ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಅಪಾಯದ ಮಟ್ಟದಲ್ಲಿ ತುಂಗಭದ್ರಾ, ಕೃಷ್ಣಾ, ಶರಾವತಿ ನದಿ. ಡ್ಯಾಂನಿಂದ ಭಾರೀ ನೀರು ಹೊರಕ್ಕೆ, ಹಂಪಿ ಸ್ಮಾರಕಗಳು ಜಲಾವೃತ. ಜು. 19ರಿಂದ ಮಳೆ ಇಳಿಯುವ ಸಾಧ್ಯತೆ.
ಬೆಂಗಳೂರು (ಜು.17): ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ತುಂಗಭದ್ರಾ, ಕೃಷ್ಣಾ ಸೇರಿ ಹಲವು ನದಿಗಳು ಉಕ್ಕಿಹರಿಯುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ, ಉತ್ತರ ಕನ್ನಡ, ವಿಜಯನಗರ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ಪ್ರವಾಹದ ಆತಂಕ ಮುಂದುವರಿದಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಶರಾವತಿ ನದಿ ಉಕ್ಕಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಭಾಸ್ಕೇರಿ ಗ್ರಾಮ ಜಲಾವೃತವಾಗಿದೆ. ಕಾರವಾರದಲ್ಲಿರುವ ಜಿಲ್ಲಾ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರಕ್ಕೆ ನೀರು ನುಗ್ಗಿದ್ದು ಸಾರ್ವಜನಿಕರಿಗೆ ತೊಂದರೆ ಆಗಿದೆ. ವರದಾ ನದಿ ಪ್ರವಾಹದಿಂದ ಶಿರಸಿ ಬಳಿಯ ಗುಡ್ನಾಪುರ ಕೆರೆ ತುಂಬಿ ಹರಿಯುತ್ತಿದ್ದು, ಶಿರಸಿ- ಹೊಸನಗರ ರಾಜ್ಯ ಹೆದ್ದಾರಿಯ ಮೇಲೆ ನೀರು ಹರಿಯುತ್ತಿದ್ದು, ವಾಹನ ಸವಾರರು ಪರದಾಟ ಅನುಭವಿಸುತ್ತಿದ್ದಾರೆ. ಇನ್ನು ತುಂಗಭದ್ರಾ ಜಲಾಶಯಕ್ಕೆ ಭಾರೀ ಪ್ರಮಾಣದ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ 1.50 ಲಕ್ಷ ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಇದರಿಂದ ನದಿ ಪಾತ್ರದ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಈಗಾಗಲೇ ಜಲಾವೃತವಾಗಿದ್ದ ಹಂಪಿ, ಆನೆಗೊಂದಿ, ನವ ವೃಂದಾವನಗಡ್ಡೆ ಸೇರಿ ಹಲವು ಸ್ಮಾರಕಗಳು ಮತ್ತಷ್ಟುಮುಳುಗುವ ಆತಂಕ ಎದುರಾಗಿದೆ. ಕಂಪ್ಲಿ- ಗಂಗಾವತಿ ಸೇತುವೆಯ ಮೇಲೆ ನೀರು ಹರಿಯುತ್ತಿದ್ದು ಸಂಚಾರ್ ಬಂದ್ ಆಗಿದೆ.
ನೆರೆಯ ಮಹಾರಾಷ್ಟ್ರ ಹಾಗೂ ಬೆಳಗಾವಿ ಜಿಲ್ಲೆಯಾದ್ಯಂತ ವರುಣನ ಆರ್ಭಟ ಮುಂದುವರಿದಿರುವ ಹಿನ್ನೆಲೆಯಲ್ಲಿ ಕೃಷ್ಣಾ, ಮಲಪ್ರಭಾ, ಘಟಪ್ರಭಾ, ದೂಧಗಂಗಾ, ವೇದಗಂಗಾ ನದಿಗಳು ತುಂಬಿ ಹರಿಯುತ್ತಿರುವೆ. ಚಿಕ್ಕೋಡಿ ತಾಲೂಕಿನಲ್ಲಿ 9, ಮೂಡಲಗಿ ತಾಲೂಕಿನ ನಾಲ್ಕು ಸೇರಿದಂತೆ ಒಟ್ಟು 13 ಸೇತುವೆಗಳು ಮುಳುಗಡೆಯಾಗಿವೆ.
