ಜು.15 ಬಳಿಕ ಬರಪೀಡಿದ ಗ್ರಾಮಗಳ ಘೋಷಣೆ: ಸಚಿವ ಕೃಷ್ಣ ಬೈರೇಗೌಡ

Published : Jul 07, 2023, 03:00 AM IST
ಜು.15 ಬಳಿಕ ಬರಪೀಡಿದ ಗ್ರಾಮಗಳ ಘೋಷಣೆ: ಸಚಿವ ಕೃಷ್ಣ ಬೈರೇಗೌಡ

ಸಾರಾಂಶ

ರಾಜ್ಯದಲ್ಲಿ ಜೂನ್‌ ತಿಂಗಳಲ್ಲಿ ಮಳೆ ಕೊರತೆ ಉಂಟಾಗಿತ್ತು. ಸದ್ಯ ಮಳೆಯ ಪ್ರಮಾಣ ಹೆಚ್ಚಾಗಿದೆ. ಮುಂದಿನ 10 ದಿನಗಳ ಕಾಲ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆಯಿದೆ. ಉತ್ತರ ಕರ್ನಾಟಕದಲ್ಲೂ ಉತ್ತಮ ಮಳೆಯ ನಿರೀಕ್ಷೆ ಹೊಂದಲಾಗಿದೆ: ಕಂದಾಯ ಸಚಿವ ಕೃಷ್ಣ ಬೈರೇಗೌಡ

ವಿಧಾನಸಭೆ(ಜು.07):  ಜುಲೈ 15ನೇ ತಾರೀಖಿನವರೆಗೆ ಸುರಿಯುವ ಮಳೆಯ ಪ್ರಮಾಣವನ್ನು ಗಮನಿಸಿ ರಾಜ್ಯದಲ್ಲಿ ಬರಪೀಡಿತ ಹಳ್ಳಿಗಳ ಘೋಷಣೆ ಮಾಡಲಾಗುವುದು. ಸದ್ಯ ನೀರಿನ ಸಮಸ್ಯೆ ತಲೆದೋರದಂತೆ ಪರಿಹಾರ ಕ್ರಮ ಕೈಗೊಳ್ಳಲು ಪ್ರತಿ ಜಿಲ್ಲಾ ಪಂಚಾಯತಿಗೆ 1 ಕೋಟಿ ರು. ಅನುದಾನ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಶೂನ್ಯವೇಳೆಯಲ್ಲಿ ಕಾಂಗ್ರೆಸ್‌ನ ಅಲ್ಲಮಪ್ರಭು ಪಾಟೀಲ್‌ ಮಾಡಿದ ಪ್ರಸ್ತಾವನೆಗೆ ಉತ್ತರಿಸಿ, ರಾಜ್ಯದಲ್ಲಿ ಜೂನ್‌ ತಿಂಗಳಲ್ಲಿ ಮಳೆ ಕೊರತೆ ಉಂಟಾಗಿತ್ತು. ಸದ್ಯ ಮಳೆಯ ಪ್ರಮಾಣ ಹೆಚ್ಚಾಗಿದೆ. ಮುಂದಿನ 10 ದಿನಗಳ ಕಾಲ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆಯಿದೆ. ಉತ್ತರ ಕರ್ನಾಟಕದಲ್ಲೂ ಉತ್ತಮ ಮಳೆಯ ನಿರೀಕ್ಷೆ ಹೊಂದಲಾಗಿದೆ.

ಬರ ಪೀಡಿತ ರಾಜ್ಯವೆಂದು ಘೋಷಿಸಲಿ: ಯಡಿಯೂರಪ್ಪ ಆಗ್ರಹ

ಹೀಗಾಗಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗುವ ಸಾಧ್ಯತೆಗಳಿವೆ. ಅಲ್ಲದೆ ಸಚಿವ ಸಂಪುಟ ಉಪ ಸಮಿತಿಯು ಮಳೆ ಕೊರತೆಯಿಂದಾಗುತ್ತಿರುವ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳುತ್ತಿದೆ. ಜುಲೈ 15ರವರೆಗೆ ಮಳೆಯ ಪ್ರಮಾಣವನ್ನು ಗಮನಿಸಲಾಗುವುದು. ಆನಂತರ ಬರಪೀಡಿತ ಗ್ರಾಮಗಳ ಘೋಷಣೆ ಮಾಡಿ ಅಗತ್ಯ ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದರು.

