ಕೊರೋನಾ ಕಾಟ: ಖಾಸಗಿ ಆಸ್ಪತ್ರೆಗಳಿಂದ ಜನರ ಸುಲಿಗೆ

By Kannadaprabha NewsFirst Published Aug 5, 2020, 10:31 AM IST
Highlights

ಕೊರೋನಾ ಸೋಂಕಿತರ ಚಿಕಿತ್ಸೆಗೆ ಸರ್ಕಾರ ನಿಗದಿ ಪಡಿಸಿದ ದರಕ್ಕಿಂತ ಹೆಚ್ಚಿನ ಶುಲ್ಕ ವಸೂಲಿ| ಖಾಸಗಿ ಆಸ್ಪತ್ರೆಗಳ ಮೇಲೆ ಕ್ರಮ ತೆಗೆದುಕೊಳ್ಳುವ ಅಧಿಕಾರ ಇಲ್ಲಿಯವರೆಗೆ ಬಿಬಿಎಂಪಿ ಆಯುಕ್ತರಿಗೆ ಇರಲಿಲ್ಲ. ಜಿಲ್ಲಾಧಿಕಾರಿಗಳಿಗೆ ಮಾತ್ರ ಈ ಅಧಿಕಾರ ಇತ್ತು. ಇದೀಗ ಬಿಬಿಎಂಪಿ ಆಯುಕ್ತರು ಸಹ ಕ್ರಮ ತೆಗೆದುಕೊಳ್ಳಬಹುದಾಗಿದೆ: ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌|

ಬೆಂಗಳೂರು(ಆ.05): ಕೊರೋನಾ ಸೋಂಕಿತರ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳು ಸರ್ಕಾರ ನಿಗದಿ ಪಡಿಸಿದ ದರಕ್ಕಿಂತ ಹೆಚ್ಚಿನ ಮೊತ್ತದ ಶುಲ್ಕ ವಿಧಿಸುವ ಮೂಲಕ ಸಾರ್ವಜನಿಕರನ್ನು ಸುಲಿಗೆ ಮಾಡುತ್ತಿವೆ ಎಂದು ಬಿಬಿಎಂಪಿ ಸದಸ್ಯರು ಪಕ್ಷಾತೀತವಾಗಿ ಅಸಮಧಾನ, ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಂಗಳವಾರ ಬಿಬಿಎಂಪಿ ಮಾಸಿಕ ಸಭೆಯಲ್ಲಿ ನಡೆಯಿತು.

ನಗರದ ಹಲವು ಖಾಸಗಿ ಆಸ್ಪತ್ರೆಗಳು ಕೊರೋನಾ ಸೋಂಕಿತರ ಚಿಕಿತ್ಸೆ ವಿಚಾರದಲ್ಲಿ ಸಾರ್ವಜನಿರಿಂದ ಬೇಕಾ ಬಿಟ್ಟಿಹಣ ವಸೂಲಿ ಮಾಡುತ್ತಿದ್ದಾರೆ. ಶುಲ್ಕ ಪಾವತಿ ಮಾಡದಿದ್ದರೆ ಶವವನ್ನೂ ಕುಟುಂಬ ಸದಸ್ಯರಿಗೆ ನೀಡದೇ ಅಮಾನವೀಯವಾಗಿ ನಡೆದುಕೊಳ್ಳುತ್ತಿವೆ ಎಂದು ಮಾಜಿ ಮೇಯರ್‌ಗಳಾದ ಮಂಜುನಾಥ ರೆಡ್ಡಿ, ಸಂಪತ್‌ ರಾಜ್‌, ಆಡಳಿತ ಪಕ್ಷದ ಮಾಜಿ ನಾಯಕ ಎಂ. ಶಿವರಾಜು ಸೇರಿದಂತೆ ಮೊದಲಾದವರು ಖಾಸಗಿ ಆಸ್ಪತ್ರೆಗಳ ನಡವಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸೋಂಕಿತರಿಂದ ಮುಂಗಡ ಶುಲ್ಕ ವಸೂಲಿ: ಜೈನ್‌ ಆಸ್ಪತ್ರೆಯ ಒಪಿಡಿಗೆ ಪಾಲಿಕೆ ಬೀಗ

ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌, ಖಾಸಗಿ ಆಸ್ಪತ್ರೆಗಳ ಮೇಲೆ ಕ್ರಮ ತೆಗೆದುಕೊಳ್ಳುವ ಅಧಿಕಾರ ಇಲ್ಲಿಯವರೆಗೆ ಬಿಬಿಎಂಪಿ ಆಯುಕ್ತರಿಗೆ ಇರಲಿಲ್ಲ. ಜಿಲ್ಲಾಧಿಕಾರಿಗಳಿಗೆ ಮಾತ್ರ ಈ ಅಧಿಕಾರ ಇತ್ತು. ಇದೀಗ ಬಿಬಿಎಂಪಿ ಆಯುಕ್ತರು ಸಹ ಕ್ರಮ ತೆಗೆದುಕೊಳ್ಳಬಹುದಾಗಿದ್ದು, ಯಾವುದೇ ಖಾಸಗಿ ಆಸ್ಪತ್ರೆ ಸರ್ಕಾರ ನಿಗದಿ ಮಾಡಿರುವುದಕ್ಕಿಂತ ಹೆಚ್ಚು ಶುಲ್ಕ ವಿಧಿಸಿದರೆ ಹಾಗೂ ಹಾಸಿಗೆಗಳ ಬಗ್ಗೆ ಸುಳ್ಳು ಮಾಹಿತಿ ನೀಡಿದರೆ, ವಿಪತ್ತು ನಿರ್ವಹಣಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು. ಒಮ್ಮೆ ಈ ಕಾಯ್ದೆಯಡಿ ಕ್ರಮ ಕೈಗೊಂಡರೆ ಖಾಸಗಿ ಆಸ್ಪತ್ರೆಗಳ ಪರವಾನಗಿ ರದ್ದಾಗಲಿದ್ದು, ಒಂದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಬೇಕಾಗಿದೆ ಎಂದು ಎಚ್ಚರಿಕೆ ನೀಡಿದರು.

ಮುಖ್ಯಸ್ಥರೊಂದಿಗೆ ಇಂದು ಸಭೆ

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಖಾಸಗಿ ಆಸ್ಪತ್ರೆಗಳು ತಮ್ಮದೇ ಆದ ಸಮಸ್ಯೆಗಳನ್ನು ಹೇಳಿಕೊಂಡಿವೆ. ಸೋಂಕಿತರ ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದೆ. ಅಲ್ಲದೆ, ಮೂಲ ಸೌಕರ್ಯ ವ್ಯವಸ್ಥೆ ಇಲ್ಲ ಎಂದು ಹೇಳಿವೆ. ಹೀಗಾಗಿ ಎಷ್ಟುಹಾಸಿಗೆಗಳನ್ನು ಸಕ್ರಿಯವಾಗಿ ಬಳಸಲಾಗುತ್ತಿದೆ ಅಷ್ಟುಮಾಹಿತಿ ನೀಡಿ ಎಂದು ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ. ಈ ಸಂಬಂಧ ಆ.5ಕ್ಕೆ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಲಾಗುತ್ತಿದೆ ಎಂದು ಆಯುಕ್ತರು ತಿಳಿಸಿದರು.

108 ಆ್ಯಂಬುಲೆನ್ಸ್‌ನಲ್ಲಿ ಹೋದರೆ ಚಿಕಿತ್ಸೆ ಉಚಿತ

ಸೋಂಕು ಪರೀಕ್ಷೆಯಾಗಿ ವರದಿ ಬರುವ ಮುನ್ನ ಆರೋಗ್ಯದಲ್ಲಿ ಸಮಸ್ಯೆ ಉಂಟಾದರೆ ಮತ್ತು ಸೋಂಕು ದೃಢಪಟ್ಟಬಳಿಕ ಬಿಯು ಸಂಖ್ಯೆ ( ಬೆಂಗಳೂರು ನಗರದ ಸೋಂಕಿತರ ಸಂಖ್ಯೆ) ಲಭ್ಯವಾಗುವ ಮುನ್ನ ಆರೋಗ್ಯದಲ್ಲಿ ಸಮಸ್ಯೆ ಉಂಟಾದರೆ ತಕ್ಷಣ 108 ಸಂಖ್ಯೆ ಫೋನ್‌ ಮಾಡಿ ಸರ್ಕಾರಿ ಆ್ಯಂಬುಲೆನ್ಸ್‌ ನಲ್ಲಿ ಆಸ್ಪತ್ರೆಗೆ ಹೋದರೆ ಅವರಿಗೆ ಚಿಕಿತ್ಸೆ ವೆಚ್ಚ ಸಂಪೂಣವಾಗಿ ಉಚಿತವಾಗಲಿದೆ. ಒಂದು ವೇಳೆ ಸೋಂಕು ಇಲ್ಲದಿದ್ದರೂ ಕೊರೋನೇತರ ರೋಗಿಯಾದರೂ ಚಿಕಿತ್ಸೆ ಉಚಿತವಾಗಲಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವುದಕ್ಕೆ ನೋಡಲ್‌ ಅಧಿಕಾರಿಯೊಬ್ಬರನ್ನು ನೇಮಿಸಲಾಗಿದೆ ಎಂದು ಆಯುಕ್ತ ಮಂಜುನಾಥ ಪ್ರಸಾದ್‌ ತಿಳಿಸಿದರು.

click me!