ಕರ್ನಾಟಕದಲ್ಲಿ ಇಂದು ಮತ್ತೆ ಮೋದಿ ಮೇನಿಯಾ...!

By Kannadaprabha NewsFirst Published Mar 12, 2023, 4:39 AM IST
Highlights

ಧಾರವಾಡ, ಮಂಡ್ಯದಲ್ಲಿ 25ಕ್ಕೂ ಹೆಚ್ಚು ಯೋಜನೆಗಳಿಗೆ ಚಾಲನೆ, ಬೆಂಗಳೂರು-ಮೈಸೂರು ನಡುವಣ ರಾಜ್ಯದ ಮೊದಲ ಎಕ್ಸ್‌ಪ್ರೆಸ್‌ವೇ ಉದ್ಘಾಟನೆ, ಧಾರವಾಡದಲ್ಲಿ ದೇಶದ ಪ್ರಥಮ ಪರಿಸರಸ್ನೇಹಿ ಐಐಟಿ ಕ್ಯಾಂಪಸ್‌ ಲೋಕಾರ್ಪಣೆ, ಹುಬ್ಬಳ್ಳಿಯಲ್ಲಿನ ‘ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್‌’ ಕೂಡ ಅನಾವರಣ. 

ಮಂಡ್ಯ/ಧಾರವಾಡ(ಮಾ.12):  ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಪರ ಹವಾ ಸೃಷ್ಟಿಸಲು ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಇಂದು(ಭಾನುವಾರ) ಮಂಡ್ಯ ಹಾಗೂ ಧಾರವಾಡಕ್ಕೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 11.25ಕ್ಕೆ ಮಂಡ್ಯಕ್ಕೆ ಆಗಮಿಸಲಿರುವ ಮೋದಿ, ಕಟ್ಟೆದೊಡ್ಡಿ ಬಳಿ ಎಕ್ಸ್‌ಪ್ರೆಸ್‌-ವೇನಲ್ಲಿ 50 ಮೀ.ದೂರದವರೆಗೆ ನಡೆದಾಡಿ ಹೆದ್ದಾರಿ ವೀಕ್ಷಣೆ ನಡೆಸಲಿದ್ದಾರೆ. ಬಳಿಕ, 11,500 ಕೋಟಿ ರು.ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಬಹುನಿರೀಕ್ಷಿತ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಗೆ ಚಾಲನೆ ನೀಡಲಿದ್ದಾರೆ. ಇದಕ್ಕೂ ಮೊದಲು, ಪ್ರವಾಸಿಮಂದಿರ ವೃತ್ತದಿಂದ ಎಸ್‌.ಡಿ.ಜಯರಾಂ ಸರ್ಕಲ್‌ವರೆಗೆ 1.8 ಕಿ.ಮೀ. ದೂರ ಬೃಹತ್‌ ರೋಡ್‌ ಶೋ ನಡೆಸಲಿದ್ದು, 40 ಸಾವಿರ ಜನ ಇದರಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

ಬಳಿಕ, ಮಧ್ಯಾಹ್ನ 3.15ಕ್ಕೆ ಧಾರವಾಡಕ್ಕೆ ಆಗಮಿಸಲಿರುವ ಮೋದಿ, 852 ಕೋಟಿ ರು.ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಐಐಟಿಯ ನೂತನ ಕ್ಯಾಂಪಸ್‌ನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ರಾಜ್ಯದ ಮೊದಲ ಹಾಗೂ ದೇಶದ ಪ್ರಪ್ರಥಮ ಹಸಿರು ಐಐಟಿ ಎಂಬ ಖ್ಯಾತಿಗೆ ಇದು ಒಳಗಾಗಿದೆ. ಬಳಿಕ, ಇದೇ ವೇದಿಕೆಯಲ್ಲಿ ‘ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣ’ದಲ್ಲಿ ನಿರ್ಮಾಣವಾಗಿರುವ 1.5 ಕಿ.ಮೀ. ಉದ್ದದ ‘ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾಮ್‌ರ್‍’ನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಜೊತೆಗೆ, ಹಂಪಿ ಸ್ಮಾರಕ ಮಾದರಿಯ ಹೊಸಪೇಟೆ ರೈಲು ನಿಲ್ದಾಣಕ್ಕೂ ಚಾಲನೆ ನೀಡಲಿದ್ದಾರೆ. ಇದೇ ವೇಳೆ, ಉಭಯ ನಗರಗಳಲ್ಲಿ 6,528 ಕೋಟಿ ವೆಚ್ಚದ 20 ಕಾಮಗಾರಿಗಳ ಉದ್ಘಾಟನೆ ನೆರವೇರಿಸಲಿದ್ದಾರೆ. ಜೊತೆಗೆ, 4,689 ಕೋಟಿ ವೆಚ್ಚದ 6 ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