ಎಲ್ಲ ಜಿಲ್ಲೆಗಳ ಜಿಲ್ಲಾ ಪಂಚಾಯತಿಗಳಿಗೆ ಗ್ರಾಮೀಣ ಭಾಗದಲ್ಲಿ ಉದ್ಭವಿಸುವ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ತಲಾ 1 ಕೋಟಿ ರು. ನೀಡಲಾಗಿದೆ. ಸದ್ಯ 193 ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ. 339 ಗ್ರಾಮಗಳಲ್ಲಿ ಖಾಸಗಿ ಬೋರ್‌ವೆಲ್‌ ಮೂಲಕ ನೀರು ಪೂರೈಸಲಾಗುತ್ತಿದೆ. ಗ್ರಾಮಗಳಲ್ಲಿ ನೀರಿನ ಸಮಸ್ಯೆ ತಲೆದೋರಿದರೆ 24 ಗಂಟೆಯೊಳಗೆ ನೀರು ಪೂರೈಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ರಾಜ್ಯದಲ್ಲಿ ಬರಗಾಲ ಘೋಷಣೆ ಮಾಡಿ : ಕುರುಬೂರು ಶಾಂತಕುಮಾರ್‌

ಈ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿಯ ಬಸವರಾಜ ಬೊಮ್ಮಾಯಿ, ಮುಂಗಾರು ಕುಂಠಿತದಿಂದ ಎದುರಾಗಿರುವ ನೀರಿನ ಸಮಸ್ಯೆ ನಿವಾರಿಸಲು ತಾಲೂಕು ಮಟ್ಟದಲ್ಲ ಶಾಶ್ವತ ಕಾರ್ಯಪಡೆ ರಚಿಸಬೇಕಿದೆ. ಆ ಕಾರ್ಯಪಡೆಗಳಿಗೆ ತಲಾ 50 ಲಕ್ಷ ರು. ಅನುದಾನ ನೀಡಬೇಕು. ಅವುಗಳಲ್ಲಿ ರೂಪಿಸಲಾಗುವ ಕ್ರಿಯಾ ಯೋಜನೆಯ ಅನುಮತಿ ಅಧಿಕಾರವನ್ನು ತಹಸೀಲ್ದಾರ್‌ಗಳಿಗೆ ನೀಡಬೇಕು. ಅದರ ಜತೆಗೆ ಮಳೆ ನಿರೀಕ್ಷೆಯಲ್ಲಿ ಬಿತ್ತನೆ ಮಾಡಿದ ರೈತರಿಗೆ ಉಂಟಾಗಿರುವ ನಷ್ಟಕ್ಕೆ ಪರಿಹಾರ ನೀಡಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

ಅದಕ್ಕುತ್ತರಿಸಿದ ಕೃಷ್ಣ ಬೈರೇಗೌಡ, ಬೆಳೆ ವಿಮೆಗೆ ಸಂಬಂಧಿಸಿದಂತೆ ವಿಮಾ ಮೊತ್ತ ಕ್ಲೇಮ್‌ ಮಾಡಲು ಇದ್ದಂತಹ ಸಮಯ ವಿಸ್ತರಿಸುವಂತೆ ಕೇಂದ್ರ ಸರ್ಕಾರಕ್ಕೆ ಕೋರಲಾಗಿತ್ತು. ಆದರೆ, ಕೇಂದ್ರ ಸರ್ಕಾರ ಅದನ್ನು ನಿರಾಕರಿಸಿದೆ. ಆದರೂ ರೈತರಿಗೆ ಪರಿಹಾರ ದೊರಕುವಂತೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಜತೆಗೆ ಕಾರ್ಯಪಡೆ ರಚನೆ ಬಗ್ಗೆಯೂ ಪರಿಶೀಲಿಸಲಾಗುವುದು ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕರ್ನಾಟಕ ಗದ್ದುಗೆ ಫೈಟ್‌ ಬಗ್ಗೆ ಹೈಕಮಾಂಡ್‌ ನಾಯಕರ ಚರ್ಚೆ
ಚುಂಚ ಶ್ರೀ ಬಳಿ ಕೈ ಮುಗಿದು ಎಚ್‌ಡಿಕೆ ಕ್ಷಮೆ