ದ್ವೀಪದಂತಾದ ಉಕ್ಕಡಗಾತ್ರಿ: ತುಂಗಭದ್ರಾ ನದಿ ನೀರಿನಮಟ್ಟಹೆಚ್ಚಾಗಿರುವ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ನದಿ ಮೈದುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಬಾಲರಾಜ ಘಾಟ್ ಸೇರಿ ತಗ್ಗು ಪ್ರದೇಶ, ನದಿ ಪಾತ್ರದ 18 ಕುಟುಂಬಗಳ 102 ಮಂದಿಯನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಪ್ರಸಿದ್ಧ ಪುಣ್ಯಕ್ಷೇತ್ರ ಉಕ್ಕಡಗಾತ್ರಿ ಕ್ಷೇತ್ರ ಜಲಾವೃತವಾಗಿದ್ದು, ದೇಗುಲದ ಸಮೀಪದ ವರೆಗೆ ತುಂಗಭದ್ರಾ ನೀರು ಹರಿಯುತ್ತಿದೆ.
ನಾಡಿದ್ದಿನ ಬಳಿಕ ಮಳೆ ಇಳಿಕೆ: ಹವಾಮಾನ ಇಲಾಖೆ
ರಾಜ್ಯದಲ್ಲಿ ಮಂಗಳವಾರದ (ಜು. 19) ಬಳಿಕ ಮಳೆ ಕಡಿಮೆ ಆಗಲಿದ್ದು, ಯಾವುದೇ ಎಚ್ಚರಿಕೆ ನೀಡಲಾಗಿಲ್ಲ. ಆದರೆ ಸೋಮವಾರ ಬೆಳಗ್ಗೆ 8.30ರ ತನಕ ಕರಾವಳಿ, ಮಲೆನಾಡಿನ ಜಿಲ್ಲೆಗಳು ಮತ್ತು ಉತ್ತರ ಒಳನಾಡಿನ ಮೂರು ಜಿಲ್ಲೆಗೆ ‘ಯೆಲ್ಲೋ ಅಲರ್ಚ್’ ಇರಲಿದೆ.
ಸೋಮವಾರ ಬೆಳಗ್ಗೆ 8.30ರ ತನಕ ಕರಾವಳಿಯ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಮಲೆನಾಡಿನ ಕೊಡಗು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಮತ್ತು ಉತ್ತರ ಒಳನಾಡಿನ ಬೀದರ್, ಕಲಬುರಗಿ ಮತ್ತು ಶಿವಮೊಗ್ಗ ಜಿಲ್ಲೆಗೆ ‘ಯೆಲ್ಲೋ ಅಲರ್ಚ್’ ಇರಲಿದೆ. ಬಳಿಕ ಮಂಗಳವಾರ ಬೆಳಗ್ಗೆ 8.30ರ ತನಕ ಕರಾವಳಿಯ ಜಿಲ್ಲೆಗಳಿಗೆ ಮಾತ್ರ ‘ಯೆಲ್ಲೋ ಅಲರ್ಚ್’ ಇದೆ. ಮಂಗಳವಾರದಿಂದ ಗುರುವಾರ ಬೆಳಗ್ಗೆ ತನಕ ರಾಜ್ಯದಲ್ಲಿ ಯಾವುದೇ ಅಲರ್ಚ್ ಇರುವುದಿಲ್ಲ.
Davanagere: ತುಂಗಾಭದ್ರಾ ಪ್ರವಾಹಕ್ಕೆ ಸಿಲುಕಿದ ಗಂಗಾನಗರ ನಿವಾಸಿಗಳ ಬದುಕು!
