Hijab Row: 'ಶುಕ್ರವಾರ, ರಂಜಾನ್‌ ಮಾಸದಲ್ಲಾದರೂ ಹಿಜಾಬ್‌ಗೆ ಅವಕಾಶ ಕೊಡಿ'

By Kannadaprabha News  |  First Published Feb 18, 2022, 4:55 AM IST

*   ಹಿಜಾಬ್‌ ಅನ್ನು ಯಾರೂ ನಿಷೇಧಿಸಿಲ್ಲ 
*   ಹಿಜಾಬ್‌ ಮತ್ತು ಕುರಾನ್‌ ಒಂದೇ ಎಂದು ಹೇಳುತ್ತಿರುವುದು ಯಾರು ಎಂದು ಪ್ರಶ್ನಿಸಿದ ನ್ಯಾಯಪೀಠ
*   ಜಮೀಲ್‌ ಸಲ್ಲಿಸಿದ್ದ ಪಿಐಎಲ್‌ ಹೈಕೋರ್ಟ್‌ ನಿಯಮಗಳಿಗೆ ಅನುಗುಣವಾಗಿಲ್ಲ 


ಬೆಂಗಳೂರು(ಫೆ.18): ಹಿಜಾಬ್‌(Hijab) ನಿಷೇಧಿಸಿದರೆ ಕುರಾನ್‌(Quran) ನಿಷೇಧಿಸಿದಂತಾಗಲಿದ್ದು, ಕೊನೆಪಕ್ಷ ಶುಕ್ರವಾರ ಮತ್ತು ರಂಜಾನ್‌(Ramadan) ಮಾಸದಲ್ಲಿ ಮುಸ್ಲಿಂ(Muslim Women) ಹೆಣ್ಣು ಮಕ್ಕಳು ಹಿಜಾಬ್‌ ಧರಿಸಲು ಅವಕಾಶ ಕಲ್ಪಿಸಿ ಆದೇಶಿಸಬೇಕು ಎಂದು ಮನೋವಿಜ್ಞಾನಿ ಹಾಗೂ ವಕೀಲ ಡಾ.ವಿನಯ್‌ ಕುಲಕರ್ಣಿ ಹೈಕೋರ್ಟ್‌ಗೆ(High Court) ಮನವಿ ಮಾಡಿದ್ದಾರೆ.

ಹಿಜಾಬ್‌ ಧರಿಸಿ ಕಾಲೇಜಿಗೆ ತೆರಳುವುದನ್ನು ನಿರ್ಬಂಧಿಸಿ ರಾಜ್ಯ ಸರ್ಕಾರವು(Government of Karnataka) ಹೊರಡಿಸಿರುವ ಆದೇಶವನ್ನು ಆಕ್ಷೇಪಿಸಿ ಮುಸ್ಲಿಮ್‌ ವಿದ್ಯಾರ್ಥಿನಿಯರು(Students) ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ನೇತೃತ್ವದ ವಿಸ್ತೃತ ನ್ಯಾಯಪೀಠ ಗುರುವಾರವೂ ವಿಚಾರಣೆ ನಡೆಸಿತು. ಈ ಸಂದರ್ಭದಲ್ಲಿ ಈ ವಿಚಾರವಾಗಿ ಪಿಎಐಲ್‌ ಸಲ್ಲಿಸಿದ್ದ ಡಾ.ವಿನಯ್‌ ಕುಲಕರ್ಣಿ ಖುದ್ದು ವಾದ ಮಂಡಿಸಿ, ಹಿಜಾಬ್‌ ನಿಷೇಧಿಸಬಾರದು. ಅದನ್ನು ನಿಷೇಧಿಸಿದರೆ ಕುರಾನ್‌ ಅನ್ನೇ ನಿಷೇಧಿಸಿದಂತೆ ಎಂದರು.

