ನೆಹರೂ ಅವರ ಗುಣ-ತತ್ವಗಳನ್ನೇ ಅವರ ಮರಿಮೊಮ್ಮಗನ ಕಾಲದಲ್ಲಿಯೂ ಕಾಣಬೇಕಾಗಿರುವುದು ನಿಜಕ್ಕೂ ದುರಂತ. ದೇಶದ ಭದ್ರತೆ ವಿಚಾರದಲ್ಲಿ ನೆಹರೂ ಅದ್ಯಾವ ಉಡಾಫೆಯ ಧೋರಣೆ ಹೊಂದಿದ್ದರೋ ರಾಹುಲ… ಗಾಂಧಿಯವರ ಕಾಂಗ್ರೆಸ್ ಅದನ್ನು ಇನ್ನೂ ಒಂದು ಹೆಜ್ಜೆ ಮುಂದೆ ಕೊಂಡೊಯ್ಯುತ್ತಿದೆ. ಪ್ರತಿ ಬಾರಿಯೂ ಲೋಕಸಭಾ ಅಧಿವೇಶನಕ್ಕೆ ಹೊಂದಿಸಿಕೊಂಡೇ ಭಾರತದ ಮೇಲೆ ಚೀನಾ ದಾಳಿ ಮಾಡುವುದು ಏಕೆಂದು ಯೋಚಿಸಿದ್ದೀರಾ?
ಸಿ.ಟಿ.ರವಿ
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
ಇತಿಹಾಸದಲ್ಲಿ ನಡೆದ ಕೆಲವು ಕಹಿ ಘಟನೆಗಳನ್ನು ಮರೆತು ಭವಿಷ್ಯದ ಅಭ್ಯುದಯದ ಕಡೆಗೆ ನಮ್ಮ ದೃಷ್ಟಿನೆಡಬೇಕು ಎಂದು ಸಾಕಷ್ಟುಸಲ ಅಂದುಕೊಳ್ಳುತ್ತೇನೆ. ಆದರೆ ನಮ್ಮ ದೇಶವನ್ನು ಸುದೀರ್ಘ ಕಾಲ ಆಳಿದ ಕಾಂಗ್ರೆಸ್ ಅದಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ ಎಂಬುದು ಆ ಕಹಿ ಇತಿಹಾಸದ ಘಟನೆಗಳಷ್ಟೇ ಕಹಿ ಸತ್ಯ. ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಮೂಲಕ ವಿಧ್ವಂಸಕ ಕೃತ್ಯ ಮಾಡಿದ ಶಾರೀಕ್ ಎಂಬ ಉಗ್ರನನ್ನು ಆತನೊಬ್ಬ ಉಗ್ರಗಾಮಿಯೇ ಅಲ್ಲ ಎಂದು ಕೆಪಿಸಿಸಿ ಅಧ್ಯಕ್ಷರು ಬಣ್ಣಿಸಿದ್ದಾರೆ. ಸುಧಾರಿತ ಸ್ಫೋಟಕಗಳನ್ನು ಬಳಸಿ ಬಾಂಬ್ ತಯಾರಿಸಿ, ಅದನ್ನು ಆಯಕಟ್ಟಿನ ಜಾಗದಲ್ಲಿಟ್ಟು ಸ್ಫೋಟಿಸುವ ಸಂಚು ರೂಪಿಸಿದ್ದ ದುಷ್ಕರ್ಮಿಯ ಪರವಾಗಿ ವಾದಿಸಿದ್ದು ಒಂದು ಕಡೆ, ಆದರೆ ಮತ್ತೊಂದು ಮಾತಿನಲ್ಲಿ ಆತನನ್ನು ಉಗ್ರಗಾಮಿ ಎಂದ ಪೊಲೀಸರು ಸಮಾಜದ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಭದ್ರತಾ ಇಲಾಖೆಯ ಮೇಲೆಯೇ ಬೊಟ್ಟು ಮಾಡುವ ಅವರ ನಡೆಯಂತೂ ಅಕ್ಷಮ್ಯ. ಅಷ್ಟಕ್ಕೂ ಆ ಉಗ್ರಗಾಮಿ ಕೈಯಲ್ಲಿ ಐಸಿಸ್ ಚಿಹ್ನೆ ತೋರಿಸುತ್ತ ಕುಕ್ಕರ್ ಹಿಡಿದು ನಿಂತಿದ್ದು ಪೊಲೀಸರ ನಿರ್ದೇಶನದ ಮೇಲಲ್ಲ. ಆತ ಹಿಂದೂ ಹೆಸರಿನಲ್ಲಿ ಮನೆ ಬಾಡಿಗೆ ಹಿಡಿದದ್ದು ಮತ್ತು ಮೊಬೈಲ… ರಿಪೇರಿ ತರಬೇತಿ ಪಡೆದದ್ದು ಪೊಲೀಸರ ಆಣತಿಯಂತಲ್ಲ. ಎಲ್ಲಕ್ಕೂ ಮಿಗಿಲಾಗಿ ಆತ ಯುಎಪಿಎ ಕಾಯ್ದೆಯಡಿ (ಕಾನೂನು ಬಾಹಿರ ಕೃತ್ಯಗಳನ್ನು ತಡೆಗಟ್ಟಲು ತಂದಿರುವ ಕಾಯ್ದೆ) ಜೈಲು ಸೇರಿದ್ದು ಪೊಲೀಸರ ನಿರ್ದೇಶನದಂತೆ ಎಂದು ಹೇಳಲು ಸಾಧ್ಯವೇ ಇಲ್ಲ. ಹೀಗಿರುವಾಗ ಪೊಲೀಸ್ ವ್ಯವಸ್ಥೆಯ ಮೇಲೆಯೇ ಒಂದು ಸಮುದಾಯವನ್ನು ಎತ್ತಿಕಟ್ಟಲು ಕೆಪಿಸಿಸಿ ಅಧ್ಯಕ್ಷರು ಮಾಡಿದ ಆರೋಪಗಳು ತೀರಾ ಗಂಭೀರ ಸ್ವರೂಪದ್ದು.
ಹಿಂದೆಯೂ ಭಯೋತ್ಪಾದಕರ ಪರ
ಕಾಂಗ್ರೆಸ್ ಪಾಲಿಗೆ ಇದೇನೂ ಹೊಸತಲ್ಲ. ದೆಹಲಿಯಲ್ಲಿ 2008ರಲ್ಲಿ ಸರಣಿ ಬಾಂಬ್ ಸ್ಫೋಟಿಸಿದ ಇಂಡಿಯನ್ ಮುಜಾಹಿದ್ದೀನ್‌ಗೆ ಸೇರಿದ್ದ ಉಗ್ರರನ್ನು ದೆಹಲಿ ಪೊಲೀಸರು ಬಾಟ್ಲಾ ಹೌಸ್ ಎಂಬ ಅಪಾರ್ಚ್‌ಮೆಂಟ್ ಮೇಲೆ ದಾಳಿ ಮಾಡಿ ಸದೆಬಡಿಯುತ್ತಾರೆ. ಆ ವೇಳೆಗೆ ಉಗ್ರರ ಪ್ರತಿದಾಳಿಗೆ ಪೊಲೀಸ್ ಇನ್ಸ್‌ಪೆಕ್ಟರ್ ಮೋಹನ್ ಚಾಂದ್ ಶರ್ಮಾ ವೀರಮರಣ ಹೊಂದಿದ್ದರು. ಅಂಥ ಕೃತ್ಯಗಳಲ್ಲಿ ಭಾಗಿಯಾಗಿದ್ದ ಆರೋಪಿಗೆ ಕಳೆದ ವರ್ಷ ದೆಹಲಿ ಹೈಕೋರ್ಚ್ ಮರಣದಂಡನೆ ವಿಧಿಸಿದಾಗ ದಿಗ್ವಿಜಯ್ ಸಿಂಗ್ ಎಂಬ ಕಾಂಗ್ರೆಸ್ಸಿಗ ಬಾಟ್ಲಾ ಹೌಸ್ ದಾಳಿಯೇ ಹುಸಿ ದಾಳಿ ಎಂದು ಪೊಲೀಸರ ಮೇಲೆ ಗೂಬೆ ಕೂರಿಸಿ ಉಗ್ರಗಾಮಿಗಳ ಪರ ಮಾತನಾಡಿದ್ದರು, ಥೇಟ್ ನಮ್ಮ ಡಿ.ಕೆ.ಶಿವಕುಮಾರರಂತೆ. ಮುಂಬೈ ದಾಳಿ ನಡೆಯುತ್ತಿದ್ದಾಗ ಗೃಹ ಸಚಿವರಾಗಿದ್ದ ಶಿವರಾಜ್ ಪಾಟೀಲ್ ಐದು ಪತ್ರಿಕಾಗೋಷ್ಠಿಗಳಲ್ಲಿ ಪಾಲ್ಗೊಳ್ಳಲು ಒಂದೇ ದಿನ ಐದು ಬಾರಿ ಬಟ್ಟೆಬದಲಿಸಿದ್ದರು. ಕಾಂಗ್ರೆಸ್ಸಿಗನ ಪಾಲಿಗೆ ಅದೊಂದು ಫ್ಯಾಶನ್ ಶೋ!
