ಆಶಾ ಕಾರ‍್ಯಕರ್ತರಿಗೆ ಬಂಪರ್ : ಸಂಬಳ ಎರಿಕೆ

By Kannadaprabha NewsFirst Published Sep 24, 2020, 7:13 AM IST
Highlights

ತೀವ್ರ ಪ್ರತಿಭಟನೆಗೆ ಇಳಿದಿದ್ದ ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸಲು ಸಚಿವ ಶ್ರೀ ರಾಮುಲು ಒಪ್ಪಿಕೊಂಡಿದ್ದಾರೆ. 

 ಬೆಂಗಳೂರು (ಸೆ.24): ಮಾಸಿಕ 12 ಸಾವಿರ ರು. ಗೌರವ ಧನ ನೀಡುವ ಕುರಿತಂತೆ ಸಚಿವ ಶ್ರೀರಾಮುಲು ಶೀಘ್ರದಲ್ಲೇ ನಿರ್ಧಾರ ಪ್ರಕಟಿಸುವ ಭರವಸೆ ನೀಡಿದ ಹಿನ್ನೆಲೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ಬುಧವಾರ ಆರಂಭಿಸಿದ್ದ ರಾಜ್ಯಮಟ್ಟದ ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ.

ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಆರೋಗ್ಯ ಇಲಾಖೆಯಡಿ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರು ಕೊರೋನಾ ನಡುವೆಯೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬುಧವಾರ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಿದರು.

ಸಿಡಿದೆದ್ದ ಆಶಾ ಕಾರ್ಯಕರ್ತೆಯರು; ಸರ್ಕಾರಕ್ಕೆ ಬಿಸಿ ಮುಟ್ಟಿಸಲಿದೆ ಗುಲಾಬಿ ಗ್ಯಾಂಗ್ ...

ಸಂಜೆ ವೇಳೆಗೆ ಸಚಿವ ಶ್ರೀರಾಮುಲು ಅವರು ಸಂಘದ ಮುಖಂಡರೊಂದಿಗೆ ಚರ್ಚಿಸಿ, ಪ್ರಮುಖ ಬೇಡಿಕೆಗಳನ್ನು ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ. ಬಾಕಿ ಇರುವ ಇರುವ ಜುಲೈ ತಿಂಗಳ ವೇತನವನ್ನು ಬಿಡುಗಡೆ ಮಾಡಲು ಒಪ್ಪಿಕೊಂಡಿದ್ದಾರೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೊಂದಿಗೆ ಇದೇ ಶುಕ್ರವಾರ ಮುಖಂಡರೊಂದಿಗೆ ಸಭೆ ಆಯೋಜಿಸುವುದಾಗಿ ಹೇಳಿದ್ದಾರೆ. ಹೀಗಾಗಿ ಪ್ರತಿಭಟನೆ ಹಿಂಪಡೆಯಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಸೋಮಶೇಖರ್‌ ಯಾದಗಿರಿ ಹೇಳಿದರು.

