ಈಗಾಗಲೇ ಕೊರೋನಾ ಮಹಾಮಾರಿ ಎನ್ನುವುದು ಎಲ್ಲಾ ವ್ಯವಸ್ಥೆಗಳನ್ನು ಬುಡಮೇಲು ಮಾಡಿದೆ. ಶಾಲೆಗಳು ಆರಂಭವಾಗುವುದು ಇನ್ನೂ ಅನುಮಾನವಾಗಿಯೇ ಉಳಿದಿದೆ. ಈ ನಡುವೆ ಮನವಿಯೊಂದು ಮಾಡಲಾಗಿದೆ.
ಶಿಗ್ಗಾಂವಿ(ಸೆ.24): ಎಲ್‌ಕೆಜಿ ಮತ್ತು ಯುಕೆಜಿಯನ್ನು ಸರ್ಕಾರಿ ಪಬ್ಲಿಕ್ ಶಾಲೆಗಳಲ್ಲಿ ಆರಂಭಿಸುವ ಬದಲು ಅಂಗನವಾಡಿ ಕೇಂದ್ರಗಳಲ್ಲಿ ಆರಂಭಿಸಬೇಕೆಂದು ಆಗ್ರಹಿಸಿ ತಾಲೂಕು ಅಂಗನವಾಡಿ ಕಾರ್ಯಕರ್ತೆಯರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಪ್ರಕಾಶ ಕುದರಿ ಮೂಲಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಿಗೆ ಮನವಿ ಅರ್ಪಿಸಿದರು.
ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ಅಧ್ಯಕ್ಷ ಹೊನ್ನಪ್ಪ ಮರೆಮ್ಮನವರ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತೆಯರು, ಎಲ್‌ಕೆಜಿ ಮತ್ತು ಯುಕೆಜಿ ಅಂಗನವಾಡಿ ಕೇಂದ್ರಗಳಲ್ಲಿ ನಡೆಸುವ ಮೂಲಕ ಐಸಿಡಿಎಸ್ ಯೋಜನೆ ಉಳಿಸಬೇಕು ಎಂದು ಆಗ್ರಹಿಸಿದರು.
‘ಹಾಡು ಮಾತಾಡು’ ರೇಡಿಯೋ ಕಲಿಕೆಗೆ ಯಶಸ್ಸು ...
ಬಳಕ ತಹಸೀಲ್ದಾರ್ ಮೂಲಕ ಅರ್ಪಿಸಿದ ಮನವಿಯಲ್ಲಿ ರಾಜ್ಯ ಶಿಕ್ಷಣ 2016 ಹಾಗೂ ಕೇಂದ್ರ ರಾಷ್ಟ್ರೀಯ ಶಿಕ್ಷಣ ನೀತಿ 2020ದಡಿ ಅಂಗನವಾಡಿ ಕೇಂದ್ರಗಳ ಬಲವರ್ಧನೆಗೆ ಕೈಗೊಂಡ ಕ್ರಮ ಸ್ವಾಗತಾರ್ಹ. ಆದರೆ, ಎಲ್‌ಕೆಜಿ ಮತ್ತು ಯುಕೆಜಿ ಸರ್ಕಾರಿ ಪಬ್ಲಿಕ್ ಶಾಲೆಗಳಲ್ಲಿ ನಡೆಸುವುದು ಖಂಡನೀಯ. ಸದ್ಯ ಮುಚ್ಚುವ ಸ್ಥಿತಿಯಲ್ಲಿರುವ ಅಂಗನವಾಡಿ ಕೇಂದ್ರಗಳಲ್ಲಿಯೇ ತರಗತಿ ನಡೆಸುವ ಮೂಲಕ ಐಸಿಡಿಎಸ್ ಯೋಜನೆ ಉಳಿಸಬೇಕು ಎಂದು ಒತ್ತಾಯಿಸಿದರು.
ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ, ಕೇಂದ್ರದ ಮಕ್ಕಳಿಗೆ ಸಮವಸ್ತ್ರ, ಪ್ರಾಥಮಿಕ ಶಾಲೆಗೆ ದಾಖಲಾಗಲು ಅಂಗನವಾಡಿ ಕೇಂದ್ರಗಳಿಂದಲೇ ವರ್ಗಾವಣೆ ಪತ್ರ ನೀಡಲು ಆದೇಶ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಸ್ವೀಕರಿಸಿದ ತಹಸೀಲ್ದಾರ್ ಪ್ರಕಾಶ ಕುದರಿ, ತಾಲೂಕಿನಲ್ಲಿರುವ ಅಂಗನವಾಡಿ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ತಾಲೂಕು ಆಡಳಿತ ಕ್ರಮಕೈಗೊಂಡಿದೆ. ಕಟ್ಟಡ, ಸ್ಥಳಾವಕಾಶ ಕಲ್ಪಿಸಲು ಮತ್ತು ಕಾರ್ಯಕರ್ತೆಯರ ಸಮಸ್ಯೆಗೆ ಪರಿಹಾರ ವಿತರಣೆಗೆ ಬದ್ಧವಾಗಿದೆ ಎಂದರು. ಇದೇ ವೇಳೆ ಗೃಹ ಸಚಿವರ ಪರವಾಗಿ ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಅವರಿಗೆ ಕಾರ್ಯಕರ್ತೆಯರು ಮನವಿ ಸಲ್ಲಿಸಿದರು.
ಈ ವೇಳೆ ಅನ್ನಪೂರ್ಣ ಈಳಿಗೇರ, ಟಿ.ಎನ್. ಜವಳಗಟ್ಟಿ, ಎಸ್.ಪಿ. ಪಾಟೀಲ, ಗೌರಮ್ಮ ಗೌಳಿ, ಎಂ.ಎನ್. ಕುದರಿ, ಎಲ್.ಸಿ. ನಾಗನಗೌಡ್ರ, ಕೆ.ಪಿ. ಮಾವುರು, ಎ.ಆರ್. ಪಾಟೀಲ, ಡಿ.ಪಿ. ಗಂಜೀಗಟ್ಟಿ, ಅಕ್ಕಮಹಾದೇವಿ ಕೋಟಿ, ನಿಂಗಮ್ಮ ಪಾಟೀಲ, ತುಳಸಾ ಚಿತ್ರಗಾರ, ಲಚ್ಚವ್ವ ಚವ್ಹಾಣ, ಆರ್.ವೈ. ಈಳಿಗೇರ, ಅನಿತಾ ಯಲಿಗಾರ, ಎ.ಎನ್. ಗುಡಿಮನಿ, ಎಸ್.ಎನ್. ರಾಟಿ, ಗೌರಮ್ಮ ದೊಡ್ಡಮನಿ, ಲಕ್ಷ್ಮೀ ತೋಟದ ಉಪಸ್ಥಿತರಿದ್ದರು.