mangalore blast: ಡಿಕೆಶಿ ಮುಸ್ಲಿಂರ ಓಲೈಕೆಗೆ ಮುಂದಾಗಿದ್ದಾರೆ: ಸಿಎಂ ಬೊಮ್ಮಾಯಿ ಕಿಡಿ
ನೆಹರೂ ಕಾಲದಿಂದಲೂ ಇದೇ ಕತೆ
ಅಲ್ಪಸಂಖ್ಯಾತರು ಅವರವರ ನಂಬಿಕೆಗಳ ಆಧಾರದ ಮೇಲೆ ಅವರವರ ಆಚಾರಣೆಗಳನ್ನು ನಿರ್ವಿಘ್ನವಾಗಿ ಆಚರಿಸಿಕೊಂಡು ಹೋಗಲು ನಮ್ಮ ಸಂವಿಧಾನ ಅವರಿಗೆ ಕೆಲವು ಹಕ್ಕುಗಳನ್ನು ನೀಡುತ್ತದೆ. ಅವರ ಹಕ್ಕುಗಳಿಗೆ ಸಾಂವಿಧಾನಿಕ ಭದ್ರತೆಯೇ ಇರುವ ನಮ್ಮ ದೇಶದಲ್ಲಿ ಅವರಿಗಾಗಿ ಪ್ರತ್ಯೇಕವಾಗಿ ಏನನ್ನೂ ಮಾಡುವ ಅಗತ್ಯವಿಲ್ಲ. ಅಲ್ಪಸಂಖ್ಯಾತರನ್ನೂ ಬಹುಸಂಖ್ಯಾತರಿಗೆ ಸಮನಾಗಿ ಕಾಣುವುದೇ ನಾವು ನೀಡಬೇಕಾದ ಅತಿದೊಡ್ಡ ಗೌರವ. ಅಲ್ಪಸಂಖ್ಯಾತರ ಪಟ್ಟಿಯಲ್ಲಿ ಬೌದ್ಧರು, ಜೈನರು, ಪಾರ್ಸಿಗಳು, ಸಿಖ್ಖರು, ಕ್ರೈಸ್ತರು ಹಾಗೂ ಮುಸಲ್ಮಾರು ಇರುವಾಗ ಕಾಂಗ್ರೆಸ್ ಪಕ್ಷ ಮಾತ್ರ ಮುಸಲ್ಮಾನರು ಮಾತ್ರವೇ ಅಲ್ಪಸಂಖ್ಯಾತರು ಎಂದು ಬಿಂಬಿಸುವ ಮೂಲಕ ಅಲ್ಪಸಂಖ್ಯಾತ ಎಂಬ ಶಬ್ದದ ವ್ಯಾಖ್ಯಾನವನ್ನೇ ಬದಲಿಸಿತು. ಇದು ನಮ್ಮ ದೇಶದ ಪ್ರಥಮ ಪ್ರಧಾನಿಗಳಿಂದ ಕಾಂಗ್ರೆಸ್‌ಗೆ ಬಂದ ಬಳುವಳಿ. ಆ ಕಾಲಕ್ಕೆ ಜವಹರಲಾಲ… ನೆಹರೂ ಅವರಿಗೆ ಅಂಥದ್ದೊಂದು ಅಗತ್ಯತೆಯಿತ್ತು. ಚುನಾವಣೆಯನ್ನೇ ಎದುರಿಸದೆ ಮೌಂಟ್ ಬ್ಯಾಟನ್‌ನಿಂದ ನಿಯುಕ್ತಿಗೊಂಡ ನೆಹರೂ ಅವರಿಗೆ ಚುನಾವಣೆ ಮೂಲಕ ಗೆದ್ದು ಬರುವ ವಿಚಾರದಲ್ಲಿ ಭಯವಿತ್ತು. ಹಾಗಾಗಿ ಅಲ್ಪಸಂಖ್ಯಾತ ಸಮುದಾಯಗಳಲ್ಲೇ ಅತಿಹೆಚ್ಚು ಜನಸಂಖ್ಯೆ ಇರುವ ಮುಸಲ್ಮಾನರನ್ನು ಅವರು ಒಂದು ವೋಟ್‌ಬ್ಯಾಂಕ್ ರೀತಿ ನೋಡಲು ಮುನ್ನುಡಿ ಬರೆದರು.
