ್ಯಾರಂಟಿ!