ಓಲಾ, ಊಬರ್‌ ರೀತಿ ರಾಜ್ಯದಲ್ಲಿ ಆ್ಯಂಬುಲೆನ್ಸ್ ಸೇವೆ ಶೀಘ್ರ ಆರಂಭ

Kannadaprabha News   | Kannada Prabha
Published : Jul 31, 2025, 07:09 AM IST
Dinesh Gundurao

ಸಾರಾಂಶ

ಓಲಾ, ಊಬರ್‌ ಆ್ಯಪ್‌ ಬಳಸಿ ಟ್ಯಾಕ್ಸಿ ಹಾಗೂ ಆಟೋ ಬುಕ್‌ ಮಾಡುವಂತೆ ಇನ್ನು ಮುಂದೆ ರಾಜ್ಯದಲ್ಲಿ ಆ್ಯಂಬುಲೆನ್ಸ್‌ಗಳನ್ನು ಕೂಡ ಕರೆಸಬಹುದು. ಈಗಾಗಲೇ ಗುರುಗ್ರಾಮದಲ್ಲಿ ಖಾಸಗಿ ಕಂಪನಿಯೊಂದು ಇಂತಹ ಸೇವೆ ಆರಂಭಿಸಿದ್ದು, ಅದೇ ಮಾದರಿಯಲ್ಲಿ ರಾಜ್ಯ ಸರ್ಕಾರ ಕೂಡ ಆ್ಯಂಬುಲೆನ್ಸ್‌ ಸೇವೆ ಕಲ್ಪಿಸಲು ಮುಂದಾಗಿದೆ.

 ಕಾರವಾರ :  ಓಲಾ, ಊಬರ್‌ ಆ್ಯಪ್‌ ಬಳಸಿ ಟ್ಯಾಕ್ಸಿ ಹಾಗೂ ಆಟೋ ಬುಕ್‌ ಮಾಡುವಂತೆ ಇನ್ನು ಮುಂದೆ ರಾಜ್ಯದಲ್ಲಿ ಆ್ಯಂಬುಲೆನ್ಸ್‌ಗಳನ್ನು ಕೂಡ ಕರೆಸಬಹುದು. ಈಗಾಗಲೇ ಗುರುಗ್ರಾಮದಲ್ಲಿ ಖಾಸಗಿ ಕಂಪನಿಯೊಂದು ಇಂತಹ ಸೇವೆ ಆರಂಭಿಸಿದ್ದು, ಅದೇ ಮಾದರಿಯಲ್ಲಿ ರಾಜ್ಯ ಸರ್ಕಾರ ಕೂಡ ಆ್ಯಂಬುಲೆನ್ಸ್‌ ಸೇವೆ ಕಲ್ಪಿಸಲು ಮುಂದಾಗಿದೆ.

ಈ ಆ್ಯಂಬುಲೆನ್ಸ್‌ಗಳಿಗೆ ಸರ್ಕಾರವೇ ದರ ನಿಗದಿ ಮಾಡಲಿದೆ. ಅಗತ್ಯ ಇರುವವರು ಮೊಬೈಲ್‌ ಆ್ಯಪ್‌ ಬಳಸಿ ಅವುಗಳ ಸೇವೆ ಪಡೆಯಬಹುದಾಗಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

ಇದಕ್ಕಾಗಿ ರಾಜ್ಯದಲ್ಲಿನ ವೈದ್ಯಕೀಯ ಆಂಬ್ಯುಲೆನ್ಸ್ ಸೇವೆಯನ್ನು ಇನ್ನು ಮುಂದೆ ಕರ್ನಾಟಕ ಖಾಸಗಿ ವೈದ್ಯ ಸಂಸ್ಥೆ (ಕೆಪಿಎಂಇ) ಕಾನೂನಿನ ಅಡಿಯಲ್ಲಿ ತರಲು ನಿರ್ಧರಿಸಿದ್ದು, ಈ ಕುರಿತಂತೆ ಬರುವ ವಿಧಾನಸಭೆಯ ಅಧಿವೇಶನದಲ್ಲಿ ಕಾಯಿದೆ ಜಾರಿಗೆ ತರಲಾಗುವುದು ಎಂದು ಹೇಳಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರಸ್ತುತ ಇರುವ ಆ್ಯಂಬುಲೆನ್ಸ್‌ ಒದಗಿಸುತ್ತಿರುವ ಸೇವೆಗಳು ಮತ್ತು ಗುಣಮಟ್ಟದ ಬಗ್ಗೆ ಹಲವು ದೂರುಗಳು ಬರುತ್ತಿದ್ದು, ಈ ಕುರಿತಂತೆ ಆ್ಯಂಬುಲೆನ್ಸ್‌ಗಳು ಯಾವ ರೀತಿ ಇರಬೇಕು, ಅದರಲ್ಲಿ ಯಾವ ಅಗತ್ಯ ವ್ಯವಸ್ಥೆಗಳು ಇರಬೇಕು ಎಂಬ ಬಗ್ಗೆ ಹಾಗೂ ಅವುಗಳಿಗೆ ದರ ನಿಗದಿಪಡಿಸುವ ಬಗ್ಗೆ ಕಾನೂನು ರಚಿಸಲಾಗುತ್ತಿದೆ. ಇನ್ನು ಮುಂದೆ ಆ್ಯಂಬುಲೆನ್ಸ್‌ ಸೇವೆ ಒದಗಿಸುವವರು ಮತ್ತು ಮೊಬೈಲ್ ಹೆಲ್ತ್ ಯೂನಿಟ್‌ಗಳು ಖಾಸಗಿ ಆಸ್ಪತ್ರೆಗಳ ರೀತಿಯಲ್ಲಿ ಕೆಪಿಎಂಇ ಅಡಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದರು.