Latest Videos

ಉರಿ ಬಿಸಿಲಿಗೆ ತತ್ತರಿಸಿದ ಹಲವು ರಾಜ್ಯ, ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ

ಅದ್ದೂರಿ ಸ್ವಾಗತಕ್ಕೆ ಸಿದ್ಧತೆ:

2023ರಲ್ಲಿ ಮೋದಿ ರಾಜ್ಯಕ್ಕೆ ನೀಡುತ್ತಿರುವ 6ನೇ ಭೇಟಿ ಇದಾಗಿದ್ದು, ಮೋದಿಯನ್ನು ಅದ್ದೂರಿಯಾಗಿ ಸ್ವಾಗತಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಧಾರವಾಡದಲ್ಲಿ ಐತಿಹಾಸಿಕ ಹಿನ್ನೆಲೆಯುಳ್ಳ ಕಲಘಟಗಿಯ ತೊಟ್ಟಿಲನ್ನು ಮೋದಿಗೆ ಕೊಡುಗೆಯಾಗಿ ನೀಡಲಾಗುತ್ತಿದೆ. ಕಲಘಟಗಿ ಕಲಾವಿದ ಮಾರುತಿ ಬಡಿಗೇರ ಅವರು ನೈಸರ್ಗಿಕ ಬಣ್ಣಗಳಿಂದ 9 ಇಂಚು ಉದ್ದ ಹಾಗೂ ಆರು ಇಂಚು ಅಗಲದಲ್ಲಿ ತೊಟ್ಟಿಲಿನ ಮಾದರಿಯನ್ನು ಸಿದ್ಧಪಡಿಸಿದ್ದಾರೆ. ಇದರೊಂದಿಗೆ ಸಿದ್ಧಾರೂಢರ ಮೂರ್ತಿ, ಕಸೂತಿ ಶಾಲು, ಯಾಲಕ್ಕಿ ಹಾರ ಹಾಗೂ ಯಾಲಕ್ಕಿ ಪೇಟವನ್ನು ಸಹ ಉಡುಗೊರೆಯಾಗಿ ನೀಡಲಾಗುತ್ತಿದೆ. ಅಲ್ಲದೆ, 2023 ವಿಶ್ವ ಸಿರಿಧಾನ್ಯ ವರ್ಷಾಚರಣೆಯಾಗಿದ್ದು, ವೇದಿಕೆ ಎದುರು ಬೃಹತ್‌ ಗಾತ್ರದಲ್ಲಿ ಸಿರಿಧಾನ್ಯಗಳ ರಂಗೋಲಿ ಮೂಲಕ ಪ್ರಧಾನಿಗೆ ಸ್ವಾಗತ ನೀಡಲಾಗುತ್ತಿದೆ. ಜೊತೆಗೆ, ಸ್ಥಳೀಯ ಕಲಾವಿದರು ವಿವಿಧ ವೇಷಭೂಷಣದ ಮೂಲಕ ಅವರನ್ನು ಸಮಾರಂಭಕ್ಕೆ ಬರಮಾಡಿಕೊಳ್ಳಲಿದ್ದಾರೆ. ಈ ಸಮಾರಂಭಕ್ಕೆ 2 ಲಕ್ಷಕ್ಕೂ ಹೆಚ್ಚು ಜನ ಆಗಮಿಸುವ ನಿರೀಕ್ಷೆಯಿದೆ.

