ಗುರುಕುಲ ಪರಂಪರೆಯ ದೇಶದ ಏಕೈಕ ಸಂಗೀತ ವಿದ್ಯಾಲಯ ಎಂದು ಹೆಸರುವಾಸಿಯಾಗಿರುವ ಇಲ್ಲಿನ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಗುರುಕುಲವನ್ನು ಹುಬ್ಬಳ್ಳಿಯಿಂದ ಮೈಸೂರಿಗೆ ಸ್ಥಳಾಂತರ ಮಾಡುವ ಹುನ್ನಾರ ನಡೆಯುತ್ತಿದೆ ಎಂಬ ವದಂತಿ ಬಲುಜೋರಾಗಿ ಹಬ್ಬಿದೆ.
- ಶಿವಾನಂದ ಗೊಂಬಿ
ಹುಬ್ಬಳ್ಳಿ (ಡಿ.6) : ಗುರುಕುಲ ಪರಂಪರೆಯ ದೇಶದ ಏಕೈಕ ಸಂಗೀತ ವಿದ್ಯಾಲಯ ಎಂದು ಹೆಸರುವಾಸಿಯಾಗಿರುವ ಇಲ್ಲಿನ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಗುರುಕುಲವನ್ನು ಹುಬ್ಬಳ್ಳಿಯಿಂದ ಮೈಸೂರಿಗೆ ಸ್ಥಳಾಂತರ ಮಾಡುವ ಹುನ್ನಾರ ನಡೆಯುತ್ತಿದೆ ಎಂಬ ವದಂತಿ ಬಲುಜೋರಾಗಿ ಹಬ್ಬಿದೆ.
ಈ ಕಾರಣಕ್ಕಾಗಿಯೇ ರಾಜ್ಯ ಸರ್ಕಾರ ಕಳೆದ ಎರಡ್ಮೂರು ವರ್ಷಗಳಿಂದ ಸರಿಯಾಗಿ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಅನುದಾನದ ಕೊರತೆಯಿಂದ ಹೊಸ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿಲ್ಲ ಎಂಬ ಸ್ಪಷ್ಟನೆ ಗುರುಕುಲದ್ದು. ಕೂಡಲೇ ಅಗತ್ಯವಿರುವಷ್ಟು ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಉತ್ತರ ಕರ್ನಾಟಕದ ವಿವಿಧ ಸಂಘಟನೆಗಳು ಇದೀಗ ಹೋರಾಟಕ್ಕೆ ಸಜ್ಜಾಗುತ್ತಿವೆ.
ಹೀಗೆ ಬಿಟ್ಟರೆ ವಿಶ್ವದ ಸಂಪತ್ತನ್ನೂ ಮುಸ್ಲಿಮರಿಗೆ ಹಂಚಲು ಸಿದ್ದು ರೆಡಿ: ಅಶೋಕ್
ಗಂಗಜ್ಜಿ ನೆನಪಿನ ಗುರುಕುಲ:
ಹಿಂದೂಸ್ತಾನಿ ಸಂಗೀತಕ್ಕೆ ಇಲ್ಲಿನ ಡಾ. ಗಂಗೂಬಾಯಿ ಹಾನಗಲ್ (ಗಂಗಜ್ಜಿ) ನೀಡಿದ ಕೊಡುಗೆ ಅಷ್ಟಿಷ್ಟಲ್ಲ. ತಮ್ಮ ಗಾಯನ ಕಲೆಯಿಂದಲೇ ಇಡೀ ಜಗತ್ತನ್ನೇ ಮೋಡಿ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ ಹೆಸರು ಚಿರಸ್ಥಾಯಿಯಾಗಿ ಉಳಿಸಲು ಹಾಗೂ ಗುರುಶಿಷ್ಯ ಪರಂಪರೆ ಮುಂದುವರಿಯಲಿ ಎಂಬ ಮಹೋದ್ದೇಶದಿಂದ ಅವರ ಹೆಸರಿನಲ್ಲಿ ರಾಜ್ಯ ಸರ್ಕಾರ ಈ ಗುರುಕುಲವನ್ನು 2011ರಲ್ಲಿ ಸ್ಥಾಪಿಸಿದೆ.