ಭಾರತದ ಮುಂದಿನ ಪ್ರಧಾನಿ ಎಂದು ಬ್ರಿಟಿಷ್ ಸರ್ಕಾರ ನೆಹರೂ ಅವರನ್ನು ಘೋಷಿಸಿದಾಗಲೇ ವಿಶ್ವ ಕಂಡ ಮೇರು ವಿಜ್ಞಾನಿ ಆಲ್ಬರ್ಚ್ ಐನ್‌ಸ್ಟೀನ್ ನೆಹರೂ ಅವರಿಗೆ 1947ರ ಜುಲೈ 11ರಂದು ಒಂದು ಪತ್ರ ಬರೆಯುತ್ತಾರೆ. ಅದಾಗಲೇ ಯಹೂದಿಗಳಿಗೆ ಅವರದೇ ದೇಶ ನೀಡುವ ಬಗೆಗಿನ ಚರ್ಚೆಗಳು ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಶುರುವಾಗಿತ್ತು. ಯಹೂದಿಗಳ ಮೇಲೆ ನಡೆದ ಜನಾಂಗೀಯ ದಾಳಿಗಳನ್ನು ವಿವರಿಸಿ, ಅವರಿಗೆ ಅವರದೇ ಮಾತೃಭೂಮಿಗೆ ಮರಳಲು ಅವಕಾಶ ಮಾಡಿಕೊಡುವುದು ಹೇಗೆ ನ್ಯಾಯಯುತ ಎಂಬುದಕ್ಕೆ ಸಕಾರಣಗಳನ್ನು ನೀಡಿ, ಭಾರತದಲ್ಲಿಯೂ ಆ ಕಾಲದಲ್ಲಿ ಸುಮಾರು 50,000ದಷ್ಟುಯಹೂದಿಗಳು ವಾಸಿಸುತ್ತಿದ್ದ ಕಾರಣ ನೆಹರು ಅವರಿಗೆ ಇರಬೇಕಿದ್ದ ನೈತಿಕ ಪ್ರಜ್ಞೆಯನ್ನು ನೆನಪಿಸುತ್ತ ಇಸ್ರೇಲ್ ದೇಶದ ಸ್ಥಾಪನೆಗೆ ಬೆಂಬಲ ನೀಡುವಂತೆ ಭಾರತದ ಪ್ರಧಾನಮಂತ್ರಿಯಾಗಿ ನಿಯೋಜಿತರಾದ ನೆಹರೂ ಅವರಿಗೆ ಐನ್‌ಸ್ಟೀನ್ ಆ ಪತ್ರ ಬರೆದಿದ್ದರು. ಆದರೆ ನೆಹರೂ ಅದಕ್ಕೆ ತಕ್ಷಣ ಉತ್ತರಿಸುವ ಗೋಜಿಗೆ ಹೋಗುವುದಿಲ್ಲ. ಯಹೂದಿಗಳಿಗೆ ಐತಿಹಾಸಿಕವಾಗಿ ಆದ ಅನ್ಯಾಯಗಳನ್ನು ಸರಿಪಡಿಸಲು ಇಲ್ಲಿಂದ ಸಾವಿರಾರು ಮೈಲಿ ದೂರದಲ್ಲಿ ಅವರದೇ ಜಾಗ ಕೊಡಿಸಿದರೆ ನಮ್ಮಲ್ಲಿನ ಮುಸಲ್ಮಾನರನ್ನು ಎದುರು ಹಾಕಿಕೊಂಡಂತೆ ಎಂಬುದು ನೆಹರೂ ಅವರ ರಾಜಕೀಯ ಲೆಕ್ಕಾಚಾರ. ಹಾಗಾಗಿ ಇಸ್ರೇಲನ್ನು ಒಂದು ಸ್ವಾಯತ್ತ ದೇಶ ಎಂದು ‘ನೆಹರೂ ಭಾರತ’ ಗುರುತಿಸುವುದಕ್ಕೇ ಎರಡು ವರ್ಷಕ್ಕೂ ಹೆಚ್ಚು ಕಾಲ ತೆಗೆದುಕೊಂಡಿತು. ಅಂಥ ವಿಜ್ಞಾನಿಗೇ ಸರಿಯಾಗಿ ಉತ್ತರಿಸಲು ಪುರುಸೊತ್ತಿಲ್ಲದ ನೆಹರೂ ಅವರನ್ನು ಕಾಂಗ್ರೆಸ್ಸಿಗರು ವಿಜ್ಞಾನದ ಹರಿಕಾರ ಎಂದೆಲ್ಲ ಬಣ್ಣಿಸುವಾಗ ನಗು ಬರುತ್ತದೆ.