8 ವರ್ಷಕ್ಕೆ ದುಪ್ಪಟ್ಟಾದ ಭಾರತೀಯರ ಆದಾಯ: ಪ್ರಧಾನಿ ಮೋದಿ ಆಡಳಿತದಲ್ಲಿ ಭರ್ಜರಿ ಆರ್ಥಿಕ ಪ್ರಗತಿ

ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಮಂಡ್ಯ ಹಾಗೂ ಧಾರವಾಡ ನಗರಗಳು ಸಂಪೂರ್ಣ ಕೇಸರಿಮಯವಾಗಿವೆ. ನಗರದ ಪ್ರಮುಖ ರಸ್ತೆ, ಹೆದ್ದಾರಿಗಳಲ್ಲಿ ಕೇಸರಿ ಬಣ್ಣದ ಬಾವುಟಗಳು, ಮೋದಿಗೆ ಸ್ವಾಗತ ಕೋರುವ ಪ್ಲೆಕ್ಸ್‌ಗಳು, ಬೃಹತ್‌ ಕಟೌಟ್‌ಗಳು ರಾರಾಜಿಸುತ್ತಿವೆ. ಎಲ್ಲೆಡೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ರೋಡ್‌ ಶೋ ಸೇರಿದಂತೆ ಮೋದಿ ಪಾಲ್ಗೊಳ್ಳುವ ಎಲ್ಲಾ ಕಾರ್ಯಕ್ರಮಗಳ ಸ್ಥಳಗಳಲ್ಲಿನ 15 ಕಿ.ಮೀ. ವ್ಯಾಪ್ತಿಯಲ್ಲಿ ಮಾನವ ರಹಿತ ಡ್ರೋನ್‌ ಕ್ಯಾಮರಾ ಬಳಕೆ ನಿಷೇಧಿಸಲಾಗಿದೆ. ಬೆಂ-ಮೈ ಹೆದ್ದಾರಿಯಲ್ಲಿ ಬೆಳಗ್ಗೆ 7 ಗಂಟೆಯಿಂದ ಸಂಜೆ 6ರವರೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ.

ಎಲ್ಲೆಲ್ಲಿ, ಏನು ಕಾರ್ಯಕ್ರಮ?:

- ಬೆಳಗ್ಗೆ 11.25ಕ್ಕೆ ಮಂಡ್ಯಕ್ಕೆ ಆಗಮನ. 11.30ರಿಂದ 1.8 ಕಿ.ಮೀ. ರೋಡ್‌ ಶೋ. 40 ಸಾವಿರ ಜನ ನಿರೀಕ್ಷೆ
- 11.50ಕ್ಕೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ 50 ಮೀ. ಕಾಲ್ನಡಿಗೆ, ವೀಕ್ಷಣೆ. ಬಳಿಕ ಲೋಕಾರ್ಪಣೆ
- ಮಧ್ಯಾಹ್ನ 12.05ಕ್ಕೆ ಗೆಜ್ಜಲಗೆರೆ ಕಾಲೋನಿ ಸಮೀಪ ಸರ್ಕಾರಿ ಯೋಜನೆಗಳ ಫಲಾನುಭವಿಗಳ ಸಮಾವೇಶ
- ಅಮೃತ್‌-1 ಅಡಿಮಂಡ್ಯಕ್ಕೆ 24*7 ಕುಡಿವ ನೀರು ಪೂರೈಸುವ .123.04 ಕೋಟಿಯ ಯೋಜನೆ ಉದ್ಘಾಟನೆ
- .20 ಕೋಟಿಯ ಆಸ್ಪತ್ರೆ ಉದ್ಘಾಟನೆ. .3529 ಕೋಟಿ ವೆಚ್ಚದ ಮೈಸೂರು-ಕುಶಾಲನಗರ ಚತುಷ್ಪಥಕ್ಕೆ ಶಂಕು
- ಮ.3.30ಕ್ಕೆ .852 ಕೋಟಿ ವೆಚ್ಚದ, ದೇಶದ ಮೊದಲ ಪರಿಸರಸ್ನೇಹಿ ಧಾರವಾಡ ಐಐಟಿ ಕ್ಯಾಂಪಸ್‌ ಲೋಕಾರ್ಪಣೆ
- 388 ಗ್ರಾಮಗಳಿಗೆ ಶುದ್ಧ ಕುಡಿವ ನೀರು ಒದಗಿಸುವ .1042 ಕೋಟಿ ವೆಚ್ಚದ ಜಲಜೀವನ್‌ ಮಿಷನ್‌ಗೆ ಚಾಲನೆ
- .353.88 ಕೋಟಿ ವೆಚ್ಚದಲ್ಲಿ ಸ್ಮಾರ್ಚ್‌ಸಿಟಿ ಯೋಜನೆಯಡಿ ನಿರ್ಮಿಸಿದ 15 ಕಾಮಗಾರಿಗಳ ಲೋಕಾರ್ಪಣೆ
- ಕಿಮ್ಸ್‌ನಲ್ಲಿ .69.09 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ನೂತನ ವೈದ್ಯಕೀಯ ಸೌಲಭ್ಯ, ವಿದ್ಯಾರ್ಥಿ ನಿಲಯ ಉದ್ಘಾಟನೆ
- ಹುಬ್ಬಳ್ಳಿಯಲ್ಲಿ .20.1 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಜಗತ್ತಿನ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾಮ್‌ರ್‍ ಉದ್ಘಾಟನೆ
- .519 ಕೋಟಿಯ ಹೊಸಪೇಟೆ-ಹುಬ್ಬಳ್ಳಿ-ತಿನೈಘಾಟ್‌ನ 245 ಕಿ.ಮೀ. ವಿದ್ಯುದೀಕೃತ ರೈಲುಮಾರ್ಗ ಉದ್ಘಾಟನೆ
- .250 ಕೋಟಿಯ ಹುಬ್ಬಳ್ಳಿ ಜಯದೇವ ಹೃದ್ರೋಗ ಆಸ್ಪತ್ರೆ, .42 ಕೋಟಿ ವೆಚ್ಚದ ಶಾಲಾ ಕೊಠಡಿ ನಿರ್ಮಾಣಕ್ಕೆ ಶಂಕು
- .150 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ತುಪ್ಪರಿಹಳ್ಳ ಪ್ರವಾಹ ನಿಯಂತ್ರಣ ಯೋಜನೆಗೆ ಭೂಮಿಪೂಜೆ
- .552 ಕೋಟಿ ವೆಚ್ಚದ ವಿವಿಧ ರೈಲ್ವೆ ಯೋಜನೆ, .166 ಕೋಟಿ ವೆಚ್ಚದ ಕ್ರೀಡಾ ಸಮುಚ್ಚಯಕ್ಕೆ ಶಂಕುಸ್ಥಾಪನೆ

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ವಿಶೇಷ

.11500 ಕೋಟಿ: ಎಕ್ಸ್‌ಪ್ರೆಸ್‌ ವೇ ನಿರ್ಮಾಣಕ್ಕೆ ತಗುಲಿದ ಒಟ್ಟು ವೆಚ್ಚ
119 ಕಿ.ಮೀ.: ಬೆಂಗಳೂರು-ಮೈಸೂರು ಹೊಸ ಎಕ್ಸ್‌ಪ್ರೆಸ್‌ವೇ ಉದ್ದ
90 ನಿಮಿಷ: 3 ತಾಸುಗಳಿದ್ದ ಪ್ರಯಾಣ ಇನ್ನು ಕೇವಲ 1.5 ತಾಸಿಗೆ ಇಳಿಕೆ
114 ಸೇತುವೆ: 19 ದೊಡ್ಡ, 41 ಸಣ್ಣ, 4 ರೈಲ್ವೆ ಸೇತುವೆ, 50 ಅಂಡರ್‌ಪಾಸ್‌

click me!