
ನವದೆಹಲಿ(ಸೆ.24): ಭಾರತದಲ್ಲಿ ನೆಲೆಯೂರಿರುವ ಟಿಬೆಟಿಯನ್ ಧರ್ಮಗುರು ದಲೈಲಾಮಾ ಹಾಗೂ ಅವರ ಸಹಚರರ ಕುರಿತು ಮಾಹಿತಿ ಸಂಗ್ರಹಿಸಲು, ಲಾಮಾ ಉತ್ತರಾಧಿಕಾರಿ ಸ್ಥಾನಕ್ಕೆ ಚೀನಾ ಮೂಲದ ವ್ಯಕ್ತಿಯ ಪರ ಬೆಂಬಲ ಗಳಿಸಲು ದೇಶದ ವಿವಿಧೆಡೆ ನೆಲೆಸಿರುವ ಬೌದ್ಧ ಭಿಕ್ಕುಗಳಿಗೆ ಚೀನಾ ಭರ್ಜರಿ ಲಂಚ ನೀಡುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.
ಮೈಸೂರು ಜಿಲ್ಲೆಯ ಬೈಲಕುಪ್ಪೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದಲ್ಲಿರುವ ಟಿಬೆಟಿಯನ್ ಶಿಬಿರದಲ್ಲಿರುವ ಬೌದ್ಧ ಸನ್ಯಾಸಿಗಳಿಗೆ ಲಕ್ಷಾಂತರ ರು. ಹಣವನ್ನು ಚೀನಾ ಸಂದಾಯ ಮಾಡಿರುವುದು ಜಾರಿ ನಿರ್ದೇಶನಾಲಯ (ಇ.ಡಿ.) ನಡೆಸುತ್ತಿರುವ ತನಿಖೆ ವೇಳೆ ಬಟಾಬಯಲಾಗಿದೆ.
ಅಕ್ರಮ ಹಣ ವರ್ಗಾವಣೆ ದಂಧೆ ಆರೋಪದ ಮೇರೆಗೆ ಚೀನಾ ಪ್ರಜೆ ಚಾರ್ಲಿ ಪೆಂಗ್ ಎಂಬಾತನನ್ನು ಇ.ಡಿ. ಬಂಧಿಸಿ ವಿಚಾರಣೆ ನಡೆಸುತ್ತಿದೆ. ಈತನೇ ಖೊಟ್ಟೆಕಂಪನಿಗಳ ಖಾತೆ ಮೂಲಕ ಬೌದ್ಧ ಧರ್ಮೀಯ ಸನ್ಯಾಸಿಗಳಿಗೆ ಹಣ ವರ್ಗಾವಣೆ ಮಾಡಿದ್ದಾನೆ ಎಂದು ಟೀವಿ ವಾಹಿನಿಯೊಂದು ವರದಿ ಮಾಡಿದೆ.
ಹಿಮಾಚಲಪ್ರದೇಶದ ಧರ್ಮಶಾಲಾದ ಬಳಿಕ ದೇಶದಲ್ಲಿರುವ ಎರಡನೇ ಅತಿದೊಡ್ಡ ಟಿಬೆಟಿಯನ್ ಶಿಬಿರ ಬೈಲಕುಪ್ಪೆ ಆಗಿದೆ. ಅಲ್ಲಿನ ಸೆರಾ ಬೌದ್ಧಾಲಯದಲ್ಲಿದ ಜಮಾಯಾಂಗ್ ಜಿಂಪಾ ಎಂಬುವರಿಗೆ 30 ಲಕ್ಷ ರು. ವರ್ಗವಾಗಿದೆ. ಎಸ್‌ಕೆ ಟ್ರೇಡಿಂಗ್ ಎಂಬ ಕಂಪನಿಯಿಂದ ಹಣ ಬಂದಿದೆ. ಇದು ಬೌದ್ಧ ಭಿಕ್ಕುಗಳಿಗೆ ಹಣ ವರ್ಗಾಯಿಸಲು ಪೆಂಗ್ ಬಳಸುತ್ತಿರುವ ಖೊಟ್ಟಿಕಂಪನಿಗಳಲ್ಲಿ ಒಂದಾಗಿದೆ ಎಂದು ತಿಳಿದುಬಂದಿದೆ.
ಪೆಂಗ್‌ನಿಂದ 10 ಬೌದ್ಧ ಸನ್ಯಾಸಿಗಳಿಗೆ ಹಣ ಬಂದಿದೆ ಎನ್ನಲಾಗಿದ್ದು, ಆ ಪೈಕಿ 6 ಮಂದಿ ಬೈಲಕುಪ್ಪೆಯಲ್ಲಿ ವಾಸಿಸುತ್ತಾರೆ. ಬೈಲಕುಪ್ಪೆಯ ಥುಪ್ಟೆನ್ ಚೋಡಕ್ (15 ಲಕ್ಷ), ಫುಂಟ್‌ಸೋಕ್ ಧರ್ಗಾಯಾಲ್, ಗವಾಂಗ್ ಲೊಸೆಲ್, ತಾಸಿ ಚೋಪೆಲ್ (ತಲಾ 10 ಲಕ್ಷ), ಥುಪ್ಟೆನ್ ವಾಂಗ್ಚುಕ್ (8 ಲಕ್ಷ), ಲೋಬ್ಸಾಂಗ್ ಚೊಡೆನ್ (7 ಲಕ್ಷ) ಹಣ ಸ್ವೀಕರಿಸಿದ್ದಾರೆ. ಮುಂಡಗೋಡದಲ್ಲಿರುವ ಡ್ರುಪಂಗ್ ಲೋಸೆಲಿಂಗ್ (10 ಲಕ್ಷ), ಸೋನಮ್ ದೋರ್ಜಿ (7 ಲಕ್ಷ) ಪಡೆದಿದ್ದಾರೆ ಎಂದು ವರದಿ ವಿವರಿಸಿದೆ. ದೇಶದ ಇತರೆಡೆಯ ಸನ್ಯಾಸಿಗಳಿಗೂ ಹಣ ನೀಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