ಇಲ್ಲಿನ ಶಿಕ್ಷಣ ವಿಶಿಷ್ಟ:
ಪಂ. ಸವಾಯಿ ಗಂಧರ್ವರಲ್ಲಿ ಡಾ.ಗಂಗೂಬಾಯಿ ಹಾನಗಲ್, ಭಾರತರತ್ನ ಪಂ.ಭೀಮಸೇನ ಜೋಶಿ ಅವರು ಗುರುಕುಲ ಮಾದರಿಯಲ್ಲಿ ಸಂಗೀತ ಅಭ್ಯಾಸ ಮಾಡಿದ್ದರು. ಹಾಗಾಗಿ ಗಂಗಜ್ಜಿ ಆಗಾಗ ಸಂಗೀತ ಗುರುಕುಲದ ಬಗ್ಗೆ ಪ್ರಸ್ತಾಪಿಸುತ್ತಿದ್ದರು. ಈ ಹಿನ್ನಲೆಯಲ್ಲಿ ಗಂಗಜ್ಜಿ ಆಶಯದಂತೆ ಸರ್ಕಾರ ಈ ಗುರುಕುಲ ಸ್ಥಾಪಿಸಿದೆ.
ಪ್ರಾರಂಭದಿಂದ ಇಲ್ಲಿ 36 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತಿತ್ತು. ಅವರಿಗೆ 4 ವರ್ಷ ಇಲ್ಲಿ ಸಂಗೀತದ ವಿವಿಧ ಹಂತದ ತರಬೇತಿ ನೀಡಲಾಗುತ್ತದೆ. 4 ವರ್ಷ ಆ ವಿದ್ಯಾರ್ಥಿಯ ವಾಸ್ತವ್ಯ ಇಲ್ಲೇ ಇರುತ್ತದೆ. 6 ವಿದ್ಯಾರ್ಥಿಗಳಿಗೆ ಒಬ್ಬ ಗುರು ಎಂಬಂತೆ 6 ಜನ ಸಂಗೀತ ಶಿಕ್ಷಕರು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
7 ತಿಂಗಳಿಂದ ಸಂಬಳವಿಲ್ಲ
ಪ್ರತಿವರ್ಷ ವಿದ್ಯಾರ್ಥಿಗಳ ಊಟ, ವಸತಿ, ಅವರ ತರಬೇತಿ, ಶಿಕ್ಷಕರ ಸಂಬಳ ಸೇರಿದಂತೆ ಗುರುಕುಲದ ನಿರ್ವಹಣೆಗೆ ಬರೋಬ್ಬರಿ ₹1.44 ಕೋಟಿ ಅನುದಾನ ಬೇಕು. ರಾಜ್ಯ ಸರ್ಕಾರದ ಆಡಳಿತದ ವ್ಯಾಪ್ತಿಗೆ ಬರುವ ಈ ಗುರುಕುಲ ಉನ್ನತ ಶಿಕ್ಷಣ ಇಲಾಖೆಗೊಳಪಡುತ್ತದೆ. ಇಲಾಖೆಯಿಂದಲೇ ಅನುದಾನ ಬಿಡುಗಡೆಯಾಗಬೇಕು. ಕೆಎಎಸ್ ಅಧಿಕಾರಿ ಇದರ ಆಡಳಿತಾಧಿಕಾರಿ. ಆದರೆ ಕಳೆದ ಎರಡ್ಮೂರು ವರ್ಷದಿಂದ ಸರ್ಕಾರ ತನ್ನ ಅನುದಾನವನ್ನು ಸರಿಯಾಗಿ ಬಿಡುಗಡೆ ಮಾಡುತ್ತಲೇ ಇಲ್ಲ. ಪ್ರಸಕ್ತ ಸಾಲಿನಲ್ಲಂತೂ ಈ ವರೆಗೆ ಬಿಡುಗಡೆಯಾಗಿರುವುದು ಬರೀ ₹30 ಲಕ್ಷ ಮಾತ್ರ. ಇದರಿಂದಾಗಿ ಕಳೆದ ಏಳು ತಿಂಗಳಿಂದ ಇಲ್ಲಿನ ಶಿಕ್ಷಕರಿಗೆ ಸಂಬಳವೇ ಸಿಕ್ಕಿಲ್ಲ.