ನಿನ್ನೆ ಉಡುಪಿಯಲ್ಲಿ 20 ಸೆಂ.ಮೀ. ಮಳೆ:
ಶನಿವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ ಕಳೆದ 24 ಗಂಟೆ ಅವಧಿಯಲ್ಲಿ ಉಡುಪಿಯ ಜಡ್ಕಲ್ 20.5 ಸೆಂ.ಮೀ, ಆಲೂರು 19.4, ಉತ್ತರ ಕನ್ನಡದ ಹಲಗೇರಿ 17.6, ಕ್ಯಾಸಲ್‌ರಾಕ್ 15, ಚಿಕ್ಕಮಗಳೂರಿನ ಕೊಟ್ಟಿಗೆಹಾರ 14, ಗೇರುಸೊಪ್ಪ 13, ಉಡುಪಿಯ ಸಿದ್ದಾಪುರ ಮತ್ತು ಕುಂದಾಪುರ ಮತ್ತು ಉತ್ತರ ಕನ್ನಡದ ಹೊನ್ನಾವರದಲ್ಲಿ ತಲಾ 12 ಸೆಂ.ಮೀ. ಮಳೆಯಾಗಿದೆ.
ನೆರೆ ನಿರ್ವಹಣೆಗೆ ರಾಜ್ಯದಲ್ಲಿ ಹೊಸ ವ್ಯವಸ್ಥೆ: ಸಿಎಂ
ಪ್ರತಿ ವರ್ಷ ಸಂಭವಿಸುವ ನೆರೆ ಸಮಸ್ಯೆ ನಿರ್ವಹಣೆಗೆ ನೂತನ ವ್ಯವಸ್ಥೆ ರೂಪಿಸಿಕೊಳ್ಳಲು ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದು, ಇನ್ನೆರಡು ದಿನಗಳಲ್ಲಿ ರಾಜ್ಯದ ಅತಿವೃಷ್ಟಿಹಾನಿ ವರದಿ ಪಡೆದು ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಉತ್ತರ ಕರ್ನಾಟಕದ ಬೀದರ, ಬೆಳಗಾವಿ, ರಾಯಚೂರು ಜಿಲ್ಲೆಯಲ್ಲಿ ಅತಿವೃಷ್ಟಿಹಾನಿ ಆಗಿದೆ. ವಿಶೇಷವಾಗಿ ಮಹಾರಾಷ್ಟ್ರ ರಾಜ್ಯದಿಂದ ನೀರು ಬಿಡುವ ಮುನ್ನವೇ ಅಲ್ಲಿನ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದು ಬೆಳಗಾವಿ, ಬೀದರನಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ ಎಂದರು.
ಹಾನಿಗೀಡಾದ ಮನೆಗಳ ನಿರ್ಮಾಣಕ್ಕೆ ತುರ್ತು ಕ್ರಮ: ಸಿಎಂ ಸೂಚನೆ
ಕೇಂದ್ರಕ್ಕಿಂತ ಹೆಚ್ಚಿನ ಪರಿಹಾರ:
ಕಳೆದ ಹದಿನೈದು ದಿನಗಳ ಮಳೆಯಿಂದ ಉಂಟಾದ ಬೆಳೆ ಹಾನಿ ಕುರಿತು ಜಂಟಿ ಸರ್ವೇ ಮಾಡಿ ಹಾನಿ ಪ್ರಮಾಣದ ವರ್ಗೀಕರಣ ಮಾಡಲು ತಿಳಿಸಿದ್ದೇವೆ. ರಾಜ್ಯದಲ್ಲಿ ಕೇಂದ್ರ ಸರ್ಕಾರ ನೀಡುವುದಕ್ಕಿಂತ ಹೆಚ್ಚಾಗಿ ಪರಿಹಾರ ನೀಡಿದ್ದೇವೆ. ರಸ್ತೆಯ ದುರಸ್ತಿ ಕಾರ್ಯಕ್ಕೆ ಈಗಾಗಲೆ .500 ಕೋಟಿ ಬಿಡುಗಡೆ ಮಾಡಲಾಗಿದೆ. ಪ್ರತಿ ವರ್ಷ ನೆರೆ ಸಮಸ್ಯೆ ಉಂಟಾಗುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಟಾÓ್ಕ… ಫೋರ್ಸ್ ರೂಪಿಸಲು ಸೂಚಿಸಲಾಗಿದೆ ಎಂದರು.