Tap to resize

Latest Videos

Hijab Row : ರಾಜೀನಾಮೆ ಕೊಟ್ಟ ಉಪನ್ಯಾಸಕಿ ಚಾಂದಿನಿ, ಅಯೂಬ್ ಖಾನ್‌ಗೆ ಜಾಮೀನಿಲ್ಲ

ಇದನ್ನು ಆಕ್ಷೇಪಿಸಿದ ನ್ಯಾಯಪೀಠ, ಹಿಜಾಬ್‌ ಅನ್ನು ಯಾರೂ ನಿಷೇಧಿಸಿಲ್ಲ ಎಂದಿತಲ್ಲದೆ, ಹಿಜಾಬ್‌ ಮತ್ತು ಕುರಾನ್‌ ಒಂದೇ ಎಂದು ಹೇಳುತ್ತಿರುವುದು ಯಾರು ಎಂದು ಪ್ರಶ್ನಿಸಿತು. ಇದಕ್ಕೆ ಕುಲಕರ್ಣಿ, ಕುರಾನ್‌ ಹಾಗೂ ಹಿಜಾಬ್‌ ಒಂದೇ ಎಂಬುದು ಇಡೀ ವಿಶ್ವದ ಅನಿಸಿಕೆ. ಇಷ್ಟಕ್ಕೂ ಹಿಜಾಬ್‌ ನಮ್ಮ ಸಮಾಜ, ಸಂಸ್ಕೃತಿ ಹಾಗೂ ನೈತಿಕತೆ ಯಾವುದಕ್ಕೂ ವಿರೋಧವಾಗಿಲ್ಲವಲ್ಲ. ಹೀಗಿದ್ದರೂ ನಿಷೇಧವೇಕೆ? ಕನಿಷ್ಠ ಶುಕ್ರವಾರ ಹಾಗೂ ರಂಜಾನ್‌ ಮಾಸದಲ್ಲಿ ಮುಸ್ಲಿಮರು ಹೆಣ್ಣು ಮಕ್ಕಳು ಹಿಜಾಬ್‌ ಧರಿಸಲು ಅವಕಾಶ ಕಲ್ಪಿಸಿ ಆದೇಶಿಸಬೇಕು ಎಂದು ಕೋರಿದರು.

ನಂತರ ಸುಪ್ರೀಂ ಕೋರ್ಟ್‌ ಹಿರಿಯ ವಕೀಲ ಅಬ್ದುಲ್‌ ಮಜೀದ್‌ ದರ್‌, ಹಿಜಾಬ್‌ ವಿಚಾರದಲ್ಲಿ ಸರ್ಕಾರದ ಆದೇಶವು ರಹಸ್ಯ ಕಾರ್ಯಸೂಚಿ ಹೊಂದಿದೆ. ಈ ತೀರ್ಪು ಅಸಾಂವಿಧಾನಿಕ ಮತ್ತು ಕಾನೂನುಬಾಹಿರ ಎಂದು ಹೇಳಲು ತಾಂಜಾನಿಯಾ ಅಥವಾ ಲಂಡನ್‌ ತೀರ್ಪುಗಳು ಬೇಕಿಲ್ಲ. ಭಾರತದ ಸಂವಿಧಾನವೇ ಈ ಆದೇಶವನ್ನು ಕಾನೂನು ಬಾಹಿರ ಎಂದು ನಿರೂಪಿಸುತ್ತದೆ ಎಂದರು.

ಶುಕ್ರವಾರ ಸರ್ಕಾರದ ವಾದ:

ಅನಂತರ ಮತನಾಡಿದ ಅಡ್ವೊಕೇಟ್‌ ಜನರಲ್‌ ಅವರು ರಾಜ್ಯ ಸರ್ಕಾರದ ಪರವಾಗಿ ನಾಳೆ ವಾದ ಮಂಡಿಸುವುದಾಗಿ ತಿಳಿಸಿದರು. ಜತೆಗೆ, ಕಾಲೇಜು ಅಭಿವೃದ್ಧಿ ಸಮಿತಿಗಳನ್ನು ಪ್ರತಿನಿಧಿಸಿರುವ ಹಿರಿಯ ವಕೀಲ ಸಜ್ಜನ್‌ ಪೂವಯ್ಯ ಸಹ ಸರ್ಕಾರದ ವಾದ ಮಂಡನೆ ಬಳಿಕವೇ ತಾವು ವಾದಿಸುವುದಾಗಿ ತಿಳಿಸಿದರು. ಇದೇ ನಿಲುವನ್ನು ಕಾಲೇಜುವೊಂದರ ಉಪನ್ಯಾಸಕರ ಪರ ಹಾಜರಾಗಿರುವ ಹಿರಿಯ ವಕೀಲ ನಾಗಾನಂದ್‌ ಸಹ ವ್ಯಕ್ತಪಡಿಸಿದರು.ಅದನ್ನು ಪರಿಗಣಿಸಿದ ನ್ಯಾಯಪೀಠ, ವಿಚಾರಣೆಯನ್ನು ಶುಕ್ರವಾರ ಮಧ್ಯಾಹ್ನ 2.30ಕ್ಕೆ ಮುಂದೂಡಿತು.

