
Bengaluru Chinnaswamy stampede: ಪೂರ್ವತಯಾರಿ ಇಲ್ಲದೇ ಹುಡುಗಾಟಿಕೆ ಮಾಡಿದ್ದರಿಂದ ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತದ ದುರ್ಘಟನೆ ಸಂಭವಿಸಿ 11 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.
ಬುಧವಾರ ಸಂಜೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಟೇಡಿಯಂನಲ್ಲಿ ಪರದಾಟ ಮುಂದುವರೆದಿದೆ. ಅದರ ನಡುವೆಯೇ ಕಾರ್ಯಕ್ರಮ ನಡೆದಿದೆ. ಪೂರ್ವತಯಾರಿ ಇಲ್ಲದೆ ಹೀಗಾಗಿದೆ. ಇದೆಲ್ಲದಕ್ಕೂ ರಾಜ್ಯ ಸರ್ಕಾರವೇ ಹೊಣೆ ಎಂದು ಆರೋಪಿಸಿದರು.
ಮಂಗಳವಾರ ಆರ್‌ಸಿಬಿ ಕಪ್ ಗೆದ್ದಾಗ ದೇಶದಲ್ಲಿ ಸಂಭ್ರಮಾಚರಣೆ ನಡೆಸಲಾಗಿತ್ತು. ರಾಜ್ಯದಲ್ಲೂ ಲಕ್ಷೋಪಲಕ್ಷ ಜನರು ಸಂಭ್ರಮಿಸಿದ್ದಾರೆ. ಆದರೆ, ಇಂಥ ವಿಜಯೋತ್ಸವ ಆಚರಿಸುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಸ್ವಲ್ಪ ವಿವೇಚನೆಯಿಂದ ನಡೆದುಕೊಳ್ಳಬೇಕಿತ್ತು ಎಂದು ಅವರು ಹೇಳಿದರು.
ಬೆಂಗಳೂರು ಸೂತಕದ ಮನೆ:
ದೇಶ ಸಂಭ್ರಮಾಚರಣೆ ನಡೆಸುತ್ತಿರುವ ಸಂದರ್ಭದಲ್ಲಿ ಬೆಂಗಳೂರು ಸೂತಕದ ಮನೆ ಆಗಿದೆ. ಹೆಣ್ಣು ಮಕ್ಕಳು ಬ್ಯಾರಿಕೇಡ್ ಬಳಿ ಪರದಾಡುತ್ತಿದ್ದರು. ಕ್ರಿಕೆಟಿಗ ವಿರಾಟ್ ಕೊಹ್ಲಿ ಕೂಡ ಬೇಸರದಿಂದ ಬಸ್ ಹತ್ತಿ ಹೊರಟಿದ್ದರು. ಆದರೆ, ರಾಜಕಾರಣಿಗಳು, ಮುಖ್ಯಮಂತ್ರಿಗಳು, ಅಧಿಕಾರಿಗಳ ಮಕ್ಕಳು ಆಟೋಗ್ರಾಫ್ ಪಡೆಯಲು ಹೋಗಿದ್ದರು ಎಂದರು.
ಕಾಲ್ತುಳಿತದ ಅನಾಹುತ, ಸಾವುಗಳಿಗೆ ಯಾರು ಹೊಣೆ ಎಂದು ಮುಖ್ಯಮಂತ್ರಿಗಳು ನಿರ್ಧರಿಸಲಿ. ರಾಜ್ಯ ಸರ್ಕಾರ ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದು, ಪ್ರಚಾರದ ಹುಚ್ಚಿನ ಪರಿಣಾಮವಾಗಿ ಇದೆಲ್ಲ ನಡೆದಿದೆ. ಕೆಳಗೆ ಬಿದ್ದ ಹೆಣ್ಣು ಮಕ್ಕಳನ್ನು ಎತ್ತುವವರೂ ಇರಲಿಲ್ಲ. ಸ್ವಯಂಸೇವಕರು, ಪೊಲೀಸ್ ವ್ಯವಸ್ಥೆ ಇರಲಿಲ್ಲ. ಆ್ಯಂಬುಲೆನ್ಸ್ ವ್ಯವಸ್ಥೆಯೂ ಇರಲಿಲ್ಲ. ಲಕ್ಷಾಂತರ ಸಂಖ್ಯೆಯಲ್ಲಿ ಜನರು ಬರುವುದು ಸರಕಾರಕ್ಕೆ ಗೊತ್ತಿರಲಿಲ್ಲವೇ?. ಚಿನ್ನಸ್ವಾಮಿ ಕ್ರೀಡಾಂಗಣದ ಸಾಮರ್ಥ್ಯ ಇವರಿಗೆ ಗೊತ್ತಿರಲಿಲ್ಲವೇ? ಎಂದು ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