ಕೆಪಿಟಿಸಿಎಲ್‌ ಅಕ್ರಮ: ಬೆಳಗಾವಿಯಲ್ಲಿ ಮತ್ತೊಬ್ಬ ಪ್ರಮುಖ ಆರೋಪಿ ಸೆರೆ

By Kannadaprabha News  |  First Published Sep 3, 2022, 6:24 AM IST

ಪರೀಕ್ಷಾರ್ಥಿಯಿಂದ ಕ್ಯಾಮೆರಾ ಮೂಲಕ ಪ್ರಶ್ನೆಪತ್ರಿಕೆ ಪಡೆದು ಸಂಚು ರೂಪಿಸಿದ್ದ ಆರೋಪಿ ಸಂಜೀವ


ಬೆಳಗಾವಿ(ಸೆ.03):  ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ಯಿಂದ ಕೆಪಿಟಿಸಿಎಲ್‌ ಕಿರಿಯ ಅಭಿಯಂತರ (ಜೆಇ)ಗೆ ನಡೆಸಲಾಗಿರುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ ಬೆಳಗಾವಿ ಪೊಲೀಸರು ಮತ್ತೊಬ್ಬ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ಈ ಮೂಲಕ ಪ್ರಕರಣಕ್ಕೆ ಸಂಬಂಧಿಸಿದಂತೆ 13 ಜನರನ್ನು ಬಂಧಿಸಿದ್ದಾರೆ.

ಗೋಕಾಕ ತಾಲೂಕಿನ ಸಂಜೀವ ಲಕ್ಷ್ಮಣ ಬಂಡಾರಿ ಬಂಧಿತ ಪ್ರಮುಖ ಆರೋಪಿ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆ.7ರಂದು ನಡೆದ ಕೆಪಿಟಿಸಿಎಲ್‌ನ ಕಿರಿಯ ಅಭಿಯಂತರ (ಜೆಇ) ನೇಮಕಾತಿ ಪರೀಕ್ಷೆ ಸಮಯದಲ್ಲಿ ಗೋಕಾಕ ನಗರದ ಜೆಎಸ್‌ಎಸ್‌ ಪಪೂ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪ್ರಮುಖ ಆರೋಪಿ ಸಿದ್ದಪ್ಪ ಕೆಂಪಣ್ಣ ಮದಿಹಳ್ಳಿ ಎಂಬಾತ ಸ್ಮಾರ್ಚ್‌ ವಾಚ್‌ನ ಕ್ಯಾಮೆರಾ ಮೂಲಕ ಪ್ರಶ್ನೆಪತ್ರಿಕೆಯನ್ನು ಫೋಟೊ ತೆಗೆದು ಟೆಲಿಗ್ರಾಂ ಮೂಲಕ ತನ್ನ ಗೆಳೆಯನಾಗಿರುವ ಸಂಜೀವ ಬಂಡಾರಿಗೆ ರವಾನಿಸಿದ್ದ. ಈ ಪ್ರಶ್ನೆ ಪತ್ರಿಕೆ ಪಡೆದ ಸಂಜೀವ ಬಂಡಾರಿ ಅಕ್ರಮ ಮಾಡಲು ಗ್ಯಾಂಗ್‌ ಮೂಲಕ ವ್ಯವಸ್ಥಿತ ಸಂಚು ರೂಪಿಸಿದ್ದನು.

Tap to resize

Latest Videos

Belagavi: ಕೆಪಿಟಿಸಿಎಲ್‌ ಅಕ್ರಮ: ಮತ್ತೆ ಮೂವರ ಬಂಧನ

ಪ್ರಮುಖ ಆರೋಪಿ ಸಿದ್ದಪ್ಪ ಮದಿಹಳ್ಳಿ ಎಂಬಾತನ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಸಂಜೀವ್‌ ಬಂಡಾರಿ, ವಕೀಲರ ಮೂಲಕವೇ ಎರಡು ಬಾರಿ ಮಧ್ಯಂತರ ಜಾಮೀನಿಗಾಗಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದನು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿ ಅರ್ಜಿಯನ್ನು ತಿರಸ್ಕೃರಿಸಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಅಕ್ರಮದ ಪ್ರಮುಖ ರೂವಾರಿ ಸಂಜೀವ ಬಂಡಾರಿಯನ್ನು ಶುಕ್ರವಾರ ಹುಬ್ಬಳ್ಳಿ- ಧಾರವಾಡ ಕಮಿಷನ್‌ರೇಟ್‌ ವ್ಯಾಪ್ತಿಯ ಬೆಂಡಿಗೇರಿ ಪೊಲೀಸರ ಸಹಕಾರೊಂದಿಗೆ ಬೆಳಗಾವಿ ಪೊಲೀಸರು ತಮ್ಮ ಖೆಡ್ಡಾಗೆ ಕೆಡವಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಬಂಧಿತನನ್ನು ಗೋಕಾಕನ ಪ್ರಿನ್ಸಿಪಲ್‌ ಜೆಎಂಎಫ್‌ಸಿಗೆ ಹಾಜರುಪಡಿಸಲಾಗಿದೆ. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಬಂಧಿತ ಆರೋಪಿಯನ್ನು 7 ದಿನಗಳ ಕಾಲ ವಿಚಾರಣೆಗಾಗಿ ಪೊಲೀಸ್‌ ವಶಕ್ಕೆ ನೀಡಿ ಆದೇಶಿಸಿದೆ.

