*ಸಚಿವರಿಂದ ಆಮ್ಲಜನಕ ಘಟಕ ಉದ್ಘಾಟನೆ
*ಒಂದು ಸಾವಿರ ಲೀಟರ್ ಆಕ್ಸಿಜನ್ ಉತ್ಪಾದನೆ
*ಕೊರೋನಾ ಚಿಕಿತ್ಸೆಗೆ ಇಎಸ್‌ಐ ಆಸ್ಪತ್ರೆಗಳಲ್ಲಿ ಸಿದ್ಧತೆ
ಬೆಂಗಳೂರು (ಜ.7): ರಾಜ್ಯದ ಎಲ್ಲ ಕಾರ್ಮಿಕ ವಿಮಾ ಆಸ್ಪತ್ರೆಗಳಲ್ಲಿ (ESI) ಕೊರೋನಾ ಸೋಂಕಿತರ ಚಿಕಿತ್ಸೆಗೆ (Covid 19) ಅಗತ್ಯ ಸಿದ್ಧತೆ ಮಾಡಲಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ (Shivaram Hebbar) ತಿಳಿಸಿದರು. ರಾಜಾಜಿನಗರದ ರಾಜ್ಯ ಕಾರ್ಮಿಕ ವಿಮಾ ಆಸ್ಪತ್ರೆಯ (ಇಎಸ್‌ಐ) ಆವರಣದಲ್ಲಿ ಗುರುವಾರ ‘ಪಿಎಂ ಕೇರ್’ ಅನುದಾನದ ಅಡಿಯಲ್ಲಿ ಡಿಆರ್‌ಡಿಒ ಸಂಸ್ಥೆ ನಿರ್ಮಿಸಿರುವ ನೂತನ ಆಕ್ಸಿಜನ್ ಉತ್ಪಾದನಾ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಕೊರೋನಾ ಮೊದಲ ಎರಡು ಅಲೆಯನ್ನು ಅತ್ಯಂತ ಸಮರ್ಪಕವಾಗಿ ಎದುರಿಸಿದೆ ಎಂದು ಹೇಳಿದರು.
ಮೂರನೇ ಅಲೆಯನ್ನು ಕೂಡ ಸಾಧ್ಯವಾದಷ್ಟುತಡೆಗಟ್ಟಲು ಶ್ರಮವಹಿಸಲಾಗುತ್ತಿದೆ. ಸೋಂಕು ಭಾರಿ ಪ್ರಮಾಣದಲ್ಲಿ ಹೆಚ್ಚಾದರೆ, ಸೋಂಕಿತರ ಚಿಕಿತ್ಸೆಗಾಗಿ ಈಗಾಗಲೇ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಾರ್ಮಿಕ ವರ್ಗದ ಆರೈಕೆಗಾಗಿ ರಾಜ್ಯದ ಎಲ್ಲ ಕಾರ್ಮಿಕ ವಿಮಾ ಆಸ್ಪತ್ರೆಗಳಲ್ಲಿಯೂ ಕೊರೋನಾ ಸೋಂಕಿತರ ಚಿಕಿತ್ಸೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಇದನ್ನೂ ಓದಿ: Covid 19 Guidelines: ಬೆಂಗಳೂರು ಹೊರಗೆ ಕೋವಿಡ್ ನಿರ್ಬಂಧ ಸಡಿಲ?
ಒಂದು ಸಾವಿರ ಲೀಟರ್ ಆಕ್ಸಿಜನ್ ಉತ್ಪಾದಿಸುವ ಸಾಮರ್ಥ್ಯ
ಪಿಎಂ ಕೇರ್ ಅನುದಾನದ ಅಡಿಯಲ್ಲಿ ಡಿಆರ್‌ಡಿಒ ಸಂಸ್ಥೆಯು ನಿರ್ಮಾಣ ಮಾಡಿರುವ ನೂತನ ಆಕ್ಸಿಜನ್ ಉತ್ಪಾದನಾ ಘಟಕವು (Oxygen Plant) ಪ್ರತಿ ನಿಮಿಷಕ್ಕೆ ಸುಮಾರು ಒಂದು ಸಾವಿರ ಲೀಟರ್ ಆಕ್ಸಿಜನ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಆಸ್ಪತ್ರೆಯಲ್ಲಿ ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ ಆಕ್ಸಿಜನ್ ಕೊರತೆ ನೀಗಲಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ರಾಜಾಜಿನಗರ ಶಾಸಕ ಎಸ್.ಸುರೇಶಕುಮಾರ್, ವಿಮಾ ಆಸ್ಪತ್ರೆಯ ನಿರ್ದೇಶಕಿ ರೇಣುಕಾ ರಾಮಯ್ಯ, ಕಾರ್ಮಿಕ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಜಿ.ಕಲ್ಪನಾ, ಕಾರ್ಮಿಕ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
200 ದಿನ ಬಳಿಕ 5000+ ಕೇಸ್
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಅಬ್ಬರ ಹೆಚ್ಚಾಗುತ್ತಿದ್ದು, ಗುರುವಾರ ಬರೋಬ್ಬರಿ 5,031 ಮಂದಿಯಲ್ಲಿ ಕೋವಿಡ್-19 ಪತ್ತೆಯಾಗಿದೆ. ಈ ಪೈಕಿ ಬೆಂಗಳೂರು ನಗರವೊಂದರಲ್ಲೇ 4,324 ಪ್ರಕರಣ ದಾಖಲಾಗಿದೆ. ಬೆಂಗಳೂರಿನ ಪಾಸಿಟಿವಿಟಿ ದರ ಶೇ.7.5 ದಾಟಿದೆ. ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ 20 ಸಾವಿರ ದಾಟಿದೆ. ಕೋವಿಡ್‌ನಿಂದ ಗುರುವಾರ ಒಂದು ಸಾವು ಸಂಭವಿಸಿದೆ.