ಮುಸ್ಲಿಂ ತುಷ್ಟೀಕರಣದ ಇತಿಹಾಸ
ಆದರೆ ನಿಜಕ್ಕೂ ಭಯ ಹುಟ್ಟಿಸುವುದು, ರಾಜಕಾರಣಿ ನೆಹರೂ ಅಂದು ಬಿತ್ತಿ ನೀರಿರೆದ ಮುಸ್ಲಿಂ ತುಷ್ಟೀಕರಣದ ರಾಜಕಾರಣವನ್ನು ಕಂಡಾಗ. 1947ರ ವೇಳೆಗೆ ಭಾರತದಲ್ಲಿ ಇದ್ದದ್ದೇ ಪ್ರಮುಖವಾಗಿ ಮೂರು ಪಕ್ಷಗಳು - ಕಾಂಗ್ರೆಸ್, ಮುಸ್ಲಿಂ ಲೀಗ್ ಮತ್ತು ಹಿಂದೂ ಮಹಾಸಭಾ. ಈ ಪೈಕಿ ಮುಸ್ಲಿಂ ಲೀಗ್‌ನ ಬಹುಭಾಗ ಮೊಹಮ್ಮದ್ ಅಲಿ ಜಿನ್ನಾ ಜೊತೆ ಪಾಕಿಸ್ತಾನಕ್ಕೆ ವರ್ಗವಾಯಿತು. ಉಳಿದದ್ದು ಹಿಂದೂ ಮಹಾಸಭಾ. ಹೆಚ್ಚಿನ ಹಿಂದೂಗಳು ಕಾಂಗ್ರೆಸ್‌ನಲ್ಲಿ ಸಕ್ರಿಯವಾಗಿದ್ದ ಕಾರಣ ಮುಸ್ಲಿಂ ಮತಗಳನ್ನು ತನ್ನತ್ತ ಸೆಳೆದರೆ ತನ್ನ ಸ್ಥಾನ ಸುಭದ್ರ ಎಂಬುದು ನೆಹರೂ ಒಳಗಿನ ರಾಜಕಾರಣಿಯ ಸ್ಪಷ್ಟಲೆಕ್ಕಾಚಾರ. ಆ ಒಂದೇ ಕಾರಣಕ್ಕಾಗಿ ಮುಸಲ್ಮಾನರನ್ನು ವೋಟ್ ಬ್ಯಾಂಕ್ ಆಗಿ ಕಾಂಗ್ರೆಸ್ ಪಕ್ಷ ಪರಿವರ್ತಿಸಿತು.
