MSP For Crops : ಬೆಳೆ ಪರಿಹಾರ ಪಡೆದವರಿಗೆ ಬೆಂಬಲ ಬೆಲೆ ಇಲ್ಲ?

Kannadaprabha News   | Asianet News
Published : Dec 06, 2021, 07:25 AM IST
MSP For Crops :  ಬೆಳೆ ಪರಿಹಾರ ಪಡೆದವರಿಗೆ ಬೆಂಬಲ ಬೆಲೆ ಇಲ್ಲ?

ಸಾರಾಂಶ

  ಬೆಳೆ ಪರಿಹಾರ ಪಡೆದವರಿಗೆ ಬೆಂಬಲ ಬೆಲೆ ಇಲ್ಲ?  ಕೆಳಹಂತದ ಕೃಷಿ ಸಿಬ್ಬಂದಿ ಹೇಳಿಕೆಯಿಂದ ರೈತರಲ್ಲಿ ಗೊಂದಲ ಬೆಳೆ ಹಾಳಾಗಿದ್ದರೂ ಪರಿಹಾರ ಪಡೆಯಲು ಕೃಷಿಕರ ಹಿಂದೇಟು  

ವರದಿ : ಸಿದ್ದು ಚಿಕ್ಕಬಳ್ಳೇಕೆರೆ

  ಬೆಂಗಳೂರು (ಡಿ.06): ಬೆಳೆ ಹಾನಿ ಪರಿಹಾರ ಪಡೆದರೆ ಕನಿಷ್ಠ ಬೆಂಬಲ ಬೆಲೆ (MSP) ಮತ್ತು ಪ್ರೋತ್ಸಾಹ ಧನ ಯೋಜನೆಯಡಿ ಸರ್ಕಾರಕ್ಕೆ ಕೃಷಿ ಉತ್ಪನ್ನಗಳನ್ನು ಮಾರಾಟ (Sale) ಮಾಡಲು ಸಾಧ್ಯವಿಲ್ಲ. ಒಂದೊಮ್ಮೆ ಪರಿಹಾರ ಪಡೆದರೆ ಪಹಣಿಗಳು ಲಾಕ್‌ ಆಗಲಿವೆ ಎಂದು ಕೃಷಿ ಇಲಾಖೆಯ (Agriculture Department)  ಕೆಳ ಹಂತದ ಸಿಬ್ಬಂದಿ ಹೇಳುತ್ತಿರುವುದು ರೈತರಲ್ಲಿ (Farmers) ಗೊಂದಲ ಉಂಟುಮಾಡಿದೆ.  ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದಾಗಿ ಲಕ್ಷಾಂತರ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದು ನಿಂತಿದ್ದ ವಿವಿಧ ಬೆಳೆಗಳು ಹಾನಿಯಾಗಿವೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್‌ NDRF) )ಯಡಿ ಶೇ.33ಕ್ಕಿಂತ ಹೆಚ್ಚು ಬೆಳೆ ಹಾನಿಯಾಗಿದ್ದರೆ ಮಾತ್ರ ಪರಿಹಾರ ನೀಡಲಾಗುತ್ತಿದೆ. ಆದರೆ ಬೆಳೆ ಹಾನಿ ಪರಿಹಾರ ಪಡೆದರೆ ಮುಂದಿನ ದಿನಗಳಲ್ಲಿ ಸರ್ಕಾರವು ಆಹಾರ ನಿಗಮ, ಉಗ್ರಾಣ ನಿಗಮ, ರೈತ ಉತ್ಪಾದಕ ಸಂಸ್ಥೆಗಳ ಮೂಲಕ ಬೆಂಬಲ ಬೆಲೆ ಯೋಜನೆಯಡಿ ಉತ್ಪನ್ನಗಳನ್ನು ಖರೀದಿಸುವುದಿಲ್ಲ ಎಂದು ಕೆಲ ಸಿಬ್ಬಂದಿ ಹೇಳುತ್ತಿರುವುದು ರೈತರಲ್ಲಿ ಆತಂಕ ಉಂಟು ಮಾಡಿದೆ.

‘ಒಂದೊಮ್ಮೆ ಪರಿಹಾರ ಪಡೆದರೆ ಬೆಂಬಲ ಬೆಲೆ ಯೋಜನೆಯಡಿ ಕೃಷಿ ಉತ್ಪನ್ನಗಳನ್ನು ಸರ್ಕಾರಕ್ಕೆ ಮಾರಾಟ ಮಾಡಲು ಬರುವುದಿಲ್ಲ. ಪರಿಹಾರ ಪಡೆದ ಜಮೀನಿನ ಪಹಣಿಗಳು ಲಾಕ್‌ ಆಗಿ ಭತ್ತ (Paddy), ರಾಗಿ, ಜೋಳ, ತೊಗರಿ, ಕಡಲೆ ಮತ್ತಿತರ ಉತ್ಪನ್ನಗಳನ್ನು ಮಾರಾಟ ಮಾಡದೆ ಸಂಕಷ್ಟ ಅನುಭವಿಸಬೇಕಾಗುತ್ತದೆ’ ಎಂದು ಹೇಳುತ್ತಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ.