ಕೆಪಿಎಇ ಅಡಿಯಲ್ಲಿ ನೋಂದಣಿಯಾಗುವ ಆ್ಯಂಬುಲೆನ್ಸ್‌ಗಳಿಗೆ ಅವುಗಳು ಒದಗಿಸುವ ಸೇವೆಯ ಆಧಾರದಲ್ಲಿ ದರ ನಿಗದಿಪಡಿಸಲಾಗುವುದು. ಆ್ಯಂಬುಲೆನ್ಸ್‌ ಸೇವೆಯ ಅಗತ್ಯವಿರುವವರು ಆ್ಯಪ್‌ ಮೂಲಕ ಬುಕಿಂಗ್ ಮಾಡುವ ಸೌಲಭ್ಯ ಒದಗಿಸಲಾಗುವುದು. ಈ ಮೂಲಕ ಆ್ಯಂಬುಲೆನ್ಸ್‌ ಸೇವೆಯಲ್ಲಿ ಪಾರದರ್ಶಕತೆ ತರಲಾಗುವುದು ಎಂದರು.

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಆರೋಗ್ಯ ಇಲಾಖೆಯಲ್ಲಿ 5500 ಮಂದಿಯನ್ನು ಯಾವುದೇ ಶಿಫಾರಸು, ಹಸ್ತಕ್ಷೇಪವಿಲ್ಲದೇ ಪಾರದರ್ಶಕವಾಗಿ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡಲಾಗಿದೆ. ತಜ್ಞ ವೈದ್ಯರ ವೇತನ ಹೆಚ್ಚಳ ಮಾಡುವುದು ಮಾತ್ರವಲ್ಲದೆ ನೇಮಕಾತಿ ಕೂಡ ಮಾಡಲಾಗುತ್ತಿದೆ ಎಂದರು.

108 ಸೇವೆಯನ್ನು ಸಂಪೂರ್ಣ ರಾಜ್ಯ ಸರ್ಕಾರದ ವಶಕ್ಕೆ ತೆಗೆದುಕೊಳ್ಳಲಿದ್ದು, ಈಗಾಗಲೇ ಚಾಮರಾಜನಗರ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಈ ಕಾರ್ಯ ಆರಂಭಿಸಲಿದೆ. ಇದು ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಗೂ ವಿಸ್ತರಣೆಯಾಗಲಿದೆ. ಮುಂದಿನ ತಿಂಗಳು ಎಲ್ಲ ಜಿಲ್ಲೆಗಳಲ್ಲಿ ಕಂಟ್ರೋಲ್ ರೂಂ ತೆರೆದು, ನಮ್ಮ ಅಧಿಕಾರಿಗಳೇ 108 ಅನ್ನು ನಿರ್ವಹಣೆ ಮಾಡಲಿದ್ದಾರೆ. ಇದಕ್ಕಾಗಿ ಪ್ರತ್ಯೇಕ ಕಂಟ್ರೋಲ್ ರೂಂ ತೆರೆಯಲಾಗುವುದು ಎಂದರು.

ಏಕೆ ಹೊಸ ಮಾದರಿ?

1. ರಾಜ್ಯದಲ್ಲಿ ಹಲವು ಕಂಪನಿಗಳು ಆ್ಯಂಬುಲೆನ್ಸ್‌ ಸೇವೆಯನ್ನು ಒದಗಿಸುತ್ತಿವೆ. ಆದರೆ ಅವುಗಳ ಬಗ್ಗೆ ಸಾಕಷ್ಟು ದೂರುಗಳು ಇವೆ

2. ಹೀಗಾಗಿ ಆ್ಯಂಬುಲೆನ್ಸ್‌ ಯಾವ ರೀತಿ ಇರಬೇಕು, ಯಾವ ವ್ಯವಸ್ಥೆ ಇರಬೇಕು, ದರ ಎಷ್ಟಿರಬೇಕು ಎಂದು ಸರ್ಕಾರದಿಂದ ಕಾಯ್ದೆ

3. ಶಾಸನ ಜಾರಿ ಬಳಿಕ ಆ್ಯಂಬುಲೆನ್ಸ್‌ ಸೇವೆ ಒದಗಿಸುವವರು ಖಾಸಗಿ ಆಸ್ಪತ್ರೆಗಳ ರೀತಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕು

4. ಆ್ಯಂಬುಲೆನ್ಸ್‌ಗಳಿಗೆ ಅವುಗಳ ಸೇವೆಯ ಆಧಾರದಲ್ಲಿ ಸರ್ಕಾರವೇ ದರ ನಿಗದಿ ಮಾಡುತ್ತೆ. ಆ್ಯಪ್‌ ಮೂಲಕ ಜನರು ಬುಕ್‌ ಮಾಡಬಹುದು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