ಕಾಂಗ್ರೆಸ್ ಪಕ್ಷ ಮುಸ್ಲಿಮರನ್ನು ಯಾವಾಗ ವೋಟ್ ಬ್ಯಾಂಕ್ ಎಂದು ಪರಿಗಣಿಸಿತೋ ಅಲ್ಲಿಂದ ನಂತರದಲ್ಲಿ ಮುಸ್ಲಿಂ ಸಮುದಾಯಕ್ಕೆ ಬೆನ್ನುಬೆನ್ನಿಗೆ ಆದದ್ದೇ ಅನ್ಯಾಯ. ತನ್ನ ರಾಜಕೀಯ ಲಾಭಕ್ಕೋಸ್ಕರ ಮುಸಲ್ಮಾನರಲ್ಲಿ ಒಂದು ಬಗೆಯ ಭಯವನ್ನು ಉಂಟುಮಾಡಿ ನಿರಂತರವಾಗಿ ಅವರಲ್ಲೊಂದು ಪ್ರತ್ಯೇಕತಾ ಭಾವ ಜೀವಂತವಾಗಿರುವಂತೆ ಕಾಂಗ್ರೆಸ್ ನೋಡಿಕೊಂಡಿತು. ಅಲ್ಪಸಂಖ್ಯಾತರು ಎಂಬ ಪದವನ್ನು ಮುಸ್ಲಿಂ ಪದಕ್ಕೆ ಅನ್ವರ್ಥ ಎಂಬಂತೆ ಬಿಂಬಿಸಿ ಅವರನ್ನು ಮುಖ್ಯವಾಹಿನಿಯ ಜತೆ ಬೆರೆಯದಂತೆ ನೋಡಿಕೊಂಡಿತು. ಅವೆಲ್ಲದರ ಪರಿಣಾಮವಾಗಿ ಇವತ್ತು ಬೌದ್ಧರಲ್ಲಿ, ಜೈನರಲ್ಲಿ ಕಾಣದ ಒಂದು ತೆರನಾದ ಭಯ ಮುಸ್ಲಿಂ ಸಮಾಜದಲ್ಲಿದೆ. ಇಷ್ಟೂವರ್ಷ ಆ ಭಯದ ಲಾಭ ಕಾಂಗ್ರೆಸ್ ಪಾಲಾಗಿದೆ. ಪರಿಣಾಮವಾಗಿ ಅಲ್ಪಸಂಖ್ಯಾತ ವರ್ಗದಲ್ಲಿ ಬರುವ ಇತರೆ ಸಮುದಾಯಗಳು ಆರ್ಥಿಕ ಮತ್ತು ಸಾಮಾಜಿಕ ಪ್ರಗತಿ ಸಾಧಿಸಿದ್ದರೆ, ಅಲ್ಪಸಂಖ್ಯಾತರಲ್ಲೇ ಅತಿಹೆಚ್ಚು ಸಂಖ್ಯೆಯಲ್ಲಿರುವ ಮುಸಲ್ಮಾನರಲ್ಲಿ ಹೆಚ್ಚಿನವರು ವಿದ್ಯೆ ಮತ್ತು ಆರ್ಥಿಕ ಮಾನದಂಡಗಳಲ್ಲಿ ಹಿಂದೆಯೇ ಉಳಿದಿದ್ದಾರೆ.
ಭದ್ರತೆಗೆ ಉಡಾಫೆ, ಚೀನಾಕ್ಕೆ ನೆರವು
ನೆಹರೂ ಅವರ ಗುಣ-ತತ್ವಗಳನ್ನೇ ಅವರ ಮರಿಮೊಮ್ಮಗನ ಕಾಲದಲ್ಲಿಯೂ ಕಾಣಬೇಕಾಗಿರುವುದು ನಿಜಕ್ಕೂ ದುರಂತ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಕೈಗೊಂಬೆಯಂತೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೂರಿಸಿ ದಲಿತರ ಕಣ್ಣಿಗೆ ಮಣ್ಣೆರಚಿ ಅವರನ್ನು ದುರ್ಬಳಕೆ ಮಾಡುತ್ತಿರುವ ರಾಹುಲ…-ಸೋನಿಯಾ ಎಂಬ ಹೈಕಮಾಂಡನ್ನು ಮೆಚ್ಚಿಸಲು ಡಿ.ಕೆ.ಶಿವಕುಮಾರ್ ಅವರು ಉಗ್ರನ ಪರ ವಾದಿಸುತ್ತಿರುವುದು ಆ ದುರಂತಕ್ಕೆ ಕೈಗನ್ನಡಿಯಷ್ಟೆ. ದೇಶದ ಭದ್ರತೆ ವಿಚಾರದಲ್ಲಿ ನೆಹರೂ ಅದ್ಯಾವ ಉಡಾಫೆಯ ಧೋರಣೆ ಹೊಂದಿದ್ದರೋ ರಾಹುಲ… ಗಾಂಧಿಯ ಕಾಂಗ್ರೆಸ್ ಅದನ್ನು ಇನ್ನೂ ಒಂದು ಹೆಜ್ಜೆ ಮುಂದೆ ಕೊಂಡೊಯ್ಯುತ್ತಿದೆ.