ಅರ್ಜಿಯನ್ನೇ ಸಲ್ಲಿಸುತ್ತಿಲ್ಲ: ಕ್ವಿಂಟಲ್‌ ರಾಗಿಗೆ ಮಾರುಕಟ್ಟೆಯಲ್ಲಿ (Market) ಪ್ರಸ್ತುತ 1800 ರಿಂದ 2200 ರು. ಇದ್ದು ಇದೇ ರಾಗಿಯನ್ನು ಎಪಿಎಂಸಿಗೆ ಕೊಟ್ಟರೆ 3295 ರು. ಸಿಗಲಿದೆ. ಎನ್‌ಡಿಆರ್‌ಎಫ್‌ ಅಡಿ ಹೆಕ್ಟೇರ್‌ಗೆ 6800 ರುಪಾಯಿ ಮಾತ್ರ ಪರಿಹಾರ ನೀಡುವುದರಿಂದ ಕೆಲವರು ಇಲ್ಲದ ಉಸಾಬರಿ ಏಕೆ ಎಂದು ಅರ್ಧದಷ್ಟುಬೆಳೆ ಹಾನಿಯಾಗಿದ್ದರೂ ಅಳಿದುಳಿದ ಬೆಳೆಯನ್ನಾದರೂ ಸರ್ಕಾರಕ್ಕೆ ಖರೀದಿಗೆ ನೀಡಬಹುದು ಎಂದು ಪರಿಹಾರಕ್ಕೆ ಅರ್ಜಿಯನ್ನೇ ಸಲ್ಲಿಸುತ್ತಿಲ್ಲ.

ಇನ್ನು ಕೆಲವರು ಎರಡು ಜಮೀನಿನಲ್ಲಿ (Farm land) ಬೆಳೆದಿದ್ದ ಬೆಳೆಯಲ್ಲಿ ಒಂದು ಜಮೀನಿನ ಪಹಣಿಯನ್ನು ಮಾತ್ರ ಪರಿಹಾರಕ್ಕೆ ನೀಡುತ್ತಿದ್ದು ಇನ್ನೊಂದು ಪಹಣಿಯನ್ನು ಬೆಂಬಲ ಬೆಲೆ ಯೋಜನೆಗಾಗಿ ಕಾಯ್ದಿರಿಸಿಕೊಂಡಿದ್ದಾರೆ. ಈ ಗೊಂದಲಕ್ಕೆ ತೆರೆ ಎಳೆದಿರುವ ಕಂದಾಯ ಇಲಾಖೆ ಅಧಿಕಾರಿಗಳು, ಅರ್ಧ ಬೆಳೆ ಹಾನಿಯಾಗಿದ್ದರೂ ಪರಿಹಾರ ನೀಡಲಾಗುತ್ತದೆ. ಇನ್ನುಳಿದ ಬೆಳೆ ಮಾರಾಟಕ್ಕೆ ರೈತರು ಬೆಂಬಲ ಬೆಲೆ ಯೋಜನೆಯ ಸದುಪಯೋಗ ಮಾಡಿಕೊಳ್ಳಬಹುದು ಎಂದು ಸ್ಪಷ್ಟಪಡಿಸಿದ್ದಾರೆ.

ಹಾಗೇನೂ ಆಗದು, ಆತಂಕ ಬೇಡ : ಬೆಳೆ ಹಾನಿ ಪರಿಹಾರ ಪಡೆದಿದ್ದರೂ ರೈತರು ಬೆಂಬಲ ಬೆಲೆ ಯೋಜನೆಯಡಿ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಯಾವುದೇ ತೊಂದರೆ ಉಂಟಾಗುವುದಿಲ್ಲ. ಹಾನಿಯ ನಂತರವೂ ಉಳಿದ ಪಾಲನ್ನು ಮಾರಲು ಬೆಂಬಲ ಬೆಲೆ ಯೋಜನೆ ಬಳಸಿಕೊಳ್ಳಬಹುದಾಗಿದ್ದು, ರೈತರು ಆತಂಕಕ್ಕೆ ಒಳಗಾಗಬಾರದು.

