
ಬೆಂಗಳೂರು(ಜು.07): ಅನ್ನಭಾಗ್ಯ ಯೋಜನೆ ಜಾರಿಯ ಬೆನ್ನಲ್ಲೇ ಪ್ರತಿ ಲೀಟರ್ ಹಾಲಿನ ದರವನ್ನು 5 ರು.ಹೆಚ್ಚಳ ಮಾಡಲು ಕೆಎಂಎಫ್ ಸಿದ್ಧತೆ ನಡೆಸಿದ್ದು, ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟುವ ಸಾಧ್ಯತೆ ಇದೆ. ಜುಲೈ 10ರಂದು ಅನ್ನಭಾಗ್ಯ ಯೋಜನೆಗೆ ಅಧಿಕೃತವಾಗಿ ರಾಜ್ಯ ಸರ್ಕಾರ ಚಾಲನೆ ನೀಡಲಿದೆ. ಆ ನಂತರ ಜುಲೈ 11ರಂದು ನಂದಿನಿ ಹಾಲಿನ ದರ ಏರಿಸಲು ರಾಜ್ಯ ಸರ್ಕಾರದ ಮುಂದೆ ಬೇಡಿಕೆ ಸಲ್ಲಿಸಿರುವ ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್) ಆಡಳಿತ ಮಂಡಳಿ ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೆ ಚರ್ಚಿಸಿ ಅಂತಿಮ ತೀರ್ಮಾನ ಪ್ರಕಟಿಸಲಿದೆ ಎನ್ನಲಾಗಿದೆ.
ಗುರುವಾರ ಸಂಜೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯಕ್ ಅವರ ಅಧ್ಯಕ್ಷತೆಯಲ್ಲಿ ನಡೆಯದ ಆಡಳಿತ ಮಂಡಳಿ ಸಭೆಯಲ್ಲಿ ಪ್ರತಿ ಲೀಟರ್ ಹಾಲಿನ ದರವನ್ನು 5 ರು. ಹೆಚ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಲು ಒಕ್ಕೊರಲಿನಿಂದ ತೀರ್ಮಾನಿಸಲಾಯಿತು. ರಾಜ್ಯದ ಎಲ್ಲಾ ಹಾಲು ಒಕ್ಕೂಟಗಳು ಪ್ರತಿ ಲೀಟರ್ ಹಾಲಿನ ದರವನ್ನು 5 ರು. ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದು, ಈಗಾಗಲೇ ರಾಜ್ಯ ಸರ್ಕಾರಕ್ಕೂ ಪ್ರಸ್ತಾವನೆ ಸಲ್ಲಿಸಿವೆ. ದರ ಹೆಚ್ಚಳದ ಅಗತ್ಯತೆ ಏನು ಎಂಬುದನ್ನು ಮುಖ್ಯಮಂತ್ರಿಯವರಿಗೆ ಮನವರಿಕೆ ಮಾಡಿಕೊಡಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕರುನಾಡಿನ ಜನತೆಗೆ ಮತ್ತೊಂದು ಶಾಕ್: ಹಾಲಿನ ದರ 5 ರೂ. ಹೆಚ್ಚಳ ಸಾಧ್ಯತೆ ?
ಹೈನು ರಾಸುಗಳ ನಿರ್ವಹಣಾ ವೆಚ್ಚದಲ್ಲಿ ನಿರಂತರ ಏರಿಕೆ. ಪಶು ಆಹಾರ ಉತ್ಪಾದನೆಗೆ ಬಳಸುವ ಮೆಕ್ಕೆಜೋಳ, ಅಕ್ಕಿತೌಡು, ಖನಿಜ ಪದಾರ್ಥಗಳ ಬೆಲೆ ಹೆಚ್ಚಳ, ಹತ್ತಿಕಾಳು ಹಿಂಡಿ ಸೇರಿದಂತೆ ಇತರೆ ಪಶು ಅಹಾರದಲ್ಲಿ ಶೇ.30ಕ್ಕಿಂತಲೂ ಅಧಿಕ ಏರಿಕೆಯಾಗಿದೆ. ಪ್ರತಿ ಕೆಜಿ ಪಶು ಆಹಾರ ಉತ್ಪಾದನೆಯ ವೆಚ್ಚವು ಎರಡು ವರ್ಷದ ಹಿಂದೆ 18 ರು. ಇತ್ತು. ಈಗ 25 ರು.ಗಳಿಗೆ ತಲುಪಿದೆ. ಇದು ಕೂಡ ಹಾಲಿನ ದರ ಏರಿಕೆಗೆ ಕಾರಣ. ಮುಖ್ಯವಾಗಿ ವಿದ್ಯುತ್ ದರ ಹೆಚ್ಚಳವಾಗಿದ್ದು, ಸಾಗಣಿಕೆ ವೆಚ್ಚವು ಜಾಸ್ತಿಯಾಗಿದೆ.
ಹಾಲಿನ ಮಾರುಕಟ್ಟೆಯಲ್ಲಿ ದೊಡ್ಲ, ಹೆರಿಟೇಜ್, ತಿರುಮಲ, ಜೆರ್ಸಿ, ಆರೋಗ್ಯ ಸೇರಿದಂತೆ ಇತರೆ ಬ್ರ್ಯಾಂಡ್ ಹಾಲಿನ ದರಕ್ಕೆ ಹೋಲಿಕೆ ಮಾಡಿದರೆ ನಂದಿನಿ ಹಾಲಿನ ದರ ಕಡಿಮೆ ಇದೆ. ಹಾಲು ಉತ್ಪಾದಕರು ಹಾಲನ್ನು ಖಾಸಗಿ ಕಂಪನಿಗಳಿಗೆ ಹೆಚ್ಚು ಹಣಕ್ಕೆ ಮಾರಾಟ ಮಾಡಲು ಮುಂದಾಗುತ್ತಿರುವುದು ಕೂಡ ದರ ಹೆಚ್ಚಳ ಅನಿವಾರ್ಯ ಎನ್ನುವಂತ ಸ್ಥಿತಿ ಬಂದಿದೆ. ಈ ಎಲ್ಲ ವಿಚಾರಗಳನ್ನು ರಾಜ್ಯ ಸರ್ಕಾರದ ಗಮನಕ್ಕೆ ತಂದು ಪ್ರತಿ ಲೀಟರ್ ಹಾಲಿನ ದರವನ್ನು 5 ರು.ಗಳಿಗೆ ಹೆಚ್ಚಳ ಮಾಡುವಂತೆ ಮುಖ್ಯಮಂತ್ರಿಯವರ ಮೇಲೆ ಒತ್ತಡ ತರಲು ಜುಲೈ 10ರಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ಅಧ್ಯಕ್ಷತೆಯಲ್ಲಿ ರಾಜ್ಯದ ಎಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು, ಪದಾಧಿಕಾರಿಗಳು ಸಭೆ ನಡೆಸಲು ಇದೇ ವೇಳೆ ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