ಉಗ್ರರ ಪರ ನಿಂತ್ರಾ ಡಿಕೆ ಶಿವಕುಮಾರ್? ಮಂಗಳೂರು ಬ್ಲಾಸ್ಟ್‌ಗೆ ರಾಜಕೀಯ ಟ್ವಿಸ್ಟ್!
ಇದರ ಜೊತೆಗೆ ಕಾಂಗ್ರೆಸ್ ತಂದೊಡ್ಡುತ್ತಿರುವ ಮತ್ತೊಂದು ಅಪಾಯವೆಂದರೆ ಅದು ಕಮ್ಯುನಿಸ್ಟರ ಜತೆಗಿನ ಅನೈತಿಕ ಸಂಬಂಧ. ಮೇಲ್ಮಟ್ಟದಲ್ಲಿ ಪರಸ್ಪರರ ಸಿದ್ಧಾಂತಗಳನ್ನು ವಿರೋಧಿಸುವ ಕಾಂಗ್ರೆಸ್ ಮತ್ತು ಕಮ್ಯುನಿಸ್ಟರದ್ದು ಅನೈತಿಕ ಸಂಬಂಧ ಎಂಬುದಕ್ಕೆ ಸಾಕ್ಷಿ ದೇಶದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲೇ ಸಿಗುತ್ತದೆ. ರಾಜಕೀಯವಾಗಿ ತಮ್ಮನ್ನು ಮೀರಿ ಬೆಳೆಯುವ ತಾಕತ್ತುಳ್ಳ ವ್ಯಕ್ತಿ ಎಂದರೆ ಡಾ.ಬಿ.ಆರ್.ಅಂಬೇಡ್ಕರ್ ಎಂಬುದನ್ನು ನೆಹರೂ ಮನಗಂಡಿದ್ದರು. ಹಾಗಾಗಿ ಅವರನ್ನು ರಾಜಕೀಯವಾಗಿ ಮುಗಿಸುವುದು ನೆಹರೂ ಇಟ್ಟಮೊದಲ ಹೆಜ್ಜೆಯಾಗಿತ್ತು. 1952ರ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಕಮ್ಯುನಿಸ್ಟ್ ಪಾರ್ಟಿ ಸ್ಪರ್ಧಿಸಿದ್ದರೂ ಮುಂಬೈನಲ್ಲಿ ಮಾತ್ರ ಅಂಬೇಡ್ಕರ್ ಅವರನ್ನು ಸೋಲಿಸುವ ಸಲುವಾಗಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ನೆಹರೂ ಕನಸನ್ನು ಸಾಕಾರಗೊಳಿಸುವ ಔದಾರ್ಯ ತೋರಿತ್ತು. 1955ರಲ್ಲಿ ಭಾರತಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವ ಪಡೆಯುವ ಅವಕಾಶವಿದ್ದಾಗ ನೆಹರೂ ಅದನ್ನು ನಿರಾಕರಿಸಿ ಕಮ್ಯುನಿಸ್ಟ್ ಚೀನಾಕ್ಕೆ ಬಿಟ್ಟುಕೊಟ್ಟರು.