ಇದನ್ನೂ ಓದಿ: Corona Update ಕರ್ನಾಟಕದಲ್ಲಿ ಕೊರೋನಾ ಬ್ಲಾಸ್ಟ್, ಬೆಂಗಳೂರು ಕೋವಿಡ್ ಹಾಟ್‌ಸ್ಪಾಟ್
ಕಳೆದ ಜೂನ್ 20ಕ್ಕೆ 5,815 ಮಂದಿಯಲ್ಲಿ ಸೋಂಕು ವರದಿಯಾದ 200 ದಿನಗಳ ಬಳಿಕ ಮೊದಲ ಬಾರಿಗೆ 5 ಸಾವಿರಕ್ಕಿಂತ ಹೆಚ್ಚು ಪ್ರಕರಣ ದಾಖಲಾಗಿದೆ. ಬೆಂಗಳೂರಿನ ಜೊತೆಗೆ ರಾಜ್ಯದ ಅನ್ಯ ಭಾಗಗಳಲ್ಲಿಯೂ ಹೊಸ ಪ್ರಕರಣಗಳಲ್ಲಿ ಏರಿಕೆ ದಾಖಲಾಗುತ್ತಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ಒಂದಂಕಿಯಿಂದ ಎರಡಂಕಿಗೆ ಜಿಗಿದಿವೆ. 1.27 ಲಕ್ಷ ಕೋವಿಡ್ ಪರೀಕ್ಷೆ ನಡೆದಿದ್ದು ಶೇ.3.95 ಪಾಸಿಟಿವಿಟಿ ದರ ದಾಖಲಾಗಿದೆ. ನಿನ್ನೆ ಕೂಡ 1.27 ಲಕ್ಷ ಪರೀಕ್ಷೆ ನಡೆದಿದ್ದರೂ ಪಾಸಿಟಿವಿಟಿ ದರ ಶೇ. 0.66 ಜಾಸ್ತಿ ವರದಿಯಾಗಿದೆ. 271 ಮಂದಿ ಚೇತರಿಸಿಕೊಂಡಿದ್ದು ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 22,173ಕ್ಕೆ ಏರಿದೆ.
1.27 ಲಕ್ಷ ಕೋವಿಡ್ ಪರೀಕ್ಷೆ ನಡೆದಿದ್ದು ಶೇ.3.95 ಪಾಸಿಟಿವಿಟಿ ದರ ದಾಖಲಾಗಿದೆ. ನಿನ್ನೆ ಕೂಡ 1.27 ಲಕ್ಷ ಪರೀಕ್ಷೆ ನಡೆದಿದ್ದರೂ ಪಾಸಿಟಿವಿಟಿ ದರ ಶೇ. 0.66 ಜಾಸ್ತಿ ವರದಿಯಾಗಿದೆ. 271 ಮಂದಿ ಚೇತರಿಸಿಕೊಂಡಿದ್ದು ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 22,173ಕ್ಕೆ ಏರಿದೆ. ಈವರೆಗೆ ಒಟ್ಟು 30.22 ಲಕ್ಷ ಪಾಸಿಟಿವ್ ಪ್ರಕರಣ ವರದಿಯಾಗಿದ್ದು 29.62 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. 38,358 ಮಂದಿ ಮರಣವನ್ನಪ್ಪಿದ್ದಾರೆ. 5.71 ಕೋಟಿ ಪರೀಕ್ಷೆ ನಡೆದಿದೆ.