ಈಗ ಇಲ್ಲಿ 19 ವಿದ್ಯಾರ್ಥಿಗಳು ಮಾತ್ರ ಇದ್ದಾರೆ. ಏಪ್ರಿಲ್‌ನಲ್ಲೇ ಹೊಸ ವಿದ್ಯಾರ್ಥಿಗಳಿಗೆ ಪ್ರವೇಶಕ್ಕೆ ನೋಟಿಫಿಕೇಶನ್ ಹೊರಡಿಸಬೇಕಿತ್ತು. ಆದರೆ ಅನುದಾನದ ಕೊರತೆಯಿಂದ ನೋಟಿಫಿಕೇಶನ್‌ಕೂಡ ಹೊರಡಿಸಿಲ್ಲ ಎಂಬುದು ಗುರುಕುಲದ ಸ್ಪಷ್ಟನೆ.
ತೀವ್ರ ಹೃದಯಾಘಾತಕ್ಕೆ 29 ವರ್ಷದ ಯುವಕ ಸಾವು!
ವಿದ್ಯಾರ್ಥಿಗಳ ಊಟೋಪಚಾರ ಮಾಡಿಸಲು ಕಷ್ಟವಾಗುತ್ತಿದೆ. ಕಿರಾಣಿ ಕೂಡ ಸಾಲಸೂಲ ಮಾಡಿ ತರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆಯಂತೆ. 6 ಜನ ಶಿಕ್ಷಕರಲ್ಲಿ ಒಬ್ಬರು ಈಗಾಗಲೇ ಬಿಟ್ಟು ಹೋಗಿದ್ದಾರಂತೆ. ಇನ್ನುಳಿದ 5 ಜನ ಶಿಕ್ಷಕರು, ಇವತ್ತು ಸಂಬಳ ಬರಬಹುದು ನಾಳೆ ಬರಬಹುದು ಎಂದು ಕಾಯುತ್ತಾ ಕುಳಿತ್ತಿದ್ದಾರೆ.
ಗುರುಕುಲದಲ್ಲಿ ಸದ್ಯ 5 ಜನ ಶಿಕ್ಷಕರು, 19 ವಿದ್ಯಾರ್ಥಿಗಳಿದ್ದಾರೆ. ಅನುದಾನದ ಕೊರತೆಯಿಂದ ಹೊಸ ವಿದ್ಯಾರ್ಥಿಗಳ ಪ್ರವೇಶಕ್ಕೆ ನೋಟಿಫಿಕೇಶನ್ ಹೊರಡಿಸಿಲ್ಲ. ಶಿಕ್ಷಕರಿಗೆ 6-7 ತಿಂಗಳಿಂದ ಸಂಬಳವೂ ಸಿಕ್ಕಿಲ್ಲ.
ಆರ್.ಎಂ. ಕಂಠೆಪ್ಪಗೌಡರ, ಆಡಳಿತಾಧಿಕಾರಿ, ಗುರುಕುಲ
ನಮ್ಮಜ್ಜಿ ಹೆಸರಲ್ಲಿ ಗುರುಕುಲ ಇರುವುದು ಹೆಮ್ಮೆಯ ವಿಷಯ. ಆದರೆ ಅನುದಾನದ ಕೊರತೆಯಿಂದ ಅದು ಸರಿಯಾಗಿ ನಡೆಯುತ್ತಿಲ್ಲ. ಅಗತ್ಯವಿರುವಷ್ಟು ಅನುದಾನ ಬಿಡುಗಡೆ ಮಾಡಬೇಕು ಎಂದು ಮನವಿ ಸಲ್ಲಿಸಿದ್ದೇವೆ. ಆದರೆ ಪ್ರಯೋಜನವಾಗಿಲ್ಲ.
ವೈಷ್ಣವಿ ಹಾನಗಲ್, ಗಂಗಜ್ಜಿ ಮೊಮ್ಮಗಳು
ಗಂಗೂಬಾಯಿ ಹಾನಗಲ್ ಗುರುಕುಲದ ಹೊರನೋಟ.