2008ರಲ್ಲಿ ಕೇಂದ್ರದಲ್ಲಿ ಸರ್ಕಾರ ರಚಿಸಲು ಮೈತ್ರಿ ಮಾಡಿಕೊಳ್ಳಬೇಕಾದ ಹಂತ ತಲುಪಿದ್ದ ಕಾಂಗ್ರೆಸ್ ನಿರ್ಲಜ್ಜವಾಗಿ ಕಮ್ಯುನಿಸ್ಟರ ಬೆಂಬಲ ಪಡೆಯಿತು. ಪರಿಣಾಮವಾಗಿ ನಕ್ಸಲೀಯರ ಸಮಸ್ಯೆ ಹಾಗೂ ಈಶಾನ್ಯ ಭಾರತದ ಬಂಡುಕೋರರ ದಾಳಿಗಳು ಆ ಕಾಲದಲ್ಲಿ ಐತಿಹಾಸಿಕ ಗರಿಷ್ಟಕ್ಕೆ ತಲುಪಿತು. ಏಕೆಂದರೆ ಕಾಂಗ್ರೆಸ್ಸಿಗೆ ಯಾವತ್ತೂ ಭಾರತ ಮುಖ್ಯವಾಗಿರಲೇ ಇಲ್ಲ. ಕಾಂಗ್ರೆಸ್ ಪಕ್ಷದ ರಾಜೀವ್ ಗಾಂಧಿ ¶ೌಂಡೇಶನ್ ಝಾಕಿರ್ ನಾಯಕ್‌ನಂಥ ತೀವ್ರವಾದಿಗಳ ಇಸ್ಲಾಮಿಕ್ ರೀಸಚ್‌ರ್ ¶ೌಂಡೇಶನ್‌ನಿಂದ 50 ಲಕ್ಷ ರು. ದೇಣಿಗೆ ಪಡೆದಿದ್ದೂ ಅಲ್ಲದೆ 2005-06ರಲ್ಲಿ ಚೀನಾದಿಂದ 1.35 ಕೋಟಿ ರು. ದೇಣಿಗೆ ಪಡೆದಿತ್ತು. ಇದು ಅಧಿಕೃತ ಬ್ಯಾಂಕ್ ವರ್ಗಾವಣೆಯ ಮೂಲಕ. ಆದರೆ, ಅನಧಿಕೃತವಾಗಿ ಎಷ್ಟುಬಂದಿದೆಯೋ ಲೆಕ್ಕವಿಲ್ಲ.
'ತನಿಖೆಯೇ ಇಲ್ಲದೆ ಉಗ್ರ ಎಂದು ಹೇಗೆ ಹೇಳ್ತೀರಾ..?' ಮಂಗಳೂರು ಬ್ಲಾಸ್ಟ್ ಬಗ್ಗೆ ಡಿಕೆಶಿ 'ಮೃದು' ಮಾತು!
ಇಂಥ ಅಕ್ರಮ ಸಂಬಂಧಕ್ಕಾಗಿ ಚೀನಾಗೆ ಕೊಡುಗೆ ನೀಡಲು ಯುಪಿಎ ಸರ್ಕಾರದ ಅವಧಿಯಲ್ಲಿ ಚೈನಾ ಮಾಲುಗಳಿಗೆ ಎಲ್ಲಾ ವಲಯಗಳಲ್ಲೂ ಭಾರತದ ಮಾರುಕಟ್ಟೆಯನ್ನು ಮುಕ್ತ ಮಾಡಿತು. ಅದಕ್ಕೆ ಪ್ರತಿಫಲವಾಗಿ ಚೀನಾ ಅಗತ್ಯ ಬಿದ್ದಾಗಲೆಲ್ಲಾ ಕಾಂಗ್ರೆಸ್‌ಗೆ ಸಹಾಯ ಮಾಡುತ್ತಾ ಬಂದಿದೆ. ಪ್ರತಿಬಾರಿಯೂ ಲೋಕಸಭಾ ಅಧಿವೇಶನಕ್ಕೆ ಹೊಂದಿಸಿಕೊಂಡೇ ಚೀನಾ ದಾಳಿ ಮಾಡುವುದು ಏಕೆ ಎಂದು ಪ್ರಶ್ನೆ ಹಾಕಿಕೊಂಡರೆ ಅದಕ್ಕೆ ಸುಲಭ ಉತ್ತರ ಸಿಗುತ್ತದೆ. ಬಿಜೆಪಿ ಮೇಲೆ ಮಾಡುವುದಕ್ಕೆ ಯಾವುದೇ ಆರೋಪಗಳಿಲ್ಲದಿದ್ದಾಗ ಚೀನಾ ನಮ್ಮ ಗಡಿಯಲ್ಲಿ ತಂಟೆ ಮಾಡುವ ಮೂಲಕ ರಾಹುಲ್ ಗಾಂಧಿ ಅವರಿಗೆ ಮಾತನಾಡಲು ಅವಕಾಶ ಮಾಡಿಕೊಡುತ್ತದೆ. ಇದೆಲ್ಲದರ ಘೋರ ಪರಿಣಾಮಗಳನ್ನು ಇನ್ನೂ ಕೆಲ ವರ್ಷಗಳ ಕಾಲ ಭಾರತೀಯರು ಉಣ್ಣಬೇಕಿರುವುದು ವಿಪರ್ಯಾಸ.