ಇದಕ್ಕೂ ಮುನ್ನ ಪ್ರತಿಭಟನೆಗೆ ವಿವಿಧ ಜಿಲ್ಲೆಗಳಿಂದ ಆಗಮಿಸುತ್ತಿದ್ದ ಆಶಾ ಕಾರ್ಯಕರ್ತೆಯರನ್ನು ಜಿಲ್ಲಾ ಕೇಂದ್ರಗಳಲ್ಲೇ ತಡೆ ಹಿಡಿದು ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನವನ್ನೂ ಮಾಡಲಾಯಿತು. ತುಮಕೂರು, ಚಾಮರಾಜನಗರ ಮುಂತಾದ ಕಡೆ ಕಾರ್ಯಕರ್ತೆಯರನ್ನು ಪ್ರತಿಭಟನೆಗೆ ಬರದಂತೆ ನೋಡಿಕೊಂಡರೂ ಬೆಂಗಳೂರಿಗೆ ಆಗಮಿಸಿದ ನೂರಾರು ಕಾರ್ಯಕರ್ತೆಯರು ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ವರೆಗೆ ಜಾಥಾ ನಡೆಸಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು. ಬಹುತೇಕರು ಆಯಾ ಜಿಲ್ಲಾ ಕೇಂದ್ರಗಳಲ್ಲೇ ಪ್ರತಿಭಟನೆ ನಡೆಸಿ ಸರ್ಕಾರದ ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರು ನಗರ ಮತ್ತು ಗ್ರಾಮಾಂತರ, ಬಾಗಲಕೋಟೆ, ಬಿಜಾಪುರ, ತುಮಕೂರು, ಮೈಸೂರು, ಮಂಡ್ಯ, ರಾಮನಗರ ಸೇರಿದಂತೆ ವಿವಿಧೆಡೆಯಿಂದ ಆಶಾ ಕಾರ್ಯಕರ್ತೆಯರು ಪ್ರತಿಭಟನೆಗೆ ಆಗಮಿಸಿದ್ದರು. ಮಧ್ಯಾಹ್ನ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಆರೋಗ್ಯ ಇಲಾಖೆಯ ಉಪ ನಿರ್ದೇಶಕ (ಆರ್‌ಸಿಎಚ್‌) ಡಾ.ರಾಜ್‌ಕುಮಾರ್‌ ಹಾಗೂ ನಿರ್ದೇಶಕ ಓಂಪ್ರಕಾಶ್‌ ಪಾಟೀಲ್‌, ವೇತನ ಹೆಚ್ಚಳ ಪ್ರಸ್ತಾಪ ಸರ್ಕಾರದ ಮುಂದಿದೆ. ಇಷ್ಟರಲ್ಲೇ ಈ ಬಗ್ಗೆ ಸರ್ಕಾರ ಬೇಗ ನಿಲುವು ತಳೆಯಲಿದೆ. ಹಿಂದಿನ ಬಾಕಿ ಇರುವ ವೇತನ, ಕೋವಿಡ್‌ ಪರಿಹಾರ ಹಣ ಮತ್ತು ವಿಶೇಷ ಪ್ರೋತ್ಸಾಹ ಧನ ಎಲ್ಲರಿಗೂ ತಲುಪಿಸಲು 15 ದಿನಗಳ ಒಳಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಆದರೆ, ಅಧಿಕಾರಿಗಳ ಮಾತಿಗೆ ಒಪ್ಪದ ನೂರಾರು ಆಶಾ ಕಾರ್ಯಕರ್ತೆಯರು, ಸರ್ಕಾರದ ನಿರ್ಲಕ್ಷ್ಯ ಧೋರಣೆ ವಿರುದ್ಧ ಕಿಡಿಕಾರುತ್ತ ಘೋಷಣೆ ಕೂಗಿದರು. ಜತೆಗೆ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು.

ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ತಮ್ಮ ಪ್ರಾಣ ಪಣಕ್ಕಿಟ್ಟು ಮುಂಚೂಣಿಯಲ್ಲಿ ನಿಂತು ಕಾರ್ಯ ನಿರ್ವಹಿಸಿದ್ದೇವೆ. ಆದರೂ ಸರ್ಕಾರ ಸರಿಯಾದ ವೇತನ ನೀಡುತ್ತಿಲ್ಲ. ನಮಗೆ ಅನುಕಂಪ ಬೇಕಿಲ್ಲ. ಜೀವನ ನಿರ್ವಹಣೆಗೆ ಅಗತ್ಯವಾದ ವೇತನ ನೀಡಬೇಕು. ಹೂ ಮಳೆ ಸುರಿಸುವುದರಿಂದ ನಮಗೆ ಯಾವುದೇ ಪ್ರಯೋಜನವಾಗುವುದಿಲ್ಲ. ತಮಿಳುನಾಡು, ಆಂಧ್ರದಂತೆ ನಮಗೆ ಮಾಸಿಕ 12 ಸಾವಿರ ರು. ವೇತನ ನಿಗದಿಗೊಳಿಸಬೇಕು. ಸರ್ಕಾರ ನಮ್ಮ ಸಮಸ್ಯೆಗೆ ಸ್ಪಂದಿಸದಿದ್ದರೆ ನಾವು ಮತ್ತೆ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಪ್ರತಿಭಟನಾಕಾರರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

click me!