ಸೋಂಕಿತರಿಂದ ಮುಂಗಡ ಶುಲ್ಕ ವಸೂಲಿ: ಜೈನ್‌ ಆಸ್ಪತ್ರೆಯ ಒಪಿಡಿಗೆ ಪಾಲಿಕೆ ಬೀಗ

By Kannadaprabha NewsFirst Published Aug 5, 2020, 8:03 AM IST
Highlights

ಬಿಬಿಎಂಪಿ ಅಥವಾ ಸರ್ಕಾರದಿಂದ ಶಿಫಾರಸು ಮಾಡಿದ ಸೋಂಕಿತರಿಂದ ಒಂದು ನಯಾ ಪೈಸೆ ಹಣ ಪಡೆಯುವಂತಿಲ್ಲ| ಜೈನ್‌ ಆಸ್ಪತ್ರೆ ಸಿಬ್ಬಂದಿ ಮತ್ತು ಆಡಳಿತ ಮಂಡಳಿ, ರೋಗಿ ದಾಖಲಾದ ಬಳಿಕ 30 ಸಾವಿರ ರು. ಹಣ ಪಾವತಿ ಮಾಡುವಂತೆ ಹೇಳಿದ್ದಾರೆ ಎಂಬ ದೂರು ಕೇಳಿ ಬಂದಿದ್ದವು| ಈ ಕುರಿತು ಎರಡು ಬಾರಿ ನೋಟಿಸ್‌ ಜಾರಿ ಮಾಡಲಾಗಿತ್ತು|

ಬೆಂಗಳೂರು(ಆ.05): ಕೊರೋನಾ ಸೋಂಕಿತರ ಚಿಕಿತ್ಸೆಗೆ ಬಿಬಿಎಂಪಿ ವತಿಯಿಂದ ಕಾಯ್ದಿರಿಸಿದ ಹಾಸಿಗೆಗಳಿಗೆ ಮುಂಗಡ ಹಣ ಪಡೆಯುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ನಗರದ ಭಗವಾನ್‌ ಮಹಾವೀರ್‌ ಜೈನ್‌ ಆಸ್ಪತ್ರೆಯ ಹೊರರೋಗಿಗಳ ವಿಭಾಗವನ್ನು ಬಿಬಿಎಂಪಿ ಅಧಿಕಾರಿಗಳು ಮುಚ್ಚಿಸಿದ್ದಾರೆ.

ಬಿಬಿಎಂಪಿ ಅಥವಾ ಸರ್ಕಾರದಿಂದ ಶಿಫಾರಸು ಮಾಡಿದ ಸೋಂಕಿತರಿಂದ ಒಂದು ನಯಾ ಪೈಸೆ ಹಣ ಪಡೆಯುವಂತಿಲ್ಲ. ಆದರೆ, ಆಸ್ಪತ್ರೆ ಸಿಬ್ಬಂದಿ ಮತ್ತು ಆಡಳಿತ ಮಂಡಳಿ, ರೋಗಿ ದಾಖಲಾದ ಬಳಿಕ 30 ಸಾವಿರ ರು. ಹಣ ಪಾವತಿ ಮಾಡುವಂತೆ ಹೇಳಿದ ದೂರು ಕೇಳಿ ಬಂದಿದ್ದವು. ಪಾಲಿಕೆ ಶಿಫಾರಸು ಮಾಡಿದ ರೋಗಿಗಳನ್ನು ಎರಡರಿಂದು ಮೂರು ಗಂಟೆ ದಾಖಲು ಮಾಡಿಕೊಳ್ಳದೇ ಸತಾಯಿಸುತ್ತಿದ್ದರು. ಈ ಕುರಿತು ಎರಡು ಬಾರಿ ನೋಟಿಸ್‌ ಜಾರಿ ಮಾಡಲಾಗಿತ್ತು. ಆದರೂ ಎಚ್ಚೆತ್ತುಕೊಳ್ಳದ ಹಿನ್ನೆಲೆಯಲ್ಲಿ ಮಂಗಳವಾರ ಬಿಬಿಎಂಪಿ ಪೂರ್ವ ವಲಯದ ಜಂಟಿ ಆಯುಕ್ತೆ ಪಲ್ಲವಿ ನೇತೃತ್ವದ ಅಧಿಕಾರಿಗಳ ತಂಡ ಆಸ್ಪತ್ರೆಗೆ ದಿಢೀರ್‌ ಭೇಟಿ ಹೊರ ರೋಗಿ ವಿಭಾಗವನ್ನು ಮುಚ್ಚಿಸಿ ಎಚ್ಚರಿಕೆ ನೀಡಿ ನೋಟಿಸ್‌ ಜಾರಿ ಮಾಡಿದ್ದಾರೆ.

ಬೆಂಗಳೂರು: ಒಂದೇ ವಾರದಲ್ಲಿ 15000 ಕೊರೋನಾ ಸೋಂಕಿತರು ಬಿಡುಗಡೆ

ಸರ್ಕಾರದ ಆದೇಶದಂತೆ ಖಾಸಗಿ ಆಸ್ಪತ್ರೆಗಳಲ್ಲಿ ಶೇ.50 ರಷ್ಟು ಹಾಸಿಗೆಗಳನ್ನು ಮೀಸಲಿಡಬೇಕು. ಅದರಂತೆ ಆಸ್ಪತ್ರೆಯಲ್ಲಿ ಇರುವ 150 ಹಾಸಿಗೆಯಲ್ಲಿ 75 ಹಾಸಿಗೆಗಳನ್ನು ನೀಡಬೇಕಿತ್ತು. ಆದರೆ, ಕೇವಲ 15 ಹಾಸಿಗೆ ನೀಡಿದ್ದರು. ಹೀಗಾಗಿ ಆಸ್ಪತ್ರೆ ಆಡಳಿತ ಮಂಡಳಿಗೆ ನೋಟಿಸ್‌ ನೀಡಲಾಗಿದೆ. ಆಸ್ಪತ್ರೆಯಿಂದ ಲಿಖಿತ ರೂಪದಲ್ಲಿ ಉತ್ತರ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಒಂದು ವೇಳೆ ಎಚ್ಚೆತ್ತುಕೊಳ್ಳದಿದ್ದರೆ ವಿಪತ್ತು ನಿರ್ವಹಣೆ ಕಾಯ್ದೆ ಅನುಸಾರ ಆಸ್ಪತ್ರೆಗೆ ಪರವಾನಗಿ ರದ್ದು ಪಡಿಸಲಾಗುವುದು ಎಂದು ಜಂಟಿ ಆಯುಕ್ತೆ ಪಲ್ಲವಿ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
 

click me!