ಎರಡು ಅರ್ಜಿ ವಜಾ

ವಿಚಾರಣೆ ಸಂದರ್ಭದಲ್ಲಿ ಹಿಜಾಬ್‌ ವಿಚಾರವಾಗಿ ಸಲ್ಲಿಕೆಯಾಗಿದ್ದ ಎರಡು ಅರ್ಜಿಗಳನ್ನು ತಾಂತ್ರಿಕ ಕಾರಣಗಳಿಂದ ಹೈಕೋರ್ಟ್‌ ಗುರುವಾರ ವಜಾಗೊಳಿಸಿತು. ಹಿರಿಯ ವಕೀಲ ಅಬ್ದುಲ್‌ ಮಜೀದ್‌ ದರ್‌ ಪ್ರತಿನಿಧಿಸಿದ್ದ ತಕರಾರು ಅರ್ಜಿಯಲ್ಲಿ, ಅರ್ಜಿದಾರರನ್ನು ಶಾಲೆಗೆ ತೆರಳದಂತೆ ನಿರ್ಬಂಧಿಸಲಾಗಿದೆ ಎಂದು ತಿಳಿಸಿದ್ದರೂ ಅರ್ಜಿದಾರರ ವಿವರಗಳನ್ನು ಸಮಪರ್ಕವಾಗಿ ನೀಡಿರಲಿಲ್ಲ ಎಂಬ ಕಾರಣಕ್ಕೆ ವಜಾಗೊಳಿಸಿತು. ಇನ್ನೂ ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್‌ ಆರೀಫ್‌ ಜಮೀಲ್‌ ಸಲ್ಲಿಸಿದ್ದ ಪಿಐಎಲ್‌(PIL) ಹೈಕೋರ್ಟ್‌ ನಿಯಮಗಳಿಗೆ ಅನುಗುಣವಾಗಿಲ್ಲ ಎಂದು ವಜಾಗೊಳಿಸಿತು.

Tumakuru Hijab Protest: ಪೋಲಿಸರು ಮತ್ತು ವಿದ್ಯಾರ್ಥಿಗಳ ಮಧ್ಯೆ ಮಾತಿನ ಚಕಮಕಿ

ರಾಜಿ ಸಂಧಾನ ಒಪ್ಪದ ನ್ಯಾಯಾಲಯ!

ಹಿಜಾಬ್‌ ಪ್ರಕರಣವನ್ನು ನ್ಯಾಯಾಲಯದ ಹೊರಗಡೆ ಪ್ರಕರಣವನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಲು ಅವಕಾಶ ಕಲ್ಪಿಸಬೇಕು ಎಂಬ ವಕೀಲೆ ಎಸ್‌.ಪಿ. ಸುಭಾಷಿಣಿ ಅವರ ಮನವಿಗೆ ಎಲ್ಲ ಕಕ್ಷಿದಾರರು ಒಪ್ಪಿದರೆ ಈ ಅರ್ಜಿಯನ್ನು ಒಪ್ಪುವುದಾಗಿ ನ್ಯಾಯಾಲಯ ತಿಳಿಸಿದೆ. 

ಹಿಜಾಬ್‌ ಪ್ರಕರಣದಲ್ಲಿ ಮಧ್ಯಪ್ರವೇಶ ಅರ್ಜಿ (ಇಂಟರ್‌ವಿನ್‌ ಅಪ್ಲಿಕೇಷನ್‌) ಸಲ್ಲಿಕೆ ಮಾಡಿರುವ ಸುಭಾಷಿಣಿ ಅವರ ವಾದವನ್ನು ನ್ಯಾಯಾಲಯ ತಾತ್ವಿಕವಾಗಿ ಒಪ್ಪಲಿಲ್ಲ. ಈ ವಿಚಾರದಲ್ಲಿ ಸಾಂವಿಧಾನಿಕ ಪ್ರಶ್ನೆಗಳಿವೆ. ನ್ಯಾಯಪೀಠ ಅದಕ್ಕೆ ಉತ್ತರ ಕಂಡುಕೊಳ್ಳಬೇಕಿದೆ. ಹೀಗಾಗಿ ಇಂತಹ ಪ್ರಕರಣಗಳಲ್ಲಿ ರಾಜಿ ಸಂಧಾನ ಮಾಡಲಾಗದು ಆದರೂ, ಎಲ್ಲ ಕಕ್ಷಿದಾರರು ಒಪ್ಪಿದರೆ ಮಾತ್ರ ಸಂಧಾನ ನಡೆಸಬಹುದು. ಮೊದಲು ನಿಮ್ಮ ಅರ್ಜಿಯನ್ನು ಎಲ್ಲಾ ಪಕ್ಷಕಾರರಿಗೆ ತಲುಪಿಸಿ. ಅವರು ಒಪ್ಪಿದರೆ ನ್ಯಾಯಾಲಯ ನಿಮ್ಮ ಅರ್ಜಿಯನ್ನು ಪರಿಗಣಿಸಲಿದೆ ಎಂದು ತಿಳಿಸಿತು.
 

click me!