
ಗಂಗಾವತಿ (ಜೂ.5): ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿರುವ ಆಂಜನೇಯಸ್ವಾಮಿ ದೇಗುಲದಲ್ಲಿ ಆರತಿ ತಟ್ಟೆಗೆ ಭಕ್ತರು ಹಾಕುತ್ತಿರುವ ಹಣ ಅರ್ಚಕರಿಗೆ ಸೇರುತ್ತಿರುವುದಕ್ಕೆ ಮುಜರಾಯಿ ಇಲಾಖೆಯ, ದೇವಾಲಯದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಕಾಶ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕಳೆದ ನಾಲ್ಕು ದಿನಗಳ ಹಿಂದೆ ಧಾರಾವಾಡ ಹೈಕೋರ್ಟ್ ಆದೇಶದಂತೆ ಅರ್ಚಕ ವಿದ್ಯಾದಾಸ್ ಬಾಬಾ ಅವರು ದಿನ ನಿತ್ಯ ಪೂಜೆ ಮಾಡುತ್ತಿದ್ದಾರೆ. ದೇವರಿಗೆ ಮಾಡುವ ಆರತಿ ತಟ್ಟೆಗೆ ಭಕ್ತರು ಹಣ ಹಾಕುತ್ತಿದ್ದು, ಈ ಹಣ ಅರ್ಚಕರು ಪಡೆಯಬಾರದು. ಕೇವಲ ಪೂಜೆ ಮಾತ್ರ ಸೀಮಿತ ಎಂದು ಸುಪ್ರೀಂ ಕೋರ್ಟ್ ಆದೇಶದಲ್ಲಿದೆ. ಆದರೆ, ಅರ್ಚಕರು ಆರತಿ ತಟ್ಟೆ ಹಣ ಪಡೆಯುತ್ತಿದ್ದು ಇದನ್ನು ನಿಲ್ಲಿಸುವಂತೆ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತಕ್ಕೆ ಪ್ರಕಾಶ ದೂರು ನೀಡಿದ್ದಾರೆ.
ಈ ಹಿನ್ನಲೆಯಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಮುಜರಾಯಿ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ವಿಚಾರಣೆ ನಡೆಸಿದರು.
ಕಾಣಿಕೆ ಪೆಟ್ಟಿಗೆ ಭರ್ತಿ:
ದೇವಸ್ಥಾನದಲ್ಲಿರುವ ಕಾಣಿಕೆ ಪೆಟ್ಟಿಗೆ ಭರ್ತಿಯಾಗಿದ್ದರಿಂದ ದೇಗುಲದವರು ಬಟ್ಟೆಯಿಂದ ಮುಚ್ಚಿದ್ದಾರೆ. ಪ್ರತಿ ಭಾರಿ ಎರಡು ತಿಂಗಳಿಗೊಮ್ಮೆ ತೆರವು ಮಾಡಿ ಹಣ ಎಣಿಕೆ ಮಾಡುತ್ತಿದ್ದರು. ಈಗ ಮೂರು ತಿಂಗಳ ಕಳೆದರೂ ಸಹ ಕಾಣಿಕೆ ಪೆಟ್ಟಿಗೆ ತೆರೆಯದೆ ಇರುವುದರಿಂದ ತುಂಬಿದೆ. ಈ ಕಾರಣಕ್ಕೆ ಬಟ್ಟೆಯಿಂದ ಮುಚ್ಚಲಾಗಿದೆ ಎಂದು ಹೇಳಲಾಗುತ್ತಿದೆ.
ಅಂಜನಾದ್ರಿಯ ಆಂಜನೇಯಸ್ವಾಮಿ ದೇಗುಲದಲ್ಲಿ ಭಕ್ತರು ಆರತಿ ತಟ್ಟೆಗೆ ಹಾಕುವ ಹಣ ಸ್ವಂತಃಕ್ಕೆ ಬಳಕೆ ಮಾಡುವುದಿಲ್ಲ. ಈ ಹಣವನ್ನು ಪೂಜೆ, ಧಾರ್ಮಿಕ ಕಾರ್ಯಕ್ರಮ ಮತ್ತು ಅಭಿವೃದ್ಧಿಗೆ ಬಳಕೆ ಮಾಡುತ್ತೇನೆ.
ವಿದ್ಯಾದಾಸ್ ಬಾಬಾ ಅರ್ಚಕ. ಅಂಜನಾದ್ರಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