ಪ್ರಕರಣದ ಎರಡನೇ ಆರೋಪಿಯಾಗಿರುವ ಸಂಜೀವ ಬಂಡಾರಿ ಪರೀಕ್ಷಾರ್ಥಿಗಳಿಗೆ ಉಪಯೋಗಿಸಲು ಅತ್ಯಾಧುನಿಕ ತಂತ್ರಜ್ಞಾನಯುಳ್ಳ ಬ್ಲ್ಯೂಟೂತ್‌ಗಳನ್ನು ರವಾನಿಸುತ್ತಿದ್ದ ಎನ್ನಲಾಗಿದೆ. ಈತ ಪೊಲೀಸ್‌ ಪೇದೆಯ ಮಗನಾಗಿದ್ದು, ಈ ಹಿಂದೆ ನಡೆದ ಪೊಲೀಸ್‌ ಪೇದೆ ಪರೀಕ್ಷೆಯಲ್ಲಿ ನಡೆದ ಅಕ್ರಮದಲ್ಲಿಯೂ ಈತನ ಪಾತ್ರ ಇರುವ ಹಿನ್ನೆಲೆ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಜಾಮೀನಿನ ಮೇಲೆ ಹೊರಗೆ ಬಂದು ತನ್ನ ಹಳೆಯ ಚಾಳಿಯನ್ನು ಮತ್ತೆ ಮುಂದುವರಿಸಿದ್ದ. ಈತ ಪರೀಕ್ಷಾರ್ಥಿಗಳಿಗೆ ನೀಡಿರುವ ಅತ್ಯಾಧುನಿಕ ಬ್ಲ್ಯೂಟೂತ್‌ ಡಿವೈಸ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಲ್ಲದೇ ಪರೀಕ್ಷೆ ಸಮಯದಲ್ಲಿ ಕೇಂದ್ರಗಳಿಗೆ ಅಳವಡಿಸಲಾಗಿರುವ ನೆಟ್‌ವರ್ಕ್ ಜಾಮರ್‌ ನಿಷ್ಕಿ್ರೕಯವಾಗಿರುವ ಅಂಶವೂ ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಈ ಕುರಿತವೂ ಆತನಿಂದ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ ಎನ್ನಲಾಗಿದೆ.

ಅಕ್ರಮದ ಆರೋಪಿಗಳು:

ಗೋಕಾಕ ತಾಲೂಕಿನ ಸಿದ್ದಪ್ಪ ಕೆಂಪಣ್ಣ ಮದಿಹಳ್ಳಿ, ಮಾಲದಿನ್ನಿ ಗ್ರಾಮದ ಸುನೀಲ ಅಜಪ್ಪ ಭಂಗಿ, ಹುಕ್ಕೇರಿ ತಾಲೂಕಿನ ಬಿ.ಕೆ.ಶಿರಹಟ್ಟಿಗ್ರಾಮದ ಬಸವಣ್ಣಿ ಶಿವಪ್ಪ ದೊಣವಾಡ, ಬೆನಚಿನಮರಡಿ ಗ್ರಾಮದ ಸಿದ್ದಪ್ಪ ಕೆಂಪಣ್ಣ ಕೊತ್ತಲ, ಗೋಕಾಕ ತಾಲೂಕಿನ ವೀರನಗಡ್ಡಿ ಗ್ರಾಮದ ಸಂತೋಷ ಪ್ರಕಾಶ ಮಾನಗಾಂವಿ, ಮಾಲದಿನ್ನಿ ಗ್ರಾಮದ ರೇಣುಕಾ ವಿಠ್ಠಲ ಜವಾರಿ, ಗದಗ ಜಿಲ್ಲೆಯ ಬೆಟಗೇರಿ ಗ್ರಾಮದ ಅಮರೇಶ ಚಂದ್ರಶೇಖರಯ್ಯ ರಾಜೂರ, ಮೂಲತಃ ಚಿಕ್ಕೋಡಿ ತಾಲೂಕಿನ ಸದ್ಯ ಗದಗ ನಿವಾಸಿಗಳಾದ ಮಾರುತಿ ಶಂಕರ ಸೋನವಣಿ ಹಾಗೂ ಗದಗ ಸುಮಿತಕುಮಾರ ಮಾರುತಿ ಸೋನವಣಿ, ಹುಕ್ಕೇರಿ ತಾಲೂಕಿನ ಕಮತನೂರ ಗ್ರಾಮದ ಆದೇಶ ಈರಪ್ಪ ನಾಗನೂರಿ, ಬೈಲಹೊಂಗಲ ಮೂಲದ ಮಡಿವಾಳಪ್ಪ ಬಾಳಪ್ಪ ತೋರಣಗಟ್ಟಿ ಹಾಗೂ ಬೈಲಹೊಂಗಲ ತಾಲೂಕಿನ ಹೊಸಕೋಟಿ ಗ್ರಾಮದ ಶಂಕರ ಕಲ್ಲಪ್ಪ ಉಣಕಲ್‌ ಬಂಧಿತ ಆರೋಪಿಗಳು.
 

click me!