- ತುಷಾರ್‌ ಗಿರಿನಾಥ್‌, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ

ಭತ್ತಕ್ಕೆ ಬೆಂಬಲ ಬೆಲೆ  :

 

 ಚಿಕ್ಕಬಳ್ಳಾಪುರ : ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ (Paddy)  ಮಾರಾಟ ಮಾಡಲು ಇಚ್ಚಿಸುವ ಜಿಲ್ಲೆಯ ಆಸಕ್ತ ರೈತರ (Farmers)  ನೋಂದಣಿ ಪ್ರಕ್ರಿಯೆಯನ್ನು ಜಿಲ್ಲೆಯಲ್ಲಿ ಪ್ರಾರಂಭಿಸಿದ್ದು, ಆಸಕ್ತ ರೈತರು ಬಾಗೇಪಲ್ಲಿ ಮತ್ತು ಗೌರಿಬಿದನೂರು ತಾಲೂಕು ಕೇಂದ್ರದಲ್ಲಿ ತೆರೆದಿರುವ ಭತ್ತ ಖರೀದಿ ಕೇಂದ್ರಗಳನ್ನು ಸಂಪರ್ಕಿಸಿ ನೋಂದಣಿ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ (DC) ಆರ್‌.ಲತಾ ತಿಳಿಸಿದರು. ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ನಡೆದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ (Support Price) ಜಿಲ್ಲೆಯಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ತೆರೆಯುವ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಮಾನ್ಯ ಭತ್ತಕ್ಕೆ ಪ್ರತಿ ಕ್ವಿಂಟಾಲ್‌ ಗೆ 1,940 ಹಾಗೂ ಗ್ರೇಡ್‌-ಎ ಭತ್ತಕ್ಕೆ 1,960 ರು. ನಿಗದಿಗೊಳಿಸಲಾಗಿದೆ ಎಂದರು.

2 ಕಡೆ ಖರೀದಿ ಕೇಂದ್ರ:  ಸರ್ಕಾರದ ಸೂಚನೆಯಂತೆ 2021-22ನೇ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ಆಸಕ್ತ ರೈತರಿಂದ (Farmers) ಭತ್ತವನ್ನು ಖರೀದಿಸಲು ನಿರ್ಧರಿಸಲಾಗಿದೆ.. ಸರ್ಕಾರವು ನಿಗದಿಪಡಿಸಿರುವ ಗುಣಮಟ್ಟಕ್ಕೆ ಅನುಗುಣವಾಗಿ ಭತ್ತವನ್ನು ನೀಡಲು ಇಚ್ಚೆಯನ್ನು ವ್ಯಕ್ತಪಡಿಸುವ ಜಿಲ್ಲೆಯ ರೈತರ (Farmers) ನೊಂದಣೆ ಕಾರ್ಯವನ್ನು ಇಂದಿನಿಂದ ಪ್ರಾರಂಭಿಸಲಾಗಿದೆ. ಜಿಲ್ಲೆಯ ಬಾಗೇಪಲ್ಲಿ ಮತ್ತು ಗೌರಿಬಿದನೂರು ತಾಲೂಕಿನಲ್ಲಿ ಭತ್ತವನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಬಾಗೇಪಲ್ಲಿ ತಾಲ್ಲೂಕಿನಲ್ಲಿ 1,896 ಹೆಕ್ಟೇರ್‌ ಮತ್ತು ಗೌರಿಬಿದನೂರು ತಾಲ್ಲೂಕಿನಲ್ಲಿ 353 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತವನ್ನು ಬೆಳೆಯಲಾಗುತ್ತಿದೆ ಎಂದರು.

ಜಿಲ್ಲೆಯ ಇನ್ನುಳಿದ ತಾಲೂಕುಗಳಲ್ಲಿ ಅಲ್ಪ ಪ್ರಮಾಣದಲ್ಲಿ ಭತ್ತ ಬೆಳೆಯುವುದರಿಂದ ಆ ತಾಲೂಕುಗಳನ್ನು  ಹೊರತು ಪಡಿಸಿ ಬಾಗೇಪಲ್ಲಿ ಮತ್ತು ಗೌರಿಬಿದನೂರು ತಾಲ್ಲೂಕು ಕೇಂದ್ರಗಳಲ್ಲಿ ಮಾತ್ರ ಭತ್ತ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಆಸಕ್ತ ರೈತರು ಆಧಾರ್‌ ಮತ್ತು ದಾಖಲೆಗಳ ಪ್ರತಿಯೊಂದಿಗೆ ಕೇಂದ್ರಗಳನ್ನು ಸಂಪರ್ಕಿಸಿ ಇಂದಿನಿಂದಲೇ ನೋಂದಣಿ ಮಾಡಿಕೊಳ್ಳಬಹುದು. ಜಿಲ್ಲೆಯ ಹೆಚ್ಚಿನ ರೈತರು ಕನಿಷ್ಠ ಬೆಂಬಲ ಬೆಲೆ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್